ದೊಡ್ಡಬಳ್ಳಾಪುರ: ಬದಲಾದ ಸ್ಪರ್ಧಾತ್ಮಕತೆಯ ಅಗತ್ಯಗಳಿಗೆ ಪೂರಕವಾಗಿ ಅಧ್ಯಯನ ಶಿಸ್ತುಗಳಲ್ಲಿ ಧನಾತ್ಮಕ ಮಾರ್ಪಾಟುಗಳನ್ನು ಹೊಂದುವುದು ಅಗತ್ಯ, ಶೈಕ್ಷಣಿಕ ಪ್ರಗತಿಗೆ ಪೂರಕ ಅವಕಾಶಗಳನ್ನು ವಿದ್ಯಾರ್ಥಿಗಳು ಸದ್ಬಳಕೆ ಮಾಡಿಕೊಳ್ಳಬೇಕು ಎಂದು ಬೆಂಗಳೂರು ಗ್ರಾಮಾಂತರ ಜಿಲ್ಲಾ ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ(ಪದವಿ ಪೂರ್ವ) ಉಪನಿರ್ದೇಶಕ ಮೋಹನ್‌ಕುಮಾರ್ ತಿಳಿಸಿದರು.
ಇಲ್ಲಿನ ಶ್ರೀವಾಣಿ ಪದವಿ ಪೂರ್ವ ಕಾಲೇಜು ಹಮ್ಮಿಕೊಂಡಿದ್ದ ಪ್ರತಿಭಾ ಪುರಸ್ಕಾರ ಮತ್ತು ಸ್ವಾಗತ ಸಿಂಚನ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ವಿದ್ಯಾರ್ಥಿಗಳು ವಿಷಯಾಧಾರಿತವಾಗಿ ಉಪನ್ಯಾಸಕರ ಮಾರ್ಗದರ್ಶನಗಳನ್ನು ಪಾಲನೆ ಮಾಡುವ ಮೂಲಕ ಪರೀಕ್ಷೆಗಳಲ್ಲಿ ಹೆಚ್ಚಿನ ಅಂಕಗಳನ್ನು ಪಡೆಯಬಹುದಾಗಿದೆ. ಆಸಕ್ತಿಯಿಂದ ಪಾಠ ಕೇಳುವುದು ಯಶಸ್ಸಿನ ಮೊದಲ ಹೆಜ್ಜೆಯಾಗಿರುತ್ತದೆ. ಕ್ಲಿಷ್ಟಕರ ಎನಿಸಿದ ವಿಷಯಗಳ ಬಗ್ಗೆ ಹೆಚ್ಚಿನ ಕಾಳಜಿಯನ್ನು ವಹಿಸಿ ಅಧ್ಯಯನ ಮಾಡಬೇಕು. ಕಷ್ಟಪಟ್ಟು ಓದುವುದಕ್ಕಿಂತ ಇಷ್ಟಪಟ್ಟು ಓದುವುದು ಅತ್ಯಗತ್ಯ. ಆಗ ಮಾತ್ರ ಸಾಧನೆ ಸುಲಭವಾಗುತ್ತದೆ ಎಂದು ಹೇಳಿದರು.ಸಾಹಿತಿ ಪ್ರೊ.ಕೃಷ್ಣೇಗೌಡ ಮಾತನಾಡಿ, ಸಾಧನೆ ಎಂಬುದು ಪರಿಶ್ರಮ, ಆಸಕ್ತಿ, ಶ್ರದ್ದೆ ಮತ್ತು ಮಾರ್ಗದರ್ಶನಗಳ ಪ್ರತಿಫಲ. ಎಲ್ಲರೂ ಸಾಧಕರಾಗುವ ಅವಕಾಶವಿದೆ. ಆದರೆ ಕ್ರಮಿಸಬೇಕಾದ ಹಾದಿ ನಿರ್ದಿಷ್ಟ ಮತ್ತು ಸ್ಪಷ್ಟವಾಗಿರಬೇಕು. ಏಕಾಗ್ರ ಮನೋಸ್ಥಿತಿ ವ್ಯಕ್ತಿಯನ್ನು ಸಶಕ್ತವಾಗಿ ರೂಪಿಸುತ್ತದೆ. ದೊಡ್ಡಬಳ್ಳಾಪುರದ ಶ್ರೀವಾಣಿ ಕಾಲೇಜಿನ ವಿದ್ಯಾರ್ಥಿಗಳು ಪ್ರತಿವರ್ಷ ಮುಂಚೂಣಿ ಫಲಿತಾಂಶವನ್ನು ಪಡೆಯುತ್ತಿರುವುದು ಗಣನೀಯವಾಗಿದ್ದು, ಮತ್ತಷ್ಟು ಸಾಧನೆಗಳಿಗೆ ಈ ವಿದ್ಯಾ ಸಂಸ್ಥೆ ಸಾಕ್ಷಿಯಾಗಲಿ ಎಂದರು.2024-25ನೇ ಸಾಲಿನ ದ್ವಿತೀಯ ಪಿಯು ಪರೀಕ್ಷೆಯಲ್ಲಿ ಉತ್ಕೃಷ್ಟ ದರ್ಜೆಯಲ್ಲಿ ತೇರ್ಗಡೆಯಾದ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ನೀಡಿ ಅಭಿನಂದಿಸಲಾಯಿತು.
ಶ್ರೀವಾಣಿ ಪದವಿ ಪೂರ್ವ ಕಾಲೇಜಿನ ಪ್ರಾಂಶುಪಾಲ ಬಿ.ಆರ್.ವೇಣುಗೋಪಾಲ್, ಪ್ರೌಢಶಾಲಾ ಶಿಕ್ಷಕರ ಸಂಘದ ಜಿಲ್ಲಾಧ್ಯಕ್ಷ ಅರುಣ್‌ಕುಮಾರ್, ಹೆಬ್ಬಾಳದ ಸರ್ಕಾರಿ ಪದವಿ ಪೂರ್ವ ಕಾಲೇಜಿನ ಪ್ರಾಂಶುಪಾಲ ದಯಾನಂದ್, ಶ್ರೀವಾಣಿ ಪದವಿ ಪೂರ್ವ ಕಾಲೇಜಿನ ಆಡಳಿತ ಮಂಡಲಿ ಸದಸ್ಯರು ಪಾಲ್ಗೊಂಡರು.28ಕೆಡಿಬಿಪಿ8-
ದ್ವಿತೀಯ ಪಿಯು ಪರೀಕ್ಷೆಯಲ್ಲಿ ಉತ್ಕೃಷ್ಟ ದರ್ಜೆಯಲ್ಲಿ ತೇರ್ಗಡೆಯಾದ ದೊಡ್ಡಬಳ್ಳಾಪುರದ ಶ್ರೀವಾಣಿ ಪದವಿ ಪೂರ್ವ ಕಾಲೇಜಿನ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ನೀಡಿ ಅಭಿನಂದಿಸಲಾಯಿತು.