ಕನ್ನಡಪ್ರಭ ವಾರ್ತೆ ಹಲಗೂರು
ಸರ್ಕಾರಿ ಶಾಲೆಗಳಲ್ಲಿ ಉತ್ತಮ ಶಿಕ್ಷಕರು ಕರ್ತವ್ಯ ನಿರ್ವಹಿಸುತ್ತಿರುವುದರಿಂದ ಗ್ರಾಮೀಣ ಪ್ರದೇಶದ ವಿದ್ಯಾರ್ಥಿಗಳು ಹೆಚ್ಚು ಅಂಕ ಪಡೆದು ತೇರ್ಗಡೆಯಾಗುತ್ತಿದ್ದಾರೆ ಎಂದು ಮಳವಳ್ಳಿ ಡಿವೈಎಸ್ಪಿ ಕೃಷ್ಣಪ್ಪ ತಿಳಿಸಿದರು.ಸಮೀಪದ ಬುಯ್ಯನದೊಡ್ಡಿ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆ ಆವರಣದಲ್ಲಿ ಶಾಲಾ ವಾರ್ಷಿಕೋತ್ಸವ ಉದ್ಘಾಟಿಸಿ ಮಾತನಾಡಿ, ಸರ್ಕಾರಿ ಶಾಲೆ ಮಕ್ಕಳು ಯಾವುದಕ್ಕೂ ಕಡಿಮೆ ಇಲ್ಲದಂತೆ ಓದಿನಲ್ಲಿ ನಗರ ಪ್ರದೇಶದ ಮಕ್ಕಳಿಗಿಂತ ಉತ್ತಮ ಸಾಧನೆ ಮಾಡುತ್ತಿದ್ದಾರೆ ಎಂದರು.
ನಾನು ಕೂಡ ಸರ್ಕಾರಿ ಶಾಲೆಗಳಲ್ಲಿಯೇ ಓದಿ ಈ ಸ್ಥಾನಕ್ಕೆ ಬಂದಿದ್ದೇನೆ. ಮಕ್ಕಳು ಮಧ್ಯದಲ್ಲಿ ಶಾಲೆ ಬಿಡದಂತೆ ಮಾಡಿ ತಂದೆ, ತಾಯಿಗಳು, ಗುರುಗಳು ಮಕ್ಕಳಿಗೆ ಉತ್ತಮ ಶಿಕ್ಷಣ ಕೊಡಸಬೇಕು. ಮಕ್ಕಳನ್ನು ಸಮಾಜಕ್ಕೆ ಆಸ್ತಿಯನ್ನಾಗಿ ಮಾಡಬೇಕು ಎಂದರು.ಶಿಕ್ಷಣ ಸಂಯೋಜಕ ರವಿಕುಮಾರ್ ಮಾತನಾಡಿ, ಮಕ್ಕಳ ಸರ್ವತೋಮುಖ ಅಭಿವೃದ್ಧಿಗೆ ಶಾಲೆ ಶಿಕ್ಷಕರು ಶ್ರಮಿಸಿ ಗುಣಾತ್ಮಕ ಶಿಕ್ಷಣ ನೀಡುತ್ತಿದ್ದಾರೆ. ಇಲ್ಲಿ ಪೋಷಕರು ಮತ್ತು ಎಸ್‌ಡಿಎಂಸಿ ಅವರ ಸಹಕಾರ ಶ್ಲಾಘನೀಯ ಎಂದರು.
ಇದೇ ವೇಳೆ ಎಸ್ಸೆಸ್ಸೆಲ್ಸಿ ಪರೀಕ್ಷೆಯಲ್ಲಿ ಶೇ.58ಕ್ಕಿಂತ ಹೆಚ್ಚು ಅಂಕ ಪಡೆದು ಸಾಧನೆ ಮಾಡಿದ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ನೀಡಿ ಅಭಿನಂದಿಸಲಾಯಿತು. ಮಕ್ಕಳಿಂದ ನೃತ್ಯಗಳು, ಹಾಡುಗಳು, ನಾಟಕಗಳು ನಡೆದವು. ಮಕ್ಕಳು ಉತ್ತಮ ಪ್ರತಿಭೆ ತೋರಿ ಗಮನ ಸೆಳೆದರು.ಕಾರ್ಯಕ್ರಮದಲ್ಲಿ ಎಸ್‌ಡಿಎಂಸಿ ಅಧ್ಯಕ್ಷ ಲಕ್ಷ್ಮಣ್ ಸ್ವಾಮಿ ಅಧ್ಯಕ್ಷತೆ ವಹಿಸಿದ್ದರು. ಮುಖಂಡ ಕೃಷ್ಣೇಗೌಡ, ಗ್ರಾಪಂ ಸದಸ್ಯರಾದ ಕೆಂಚೇಗೌಡ, ನಾಚೆಗೌಡ, ಎಸ್ಡಿಎಂಸಿ ಉಪಾಧ್ಯಕ್ಷ ರಂಜಿತಾ ಪ್ರಕಾಶ್ ಮತ್ತು ಸದಸ್ಯರು, ಸಮೂಹ ಸಂಪನ್ಮೂಲ ವ್ಯಕ್ತಿ
ಕೃಷ್ಣ ಜಿ.ಎಸ್, ಮುಖ್ಯ ಶಿಕ್ಷಕರಾದ ವಿಷಕಂಠೇಗೌಡ, ರಾಘವೇಂದ್ರ, ಸೋಮಣ್ಣ, ಹೇಮಂತ್ ಕುಮಾರ್, ಪ್ರೌಢಶಾಲಾ ಮುಖ್ಯ ಶಿಕ್ಷಕರಾದ ಮಹದೇವ ಪ್ರಸಾದ್, ಈಶ್ವರ ಕೆ. ಎಲ್, ದೇವರಾಜು, ರಾಜು, ಪುಟ್ಟರಾಜು ಸೇರಿದಂತೆ ಇತರರು ಇದ್ದರು.