ಹೊನ್ನಾವರ ತಾಲೂಕಿನ ಕವಲಕ್ಕಿ ಶ್ರೀ ಮಹಾಸತಿ ದೇವಳದ ಸಭಾಂಗಣದಲ್ಲಿ ಕರ್ನಾಟಕ ಯಕ್ಷಗಾನ ಅಕಾಡೆಮಿ ವತಿಯಿಂದ ಎರಡು ದಿನಗಳ ಯಕ್ಷಗಾನ ವಿಚಾರ ಸಂಕಿರಣ, ಗೋಷ್ಠಿ, ತಾಳಮದ್ದಲೆ ಹಾಗೂ ಯಕ್ಷಗಾನ ಪ್ರದರ್ಶನ ಭಾನುವಾರ ಉದ್ಘಾಟನೆಗೊಂಡಿತು.
ಕನ್ನಡಪ್ರಭ ವಾರ್ತೆ ಉಡುಪಿ
ಒಂದು ಕಾಲದಲ್ಲಿ ರಾಜಾಶ್ರಯ ಪಡೆದು ಮೆರೆದಿದ್ದ ಕರಾವಳಿಯ ಶ್ರೀಮಂತ ಯಕ್ಷಗಾನ ಕಲೆಯನ್ನು ಪ್ರತೀ ಮನೆಮನಕ್ಕೆ ತಲುಪಿಸಿ ಗತಿಸಿದ ವೈಭವವನ್ನು ಪುನರ್ ಪಡೆಯಲು ಕರ್ನಾಟಕ ಯಕ್ಷಗಾನ ಅಕಾಡೆಮಿ ಪ್ರಯತ್ನಿಸಲಿದೆ ಎಂದು ಅಕಾಡೆಮಿ ಅಧ್ಯಕ್ಷ ಡಾ.ತಲ್ಲೂರು ಶಿವರಾಮ ಶೆಟ್ಟಿ ಹೇಳಿದ್ದಾರೆ.ಭಾನುವಾರ ಹೊನ್ನಾವರ ತಾಲೂಕಿನ ಕವಲಕ್ಕಿ ಶ್ರೀ ಮಹಾಸತಿ ದೇವಳದ ಸಭಾಂಗಣದಲ್ಲಿ ಕರ್ನಾಟಕ ಯಕ್ಷಗಾನ ಅಕಾಡೆಮಿ ವತಿಯಿಂದ ಹಮ್ಮಿಕೊಂಡ ಎರಡು ದಿನಗಳ ಯಕ್ಷಗಾನ ವಿಚಾರ ಸಂಕಿರಣ, ಗೋಷ್ಠಿ, ತಾಳಮದ್ದಲೆ ಹಾಗೂ ಯಕ್ಷಗಾನ ಪ್ರದರ್ಶನ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದರು.ಯಕ್ಷಗಾನದಲ್ಲಿ ವೃತ್ತಿಪರ ಕಲಾವಿದರದಲ್ಲದೆ, ಹವ್ಯಾಸಿಯಾಗಿ ವೈದ್ಯರು, ಇಂಜಿನಿಯರ್‌ಗಳು, ಸಾಹಿತಿಗಳು, ಅಧ್ಯಾಪಕರು ಹೀಗೆ ಎಲ್ಲಾ ಕ್ಷೇತ್ರದ ವ್ಯಕ್ತಿಗಳು ತೊಡಗಿಸಿದ್ದಾರೆ. ಇದು ಯಕ್ಷಗಾನ ಕಲೆಯ ವೈಶಿಷ್ಟ್ಯ ಇದನ್ನು ಅನ್ಯ ಕಲೆಗಳಲ್ಲಿ ನಿರೀಕ್ಷಿಸಲು ಸಾಧ್ಯವಿಲ್ಲ. ಉತ್ತರ ಕನ್ನಡ ಜಿಲ್ಲೆಯಂತೂ ಅಗಣಿತ ಮೇರು ಯಕ್ಷಗಾನ ಕಲಾವಿದರನ್ನು ನಾಡಿಗೆ ನೀಡಿದೆ. ಚಿಟ್ಟಾಣಿಯಂತಹ ದಿಗ್ಗಜರಿದೆ ಪದ್ಮಶ್ರೀ ಗೌರವ ಕೂಡಾ ಸಂದಿರುವುದನ್ನು ಮರೆಯಲು ಸಾಧ್ಯವಿಲ್ಲ ಎಂದು ಅವರು ತಿಳಿಸಿದರು.ಉಡುಪಿ ಜಿಲ್ಲೆಯಲ್ಲಿ 90ಕ್ಕೂ ಅಧಿಕ ಶಾಲೆಗಳಲ್ಲಿ 3,000ಕ್ಕೂ ಅಧಿಕ ಮಂದಿ ಯಕ್ಷ ಶಿಕ್ಷಣ ಪಡೆಯುತ್ತಿದ್ದಾರೆ. ಇದು ರಾಜ್ಯದ ಅನ್ಯ ಜಿಲ್ಲೆಗಳಿಗೂ ಮುಟ್ಟಬೇಕು ಎಂಬುದೇ ತನ್ನ ಬಯಕೆ. ಯಕ್ಷಗಾನ ಮಕ್ಕಳ ವ್ಯಕ್ತಿತ್ವ ವಿಕಸನದ ಜೊತೆಗೆ ಅವರ ಶೈಕ್ಷಣಿಕ ಪ್ರಗತಿಗೂ ಕಾರಣವಾಗಿರುವುದನ್ನು ನಾವು ಗಮನಿಸಿದ್ದೇವೆ. ಆದ್ದರಿಂದ ಹೆತ್ತವರು ಮಕ್ಕಳಿಗೆ ಯಕ್ಷಗಾನ ಕಲಿಸಲು ಹಿಂಜರಿಕೆ ಬೇಡ ಎಂದು ಹೇಳಿದರು.ಕಾರ್ಯಕ್ರಮ ಉದ್ಘಾಟಿಸಿದ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಯಕ್ಷಗಾನ ಕಲಾವಿದ ಬಳ್ಕೂರು ಕೃಷ್ಣ ಯಾಜಿ, ಯಕ್ಷಗಾನ ಕಲಾವಿದರಿಗಾಗಿ ಕಳೆದ 20ಕ್ಕೂ ಅಧಿಕ ವರ್ಷಗಳಿಂದ ತನುಮನಧನದಿಂದ ಪ್ರೋತ್ಸಾಹಿಸುತ್ತಿರುವ ಡಾ.ತಲ್ಲೂರು ಅವರು ಅಕಾಡೆಮಿ ಅಧ್ಯಕ್ಷರಾಗಿರುವುದು ಸ್ವಾಗತಾರ್ಹ. ಪ್ರಾಚೀನ ದಿನಗಳಿಂದ ಇಂದಿನವರೆಗೆ ಯಕ್ಷಗಾನ ಕಲೆ ಅನೇಕ ಸುಧಾರಣೆಗಳನ್ನು ಕಂಡಿದೆ. ಹಾಗಾಗಿ ಇದು ಅಳಿಯುವ ಕಲೆ ಅಲ್ಲ ಎಂದರು.ಪ್ರಾಸ್ತಾವಿಕ ಮಾತುಗಳನ್ನಾಡಿದ ಅಕಾಡೆಮಿ ಸದಸ್ಯ ವಿದ್ಯಾಧರ ಜಲವಳ್ಳಿ, ತನ್ನ ಅಧ್ಯಕ್ಷತನದ ಅವಧಿಯಲ್ಲಿ ಎಲ್ಲಾ ಕಡೆಗಳಲ್ಲಿಯೂ ಯಕ್ಷಗಾನ ಕಾರ್ಯಕ್ರಮಗಳು ನಡೆಯಬೇಕು ಎಂದು ಹಂಬಲ ಹೊಂದಿರುವ ಅಕಾಡೆಮಿ ಅಧ್ಯಕ್ಷ ಡಾ.ತಲ್ಲೂರು ಶಿವರಾಮ ಶೆಟ್ಟಿ ಅವರು ಅಕಾಡೆಮಿಗೆ ಅಧ್ಯಕ್ಷರಾಗಿ ಸಿಕ್ಕಿರುವುದು ಕಲೆಯ ಪುಣ್ಯ ಎಂದರು.ಅಕಾಡೆಮಿಯ ರಿಜಿಸ್ಟ್ರಾರ್ ನಮೃತಾ ಎನ್. ಪ್ರಾಸ್ತಾವಿಕ ಮಾತುಗಳನ್ನಾಡಿದರು. ಹಿರಿಯ ಭಾಗವತ ಕಪ್ಪೆಕೆರೆ ಸುಬ್ರಾಯ ಭಾಗವತ, ಕಡತೋಕ ಗೋಪಾಲಕೃಷ್ಣ ಭಾಗವತ, ಯಕ್ಷಗಾನ ವಿಮರ್ಶಕ ನಾರಾಯಣ ಯಾಜಿ ಮಾತನಾಡಿದರು.ಉದ್ಯಮಿ ವೆಂಕಟರಮಣ ಹೆಗ್ಡೆ, ಸಂಗೀತ ವಿದ್ವಾನ್ ಪಾಡಿಗಾರ್ ಲಕ್ಷ್ಮೀ ನಾರಾಯಣ ಉಪಾಧ್ಯಾಯ ಉಪಸ್ಥಿತರಿದ್ದರು. ಉಪನ್ಯಾಸಕ ಪ್ರಶಾಂತ್ ಹೆಗ್ಡೆ ನಿರೂಪಿಸಿ, ವಂದಿಸಿದರು. ಕಾರ್ಯಕ್ರಮದಲ್ಲಿ ಮಕ್ಕಳ ಯಕ್ಷಗಾನ ಪ್ರದರ್ಶನ, ತಾಳ ಮದ್ದಲೆ, ಯಕ್ಷಗಾನ ವಿಚಾರಗೋಷ್ಠಿಗಳು ನಡೆದವು.
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.