ಕೊಪ್ಪಳ (ಯಲಬುರ್ಗಾ):
ಯಲಬುರ್ಗಾ ತಾಲೂಕಿನ ಸೋಂಪೂರು-ಹೊಸೂರು ಗ್ರಾಮದಲ್ಲಿ ಸೋಮವಾರ ಯಲಬುರ್ಗಾ- ಕುಕನೂರು ತಾಲೂಕು ರಡ್ಡಿ ಸಮಾಜದ ವತಿಯಿಂದ ಜರುಗಿದ ಶಿವಶರಣೆ ಹೇಮರೆಡ್ಡಿ ಮಲ್ಲಮ್ಮನ ಜಯಂತಿ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು, ಹೇಮರೆಡ್ಡಿ ಮಲ್ಲಮ್ಮ, ಅಕ್ಕಮಹಾದೇವಿ, ಬಸವೇಶ್ವರ, ಸರ್ವಜ್ಞ, ಶಿವಶರಣರು ಹಾಗೂ ದಾರ್ಶನಿಕರನ್ನು ಯಾವುದೇ ಜಾತಿಗೆ ಸೀಮಿತಗೊಳಿಸಬಾರದು. ಅವರು ಸಮಾಜದ ಏಳಿಗೆಗಾಗಿ ಶ್ರಮಿಸಿದವರು ಎಂದರು.
ಅಪಪ್ರಚಾರ ಸಲ್ಲದು:ಇತ್ತೀಚಿಗೆ ರಾಜಕೀಯ ಲಾಭಕ್ಕಾಗಿ ವೇಮನ ಅವರ ಬಗ್ಗೆ ಸಾಕಷ್ಟು ಅಪಪ್ರಚಾರಗಳನ್ನು ರಾಜಕಾರಣಿಗಳು ಮಾಡುತ್ತಿದ್ದಾರೆ. ವೇಮನ ಒಬ್ಬ ವ್ಯಸನಿಯೆಂದು ಹೇಳುತ್ತಿರುವುದು ಶುದ್ಧ ಸುಳ್ಳು. ಅವರೊಬ್ಬರು ಮಹಾಕವಿಯಾಗಿ ಸಮಾಜದ ಸುಧಾರಣೆಗೆ ತನ್ನದೇ ಆದ ಕೊಡುಗೆ ನೀಡಿದ್ದಾರೆ ಎಂದ ರಾಯರಡ್ಡಿ, ಬಸವೇಶ್ವರ ಸೇರಿದಂತೆ ಎಲ್ಲ ಶಿವಶರಣರು ಸಮಾಜದಲ್ಲಿ ಸಮಾನತೆಗಾಗಿ ಶ್ರಮಿಸಿದ್ದಾರೆ. ಇತ್ತೀಚಿಗೆ ಜಾತಿ, ಧರ್ಮ ಹೆಸರಿನಲ್ಲಿ ಜಯಂತಿ ಆಚರಿಸಿ ರಾಜಕೀಯ ಲಾಭ ಪಡೆಯುತ್ತಿದ್ದಾರೆ ಎಂದು ಬೇಸರ ವ್ಯಕ್ತಪಡಿಸಿದರು.
ಕುದರಿಮೋತಿ ಮೈಸೂರುಮಠದ ಶ್ರೀವಿಜಯಮಹಾಂತ ಸ್ವಾಮೀಜಿ ಹಾಗೂ ಗುಳೇದಗುಡ್ಡ ಅಭಿನವ ಶ್ರೀಒಪ್ಪತೇಶ್ವರ ಸ್ವಾಮೀಜಿ, ರೆಡ್ಡಿ ಸಮಾಜದ ರಾಜ್ಯಾಧ್ಯಕ್ಷ ಶೇಖರಗೌಡ ಮಾಲಿಪಾಟೀಲ್, ತಾಲೂಕಾಧ್ಯಕ್ಷ ಅಧ್ಯಕ್ಷ ಸಂಗಪ್ಪ ವಕ್ಕಳದ್ ಮಾತನಾಡಿದರು.
ಹೇಮರೆಡ್ಡಿ ಮಲ್ಲಮ್ಮನ ಜಯಂತಿ ಪ್ರಯುಕ್ತ ಗ್ರಾಮದ ಶರಣ ಬಸವೇಶ್ವರ ದೇವಸ್ಥಾನದಿಂದ ಮಾದಗಟ್ಟಿ ವರೆಗೂ ಭಾವಚಿತ್ರದ ಮೆರವಣಿಗೆ ಮಹಿಳೆಯರ ಕುಂಭ ಮೇಳದೊಂದಿಗೆ ಜರುಗಿತು. ಗ್ರಾಮದಲ್ಲಿ ಮುಖ್ಯರಸ್ತೆಯಲ್ಲಿ ಮಲ್ಲಮ್ಮನವರ ನೂತನ ವೃತ್ತ ಅನಾವರಣಗೊಳಿಸಲಾಯಿತು. ಸಮಾಜದ ವಿದ್ಯಾರ್ಥಿಗಳು, ನಿವೃತ್ತ ನೌಕರರ ಗಣ್ಯರನ್ನು ಸನ್ಮಾನಿಸಲಾಯಿತು.
ಹೇಮರಡ್ಡಿ ಮಲ್ಲಮ್ಮ ಭವನಕ್ಕೆ ಅನುದಾನ ಭರವಸೆ
ಆಂಧ್ರಪ್ರದೇಶಕ್ಕಿಂತ ಹೆಚ್ಚು ಕರ್ನಾಟಕದಲ್ಲಿ ಹೇಮರೆಡ್ಡಿ ಮಲ್ಲಮ್ಮ ಮತ್ತು ವೇಮನರ ವಚನಗಳನ್ನು ಹೆಚ್ಚು ಪಾಲನೆಯಾಗುತ್ತಿದೆ. ಈ ನಾಡಿನ ಸೊಸೆಯಾಗಿ ಹೇಮರೆಡ್ಡಿ ಮಲ್ಲಮ್ಮನವರು ಸಮಾಜಕ್ಕೆ ತನ್ನದೇ ಆದ ಕೊಡುಗೆ ನೀಡಿದ್ದಾರೆ. ಇಂತಹ ಶ್ರೇಷ್ಠ ಶಿವಶರಣೆಯರ ವಿಚಾರ ಅಳವಡಿಸಿಕೊಳ್ಳುವ ಜವಾಬ್ದಾರಿ ನಮ್ಮ ಮೇಲಿದೆ ಎಂದು ಶ್ರೀವೇಮಾನಂದ ಸ್ವಾಮೀಜಿ ಹೇಳಿದರು.