ಸೇವಾ ಹಿರಿತನದ ಮೇಲೆ ಹೊರಗುತ್ತಿಗೆ ಮೂಲಕ ನೇಮಿಸಿ

KannadaprabhaNewsNetwork |  
Published : Apr 16, 2025, 01:52 AM IST
6 | Kannada Prabha

ಸಾರಾಂಶ

ಸರ್ಕಾರಿ ಪ್ರಥಮ ದರ್ಜೆ ಕಾಲೇಜುಗಳಲ್ಲಿ ಖಾಲಿ ಇರುವ ಹುದ್ದೆಗಳಿಗೆ ಹೊರಗುತ್ತಿಗೆ ಮೂಲಕ ನೇಮಕ ಮಾಡಿಕೊಳ್ಳಲು ಜಮೀನಿ ಸೆಕ್ಯೂರಿಟಿ ಸರ್ವಿಸಸ್‌ ಗೆ ಗುತ್ತಿಗೆ ನೀಡಿದೆ.

ಕನ್ನಡಪ್ರಭ ವಾರ್ತೆ ಮೈಸೂರು

ಸರ್ಕಾರಿ ಪ್ರಥಮ ದರ್ಜೆ ಕಾಲೇಜುಗಳಲ್ಲಿ ಸಿಡಿಸಿ ಹೆಸರಿನಲ್ಲಿ ಕೆಲಸ ಮಾಡುವ ಕಾರ್ಮಿಕರನ್ನು ಸೇವಾ ಹಿರಿತನದ ಮೇಲೆ ಹೊರಗುತ್ತಿಗೆ ಮೂಲಕ ನೇಮಕ ಮಾಡಿಕೊಳ್ಳಬೇಕು. ಹೊರಗಿನ ವ್ಯಕ್ತಿಗಳ ನೇಮಕ ತಿರಸ್ಕರಿಸಬೇಕು ಎಂದು ಆಗ್ರಹಿಸಿ ಕರ್ನಾಟಕ ರಾಜ್ಯ ಉನ್ನತ ಶಿಕ್ಷಣ ಇಲಾಖೆ ಕಾಲೇಜುಗಳ ಕಾರ್ಮಿಕರ ಸಂಘದವರು (ಎಐಯುಟಿಯುಸಿ ಸಂಯೋಜಿತ) ನಗರದ ಹುಣಸೂರು ರಸ್ತೆಯಲ್ಲಿರುವ ಕಾಲೇಜು ಶಿಕ್ಷಣ ಇಲಾಖೆ ಜಂಟಿ ನಿರ್ದೇಶಕರ ಕಚೇರಿ ಮುಂಭಾಗದಲ್ಲಿ ಮಂಗಳವಾರ ಪ್ರತಿಭಟಿಸಿದರು.

ಸರ್ಕಾರಿ ಪ್ರಥಮ ದರ್ಜೆ ಕಾಲೇಜುಗಳಲ್ಲಿ ಖಾಲಿ ಇರುವ ಹುದ್ದೆಗಳಿಗೆ ಹೊರಗುತ್ತಿಗೆ ಮೂಲಕ ನೇಮಕ ಮಾಡಿಕೊಳ್ಳಲು ಜಮೀನಿ ಸೆಕ್ಯೂರಿಟಿ ಸರ್ವಿಸಸ್‌ ಗೆ ಗುತ್ತಿಗೆ ನೀಡಿದೆ. ಗುತ್ತಿಗೆದಾರರು ರಾಜ್ಯದ ಎಲ್ಲಾ ಪ್ರಾಂಶುಪಾಲರುಗಳಿಗೆ ಇ-ಮೇಲ್ ಮೂಲಕ ಕಾಲೇಜಿಗೆ ಮಂಜೂರಾಗಿರುವ ಹುದ್ದೆಗಳ ಸಂಖ್ಯೆಗಳ ವಿವರದೊಂದಿಗೆ ಪತ್ರ ಕಳುಹಿಸಿ, ಕಾಲೇಜುಗಳಲ್ಲಿ ಈಗಾಗಲೇ ಕೆಲಸ ಮಾಡುತ್ತಿರುವ ಎಸ್‌ಎಸ್‌ಎಲ್ಸಿ ಪಾಸ್ ಆಗಿರುವ ಸಿಡಿಸಿ ಕಾರ್ಮಿಕರ ಪಟ್ಟಿ ನೀಡುವಂತೆ ಕೇಳಿದೆ. ಪ್ರಾಂಶುಪಾಲರು ಗುತ್ತಿಗೆದಾರನ ಇಚ್ಛಾನುಸಾರ ನೇಮಕ ಮಾಡಲು ಅನುಮತಿ ನೀಡಿದ್ದಾರೆ ಎಂದು ಅವರು ಆರೋಪಿಸಿದರು.

ಇದರ ಲಾಭ ಪಡೆದು ಗುತ್ತಿಗೆದಾರರು ಎಸ್‌ಎಸ್‌ಎಲ್ಸಿ ಪಾಸಾದ ಕಾರ್ಮಿಕರು ಲಭ್ಯವಿಲ್ಲದ ಕಾಲೇಜುಗಳಿಗೆ ಹೊರಗಿನ ವ್ಯಕ್ತಿಗಳನ್ನು ನೇಮಕ ಮಾಡಿಕೊಳ್ಳುತ್ತಿದ್ದಾರೆ. ಕೆಲವು ಸಿಡಿಸಿ ಕಾರ್ಮಿಕರು ಗುತ್ತಿಗೆದಾರರ ಮೇಲ್ವಿಚಾರಕರೊಂದಿಗೆ ಸೇರಿಕೊಂಡು ಕಾರ್ಮಿಕರಿಂದ ಹಣ ವಸೂಲಿ ಮಾಡಿ, ನೇಮಕಾತಿ ಪತ್ರ ಪಡೆದುಕೊಂಡಿದ್ದಾರೆ. ಇದರಿಂದ ಕಳೆದ 10- 15 ವರ್ಷಗಳಿಂದ ಕನಿಷ್ಠ ವೇತನವೂ ಇಲ್ಲದೆ ಇಲಾಖೆಗೆ ಪ್ರಾಮಾಣಿಕವಾಗಿ ಸೇವೆ ಸಲ್ಲಿಸಿದ ಕಾರ್ಮಿಕರಿಗೆ ಅನ್ಯಾಯ ಮಾಡಿದಂತಾಗುತ್ತದೆ ಎಂದು ಅವರು ಆಕ್ರೋಶ ವ್ಯಕ್ತಪಡಿಸಿದರು.

ಸುಪ್ರೀಂಕೋರ್ಟ್ ತೀರ್ಪಿನ ಅನ್ವಯ ಡಿ ಗ್ರೂಪ್ ಹುದ್ದೆಗಳಿಗೆ ಹೊರಗುತ್ತಿಗೆ ಮೂಲಕ ನೇಮಕ ಮಾಡಿಕೊಳ್ಳುವ ಸಂದರ್ಭದಲ್ಲಿ ಹಾಲಿ ಇರುವ ಕಾರ್ಮಿಕರನ್ನೇ ನೇಮಿಸಕೊಳ್ಳಲು ಅವಕಾಶವಿದೆ. ಇಂತಹ ಸಂದರ್ಭದಲ್ಲಿ ಎಸ್‌ಎಸ್‌ಎಲ್ಸಿ ಪಾಸ್ ಆಗಿರಬೇಕು ಎಂಬ ನಿಯಮ ಅನ್ವಯವಾಗುವುದಿಲ್ಲ. ಈ ಕುರಿತು ಈಗಾಗಲೇ ಸಂಘದ ವತಿಯಿಂದ ಲೋಕಾಯುಕ್ತರಿಗೆ, ಆಯುಕ್ತರಿಗೆ ಪತ್ರ ಬರೆಯಲಾಗಿದೆ. ಆದರೂ, ಗುತ್ತಿಗೆದಾರರು ತಮ್ಮ ಇಚ್ಛೆಗೆ ಅನುಸಾರ ನೇಮಕ ಮಾಡಿಕೊಂಡು ಕೆಲಸಕ್ಕೆ ಕಳುಹಿಸುತ್ತಿರುವುದು ಗಮನಕ್ಕೆ ಬಂದಿದೆ ಎಂದು ಅವರು ದೂರಿದರು.

ಇದರಿಂದ ಕಾಲೇಜುಗಳಲ್ಲಿ ಕೆಲಸ ಮಾಡುತ್ತಿರುವ ಸಿಡಿಸಿ ಕಾರ್ಮಿಕರಿಗೆ ಮುಕ್ತಿ ದೊರೆಯುವುದಿಲ್ಲ. ಬದಲಿಗೆ ಸರ್ಕಾರ ಸಿಡಿಸಿ ಕಾರ್ಮಿಕರಿಗೂ ಮತ್ತು ಹೊರಗುತ್ತಿಗೆ ಕಾರ್ಮಿಕರಿಗೂ ವೇತನ ನೀಡುವುದು ಅನಿವಾರ್ಯವಾಗುತ್ತದೆ. ವಿದ್ಯಾರ್ಥಿಗಳಿಂದ ಕಾಲೇಜು ಅಭಿವೃದ್ಧಿಗಾಗಿ ಸಂಗ್ರಹಿಸುವ ಹಣದ ದುರುಪಯೋಗವೂ ಸಹ ತಡೆಗಟ್ಟಲು ಸಾಧ್ಯವಾಗುವುದಿಲ್ಲ. ಹೀಗಾಗಿ, ಹಿರಿಯ ಕಾರ್ಮಿಕರನ್ನು ನೇಮಿಸಿಕೊಳ್ಳಲು ಗುತ್ತಿಗೆದಾರನಿಗೆ ನಿರ್ದೇಶನ ನೀಡಬೇಕು. ಎಸ್‌ಎಸ್‌ಎಲ್ಸಿ ಕಡ್ಡಾಯಗೊಳಿಸಬಾರದು ಎಂದು ಅವರು ಆಗ್ರಹಿಸಿದರು.

ಯಾವುದಾದರೂ ಕಾಲೇಜುಗಳಿಗೆ ಹೆಚ್ಚುವರಿಯಾಗಿ ಹುದ್ದೆಗಳು ಸೃಷ್ಟಿಯಾಗಿದ್ದರೆ ಬೇರೆ ಹತ್ತಿರದ ಕಾಲೇಜುಗಳಲ್ಲಿ ಕಾರ್ಯ ನಿರ್ವಹಿಸಿರುವ ಸಿಡಿಸಿ ಕಾರ್ಮಿಕರನ್ನು ನೇಮಿಸಲು ಗುತ್ತಿಗೆದಾರರಿಗೆ ನಿರ್ದೇಶನ ನೀಡಬೇಕು. ಒಂದು ವೇಳೆ ಸಹಜ ನ್ಯಾಯ ಪಾಲಿಸದೆ ಗುತ್ತಿಗೆದಾರನ ಇಚ್ಛಾನುಸಾರ ನೇಮಕ ಮಾಡಿಕೊಳ್ಳಲು ಅವಕಾಶ ನೀಡಿದರೆ ಅನಿವಾರ್ಯವಾಗಿ ಪ್ರಾಂಶುಪಾಲರು, ಗುತ್ತಿಗೆದಾರರ ವಿರುದ್ಧ ಪ್ರಕರಣ ದಾಖಲಿಸಲಾಗುವುದು ಎಂದು ಅವರು ಎಚ್ಚರಿಸಿದರು.

ಸಂಘದ ರಾಜ್ಯಾಧ್ಯಕ್ಷ ಚಂದ್ರಶೇಖರ ಮೇಟಿ, ಪಿ.ಎಸ್. ಸಂದ್ಯಾ ಮೊದಲಾದವರು ಇದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಓಡಿ ಹೋದ ಹೇಡಿ ಎನಿಸಿಕೊಳ್ಳುವುದಿಲ್ಲ. ಅಲ್ಲೇ ರಾಜಕೀಯ ಅಸ್ತಿತ್ವ ಕಂಡುಕೊಳ್ಳುತ್ತೇನೆ : ನಿಖಿಲ್‌
ಕರಗಕ್ಕೆ ವಿಶ್ವಪ್ರಸಿದ್ಧಿ ಪಡೆದ ಧರ್ಮರಾಯ ದೇಗುಲ ಚಿನ್ನ ಕಳವು