ರಾಷ್ಟ್ರೀಯ ಹೆದ್ದಾರಿ ಕಾಮಗಾರಿಗಳಿಗೆ ವೇಗ ನೀಡಿ

KannadaprabhaNewsNetwork |  
Published : Jun 21, 2025, 12:49 AM IST
ಪೋಟೋ: 20ಎಸ್‌ಎಂಜಿಕೆಪಿ05ಶಿವಮೊಗ್ಗದ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ರಾಷ್ಟ್ರೀಯ ಹೆದ್ದಾರಿ ಕಾಮಗಾರಿಗಳ ಭೂಸ್ವಾಧೀನ, ಅರಣ್ಯ ಸಂಬಂಧಿ ಸಮಸ್ಯೆಗಳು ಹಾಗೂ ಮತ್ತು ರೈಲ್ವೇ ಕಾಮಗಾರಿಗಳ ಪ್ರಗತಿ ಪರಿಶೀಲನೆ ಕುರಿತು ಶುಕ್ರವಾರ ಏರ್ಪಡಿಸಿದ್ದ ಪ್ರಗತಿ ಪರಿಶೀಲನಾ ಸಭೆಯಲ್ಲಿ ಸಂಸದ ಬಿ.ವೈ.ರಾಘವೇಂದ್ರ ಮಾತನಾಡಿದರು.  | Kannada Prabha

ಸಾರಾಂಶ

ಕೇಂದ್ರ ಸರ್ಕಾರದ ಆರ್ಥಿಕ ನೆರವಿನೊಂದಿಗೆ ಕೈಗೊಳ್ಳಲಾಗಿರುವ ರೈಲ್ವೇ ಮತ್ತು ರಾಷ್ಟ್ರೀಯ ಹೆದ್ದಾರಿ ಕಾಮಗಾರಿಗಳು ನಿಗದಿಪಡಿಸಿದ ಕಾಲಮಿತಿಯಲ್ಲಿ ಪೂರ್ಣವಾಗದಿರುವುದು ಅತ್ಯಂತ ಬೇಸದರ ಸಂಗತಿಯಾಗಿದ್ದು, ಸಂಬಂಧಿಸಿದ ಇಲಾಖಾ ಅಧಿಕಾರಿಗಳು ಕೂಡಲೇ ಕಾರ್ಯಪ್ರವೃತ್ತರಾಗಿ ಕೈಗೊಂಡ ಕಾಮಗಾರಿಗಳಿಗೆ ವೇಗ ಹೆಚ್ಚಿಸುವಂತೆ ಸಂಸದ ಬಿ.ವೈ.ರಾಘವೇಂದ್ರ ಅಧಿಕಾರಿಗಳಿಗೆ ಸೂಚಿಸಿದರು.

ಶಿವಮೊಗ್ಗ: ಕೇಂದ್ರ ಸರ್ಕಾರದ ಆರ್ಥಿಕ ನೆರವಿನೊಂದಿಗೆ ಕೈಗೊಳ್ಳಲಾಗಿರುವ ರೈಲ್ವೇ ಮತ್ತು ರಾಷ್ಟ್ರೀಯ ಹೆದ್ದಾರಿ ಕಾಮಗಾರಿಗಳು ನಿಗದಿಪಡಿಸಿದ ಕಾಲಮಿತಿಯಲ್ಲಿ ಪೂರ್ಣವಾಗದಿರುವುದು ಅತ್ಯಂತ ಬೇಸದರ ಸಂಗತಿಯಾಗಿದ್ದು, ಸಂಬಂಧಿಸಿದ ಇಲಾಖಾ ಅಧಿಕಾರಿಗಳು ಕೂಡಲೇ ಕಾರ್ಯಪ್ರವೃತ್ತರಾಗಿ ಕೈಗೊಂಡ ಕಾಮಗಾರಿಗಳಿಗೆ ವೇಗ ಹೆಚ್ಚಿಸುವಂತೆ ಸಂಸದ ಬಿ.ವೈ.ರಾಘವೇಂದ್ರ ಅಧಿಕಾರಿಗಳಿಗೆ ಸೂಚಿಸಿದರು.

ಇಲ್ಲಿನ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ರಾಷ್ಟ್ರೀಯ ಹೆದ್ದಾರಿ ಕಾಮಗಾರಿಗಳ ಭೂಸ್ವಾಧೀನ, ಅರಣ್ಯ ಸಂಬಂಧಿ ಸಮಸ್ಯೆಗಳು ಹಾಗೂ ರೈಲ್ವೇ ಕಾಮಗಾರಿಗಳ ಪ್ರಗತಿ ಪರಿಶೀಲನೆ ಕುರಿತು ಶುಕ್ರವಾರ ಏರ್ಪಡಿಸಿದ್ದ ಪ್ರಗತಿ ಪರಿಶೀಲನಾ ಸಭೆಯಲ್ಲಿ ಅವರು ಮಾತನಾಡಿದರು.

ಶಿವಮೊಗ್ಗ ತಾಲೂಕಿನ ಕುಂಸಿಯಿಂದ ಹಾದು ಹೋಗುವ ರಾಷ್ಟ್ರೀಯ ಹೆದ್ದಾರಿ ನಿರ್ಮಾಣ ಕಾರ್ಯದಲ್ಲಿ ರೈತರು ತಮ್ಮ ಜೀವನೋಪಾಯಕ್ಕಾಗಿ ಇಟ್ಟುಕೊಂಡಿದ್ದ ಅಲ್ಪ-ಸ್ವಲ್ಪ ಭೂಮಿಯನ್ನು ತಮ್ಮ ಕೋರಿಕೆಯ ಮೇರೆಗೆ ಅಭಿವೃದ್ಧಿ ಕಾಮಗಾರಿಗಳಿಗೆ ಬಿಟ್ಟುಕೊಡಲು ಮುಂದಾಗಿದ್ದಾರೆ. ಅಂತಹ ರೈತರೊಂದಿಗೆ ಅಧಿಕಾರಿಗಳು ಸ್ನೇಹಪೂರ್ವಕವಾಗಿ ವ್ಯವಹರಿಸದಿರುವುದು ಸರಿಯಲ್ಲ. ಸಂಬಂಧಿಸಿದ ಇಲಾಖೆಯ ಅಧಿಕಾರಿಗಳು ಹೆದ್ದಾರಿ ಹಾದುಹೋಗುವ ಪ್ರದೇಶಗಳ ವ್ಯಾಪ್ತಿಗೊಳಪಡುವ ಗ್ರಾಪಂಗಳಿಗೆ ಭೇಟಿ ನೀಡಿ ಅಲ್ಲಿನ ರೈತರೊಂದಿಗೆ ಸಮಾಲೋಚನೆ ನಡೆಸಬೇಕು. ತಮಗೆ ಅಗತ್ಯವಿರುವ ದಾಖಲೆಗಳನ್ನು ಸಂಗ್ರಹಿಸಿಕೊಳ್ಳಬೇಕು. ಅಲ್ಲದೇ ಭೂಸ್ವಾಧೀನ ಪ್ರಕ್ರಿಯೆ ಪೂರ್ಣಗೊಳ್ಳುವವರೆಗೆ ಅವರ ಸಮಸ್ಯೆಗಳನ್ನು ಆಲಿಸಿ, ಅದರ ಪರಿಹಾರಕ್ಕಾಗಿ ಸಮಾಧಾನಕರ ರೀತಿಯಲ್ಲಿ ವ್ಯವಹರಿಸಬೇಕು ಎಂದು ತಾಕೀತು ಮಾಡಿದರು.

ರಾಷ್ಟ್ರೀಯ ಹೆದ್ದಾರಿ ಮತ್ತು ರೈಲ್ವೇ ಕಾಮಗಾರಿಗಳಿಗೆ ಅಗತ್ಯವಿರುವ ಭೂಸ್ವಾದೀನ ಪ್ರಕ್ರಿಯೆ ಕೈಗೊಳ್ಳುವ ಮುನ್ನ ಜಮೀನಿನ ಪೋಡಿ ಕಾರ್ಯ ಮುಕ್ತಾಯಗೊಳಿಸುವಲ್ಲಿ ಅಧಿಕಾರಿಗಳು ಆದ್ಯತೆಯಾಗಿ ಕ್ರಮವಹಿಸಬೇಕು. ದಾಖಲೆಗಳನ್ನು ಸಂಗ್ರಹಿಸುವ ಅಧಿಕಾರಿಗಳು ಜಮೀನಿನಲ್ಲಿನ ಆಸ್ತಿ ಹಾಗೂ ಅದರ ನಷ್ಟವನ್ನು ಸರಿಯಾದ ಪ್ರಮಾಣದಲ್ಲಿ ಅಂದಾಜು ಮಾಡಿ, ಹೆಚ್ಚಿನ ಪ್ರಮಾಣದ ಪರಿಹಾರ ಕೊಡಿಸುವಲ್ಲಿಯೂ ಗಮನಹರಿಸಬೇಕೆಂದರು.

ಈ ಮಹತ್ವದ ಕಾರ್ಯವನ್ನು ಪೂರ್ಣಗೊಳಿಸುವಲ್ಲಿ ಅನಗತ್ಯ ಕಾಲವಿಳಂಬ ಮಾಡದೆ ರೈತರನ್ನು ವಿಶ್ವಾಸಕ್ಕೆ ತೆಗೆದುಕೊಂಡು ಕಾರ್ಯನಿರ್ವಹಿಸಬೇಕು. ಪೂರಕವಾಗಿ ಸಹಕರಿಸದೆ ಇರುವ ರೈತರ ಭೂಸ್ವಾದೀನದ ಒಟ್ಟು ಮೊತ್ತವನ್ನು ನ್ಯಾಯಾಲಯದ ಮೂಲಕ ಪಾವತಿಸಿ, ಕಾರ್ಯಾರಂಭಗೊಳಿಸುವಂತೆ ಸಲಹೆ ನೀಡಿದರು.

ಈ ಭೂಸ್ವಾಧೀನ ಮತ್ತು ಭೂಮಿಯ ಪೋಡಿ ಕಾರ್ಯವನ್ನು ಸಂಬಂಧಿಸಿದ ಇಲಾಖಾ ಅಧಿಕಾರಿಗಳು ಆಗಸ್ಟ್‌ ಮಾಸಾಂತ್ಯದೊಳಗಾಗಿ ಪೂರ್ಣಗೊಳಿಸಿ, ವರದಿ ನೀಡುವಂತೆ ಸೂಚಿಸಿದ ಅವರು, ಸರ್ಕಾರದಿಂದ ಬಿಡುಗಡೆಯಾದ ಅನುದಾನವನ್ನು ಸಕಾಲದಲ್ಲಿ ಸದ್ಬಳಕೆ ಮಾಡಿಕೊಳ್ಳುವಂತೆ ತಿಳಿಸಿದರು.

ಭೂಸ್ವಾಧೀನದ ಜಂಟಿ ಖಾತೆದಾರರನ್ನು ಗುರುತಿಸಲು ಇದುವರೆಗೂ ಸರ್ವೇಯರ್‌ಗಳನ್ನು ನೇಮಿಸದಿರುವ ಬಗ್ಗೆ ಅಸಮಧಾನ ವ್ಯಕ್ತಪಡಿಸಿದ ಸಂಸದರು, ಸಾಗರ, ಹೊಸನಗರ ಮತ್ತು ಶಿವಮೊಗ್ಗ ತಾಲೂಕಿನ ಭೂ ದಾಖಲೆಗಳ ಸಹಾಯಕ ನಿರ್ದೇಶಕರುಗಳಿಗೆ ಕಟ್ಟುನಿಟ್ಟಿನ ಸೂಚನೆ ನೀಡಿ ತಕ್ಷಣವೇ ಕಾರ್ಯಪ್ರವೃತ್ತರಾಗಿ ಒಂದು ವಾರದೊಳಗೆ ಜಂಟಿ ಖಾತೆದಾರರನ್ನು ಗುರುತಿಸುವ ಹಾಗೂ ಬಿಟ್ಟು ಹೋದ ಜಮೀನಿನ ಅಳತೆ ಕಾರ್ಯವನ್ನು ಪೂರ್ಣಗೊಳಿಸಲು ಸೂಚಿಸಿದರು.

ಶಿವಮೊಗ್ಗ, ಸಾಗರ ಮತ್ತು ಕುಂದಾಪುರ ಉಪವಿಭಾಗಾಧಿಕಾರಿಗಳಿಗೆ ಜುಲೈ-2025 ರ ಅಂತ್ಯದೊಳಗೆ ಭೂಸ್ವಾಧೀನ ಪ್ರಕ್ರಿಯೆಯಲ್ಲಿ ಶೇ.100 ರಷ್ಟು ಪ್ರಗತಿಯನ್ನು ಸಾಧಿಸಿ ಪೂರ್ಣಗೊಳಿಸಲು ಸೂಚಿಸಿದರು.

ಜಿಲ್ಲಾಧಿಕಾರಿ ಗುರುದತ್ತ ಹೆಗಡೆ ಮಾತನಾಡಿ, ರಾಷ್ಟ್ರೀಯ ಹೆದ್ದಾರಿ ಭೂಸ್ವಾಧೀನ ಮಾಡಿಕೊಳ್ಳುವ ಕಾರ್ಯದ ಭಾಗವಾಗಿ ರಾಷ್ಟ್ರೀಯ ಹೆದ್ದಾರಿಯ ಭೂಸ್ವಾದೀನಾಧಿಕಾರಿಗಳು ಹಾಗೂ ಶಿವಮೊಗ್ಗದ ಉಪವಿಭಾಗಾಧಿಕಾರಿಗಳು ರೈತರನ್ನು ಭೇಟಿ ಮಾಡಿ ಚರ್ಚಿಸಿ, ಹೆಚ್ಚಿನ ಪರಿಹಾರದ ಮೊತ್ತ ಕೊಡಿಸುವಲ್ಲಿ ಶ್ರಮಿಸುವಂತೆ ಸೂಚಿಸಿದರು.

ಭೂಸ್ವಾದೀನ ಕಾರ್ಯಕ್ಕೆ ಅಗತ್ಯವಿರುವ ಸರ್ವೇಯರ್‌ಗಳನ್ನು ನಾಳೆಯಿಂದಲೇ ನಿಯೋಜಿಸಿ, ಮುಂದಿನ ಒಂದು ವಾರದ ಅವಧಿಯೊಳಗಾಗಿ ಪ್ರಕ್ರಿಯೆ ಪೂರ್ಣಗೊಳಿಸಬೇಕು. ಕಾಮಗಾರಿಗೆ ಸಹಕರಿಸಿದ ಹಾಗೂ ಭೂಮಿ ಹಸ್ತಾಂತರಿಸಿದ ರೈತರಿಗೆ ಕೂಡಲೇ ಪರಿಹಾರದ ಮೊತ್ತವನ್ನು ಪಾವತಿಸುವಂತೆ ತಿಳಿಸಿದರು.

ಸಭೆಯಲ್ಲಿ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿ ಹನುಮಂತಪ್ಪ, ಉಪ ಅರಣ್ಯ ಸಂರಕ್ಷಣಾಧಿಕಾರಿಗಳು, ಸಾಗರ ಮತ್ತು ಶಿವಮೊಗ್ಗ ಉಪವಿಭಾಗಾಧಿಕಾರಿಗಳು, ಭೂದಾಖಲೆಗಳ ಸಹಾಯಕ ನಿರ್ದೇಶಕರು, ರಾಷ್ಟ್ರೀಯ ಹೆದ್ದಾರಿ ವಿಭಾಗದ ಅಧಿಕಾರಿಗಳು ಉಪಸ್ಥಿತರಿದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಈ ಸಾಲಲ್ಲಿ ಅಬಕಾರಿ ರಾಜಸ್ವ ಟಾರ್ಗೆಟ್‌ ಕಷ್ಟ? 11 ತಿಂಗಳಲ್ಲಿ ಮದ್ಯ ಮಾರಾಟ ಗಣನೀಯ ಕುಸಿತ
ನಾಳೆ ಸಿದ್ದರಾಮಯ್ಯ ಬಜೆಟ್‌ : ವಲಯವಾರು ನಿರೀಕ್ಷೆಗಳೇನು?