ಆದಿವಾಲ ಗ್ರಾಮದ ರುದ್ರಭೂಮಿ ಸಮಸ್ಯೆ ಅಂತ್ಯ

KannadaprabhaNewsNetwork |  
Published : Jun 21, 2025, 12:49 AM IST
ಚಿತ್ರ 3 | Kannada Prabha

ಸಾರಾಂಶ

ಆದಿವಾಲ ಗ್ರಾಮಕ್ಕೆ 2 ಎಕರೆ ರುದ್ರಭೂಮಿ ಮಂಜೂರಾದ ಪತ್ರವನ್ನು ಪಂಚಾಯಿತಿ ಅಧಿಕಾರಿಗಳಿಗೆ ಹಸ್ತಾಂತರಿಸಲಾಯಿತು.

ಕನ್ನಡಪ್ರಭ ವಾರ್ತೆ ಹಿರಿಯೂರು

ಕೊನೆಗೂ ತಾಲೂಕಿನ ಆದಿವಾಲ ಗ್ರಾಮದ ಜನರ ಹಲವು ದಶಕಗಳ ಬೇಡಿಕೆಯೊಂದು ಈಡೇರಿದಂತಾಗಿದೆ. ಗ್ರಾಮದ ರಿಸನಂ 297/3 ರಲ್ಲಿನ 2 ಎಕರೆ ಜಾಗವನ್ನು ಜಿಲ್ಲಾಧಿಕಾರಿಗಳ ಆದೇಶದ ಮೇರೆಗೆ ನೇರ ಖರೀದಿಯ ಮೂಲಕ ಖರೀದಿಸಿ ಆದಿವಾಲ ಗ್ರಾಮದ ಜನಾಂಗದವರಿಗೆ ರುದ್ರಭೂಮಿ ಉದ್ದೇಶಕ್ಕೆ ಕಾಯ್ದಿರಿಸಿ ಆದೇಶ ಹೊರಡಿಸಲಾಗಿದೆ.

ಗ್ರಾಮದ ರುದ್ರಭೂಮಿಯ ಸಮಸ್ಯೆ ಎಷ್ಟು ತೀವ್ರವಾಗಿತ್ತೆಂದರೆ ಗ್ರಾಮದಲ್ಲಿ ಯಾರಾದರೂ ಜಮೀನು ಇಲ್ಲದವರು ಮರಣ ಹೊಂದಿದರೆ ಅವರನ್ನು ರಾಷ್ಟ್ರೀಯ ಹೆದ್ದಾರಿ ಪಕ್ಕದ ಸರ್ವಿಸ್ ರಸ್ತೆಯಲ್ಲಿ ಹೂಳಲಾಗುತ್ತಿತ್ತು. ಸರ್ವಿಸ್ ರಸ್ತೆಯ ಉದ್ದಕ್ಕೂ ಸತ್ತವರ ಸಮಾಧಿಗಳ ಸಾಲೇ ಇರುತ್ತಿತ್ತು. ಸುಮಾರು 4 ಸಾವಿರ ಜನಸಂಖ್ಯೆ ಇರುವ ಗ್ರಾಮಕ್ಕೆ ಒಂದು ರುದ್ರಭೂಮಿ ಮಂಜೂರು ಮಾಡಿಕೊಡಿ ಎಂದು ಆ ಗ್ರಾಮದ ಜನರು ಹಲವಾರು ಬಾರಿ ಮನವಿ ಮಾಡಿದ್ದರು. ಗ್ರಾಮದ ಕೆಲವರು ಸರ್ಕಾರಿ ದರಕ್ಕೆ ರುದ್ರಭೂಮಿಗೆ ಜಮೀನು ಕೊಡಲು ಮುಂದೆ ಬಂದಿದ್ದರು. ಆದರೂ ರುದ್ರಭೂಮಿ ಸಮಸ್ಯೆ ಹಾಗೆಯೇ ಇತ್ತು. ಈ ಬಗ್ಗೆ ಜೂನ್.14-2024ರಂದು ಕನ್ನಡಪ್ರಭ ಪತ್ರಿಕೆ ಆದಿವಾಲ ರುದ್ರಭೂಮಿ ಸಮಸ್ಯೆ ಅಂತ್ಯ ಯಾವಾಗ ಎಂಬ ವರದಿ ಪ್ರಕಟಿಸಿತ್ತು. ಸುದ್ದಿಯ ಬೆನ್ನಲ್ಲೇ ಜಿಲ್ಲಾಧಿಕಾರಿ ಟಿ.ವೆಂಕಟೇಶ್ ಅವರು ಆದಿವಾಲ ಗ್ರಾಮಕ್ಕೆ ಭೇಟಿ ನೀಡಿ 30 ವರ್ಷಗಳಷ್ಟು ಹಳೆಯ ರುದ್ರಭೂಮಿ ಸಮಸ್ಯೆ ಪರಿಹರಿಸುವ ಮಾತು ನೀಡಿದ್ದರು. ಅದರಂತೆಯೇ ಈಗ ರುದ್ರಭೂಮಿಗೆ 2 ಎಕರೆ ಜಮೀನು ಹಸ್ತಾಂತರ ಪ್ರಕ್ರಿಯೆಯನ್ನು ಮುಗಿಸಿ ಸಂಬಂಧಪಟ್ಟ ಇಲಾಖೆಯವರಿಗೆ ಸುಪರ್ದಿಗೆ ಒಪ್ಪಿಸಲಾಗಿದೆ. ಆದಿವಾಲ ಗ್ರಾಮದ ರುದ್ರಭೂಮಿ ಸಮಸ್ಯೆ ಬಗ್ಗೆ ಪತ್ರಿಕೆ ಕಾಲಕಾಲಕ್ಕೆ ವರದಿ ಮಾಡುತ್ತಾ ಬಂದು ಅಧಿಕಾರಿಗಳಿಗೆ ಸಮಸ್ಯೆಯ ತೀವ್ರತೆಯ ಮಾಹಿತಿ ನೀಡಿತ್ತು. ಇದೀಗ ಆದಿವಾಲ ಗ್ರಾಮದ ಜನರ ಬಹುಕಾಲದ ಸಮಸ್ಯೆಗೆ ಮುಕ್ತಿ ಸಿಕ್ಕಿದ್ದು ರಸ್ತೆ ಪಕ್ಕದಲ್ಲಿ ಹೆಣ ಹೂಳುವ ಸಂಕಷ್ಟ ತಪ್ಪಿದಂತಾಗಿದೆ. ರುದ್ರಭೂಮಿ ಮಂಜೂರಿನ ಪತ್ರ ಹಸ್ತಾತರಿಸುವ ಸಂದರ್ಭದಲ್ಲಿ ಗ್ರಾಮ ಪಂಚಾಯಿತಿ ಅಧ್ಯಕ್ಷೆ ವಿನೋದಮ್ಮ, ಸದಸ್ಯರಾದ ಮುನೀರ್, ವಿಶ್ವನಾಥ್, ಸುಭಾನ್ ಖಾನ್, ಪಿಡಿಒ ಜ್ಯೋತಿ, ತ್ರಿಯಂಬಕ ಮೂರ್ತಿ, ಸಾಕಮ್ಮ, ಮಹಲಿಂಗಪ್ಪ, ಮಂಜುನಾಥ್, ನಾಗೇಂದ್ರ, ನಾಸಿರ್ ಮುಂತಾದವರಿದ್ದರು.

ಮೂರು ದಶಕದ ಸಮಸ್ಯೆಗೆ ಪರಿಹಾರ: ಕಿರಣ್ ಪಟ್ರೆಹಳ್ಳಿ

ಗ್ರಾಮ ಪಂಚಾಯಿತಿ ಮಾಜಿ ಅಧ್ಯಕ್ಷ ಕಿರಣ್ ಪಟ್ರೆಹಳ್ಳಿ ಪ್ರತಿಕ್ರಿಯಿಸಿ, ನಮ್ಮ ಆಡಳಿತದ ಅವಧಿಯಲ್ಲಿ ಜಮೀನು ಖರೀದಿಸಿ ರುದ್ರಭೂಮಿಗೆ ಅನುಮೋದಿಸಿ ಕೊಡಲು ಕೋರಲಾಗಿತ್ತು. ಅದಾಗಿ ವರ್ಷವಾದರೂ ಆ ಬಗ್ಗೆ ಯಾವುದೇ ಬೆಳವಣಿಗೆಗಳಾಗಲಿಲ್ಲ. ಆನಂತರ ರುದ್ರಭೂಮಿ ಸಮಸ್ಯೆ ಬಗ್ಗೆ ಕನ್ನಡಪ್ರಭ ಪತ್ರಿಕೆ ಸವಿಸ್ತಾರ ವರದಿ ಪ್ರಕಟಿಸಿತು. ನಾವೂ ಸಹ ಸಚಿವರ ಗಮನಕ್ಕೆ ರುದ್ರಭೂಮಿ ಸಮಸ್ಯೆ ತಂದೆವು. ತಕ್ಷಣವೇ ಸಚಿವರು ಜಿಲ್ಲಾಧಿಕಾರಿಗಳಿಗೆ ಸೂಚನೆ ನೀಡಿ ಜಮೀನು ಮಂಜೂರು ಮಾಡುವ ಪ್ರಕ್ರಿಯೆಯನ್ನು ಆದಷ್ಟು ಬೇಗ ಪೂರ್ಣಗೊಳಿಸಿ ಎಂದಿದ್ದರು. ಇದೀಗ ಮೂರು ದಶಕದ ಸಮಸ್ಯೆ ಬಗೆಹರಿದಿದ್ದು ಸಚಿವರಿಗೆ, ಜಿಲ್ಲಾಧಿಕಾರಿಗೆ ಹಾಗೂ ಜಮೀನು ನೀಡಿದವರಿಗೆ ಗ್ರಾಮದ ಜನರು ಅಭಾರಿಯಾಗಿದ್ದಾರೆ ಎಂದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಜೆಡಿಯು ನಾಯಕ ನಿತೀಶ್‌ ರಾಜ್ಯಸಭೆಗೆ - ಸಿಎಂ ಸ್ಥಾನಕ್ಕೆ ರಾಜೀನಾಮೆ
ಈ ಸಾಲಲ್ಲಿ ಅಬಕಾರಿ ರಾಜಸ್ವ ಟಾರ್ಗೆಟ್‌ ಕಷ್ಟ? 11 ತಿಂಗಳಲ್ಲಿ ಮದ್ಯ ಮಾರಾಟ ಗಣನೀಯ ಕುಸಿತ