ಕನ್ನಡಪ್ರಭವಾರ್ತೆ ನಾಗಮಂಗಲ
ಸಾರ್ವಜನಿಕರ ಕುಂದುಕೊರತೆ ಸ್ವೀಕರಿಸಿ, ಪುಸ್ತಕಗಳಲ್ಲಿ ದಾಖಲಿಸಿ ಸಮಸ್ಯೆಗಳಿಗೆ ಶೀಘ್ರ ಪರಿಹಾರಕ್ಕೆ ಕ್ರಮ ವಹಿಸುವಂತೆ ಕೃಷಿ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಎನ್.ಚಲುವರಾಯಸ್ವಾಮಿ ಅಧಿಕಾರಿಗಳಿಗೆ ಖಡಕ್ ಸೂಚನೆ ನೀಡಿದರು.ತಾಲೂಕಿನ ಬೆಳ್ಳೂರು ಪಟ್ಟಣ ಪಂಚಾಯ್ತಿ ಮುಂಭಾಗದಲ್ಲಿ 31 ಕೋಟಿ ರು.ವೆಚ್ಚದ ಕುಡಿಯುವ ನೀರು ಪೂರೈಸುವ ಯೋಜನೆಗೆ ಶಂಕುಸ್ಥಾಪನೆ ನೆರವೇರಿಸಿದ ಬಳಿಕ ಬೆಳ್ಳೂರು ಹೋಬಳಿ ಮಟ್ಟದ ಜನಸಂಪರ್ಕ ಸಭೆಯಲ್ಲಿ ಅಹವಾಲು ಸ್ವೀಕರಿಸಿ ಮಾತನಾಡಿದರು.
ಜಿಲ್ಲೆಯ ನಗರಸಭೆ ಸೇರಿದಂತೆ ಎಲ್ಲಾ ತಾಲೂಕು ಕಚೇರಿ, ಪುರಸಭೆ, ಪಟ್ಟಣ ಪಂಚಾಯ್ತಿ ಹಾಗೂ ಗ್ರಾಪಂ ಕಚೇರಿಗಳಲ್ಲಿ ಪುಸ್ತಕ ಇಡಬೇಕು. ನೋಡಲ್ ಅಧಿಕಾರಿಗಳನ್ನು ನೇಮಕ ಮಾಡಿ ಪ್ರತಿವಾರ ಪುಸ್ತಕವನ್ನು ಪರಿಶೀಲಿಸಿ ಸಾರ್ವಜನಿಕರ ಕುಂದುಕೊರತೆ ಸಂಬಂಧಿಸಿದ ಇಲಾಖೆಗೆ ವರ್ಗಾಯಿಸಿ ತ್ವರಿಗತಿಯಲ್ಲಿ ಜನರ ಸಮಸ್ಯೆ ಪರಿಹರಿಸಬೇಕು ಎಂದರು.ಲಂಚ ಕೊಟ್ಟರೆ ನೀವೇ ಹೊಣೆ:
ಕಂದಾಯ ಇಲಾಖೆಯಲ್ಲಿ ಪೌತಿ ಖಾತೆ, ಆರ್‌ಟಿಸಿ ತಿದ್ದುಪಡಿ ಸೇರಿದಂತೆ ಜಮೀನುಗಳ ದುರಸ್ತು ಕಾರ್ಯ ನಿರಂತರವಾಗಿ ನಡೆಯುತ್ತದೆ. ರೈತರ ಯಾವುದೇ ಕೆಲಸ ಕಾರ್ಯಗಳಿಗೆ ಲಂಚದ ಹಣ ಪಡೆಯದಂತೆ ಎಲ್ಲಾ ಅಧಿಕಾರಿಗಳಿಗೆ ಕಟ್ಟುನಿಟ್ಟಿನ ಎಚ್ಚರಿಕೆ ನೀಡಲಾಗಿದೆ ಎಂದರು.ಸೂಕ್ತ ದಾಖಲೆ ಕೊಟ್ಟು ಕಾನೂನು ಬದ್ಧವಾಗಿ ಕೆಲಸ ಮಾಡಿಸಿಕೊಳ್ಳುವುದು ನಿಮ್ಮ ಜವಾಬ್ದಾರಿ. ನಿಮ್ಮ ತಪ್ಪುಗಳನ್ನು ಮುಚ್ಚಿಕೊಳ್ಳಲು ಅಧಿಕಾರಿಗಳಿಗೆ ಲಂಚ ಕೊಟ್ಟರೆ ನಿಮ್ಮದೇ ಅಪರಾಧ ಹೊರತು ಇದಕ್ಕೆ ಸಿಎಂ ಸಿದ್ದರಾಮಯ್ಯ, ಡಿಸಿಎಂ ಡಿ.ಕೆ.ಶಿವಕುಮಾರ್, ಚಲುವರಾಯಸ್ವಾಮಿ ಅಥವಾ ಕೃಷ್ಣ ಭೈರೇಗೌಡರನ್ನು ದೂಷಿಸುವುದು ನಿಮಗೆ ಶೋಭೆ ತರುವುದಿಲ್ಲ ಎಂದು ಎಚ್ಚರಿಸಿದರು.
ರಾಜ್ಯ ಮತ್ತು ಕೇಂದ್ರ ಸರ್ಕಾರದ ವಿವಿಧ ಯೋಜನೆಗಳಲ್ಲಿ ಸಿಗುವ ಸಹಾಯಧನ ಸವಲತ್ತುಗಳನ್ನು ಹೊರತು ಪಡಿಸಿ, ಪಂಚ ಗ್ಯಾರಂಟಿ ಯೋಜನೆಗಳ ಮೂಲಕ ತಾಲೂಕಿಗೆ ಒಂದು ವರ್ಷಕ್ಕೆ 220 ಕೋಟಿ ರು. ಹಣ ನೇರವಾಗಿ ಜನರಿಗೆ ತಲುಪುತ್ತಿದೆ. ಇದರೊಂದಿಗೆ ಹಲವು ಅಭಿವೃದ್ಧಿ ಕೆಲಸಗಳನ್ನೂ ಕೂಡ ನಡೆಸಲಾಗುತ್ತಿದೆ ಎಂದರು.ವಿಪಕ್ಷಗಳು ಅಭಿವೃದ್ಧಿ ಸಹಿಸುತ್ತಿಲ್ಲ:
ಕಾಂಗ್ರೆಸ್ ಸರ್ಕಾರ 5 ಗ್ಯಾರಂಟಿ ಯೋಜನೆಗಳ ಜೊತೆಗೆ ಇಷ್ಟೊಂದು ಅಭಿವೃದ್ಧಿ ಮತ್ತು ಜನಪರ ಕಾರ್ಯಕ್ರಮ ನೀಡುತ್ತಿರುವುದನ್ನು ಸಹಿಸಲಾಗದೆ ಬಿಜೆಪಿ ಮತ್ತು ಜೆಡಿಎಸ್ ನಾಯಕರು ವಿಲಿವಿಲಿ ಒದ್ದಾಡುತ್ತಿದ್ದಾರೆ ಎಂದು ದೂರಿದರು.ಕಳೆದ ಐದು ವರ್ಷದಲ್ಲಿ ತಾಲೂಕಿನ ಬೆಳ್ಳೂರು ಕ್ರಾಸ್‌ನಿಂದ ಹೊಸಮನೆ ಗೇಟ್‌ವರೆಗಿನ 1 ಕಿ.ಮೀ. ರಸ್ತೆಗೆ ಡಾಂಬರು ಹಾಕಿಸಲು ಆಗಿಲ್ಲ. ಆದಿಚುಂಚನಗಿರಿಯಿಂದ ತಾವರೆಕೆರೆ ಗೇಟ್ ವರೆಗೆ ನಾವು ಮಾಡಿದ್ದ ಕೆಲಸ ಬಿಟ್ಟರೆ ಅಲ್ಲಿಂದ ಹೊಸಮನೆ ಗೇಟ್‌ವರೆಗೆ ರಾಷ್ಟ್ರೀಯ ಹೆದ್ದಾರಿ ಬೈಪಾಸ್ ಓವರ್ ಬ್ರಿಡ್ಜ್ ಕಾಮಗಾರಿ ಮಾಡಿಸಲು ಆಗಿರಲಿಲ್ಲ. ಆ ಕಾಮಗಾರಿಗೆ ಈಗ ಮಂಜೂರಾತಿ ಸಿಕ್ಕಿದೆ. ಸದ್ಯದಲ್ಲೇ ಕೆಲಸ ಆರಂಭಿಸಲಾಗುವುದು ಎಂದರು.
ಇದಕ್ಕೂ ಮುನ್ನ ಬೆಳ್ಳೂರಿನಲ್ಲಿ 1 ಕೋಟಿ ರು. ವೆಚ್ಚದಲ್ಲಿ ನಿರ್ಮಿಸಿರುವ ಎಎಲ್‌ಕೆ ಸರ್ಕಾರಿ ಪದವಿ ಪೂರ್ವ ಕಾಲೇಜಿನ ನೂತನ ಕಟ್ಟಡ ಹಾಗೂ 55 ಲಕ್ಷ ರು. ವೆಚ್ಚದಲ್ಲಿ ನಿರ್ಮಾಣಗೊಂಡಿರುವ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲಾ ಕಟ್ಟಡವನ್ನು ಸಚಿವರು ಉದ್ಘಾಟಿಸಿದರು. ಸಮಾಜ ಕಲ್ಯಾಣ ಇಲಾಖೆಯ 5 ಕೋಟಿ ರು. ವೆಚ್ಚದ ಮೆಟ್ರಿಕ್ ಪೂರ್ವ ಬಾಲಕಿಯರ ಹಾಸ್ಟೆಲ್ ನಿರ್ಮಾಣ ಕಾಮಗಾರಿಗೆ ಭೂಮಿ ಪೂಜೆ ನೆರವೇರಿಸಿದರು.ಈ ವೇಳೆ ಬೆಳ್ಳೂರು ಪಪಂ. ಅಧ್ಯಕ್ಷೆ ಲಕ್ಷ್ಮಮ್ಮ, ಉಪಾಧ್ಯಕ್ಷ ಮಹಮ್ಮದ್ ಯಾಸೀನ್, ಸ್ಥಾಯಿ ಸಮಿತಿ ಅಧ್ಯಕ್ಷ ಆಕಾಶ್, ತಾಲೂಕು ಗ್ಯಾರಂಟಿ ಯೋಜನೆಗಳ ಅನುಷ್ಠಾನ ಸಮಿತಿ ಅಧ್ಯಕ್ಷ ಮೂಡ್ಲೀಗೌಡ, ಪಾಂಡವಪುರ ಉಪ ವಿಭಾಗಾಧಿಕಾರಿ ಶ್ರೀನಿವಾಸ್, ತಹಸೀಲ್ದಾರ್ ಜಿ.ಆದರ್ಶ, ತಾಪಂ ಇಒ ಸತೀಶ್, ಯೋಜನಾ ನಿರ್ದೇಶಕ ಮಾಯಣ್ಣ, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ರಾಜೇಶ್, ಮುಖಂಡರಾದ ಶಿವಣ್ಣ, ವೆಂಕಟೇಶ್, ಪಾಪಣ್ಣ, ಲ್ಯಾಬ್‌ಮಂಜು, ರವಿಕುಮಾರ್ ಸೇರಿದಂತೆ ತಾಲೂಕು ಮತ್ತು ಜಿಲ್ಲಾ ಮಟ್ಟದ ವಿವಿಧ ಇಲಾಖೆಗಳ ಅಧಿಕಾರಿಗಳು ಇದ್ದರು.