ಬೇಡಿಕೆ ಈಡೇರಿಸದಿದ್ರೆ ಸಲ್ಲೇಖನ ವ್ರತ ಸ್ವೀಕಾರ

KannadaprabhaNewsNetwork |  
Published : Jun 09, 2025, 04:03 AM IST
ಕಾಗವಾಡ | Kannada Prabha

ಸಾರಾಂಶ

ವಿವಿಧ ಬೇಡಿಕೆಗಳ ಈಡೇರಿಕೆಗಾಗಿ ರಾಜ್ಯಪಾಲರಿಗೆ ಮನವಿ ಸಲ್ಲಿಸಲಾಗಿದೆ. ಆದಷ್ಟು ಬೇಗನೆ ಒಳ್ಳೆಯ ಸಂದೇಶ ಬರುವ ನಿರೀಕ್ಷೆಯಲ್ಲಿದ್ದೇವೆ.

ಕನ್ನಡಪ್ರಭ ವಾರ್ತೆ ಕಾಗವಾಡ

ಸರ್ಕಾರ ಹನ್ನೆರಡು ತಿಂಗಳೊಳಗೆ ನಮ್ಮ ಮನವಿಗೆ ಸ್ಪಂದಿಸದಿದ್ದರೆ ಹನ್ನೆರಡು ವರ್ಷದಲ್ಲಿ ಸಲ್ಲೇಖನ ವ್ರತ ಸ್ವೀಕರಿಸಲಾಗುವುದು ಎಂದು ರಾಷ್ಟ್ರಸಂತ ಗುಣಧರನಂಧಿ ಮುನಿಮಹಾರಾಜರು ಸರ್ಕಾರಕ್ಕೆ ಖಡಕ್‌ ಎಚ್ಚರಿಕೆ ನೀಡಿದರು.

ತಾಲೂಕಿನ ಐನಾಪುರ ಪಟ್ಟಣದಲ್ಲಿ ಭಾನುವಾರ ನಡೆದ ರಾಜ್ಯಮಟ್ಟದ ಜೈನ ಸಮಾವೇಶದಲ್ಲಿ ಮಾತನಾಡಿದ ಅವರು ಸರ್ಕಾರಕ್ಕೆ ಎಚ್ಚರಿಕೆ ನೀಡಿದರು. ಇಂದು ವಿವಿಧ ಬೇಡಿಕೆಗಳ ಈಡೇರಿಕೆಗಾಗಿ ರಾಜ್ಯಪಾಲರಿಗೆ ಮನವಿ ಸಲ್ಲಿಸಲಾಗಿದೆ. ಆದಷ್ಟು ಬೇಗನೆ ಒಳ್ಳೆಯ ಸಂದೇಶ ಬರುವ ನಿರೀಕ್ಷೆಯಲ್ಲಿದ್ದೇವೆ. ಜೈನ ಸಮುದಾಯದ ಬೇಡಿಕೆಗಳ ಬಗ್ಗೆ ಹಲವು ಬಾರಿ ಸರ್ಕಾರಕ್ಕೆ ಮನವಿ ಸಲ್ಲಿಸಲಾಗಿದೆ. ಇದುವರೆಗೆ ಯಾವುದೇ ಪ್ರತಿಕ್ರಿಯೆ ಬಂದಿಲ್ಲ. ಈ ಸಮಾವೇಶ ಇನ್ನು ಮುಂದೆ ಸಿಎಂ ಸಿದ್ದರಾಮಯ್ಯ ನಿದ್ದೆಗೆ ಭಂಗ ತರುವುದು ಸಿದ್ಧ. ನಾವು ನಿಮಗೆ ಮತ ನಿಡಿದ್ದೇವೆ ನೀವು ನಮಗೆ ಉಪಕಾರ ಮಾಡಿ. ನಮ್ಮ ಮಠಗಳಿಗೆ ಅನುದಾನ ಕೊಡಬೇಡಿ, ನಮ್ಮ ಜೈನ ಸಮುದಾಯದ ಮಹಿಳೆಯರಿಗೆ ಸರ್ಕಾರದಿಂದ ಶಿಖರಜೀ ಯಾತ್ರೆ ಹೋಗಲು ಯೋಜನೆ ಮಾಡಿ, ಸಮುದಾಯಕ್ಕೆ ನಿಗಮ ಮಂಡಳಿ ರಚನೆ ಜೊತೆಗೆ ಪ್ರಮುಖ 7 ಬೇಡಿಕೆ ಈಡೇರಿಕೆಗೆ ಮನವಿ ಸಲ್ಲಿಸಲಾಗಿದೆ ಎಂದರು.

ನಾವು ಚಿಕ್ಕೋಡಿಯಲ್ಲಿ ಲಕ್ಷಾಂತರ ಜನರಿದ್ದೇವೆ. ಆದರೆ ಸರ್ಕಾರ ಜನಗಣತಿ ವರದಿಯಲ್ಲಿ ಒಂದುವರೆ ಲಕ್ಷ ಜನ ಎಂದು ವರದಿ ನೀಡಿದೆ. ಈ ಹಿಂದೆ ಸಮುದಾಯದ ಅಭಿವೃದ್ಧಿಗೆ ಕೋಟ್ಯಂತರ ರೂಪಾಯಿ ಅನುದಾನ ಬಿಡುಗಡೆ ಆಗುತ್ತಿತ್ತು. ಆದರೆ ಸದ್ಯಕ್ಕೆ ಸರ್ಕಾರ ಅತಿ ಕಡಿಮೆ ಅನುದಾನ ಬಿಡುಗಡೆ ಮಾಡುತ್ತಿದೆ, ಬರುವ ಬಜೆಟನಲ್ಲಿ ಅನುದಾನ ಬಿಡುಗಡೆಗೆ ಮುನಿಗಳು ಒತ್ತಾಯಿಸಿದರು.

ಅಥಣಿ ಶಾಸಕ ಲಕ್ಷ್ಮಣ ಸವದಿ ಮಾತನಾಡಿ, ಕಳೆದ ಅಧಿವೇಶನದಲ್ಲಿ ಜೈನ ಸಮುದಾಯದ ವಿವಿಧ ಬೇಡಿಕೆಗಳ ಕುರಿತು ಚರ್ಚೆ ಮಾಡಿದ್ದು, ಮೂಲ ಬೇಡಿಕೆಗಳಲ್ಲಿ ಒಂದಾದ ನಿಗಮ ಮಂಡಳಿ ಆದೇಶಕ್ಕೆ ಸರ್ಕಾರ ಚಿಂತನೆ ನಡೆಸಿದೆ. ರಾಜ್ಯದಲ್ಲಿ ಅಲ್ಪಸಂಖ್ಯಾತರ ಪಟ್ಟಿಯಲ್ಲಿರುವ ಜೈನ ಸಮಾಜಕ್ಕೆ ಪ್ರತ್ಯೇಕ ನಿಗಮ ಮಂಡಳಿ ನೀಡುವಂತೆ ನಾನು ಕೂಡಾ ಹಕ್ಕೊತ್ತಾಯ ಮಾಡುತ್ತೇನೆ. ಕಾಂಗ್ರೆಸ್ ಪಕ್ಷಕ್ಕೆ ಹಸ್ತ ಚಿನ್ಹೆ ನೀಡಿದ ಸಮುದಾಯಕ್ಕೆ ನಮ್ಮ ಸರ್ಕಾರ ಅನ್ಯಾಯವಾಗಲು ಬಿಡುವುದಿಲ್ಲ. ಜೈನ ಸಮಾಜದ ಋಣ ಕಾಂಗ್ರೆಸ್ ಪಕ್ಷದ ಮೇಲಿದೆ. ಶೀಘ್ರವೇ ಬೇಡಿಕೆ ಇಡೇರಿಸುವ ಪ್ರಾಮಾಣಿಕ ಪ್ರಯತ್ನ ಮಾಡುತ್ತೇವೆ ಎಂದು ಭರವಸೆ ನೀಡಿದರು.

ಕಾಗವಾಡ ಶಾಸಕ ರಾಜು ಕಾಗೆ ಮಾತನಾಡಿ, ಶೈಕ್ಷಣಿಕ, ರಾಜಕೀಯವಾಗಿ ಬೆಳೆಯಬೇಕೆಂಬ ಉದ್ದೇಶದಿಂದ ಈ ಸಮಾವೇಶ ಏರ್ಪಡಿಸಲಾಗಿದೆ. ಹಲವು ವರ್ಷಗಳಿಂದ ಜೈನ ಸಮುದಾಯದ ಮುನಿಗಳಾದ ರಾಷ್ಟ್ರಸಂತ ಗುಣಧರನಂದಿ ಮುನಿ ಮಹರಾಜರು ಸಮಾಜದ ಬೇಡಿಕೆಗಳ ಈಡೇರಿಕೆಗೆ ಹಲವು ಬಾರಿ ಸಮಾವೇಶ ಏರ್ಪಡಿಸಿದ್ದಾರೆ. ಧ್ವನಿಗೆ ಧ್ವನಿಯಾಗಿ ಸರ್ಕಾರದ ಗಮನ ಸೆಳೆಯುವುದಾಗಿ ಹೇಳಿದ್ದಾರೆ ಎಂದರು. ಚಿಕ್ಕೋಡಿ ಶಾಸಕ ಗಣೇಶ ಹುಕ್ಕೇರಿ ಮಾತನಾಡಿ, ಚಿಕ್ಕೋಡಿಯಲ್ಲಿ ಕಾಲೇಜು ಕಟ್ಟಡಕ್ಕೆ ಸುಮಾರು ₹5 ಕೋಟಿ ಹಣ ನೀಡುವುದಾಗಿ ಹೇಳಿದರು. ತಮ್ಮ ಬೇಡಿಕೆಗೆ ಸರ್ಕಾರದ ಜೊತೆ ಚರ್ಚೆ ನಡೆಸುತ್ತೇವೆ ಎಂದು ತಿಳಿಸಿದರು.

ಬೆಳಗಾವಿ ದಕ್ಷಿಣ ಶಾಸಕ ಅಭಯ ಪಾಟೀಲ ಮಾತನಾಡಿ, ಜೈನ ಸಮುದಾಯದ ಜನರು ಒಂದೇ ಪಕ್ಷಕ್ಕೆ ಸೀಮಿತವಾಗಿ ಬೆಂಬಲ ಕೋರಿದಾಗ ಎಲ್ಲ ಪಕ್ಷದ ನಾಯಕರು ನಿಮ್ಮ ಸಮಸ್ಯೆಗೆ ಸ್ಪಂದಿಸಿದ್ದಾರೆ ಹಾಗೂ ಕಾಂಗ್ರೆಸ್ ಸರ್ಕಾರ ಸಮುದಾಯಕ್ಕೆ ಅನ್ಯಾಯ ಮಾಡುತ್ತಿದೆ‌. ಈ ಕುರಿತು ಅಧಿಕಾರಿದಲ್ಲಿರುವ ನಾಯಕರು ಜನರ ಪರವಾಗಿ ಧ್ವನಿ ಎತ್ತಬೇಕು. ಇದರಲ್ಲಿ ಪಕ್ಷಪಾತ ಮರೆತು ಸಮುದಾಯದ ಏಳಿಗೆಗಾಗಿ ನಿಮ್ಮೊಡನೆ ನಾವು ಸಿದ್ದರಿದ್ದೇವೆ. ಎಲ್ಲಿಯವರೆಗೆ ಜೈನ ಸಮುದಾಯದವರು ಜೈನ ಮುನಿಗಳ ಆದೇಶ ಪಾಲಿಸುವುದಿಲ್ಲವೊ ಅಲ್ಲಿಯವರೆಗೆ ಸಮಾಜ ಸುಧಾರಣೆ ಅಸಾಧ್ಯ ಎಂದು ಹೇಳಿದರು.

ಮಾಜಿ ಸಚಿವ ಶ್ರೀಮಂತ ಪಾಟೀಲ ಮಾತನಾಡಿ, ನಾನು ಅಲ್ಪಸಂಖ್ಯಾತ ಖಾತೆಯ ಸಚಿವನಾಗಿದ್ದಾಗ ಜೈನ ಸಮುದಾಯದ ಹಿತ ದೃಷ್ಟಿಯಿಂದ ಹಲವು ಜನಪರ ಕಾರ್ಯಗಳನ್ನ ಮಾಡಿದ್ದೇನೆ, ಶ್ರವಣಬೆಳಗೊಳಕ್ಕೆ ಸುಮಾರು ₹50 ಕೋಟಿ ಹಣ ಬಿಡುಗಡೆ ಮಾಡುವ ಮೂಲಕ ಸಮಾಜದ ಅಳಿಲು ಸೇವೆಗೆ ಶ್ರಮಿಸಿದ್ದೇನೆ ಹಾಗೂ ತಮ್ಮ ಬೇಡಿಕೆ ಸಮಾವೇಶಕ್ಕೆ ನಾನೂ ಬೆಂಬಲ ಕೋರುವುದಾಗಿ ತಿಳಿಸಿದರು.

ಜೈನರಿಗೆ ನಿಗಮ ಮಂಡಳಿಗೆ ಆಗ್ರಹಿಸಿ ಐನಾಪುರದಲ್ಲಿ ಶ್ರೀ ಗುಣಧರನಂದಿ ಸ್ವಾಮೀಜಿಗಳ ನೇತೃತ್ವದಲ್ಲಿ ನಡೆದ ಬೃಹತ ಸಮಾವೇಶದಲ್ಲಿ ಸಾಗರೋಪಾದಿಯಲ್ಲಿ ಜನ ಹರಿದು ಬಂದಿತ್ತು. ಭಟ್ಟಾರಕರ ಪಾವನ ಸನ್ನಿಧಾನದಲ್ಲಿ ಕಾರ್ಯಕ್ರಮಕ್ಕೆ ಅಥಿತಿಗಳಾಗಿ ಆಗಮಿಸಿದ ರಾಜ್ಯ ಪಾಲಾರದ ಥಾವರ್ ಚಂದ್ ಗೆಲ್ಹೋತ್‌ ಹಾಗೂ ಗಣ್ಯರು ದ್ವೀಪ ಪ್ರಜ್ವಲಿಸುವ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ವೇದಿಕೆಯಲ್ಲಿ ಹಾಲಿ ಮಾಜಿ ಶಾಸಕರು ಹಾಗೂ ರಾಜಕೀಯ ಧುರೀಣರು ಆಗಮಿಸಿ ಸಮಾವೇಶಕ್ಕೆ ಬೆಂಬಲ ನೀಡಿದರು. ಮೂರು ದಿನಗಳಿಂದ ನಡೆಯುತ್ತಿರುವ ಸಮಾವೇಶಕ್ಕೆ ಸುಮಾರು ಒಂದು ಲಕ್ಷಕ್ಕೂ ಹೆಚ್ಚು ಜನರು ಆಗಮಿಸಿದ್ದರು.

ಈ ವೇಳೆ ಶಾಸಕರಾದ ಗಣೇಶ ಹುಕ್ಕೇರಿ ದುರ್ಯೋದನ ಐಹೋಳೆ, ಮಾಜಿ ಶಾಸಕ ಆನಂದ ನ್ಯಾಮಗೌಡ, ಸಂಜಯ ಪಾಟೀಲ, ಮಾಜಿ ಸಚಿವ ವೀರಕುಮಾರ ಪಾಟೀಲ, ಜೈನ ಧರ್ಮದ ಮುಖಂಡರಾದ ಉತ್ತಮ ಪಾಟೀಲ, ಶೀತಲಗೌಡ ಪಾಟೀಲ, ಅರುಣಕುಮಾರ ಯಲಗುದ್ರಿ, ಕಲ್ಲಪ್ಪ ವನಜೋಳೆ, ಸಂಜಯ ಕುಚನೂರೆ ರಾಜು ನಾಡಗೌಡ, ಡಿ.ಡಿ.ಮೇಕನಮರಡಿ, ದುಳಗೌಡ ಪಾಟೀಲ, ಪುಷ್ಪಕ ಪಾಟೀಲ, ಅರುಣ ಗಣೇಶವಾಡಿ, ಡಾ.ಶುಭಂ ಪಾಟೀಲ, ಚಿಂತಾಮನಿ ಹಂಚಿಬಟ್ಟಿ, ಬಾಹುಬಲಿ ಆಸ್ಕಿ, ದಾದಾ ಪಾಟೀಲ, ಸುನೀಲ ಪಾಟೀಲ, ಮಹಿಳಾ ಮಂಡಳದ ಪುಷ್ಪಾ ಪಾಟೀಲ, ಲಲಿತಾ ಮೆಕನಮರಡಿ ಸೇರಿದಂತೆ ಹಲವು ಗಣ್ಯರು ಭಾಗಿಯಾಗಿದ್ದರು.

ಕಾಗವಾಡ ತಾಲೂಕಿನ ಐನಾಪೂರ ಪಟ್ಟಣದಲ್ಲಿ ಏರ್ಪಡಿಸಿದ ಐತಿಹಾಸಿಕ ಜೈನ ಸಮಾವೇಶಕ್ಕೆ ಮೂವರು ಸಚಿವರನ್ನು ಆಹ್ವಾನಿಸಿದ್ದರು. ಸಮಾವೇಶದಲ್ಲಿ ಸಚಿವರ ಗೈರು ಹಾಜರು ಎದ್ದು ಕಾಣಿಸಿತು.

108 ಮಹಿಳೆಯರ ಸನ್ಮಾನ:

ಜೈನ ಸಮಾವೇಶದಲ್ಲಿ ರಾಜ್ಯಾಪಲ ಥಾವರಚಂದ ಗೇಹ್ಲೋಟ ಅವರು 108 ಮಹಿಳಾ ಮಂಡಳದ ಅಧ್ಯಕ್ಷರನ್ನು ಸತ್ಕರಿಸಿ ಗೌರವಿಸಿದರು

ಜೈನ ಸಮುದಾಯ ಪ್ರಮುಖ ಬೇಡಿಕೆಗಳು1) ಜೈನ ಸಮುದಾಯ ಅಭಿವೃದ್ಧಿ ನಿಗಮ ಮಂಡಳಿ ಸ್ಥಾಪನೆ2) ಜೈನ ಸಮುದಾಯದ ಬಡವರು ಶಿಖರಜಿಗೆ ತೆರಳಲು ಅನುದಾನ3) ಜೈನ ಧರ್ಮದ ಬಡ ಮಕ್ಕಳಿಗೆ ಉಚಿತ ಶಿಕ್ಷಣ 4) ಪ್ರತಿ ಜಿಲ್ಲೆಯಲ್ಲಿ ಜೈನ ವಸತಿಗೃಹ ನಿರ್ಮಾಣ5) ಬಡವರಿಗೆ ಉಚಿತ ಚಿಕಿತ್ಸೆ ಆಸ್ಪತ್ರೆಗಳ ನಿರ್ಮಾಣ6) ಪ್ರತಿ ಹಳ್ಳಿಗಳಲ್ಲಿ ಮುನಿ ನಿವಾಸ, ಮಂಗಲ ಕಾರ್ಯಾಲಯ ನಿರ್ಮಾಣ7) ಜೈನ್ ಮುನಿಗಳ ರಕ್ಷಣೆಗೆ ಸರ್ಕಾರ ಮುಂದಾಗುವುದು

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಗೌಡ ಸಾರಸ್ವತ ಬ್ರಾಹ್ಮಣ ಸೇವಾ ಸಂಘದ ವಾಗ್ದೇವಿ ಟವರ್ಸ್‌ಗೆ ಭೂಮಿ ಪೂಜೆ
ಆತ್ಮನಿರ್ಭರ ಭಾರತಕ್ಕೆ ಸ್ವದೇಶಿ ವಸ್ತು ಬಳಕೆ ಅಗತ್ಯ: ನಾರಾಯಣಸಾ ಭಾಂಡಗೆ