ಮಾಗಳ- ಕಲ್ಲಾಗನೂರು ಸೇತುವೆ ನಿರ್ಮಾಣದ ಕನಸು ನನಸು

KannadaprabhaNewsNetwork |  
Published : Jun 09, 2025, 03:55 AM IST
ಹೂವಿನಹಡಗಲಿ ತಾಲೂಕಿನ ಮಾಗಳ ಗ್ರಾಮದ ತುಂಗಭದ್ರ ನದಿ ತೀರದಲ್ಲಿ ಮಾಗಳ-ಕಲ್ಲಾಗನೂರು ಮಧ್ಯೆ ಸೇತುವೆ ನಿರ್ಮಾಣಕ್ಕಾಗಿ ಮಣ್ಣು ಪರೀಕ್ಷೆ ಮಾಡುತ್ತಿರುವುದು. | Kannada Prabha

ಸಾರಾಂಶ

ವಿಜಯನಗರ- ಗದಗ- ಹಾವೇರಿ ಜಿಲ್ಲೆಗಳ ಸಂಪರ್ಕ ಕಲ್ಪಿಸುವ, ತುಂಗಭದ್ರಾ ನದಿಗೆ ಅಡ್ಡಲಾಗಿ ಮಾಗಳ- ಕಲ್ಲಾಗನೂರು ಸೇತುವೆ ನಿರ್ಮಾಣದ ಕನಸು ನನಸಾಗುವ ಕಾಲ ಸನ್ನಿಹಿತವಾಗುತ್ತಿದೆ.

₹69.50 ಕೋಟಿ ವೆಚ್ಚದಲ್ಲಿ ಡಿಪಿಆರ್‌ ಸಿದ್ಧ । ಸಂತ್ರಸ್ತರು ಖುಷಿ

ಸೇತುವೆ ನಿರ್ಮಾಣ ಮಾಡುವ ಸ್ಥಳದ ಉದ್ದಕ್ಕೂ ಮಣ್ಣು ಪರಿಶೀಲನೆ ಕಾರ್ಯ

ಚಂದ್ರು ಕೊಂಚಿಗೇರಿ

ಕನ್ನಡಪ್ರಭ ವಾರ್ತೆ ಹೂವಿನಹಡಗಲಿ

ವಿಜಯನಗರ- ಗದಗ- ಹಾವೇರಿ ಜಿಲ್ಲೆಗಳ ಸಂಪರ್ಕ ಕಲ್ಪಿಸುವ, ತುಂಗಭದ್ರಾ ನದಿಗೆ ಅಡ್ಡಲಾಗಿ ಮಾಗಳ- ಕಲ್ಲಾಗನೂರು ಸೇತುವೆ ನಿರ್ಮಾಣದ ಕನಸು ನನಸಾಗುವ ಕಾಲ ಸನ್ನಿಹಿತವಾಗುತ್ತಿದೆ.

ಹೌದು, ಕಳೆದ 5 ದಶಕಗಳಿಂದ ಮಾಗಳ-ಕಲ್ಲಾಗನೂರು ಮಧ್ಯೆ ಸೇತುವೆ ನಿರ್ಮಾಣ ಮಾಡಬೇಕೆಂಬ ಕನಸು ಕಂಡಿದ್ದ, ಲಕ್ಷ್ಮೇಶ್ವರದ ಮಾಜಿ ಶಾಸಕ ಉಪನಾಳ ಗೂಳಪ್ಪ ಸೇರಿದಂತೆ ಇತರೆ ಸಂಘಟನೆಗಳ ಹೋರಾಟಗಾರರ ಫಲವಾಗಿ ಇಂದು ಸಿಂಗಟಾಲೂರು ಏತ ನೀರಾವರಿ ಯೋಜನೆಯ, ಎಡ ಹಾಗೂ ಬಲ ದಂಡೆ ಭಾಗದ ಸಂತ್ರಸ್ತರ ಅನುಕೂಲಕ್ಕಾಗಿ ನಿರ್ಮಾಣ ಮಾಡಬೇಕೆಂಬ ಕೂಗಿಗೆ, ಶಿರಹಟ್ಟಿ, ಹೂವಿನಹಡಗಲಿ ಸೇರಿದಂತೆ ಗದಗ, ಹಾವೇರಿ ಮತ್ತು ವಿಜಯನಗರ ಜಿಲ್ಲೆಗಳ ಸಚಿವರು, ಶಾಸಕರು ಧ್ವನಿಯಾಗಿ ಕೆಲಸ ಮಾಡಿದ್ದರಿಂದ ಸಂತ್ರಸ್ತರು ಖುಷಿಯಾಗಿದ್ದಾರೆ.

ಧಾರವಾಡ ಮಲಪ್ರಭಾ ಯೋಜನಾ ವಲಯದಲ್ಲಿ ಜ.1, 2025ರಂದು ಜರುಗಿದ ತಾಂತ್ರಿಕ ತಜ್ಞರ ಸಮಿತಿ ಸಭೆಯಲ್ಲಿ ಕಲ್ಲಾಗನೂರು-ಮಾಗಳ, ತೊಳಲಿ-ಮಾಗಳ, ಕೋಟಿಹಾಳು-ಹೊಳೆ ಇಟಿಗಿ ಸೇರಿದಂತೆ 3 ಸ್ಥಳಗಳ ವರದಿಯನ್ನು ಪರಿಶೀಲನೆ ಮಾಡಲಾಗಿತ್ತು. ಕಲ್ಲಾಗನೂರು-ಮಾಗಳ ಮಧ್ಯೆ ಸೇತುವೆ ನಿರ್ಮಾಣ ಮಾಡಲು ಸೂಕ್ತ ಸ್ಥಳ ಎಂದು ಸಭೆಯಲ್ಲಿ ಅಂತಿಮ ನಿರ್ಣಯ ಮಾಡಲಾಗಿತ್ತು. ಈ ಕುರಿತು ಹೂವಿನಹಡಗಲಿಯ ಸಿಂಗಟಾಲೂರು ಏತ ನೀರಾವರಿ ಯೋಜನೆಯ ಇಇ ಮೂಲಕ ಸರ್ಕಾರಕ್ಕೆ ವರದಿ ಸಲ್ಲಿಸಲಾಗಿತ್ತು.

ಈ ಸೇತುವೆ ನಿರ್ಮಾಣಕ್ಕಾಗಿ ₹40 ಲಕ್ಷ ಮಂಜೂರು ಮಾಡಿ, ಡಿಪಿಆರ್‌ ಸಿದ್ಧಪಡಿಸುವಂತೆ ಕಂಪನಿಯೊಂದಕ್ಕೆ ನೀಡಲಾಗಿತ್ತು. ಇದರ ಪರಿಣಾಮ ಈಗಾಗಲೇ ₹69.50 ಕೋಟಿ ಡಿಪಿಆರ್‌ ವರದಿ ಸರ್ಕಾರಕ್ಕೆ ಕಳಿಸಲಾಗಿದೆ.

ಮಾಗಳ-ಕಲ್ಲಾಗನೂರು ಗ್ರಾಮಗಳ ಮಧ್ಯೆ ಸೇತುವೆ ನಿರ್ಮಾಣಕ್ಕಾಗಿ ತುಂಗಭದ್ರ ನದಿಯಲ್ಲಿ ತಳಪಾಯ ಮಣ್ಣು ಪರಿಶೀಲನೆ ಕಾರ್ಯ ಭರದಿಂದ ಸಾಗಿದೆ. ಕಲ್ಲಾಗನೂರು ಮತ್ತು ಮಾಗಳ ಎರಡು ಗ್ರಾಮಗಳ ನದಿ ತೀರ ಸೇರಿದಂತೆ ಸೇತುವೆ ನಿರ್ಮಾಣ ಮಾಡುವ ಸ್ಥಳದ ಉದ್ದಕ್ಕೂ ಮಣ್ಣು ಪರಿಶೀಲನೆ ಕಾರ್ಯ ನಡೆಯುತ್ತಿದೆ.

ಶಿರಹಟ್ಟಿ ತಾಲೂಕಿನ ಕಲ್ಲಾಗನೂರು ಗ್ರಾಮದ ಸೇತುವೆ ನಿರ್ಮಾಣ ಜಾಗದಿಂದ, ಚೌಡಾಳ ಗ್ರಾಮದವರೆಗೂ ಸಂಪರ್ಕ ರಸ್ತೆ ನಿರ್ಮಾಣಕ್ಕಾಗಿ 12 ಎಕರೆ ಭೂಮಿ ಅಗತ್ಯವಿದೆ. ಇತ್ತ ಹೂವಿನಹಡಗಲಿ ತಾಲೂಕಿನ ಮಾಗಳ ಗ್ರಾಮದ ಸೇತುವೆ ನಿರ್ಮಾಣ ಸ್ಥಳದಿಂದ ಸಂಪರ್ಕ ರಸ್ತೆ ನಿರ್ಮಾಣಕ್ಕಾಗಿ 6 ಎಕರೆ ಭೂಮಿಯನ್ನು ಗುರುತಿಸಲಾಗಿದೆ. ಒಟ್ಟು 18 ಎಕರೆ ಭೂ ಸ್ವಾಧೀನದ ಪ್ರಕ್ರಿಯೆಯು ಪ್ರಗತಿಯಲ್ಲಿದೆ.

PREV

Recommended Stories

ಸಾರಿಗೆ ನೌಕರರ ಜತೆ ಸರ್ಕಾರ ಸಂಧಾನ ವಿಫಲ
ಸುಹಾಸ್ ಶೆಟ್ಟಿ ಹ* ಕೇಸಲ್ಲಿ ಎನ್‌ಐಎನಿಂದ 18 ಕಡೆ ದಾಳಿ