ಶಿವಕುಮಾರ ಕುಷ್ಟಗಿ
ಜಿಲ್ಲೆಯ 7 ತಾಲೂಕುಗಳ ವ್ಯಾಪ್ತಿಯ 331 ಗ್ರಾಮಗಳಲ್ಲಿ ಈ ಮೊದಲು 213 ಗ್ರಾಮಗಳಲ್ಲಿ ಮಾತ್ರ ರುದ್ರಭೂಮಿ ಇತ್ತು. ನಂತರದ ದಿನಗಳಲ್ಲಿ ಇನ್ನುಳಿದ 118 ಗ್ರಾಮಗಳಿಗೆ ಅಗತ್ಯವಿರುವ ರುದ್ರಭೂಮಿ ಖರೀದಿಗೆ ಯೋಜನೆ ರೂಪಿಸಿದೆ. ಪ್ರಸ್ತುತ ಜಿಲ್ಲಾಡಳಿತ ದಾಖಲೆಗಳ ಪ್ರಕಾರ ಜಿಲ್ಲಾಡಳಿತವು 89 ಸರ್ಕಾರಿ ಜಮೀನು ಹಾಗೂ 29 ಖಾಸಗಿ ಜಮೀನನ್ನು ಖರೀದಿ ಮಾಡುವ ಮೂಲಕ ಒಟ್ಟು ಎಲ್ಲ 331 ಗ್ರಾಮಗಳಿಗೂ ರುದ್ರಭೂಮಿ ನೀಡಲಾಗಿದೆ ಎಂದು ಉಲ್ಲೇಖಿಸಲಾಗಿದೆ.
ಸಮಸ್ಯೆ ಜೀವಂತ: ಆಯಾ ಗ್ರಾಮಗಳಲ್ಲಿನ ಜನಸಂಖ್ಯೆಯ ಆಧಾರದಲ್ಲಿ ಸದ್ಯ ಇರುವ ರುದ್ರಭೂಮಿಗಳು ಸಾಕಾಗುತ್ತಿಲ್ಲ. ಜನಸಂಖ್ಯೆ ಹೆಚ್ಚಿರುವ ಗ್ರಾಮಗಳು ಹೆಚ್ಚುವರಿಯಾಗಿ ರುದ್ರಭೂಮಿ ಬೇಕು ಎಂದು ಬೇಡಿಕೆ ಸಲ್ಲಿಸಿದ್ದು, ರುದ್ರಭೂಮಿ ನೇರ ಖರೀದಿ ಪ್ರಕ್ರಿಯೆಗೆ ಜಿಲ್ಲಾಡಳಿತ ಸಿದ್ಧತೆ ನಡೆಸಿದೆ. ಕೆಲವು ತಾಂತ್ರಿಕ ಸಮಸ್ಯೆಗಳಿಂದ ಹೆಚ್ಚುವರಿ ರುದ್ರಭೂಮಿಗಳ ಖರೀದಿ ಬಾಕಿ ಉಳಿದಿದೆ. ಕೆಲವು ವರ್ಷಗಳಿಂದ ಜಿಲ್ಲೆಯಲ್ಲಿ ಬಾಕಿ ಉಳಿದಿದ್ದ 98 ಗ್ರಾಮಗಳಿಗೆ ರುದ್ರಭೂಮಿ ಸೌಲಭ್ಯ ಒದಗಿಸಲು ಜಿಲ್ಲಾಡಳಿತ ಭೂಮಿ ಖರೀದಿ ಪ್ರಕ್ರಿಯೆ ನಡೆಸಿದೆ. ಅದರಲ್ಲಿ ಬೆರಳಣಿಕೆಯಷ್ಟು ಜನರು ಜಮೀನು ನೀಡಲು ಮುಂದೆ ಬಂದರೂ ಜಮೀನುಗಳಿಗೆ ಸಮರ್ಪಕ ಬೆಲೆ ನೀಡುತ್ತಿಲ್ಲ ಎನ್ನುವ ಪ್ರಸ್ತಾಪವನ್ನು ಜಮೀನು ಕೊಡುವ ರೈತರು ಮುಂದಿಟ್ಟಿದ್ದು, ಇದಕ್ಕೆ ಜಿಲ್ಲಾಡಳಿತದ ಬಳಿ ಉತ್ತರವೇ ಇಲ್ಲ.ವಿವರ: ಗದಗ ತಾಲೂಕಿನ 59 ಗ್ರಾಮಗಳಿಗೆ, ಮುಂಡರಗಿ ತಾಲೂಕಿನ 52 ಗ್ರಾಮಗಳಿಗೆ, ಶಿರಹಟ್ಟಿಯ 50 ಗ್ರಾಮಗಳಿಗೆ, ಲಕ್ಷ್ಮೇಶ್ವರದ 38 ಗ್ರಾಮಗಳಿಗೆ, ನರಗುಂದದ 35 ಗ್ರಾಮಗಳಿಗೆ, ರೋಣ ತಾಲೂಕಿನ 59 ಗ್ರಾಮಗಳಿಗೆ, ಗಜೇಂದ್ರಗಡ ತಾಲೂಕಿನ 38 ಗ್ರಾಮಗಳು ಸೇರಿದಂತೆ ಜಿಲ್ಲೆಯ ಒಟ್ಟು 331 ಎಲ್ಲ ಗ್ರಾಮಗಳಿಗೂ ರುದ್ರಭೂಮಿಗಳಿವೆ.ಎಲ್ಲೆಲ್ಲಿ ಖರೀದಿ?: ಗದಗ ತಾಲೂಕಿನ ಹಿರೇಹಂದಿಗೋಳ, ನಭಾಪುರ, ಹಂಗನಕಟ್ಟಿ, ಎಲಿಶಿರೂರು, ಕಬಲಾಯತಕಟ್ಟಿ, ಕಿರಟಗೇರಿ, ಲಿಂಗದಾಳ, ಬೆಳಹೊಡ, ದುಂದೂರು, ಸಂಭಾಪುರ ಹಾಗೂ ಹಾತಲಗೇರಿ ಗ್ರಾಮಗಳಲ್ಲಿದ್ದ ಸ್ಮಶಾನ ಭೂಮಿಯ ಸಮಸ್ಯೆ ಪರಿಹರಿಸಲಾಗಿದೆ. ರೋಣ ಹಾಗೂ ಗಜೇಂದ್ರಗಡ ತಾಲೂಕಿನಲ್ಲಿ ನಾಗೇಂದ್ರಗಡ, ಹೊಳೆಹಡಗಲಿ, ಬೆಳಗೋಡ, ಮಾಡಲಗೇರಿ, ಬಾಸಲಾಪುರ, ಕುರಡಗಿ ಮತ್ತು ಅಮರಗಟ್ಟಿ ಗ್ರಾಮದಲ್ಲಿ ರುದ್ರಭೂಮಿಗೆ ಜಾಗ ಖರೀದಿಸಲಾಗಿದೆ. ನರಗುಂದ ತಾಲೂಕಿನಲ್ಲಿ ಕಲ್ಲಾಪುರ, ಜಗಾಪುರ, ಖಾನಾಪುರ, ಮೂಗನೂರು, ಕಲಕೇರಿ, ಸಿದ್ದಾಪುರ, ಬೆನಕೊಪ್ಪ, ಅರಸಿನಗೋಡೆ, ಕುರುಗೋವಿನಕೊಪ್ಪ, ಲಕಮಾಪುರ, ಬೆಳ್ಳೇರಿ, ವಾಸನ, ಬೂದಿಹಾಳ ಮತ್ತು ಗಂಗಾಪುರ, ಲಕ್ಷ್ಮೇಶ್ವರ, ಶಿರಹಟ್ಟಿ ತಾಲೂಕು ಹಾಗೂ ಮುಂಡರಗಿ ತಾಲೂಕಿನ ಬಸಾಪುರ, ಕೆಲೂರು, ಗಂಗಾಪುರ, ಕಕ್ಕೂರು, ನಾಗರಹಳ್ಳಿ, ಮಕ್ತಂಪುರ, ಶೀರನಹಳ್ಳಿ, ತಿಪ್ಪಾಪುರ, ಬಿದರಹಳ್ಳಿ, ವಿಠಲಾಪುರ, ಹಮ್ಮಗಿ, ಗುಮ್ಮಗೋಳ, ಸಿಂಗಟಾಲೂರು ಮತ್ತು ದಿಂಡೂರು ಗ್ರಾಮಗಳಲ್ಲಿ ಸ್ಮಶಾನಕ್ಕಾಗಿ ಜಮೀನು ಖರೀದಿಸಲಾಗಿದೆ.
ತಹಸೀಲ್ದಾರರಿಗೆ ಸೂಚನೆ: ಕೆಲ ಗ್ರಾಮಗಳು ಹೆಚ್ಚುವರಿ ರುದ್ರಭೂಮಿಗೆ ಬೇಡಿಕೆ ಸಲ್ಲಿಸಿದ್ದು, ತಾಂತ್ರಿಕ ಕಾರಣಗಳಿಂದ ಹೆಚ್ಚುವರಿ ರುದ್ರಭೂಮಿ ಖರೀದಿ ಬಾಕಿ ಉಳಿದಿದೆ. ಇನ್ನುಳಿದಂತೆ ಸ್ಮಶಾನ ಭೂಮಿಗೆ ತೆರಳಲು ಖಾಸಗಿ ವ್ಯಕ್ತಿಗಳು ದಾರಿಯಲ್ಲಿ ಅಡೆತಡೆ ಮಾಡುತ್ತಿದ್ದು, ಕೆಲವೆಡೆ ಸಮಸ್ಯೆ ತಲೆದೋರಿದೆ. ಅಂತಹ ಸಮಸ್ಯೆಗಳನ್ನು ತಹಸೀಲ್ದಾರ್ ಮೂಲಕ ಪರಿಹರಿಸಲು ಸೂಚಿಸಲಾಗಿದೆ ಎಂದು ಅಪರ ಜಿಲ್ಲಾಧಿಕಾರಿ ಡಾ. ದುರಗೇಶ ಕೆ.ಆರ್. ತಿಳಿಸಿದರು.