ಜೆಎಸ್‌ಡಬ್ಲು ಸ್ಟೀಲ್ ಘಟಕದಲ್ಲಿ ಅವಘಡ: ಮೂವರು ನೌಕರರ ಸಾವು

KannadaprabhaNewsNetwork | Updated : May 11 2024, 05:59 AM IST

ಸಾರಾಂಶ

ಘಟಕದಲ್ಲಿನ ನೀರು ಹರಿಸುವ ಪೈಪಿಯಲ್ಲಿ ತೊಂದರೆ ಕಾಣಿಸಿಕೊಂಡು, ನೀರು ಸಮರ್ಪಕವಾಗಿ ಸರಬರಾಜು ಆಗುತ್ತಿರಲಿಲ್ಲ.

ಸಂಡೂರು: ತಾಲೂಕಿನ ತೋರಣಗಲ್‌ನಲ್ಲಿರುವ ಜೆಎಸ್‌ಡಬ್ಲು ಸ್ಟೀಲ್ ಕಾರ್ಖಾನೆಯ ಎಚ್.ಎಸ್.ಎಂ.3 ಎಂಬ ಘಟಕದಲ್ಲಿ ಅವಘಡ ಸಂಭವಿಸಿ ಮೂವರು ನೌಕರರು ಮೃತಪಟ್ಟ ಘಟನೆ ಗುರುವಾರ ಸಂಜೆ ನಡೆದಿದೆ.

ಸಿವಿಲ್ ವಿಭಾಗದಲ್ಲಿ ಕೆಲಸ ಮಾಡುತ್ತಿದ್ದ ಹೊಸಪೇಟೆ ತಾಲೂಕಿನ ಭುವನಹಳ್ಳಿಯ ಜೆಡೆಪ್ಪ (31 ), ಸಿವಿಲ್ ಎಂಜಿನಿಯರ್ ಬೆಂಗಳೂರಿನ ಸುಶಾಂತ್ ಕೃಷ್ಣ ನೈನಾರು (23) ಹಾಗೂ ಅಸಿಸ್ಟಂಟ್ ಮ್ಯಾನೇಜರ್ ಚೆನ್ನೈನ ಎಂ.ಶಿವಮಹಾದೇವ ಮೃತರು. ಘಟಕದಲ್ಲಿನ ನೀರು ಹರಿಸುವ ಪೈಪಿಯಲ್ಲಿ ತೊಂದರೆ ಕಾಣಿಸಿಕೊಂಡು, ನೀರು ಸಮರ್ಪಕವಾಗಿ ಸರಬರಾಜು ಆಗುತ್ತಿರಲಿಲ್ಲ. ಈ ಮೂವರು ಘಟಕದ ವಾಟರ್ ಟ್ಯಾಂಕ್ ಹತ್ತಿರ ಪೈಪ್‌ಲೈನ್ ಪರಿಶೀಲನೆಗೆ ತೆರಳಿದ್ದರು. ಈ ಸಂದರ್ಭದಲ್ಲಿ ಘಟಕದಿಂದ ದೊಡ್ಡ ಪ್ರಮಾಣದಲ್ಲಿ ನೀರನ್ನು ಹರಿಯಬಿಟ್ಟಿದ್ದರಿಂದ ಪೈಪ್‌ಲೈನ್ ಪರಿಶೀಲನೆಯಲ್ಲಿದ್ದ ಅಧಿಕಾರಿಗಳು ನೀರಿನ ರಭಸಕ್ಕೆ ದೊಡ್ಡ ಕೊಳವೆಯ ಮೂಲಕ ಕೊಚ್ಚಿಕೊಂಡು ಹೋಗಿ ಸುಮಾರು 70 -80 ಅಡಿ ಆಳದ ನೀರು ಸಂಗ್ರಹ ಟ್ಯಾಂಕಲ್ಲಿ ಬಿದ್ದು ಮೃತಪಟ್ಟಿದ್ದಾರೆ.

ಮೃತದೇಹಗಳನ್ನು ಬಳ್ಳಾರಿಯಲ್ಲಿನ ವಿಮ್ಸ್‌ನಲ್ಲಿನ ಶವಾಗಾರದಲ್ಲಿ ಇಡಲಾಗಿದೆ. ತೋರಣಗಲ್ಲು ಪೊಲೀಸ್ ಠಾಣೆಯಲ್ಲಿ ಇಲ್ಲಿವರೆಗೆ ಯಾವುದೇ ಪ್ರಕರಣ ದಾಖಲಾಗಿಲ್ಲ.

ಕಾರ್ಖಾನೆಯಲ್ಲಿ ಸುರಕ್ಷತೆಯ ನಿರ್ಲಕ್ಷ- ಆರೋಪ:

ಜಿಂದಾಲ್ ಕಾರ್ಖಾನೆಯಲ್ಲಿ ಅಪಘಾತಗಳ ಸರಣಿ ಮುಂದುವರೆದಿದೆ. ಗುರುವಾರ ಸಂಜೆ ನಡೆದ ಅವಘಡದಲ್ಲಿ ಮೂವರು ಎಂಜಿನಿಯರ್‌ಗಳ ಸಾವಿಗೆ ಕಾರ್ಖಾನೆಯ ಆಡಳಿತ ಮಂಡಳಿಯ ನಿರ್ಲಕ್ಷವೇ ಕಾರಣವಾಗಿದೆ. ಕಾರ್ಮಿಕರ ಸುರಕ್ಷತೆಯನ್ನು ನಿರ್ಲಕ್ಷಿಸಲಾಗುತ್ತಿದೆ. ಸಂಬಂಧಿಸಿದ ಇಲಾಖೆಗಳು ಈ ಕುರಿತು ಕ್ರಮ ಕೈಗೊಳ್ಳುತ್ತಿಲ್ಲ ಎಂದು ಸಿಐಟಿಯು ಸಂಘಟನೆಯ ಜಿಲ್ಲಾಧ್ಯಕ್ಷ ಜೆ.ಸತ್ಯಬಾಬು, ಪ್ರಧಾನ ಕಾರ್ಯದರ್ಶಿ ಜೆ.ಎಂ. ಚನ್ನಬಸಯ್ಯ, ಕರ್ನಾಟಕ ಪ್ರಾಂತ ರೈತ ಸಂಘದ ಜಿಲ್ಲಾಧ್ಯಕ್ಷ ವಿ.ಎಸ್. ಶಿವಶಂಕರ್ ಹಾಗೂ ಸಿಪಿಐಎಂ ಕಾರ್ಯದರ್ಶಿ ಎಂ. ಸ್ವಾಮಿ ಹೇಳಿಕೆಯಲ್ಲಿ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಅಪಘಾತ ಪ್ರಕರಣದಲ್ಲಿ ಮೃತಪಟ್ಟವರ ಮರಣೋತ್ತರ ಪರೀಕ್ಷೆಗಳನ್ನು ಸಹ ಕಂಪನಿಯ ನಿರ್ದೇಶನದಂತೆ ನಡೆಸಲಾಗುತ್ತಿದೆ. ಮೃತ ಕಾರ್ಮಿಕರಿಗೆ ಪರಿಹಾರ ನೀಡುವಲ್ಲಿ ಅನ್ಯಾಯ ಮಾಡಲಾಗುತ್ತಿದೆ. ಇದುವರೆಗೆ ನಡೆದ ಸಾವುಗಳ ಕುರಿತು ನ್ಯಾಯಾಂಗ ತನಿಖೆ ನಡೆಸಿ, ಕಾರ್ಮಿಕರಿಗೆ ನ್ಯಾಯ ಒದಗಿಸಬೇಕು. ಮೃತ ಕುಟುಂಬಕ್ಕೆ ಪರಿಹಾರ ನೀಡಿ, ಅವರ ಕುಟುಂಬದವರಿಗೆ ಉದ್ಯೋಗ ಒದಗಿಸಬೇಕು. ತಪ್ಪಿತಸ್ಥ ಕಾರ್ಖಾನೆಗಳ ಮುಖ್ಯಸ್ಥರನ್ನು ಹಾಗೂ ಅಧಿಕಾರಿಗಳ ವಿರುದ್ಧ ದೂರು ದಾಖಲಿಸಿ, ಸೂಕ್ತ ಕಾನೂನು ಕ್ರಮ ಜರುಗಿಸಬೇಕು ಎಂದು ಒತ್ತಾಯಿಸಿದ್ದಾರೆ.

Share this article