ರೈಲ್ವೆ ನಿಲ್ದಾಣದ ಮೂರನೇ ಗೇಟ್‌ನಲ್ಲಿ ಅಪಘಾತ!

KannadaprabhaNewsNetwork |  
Published : Sep 11, 2025, 12:03 AM IST
10ಎಚ್‌ಯುಬಿ21ಅಣಕು ಪ್ರದರ್ಶನ ವೇಳೆ ಪ್ರಯಾಣಿಕರ ರಕ್ಷಣಾ ಕಾರ್ಯದಲ್ಲಿ ನಿರತರಾಗಿರುವ ಎನ್‌ಡಿಆರ್‌ಎಫ್‌ ತಂಡ. | Kannada Prabha

ಸಾರಾಂಶ

ರೈಲ್ವೆಯ ಅಪಘಾತ ಸಂಭವಿಸಿದಾಗ ಅದರ ನಿರ್ವಹಣೆ ಮತ್ತು ಶೀಘ್ರ ಕಾರ್ಯಾಚರಣೆಯ ಉದ್ದೇಶದಿಂದ ಈ ಅಣುಕು ಪ್ರದರ್ಶನ ಆಯೋಜಿಸಲಾಗಿತ್ತು. ಕೃತಕ ರೈಲ್ವೆ ಅಪಘಾತದ ದೃಶ್ಯಾವಳಿ ಸೃಷ್ಟಿಸಲಾಗಿತ್ತು.

ಹುಬ್ಬಳ್ಳಿ: ನಗರದ ರೈಲ್ವೆ ನಿಲ್ದಾಣದ 3ನೇ ಗೇಟ್‌ನಲ್ಲಿ ಬುಧವಾರ ಬೆಳಗಿನ 11.30ರ ವೇಳೆಗೆ ಅದೇನೋ ತಳಮಳ. ಅಲ್ಲೊಂದು ಅಪಘಾತ ನಡೆದುಹೋಗಿತ್ತು. ರೈಲ್ವೆ ನಿಲ್ದಾಣದಲ್ಲಿ ಒಂದು ಬೋಗಿ ಮತ್ತೊಂದು ಬೋಗಿ ಏರಿನಿಂತಿತ್ತು. ಅದರಲ್ಲಿದ್ದ ಪ್ರಯಾಣಿಕರ ಚೀರಾಟ- ಕೂಗಾಟ ಜೋರಾಗಿತ್ತು. ಅಷ್ಟೊತ್ತಿಗಾಗಲೇ ಸೈರನ್‌ ಮೊಳಗಿತು.

ಕೂಡಲೇ ಸ್ಥಳಕ್ಕೆ ಧಾವಿಸಿದ ರಾಷ್ಟ್ರೀಯ ವಿಪತ್ತು ನಿರ್ವಹಣೆ ಪಡೆ (NDRF), ರೈಲ್ವೆ ರಕ್ಷಣಾ ಪಡೆ (RPF), ರಾಜ್ಯ ಪೊಲೀಸ್ ಇಲಾಖೆ, ಅಗ್ನಿಶಾಮಕ ದಳ, ಹೋಮ್ ಗಾರ್ಡ್ಸ್, ರೆಡ್ ಕ್ರಾಸ್, ರೈಲ್ವೆ ವೈದ್ಯಕೀಯ ಸಿಬ್ಬಂದಿ ಮತ್ತು ರೈಲ್ವೆ ನಾಗರಿಕ ಸುರಕ್ಷಣಾ ಸಂಸ್ಥೆಗಳು ರಕ್ಷಣಾ ಕಾರ್ಯದಲ್ಲಿ ತೊಡಗಿದವು.

ಸ್ಥಳದಲ್ಲೇ ಟೆಂಟ್‌ ಹಾಕಿದ ವೈದ್ಯರು ತಕ್ಷಣ ವೈದ್ಯಕೀಯ ಉಪಚಾರದಲ್ಲಿ ತೊಡಗಿದರು. ಅದಾಗಲೇ ಮೂರು ಆ್ಯಂಬುಲೆನ್ಸ್‌ಗಳು ಸ್ಥಳಕ್ಕೆ ಧಾವಿಸಿದ್ದವು.

ಎನ್‌ಡಿಆರ್‌ಎಫ್‌ ಸಿಬ್ಬಂದಿ ಅದಾಗಲೇ ರೈಲ್ವೆ ಬೋಗಿ ಕೊರೆದು ಗಾಯಾಳುಗಳನ್ನು ಹೊರತೆಗೆಯುವ ಕಾರ್ಯದಲ್ಲಿ ನಿರತರಾಗಿದ್ದರು. ಮೂವರು ಗಾಯಾಳುಗಳನ್ನು ಯಶಸ್ವಿಯಾಗಿ ಹೊರತೆಗೆದರು. ಘಟನೆಯಲ್ಲಿ ಒಂದು ಸಾವು ಸಂಭವಿಸಿತ್ತು. ಶವ ತೆಗೆದು ಶವಾಗಾರಕ್ಕೂ ಸಾಗಿಸಲಾಯಿತು. ಸ್ಥಳದಲ್ಲೇ ಇದ್ದ ಮಾಹಿತಿ ಕೇಂದ್ರದಲ್ಲಿ ಕಾಲಕಾಲಕ್ಕೆ ಘಟನೆ ಕುರಿತಂತೆ ಮಾಹಿತಿ ನೀಡಲಾಗುತ್ತಿತ್ತು.

ಅಣಕು ಪ್ರದರ್ಶನ: ಇಷ್ಟೆಲ್ಲ ನಡೆದಿದ್ದು ಅಣಕು ಪ್ರದರ್ಶನದಲ್ಲಿ. ರೈಲ್ವೆಯ ಅಪಘಾತ ಸಂಭವಿಸಿದಾಗ ಅದರ ನಿರ್ವಹಣೆ ಮತ್ತು ಶೀಘ್ರ ಕಾರ್ಯಾಚರಣೆಯ ಉದ್ದೇಶದಿಂದ ಈ ಅಣುಕು ಪ್ರದರ್ಶನ ಆಯೋಜಿಸಲಾಗಿತ್ತು. ಕೃತಕ ರೈಲ್ವೆ ಅಪಘಾತದ ದೃಶ್ಯಾವಳಿ ಸೃಷ್ಟಿಸಲಾಗಿತ್ತು.

ವಿವಿಧ ರಕ್ಷಣಾ ಇಲಾಖೆಗಳ ನಡುವೆ ಉತ್ತಮ ಸಮನ್ವಯ ಸಾಧಿಸಲು, ಪೂರ್ವ ಸಿದ್ಧತೆಗೆ ಉತ್ತೇಜನ ನೀಡಲು ಸಹಕಾರಿಯಾಗುತ್ತದೆ. ರೈಲ್ವೆ, ಎನ್‌ಡಿಆರ್‌ಎಫ್ ಮತ್ತು ಇತರೆ ಸಹಭಾಗಿ ಸಂಸ್ಥೆಗಳು ತಮ್ಮ ನೈಪುಣ್ಯತೆಯನ್ನು ಮತ್ತು ತಂತ್ರಜ್ಞಾನದ ಪ್ರದರ್ಶನವನ್ನು ಈ ಅಭ್ಯಾಸದಲ್ಲಿ ತೋರಿಸಿದವು.

ಪ್ರಧಾನ ಮುಖ್ಯ ಸುರಕ್ಷಾ ಅಧಿಕಾರಿ ಎಂ. ರಾಮಕೃಷ್ಣ, ಜಿಲ್ಲಾಧಿಕಾರಿ ದಿವ್ಯಪ್ರಭು, ಮುಖ್ಯಯಾಂತ್ರಿಕ ಎಂಜಿನಿಯರ್ ಪಿ. ಬಾಲಸುಂದರಂ, ವಿಭಾಗೀಯ ವ್ಯವಸ್ಥಾಪಕರಾದ ಟಿ.ವಿ. ಭೂಷಣ್ ಮತ್ತು ಪ್ರೇಮ್‌ಚಂದ್ರ, ಮುಖ್ಯ ವಿಭಾಗೀಯ ಸುರಕ್ಷತಾ ಅಧಿಕಾರಿ ತ್ರಿನೇತ್ರ ಕೆ.ಆರ್, ಹಿರಿಯ ವಿಭಾಗೀಯ ಭದ್ರತಾ ಆಯುಕ್ತ ಅಲೋಕ್ ಕುಮಾರ್, ತಹಸೀಲ್ದಾರ್ ಮಹೇಶ ಗಸ್ತೆ ಹಾಗೂ ಇತರೆ ವಿಭಾಗೀಯ ಹಿರಿಯ ಅಧಿಕಾರಿಗಳು ಉಪಸ್ಥಿತರಿದ್ದರು.

PREV

Recommended Stories

ವಿಶ್ವಾದ್ಯಂತ ಒಂದೇ ದಿನ ಕಾಂತಾರ ಚಾಪ್ಟರ್ 1 ಬಿಡುಗಡೆ
ಈರುಳ್ಳಿ, ಹೂ, ಪಚ್ಚ ಬಾಳೆ ಬೆಲೆ ಧರೆಗೆ!