ಧಾರವಾಡ/ನವಲಗುಂದ: ನವಲಗುಂದ ತಾಲೂಕಿನ ಗುಡಿಸಾಗರ ಗ್ರಾಮದಲ್ಲಿ ಮಂಗಳವಾರ ಸಂಜೆ ಕೆಲವರು ವಾಂತಿ ಬೇಧಿಯಿಂದ ಅಸ್ವಸ್ಥರಾಗಿದ್ದವರನ್ನು ಬುಧವಾರ ಶಾಸಕ ಎನ್.ಎಚ್. ಕೋನರಡ್ಡಿ, ಜಿಲ್ಲಾಧಿಕಾರಿ ದಿವ್ಯ ಪ್ರಭು ಭೇಟಿ ಮಾಡಿ ಆರೋಗ್ಯ ವಿಚಾರಿಸಿದರು.
ಗ್ರಾಮಕ್ಕೆ ಸಮಯಕ್ಕೆ ಸರಿಯಾಗಿ ಶುದ್ಧೀಕರಿಸಿದ ನೀರನ್ನು ಸರಬರಾಜು ಮಾಡಬೇಕು. ಸ್ವಚ್ಛತೆ, ಶುದ್ಧ ನೀರಿನ ಬಗ್ಗೆ ಗ್ರಾಮಸ್ಥರಲ್ಲಿ ಜಾಗೃತಿ ಮೂಡಿಸಬೇಕು. ಆಸ್ಪತ್ರೆಗೆ ದಾಖಲಾಗಿರುವವರಿಗೆ ಉತ್ತಮ ಚಿಕಿತ್ಸೆ, ಉಚಿತ ಔಷಧಿ ನೀಡಬೇಕೆಂದು ಶಾಸಕ ಕೋನರಡ್ಡಿ ನಿರ್ದೇಶಿದರು. ವೈದ್ಯರಿಗೆ ಸೂಕ್ತ ಚಿಕಿತ್ಸೆ, ಅಗತ್ಯ ಔಷಧಿಗಳನ್ನು ನೀಡುವಂತೆ ಸೂಚಿಸಿದರು.ಜಿಲ್ಲಾಧಿಕಾರಿ ದಿವ್ಯ ಪ್ರಭು ಮಾತನಾಡಿ, ಸುಮಾರು 19 ಜನ ತಾಲೂಕು ಆಸ್ಪತ್ರೆಗೆ ದಾಖಲಾಗಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಎಲ್ಲರ ಆರೋಗ್ಯ ಸ್ಥಿರವಾಗಿದೆ. ಗ್ರಾಮಸ್ಥರು ಗ್ರಾಮದ ಕುಡಿಯುವ ನೀರಿನ ಕೆರೆಯಿಂದ ಈ ಘಟನೆ ಆಗಿದೆ ಎಂದು ದೂರಿದ್ದಾರೆ. ಈ ಕುರಿತು ಪರಿಶೀಲಿಸಿ, ವರದಿ ನೀಡಲು ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆ ಇಇ ಅವರಿಗೆ ನಿರ್ದೇಶನ ನೀಡಲಾಗಿದೆ. ಈಗಾಗಲೇ ಗ್ರಾಮದ ಕೆರೆ, ಮೇಲ್ಮಟ್ಟದ ಜಲಸಂಗ್ರಹಗಾರ ಮತ್ತು ಮನೆಹತ್ತಿರದ ನಳದಿಂದ ನೀರು ಸಂಗ್ರಹಿಸಿ ಪರೀಕ್ಷೆಗಾಗಿ ಕಳುಹಿಸಲಾಗಿದೆ ಎಂದು ತಿಳಿಸಿದರು.
ಗ್ರಾಮದಲ್ಲಿ ನೀರು, ನೈರ್ಮಲ್ಯ, ನೀರನ್ನು ಶುದ್ಧೀಕರಿಸಿ, ಬಳಸುವ ಬಗ್ಗೆ ಜಾಗೃತಿ ಮೂಡಿಸಿ, ಆರೋಗ್ಯ ತಪಾಸಣೆಗಾಗಿ 30 ಜನ ಆಶಾ ಸದಸ್ಯರ ತಂಡ ರಚಿಸಿ, ಮನೆಮನೆ ಸಮೀಕ್ಷೆ ಆರಂಭಿಸಲಾಗಿದೆ ಎಂದು ತಿಳಿಸಿದರು.ಶಾಸಕ ಎನ್.ಎಚ್. ಕೋನರಡ್ಡಿ ಮಾತನಾಡಿ, ಜಿಲ್ಲಾಡಳಿತ ಹಾಗೂ ತಾಲೂಕು ಆಡಳಿತ ಈಗಾಗಲೇ ಗ್ರಾಮದ ಪರಿಸ್ಥಿತಿ ಅವಲೋಕಿಸಿ ಅಗತ್ಯ ಕ್ರಮ ಜರುಗಿಸಲು ಮುಂದಾಗಿದೆ. ಮುಂಬರುವ ದಿನಗಳಲ್ಲಿ ಗ್ರಾಪಂನವರು ಕೆರೆಯ ನೀರನ್ನು ಸ್ವಚ್ಛವಾಗಿಡುವಂತೆ ಕ್ರಮ ವಹಿಸಲು ಸಂಬಂಧಿಸಿದ ಅಧಿಕಾರಿಗಳಿಗೆ ಸೂಚಿಸಲಾಗಿದೆ. ಅಗತ್ಯ ಬಿದ್ದಲ್ಲಿ ಕೆರೆಯ ನೀರನ್ನು ಹೊರ ಹಾಕಿ ಹೊಸದಾಗಿ ನೀರು ತುಂಬಿಸಲು ಪ್ರಯತ್ನಿಸಲಾಗುವುದು. ಜತೆಗೆ ಜನತೆಯ ಆರೋಗ್ಯ ಕುರಿತಾಗಿ ನಿರಂತರ ನಿಗಾ ವಹಿಸಲು ಡಿಎಚ್‍ಒ ಹಾಗೂ ಟಿಎಚ್‍ಒ ಅವರನ್ನು ಖಾಯಂ ಗ್ರಾಮದಲ್ಲಿರುವಂತೆ ಸೂಚಿಸಲಾಗಿದೆ ಎಂದರು.
ಇದೇ ಸಂದರ್ಭದಲ್ಲಿ ಗ್ರಾಮದ ಕೆರೆಯ ಸುತ್ತಲೂ ರಕ್ಷಣಾ ವ್ಯವಸ್ಥೆ ಇಲ್ಲದಿರುವುದರಿಂದ ದನ, ಕರುಗಳು ಕೆರೆಯಲ್ಲಿ ನುಗ್ಗುತ್ತಿರುವುದರಿಂದ ನೀರು ಮತ್ತಷ್ಟು ಕಲುಷಿತವಾಗುತ್ತದೆ. ಹೀಗಾಗಿ ಕೆರೆಯ ನೀರನ್ನು ಸ್ವಚ್ಛಗೊಳಿಸಿ ಸುತ್ತಲೂ ತಂತಿ ಬೇಲಿ ಹಾಕಿಸಬೇಕು ಎಂದು ಗ್ರಾಮಸ್ಥರು ಆಗ್ರಹಿಸಿದರು.ನಂತರ ನವಲಗುಂದ ಪ್ರವಾಸಿ ಮಂದಿರದಲ್ಲಿ ಸಂಬಂಧಿಸಿದ ಅಧಿಕಾರಿಗಳೊಂದಿಗೆ ಸಭೆ ನಡೆಸಿ ಚರ್ಚೆ ಮಾಡಿ ಮುಂದಿನ ದಿನಗಳಲ್ಲಿ ಇಂತಹ ಪ್ರಕರಣಗಳು ಆಗದಂತೆ ಕ್ರಮ ವಹಿಸಲು ಸೂಚಿಸಿದರು.
ಜಿಪಂ ಸಿಇಒ ಭುವನೇಶ ಪಾಟೀಲ್, ಎಸ್ಪಿ ಗುಂಜನ್ ಆರ್ಯ, ತಹಸೀಲ್ದಾರ್ ಸುಧೀರ ಸಾಹುಕಾರ, ಜಿಲ್ಲಾ ಆರೋಗ್ಯಾಧಿಕಾರಿ ಡಾ. ಎಸ್.ಎಂ. ಹೊನಕೇರಿ, ತಾಲೂಕು ವೈದ್ಯಾಧಿಕಾರಿ ಡಾ. ರೂಪಾ ಕಿಣಗಿ, ತಾಲೂಕು ಆರೋಗ್ಯಾಧಿಕಾರಿ ಡಾ. ಎನ್.ಬಿ. ಕರ್ಲವಾಡ, ತಾಪಂ ಇಒ ಭಾಗ್ಯಶ್ರೀ ಜಹಗೀರದಾರ, ಸಿಪಿಐ ರವಿ ಕಪ್ಪತ್ತನವರ, ಜಿಪಂ ಉಪವಿಭಾಗದ ಅಧಿಕಾರಿ ಸಂಗಪ್ಪ ಲಂಗೋಟಿ, ಗ್ರಾಪಂ ಅಧ್ಯಕ್ಷೆ ರತ್ನಮ್ಮ ಗುಡಸಲಮನಿ ಇದ್ದರು.