ಹಾವೇರಿ: ಎರಡು ಕಾರುಗಳ ನಡುವೆ ಸಂಭವಿಸಿದ ಭೀಕರ ಅಪಘಾತದಲ್ಲಿ ಬಾಲಕ ಸೇರಿದಂತೆ ನಾಲ್ವರು ಮೃತಪಟ್ಟ ಘಟನೆ ಶಿಗ್ಗಾಂವಿ ತಾಲೂಕಿನ ತಡಸ ಕ್ರಾಸ್ ಸಮೀಪದ ತಿಮ್ಮಾಪುರ ಬಳಿ ರಾಷ್ಟ್ರೀಯ ಹೆದ್ದಾರಿಯಲ್ಲಿ ನಡೆದಿದೆ.
ಬೆಂಗಳೂರಿನ ಚಾಮರಾಜಪೇಟೆಯ ಚಂದ್ರಮ್ಮ (59), ಚಂದ್ರಮ್ಮನ ಪುತ್ರಿ ಹರಿಹರದ ಮೀನಾ (38), ಹರಿಹರದ ಮಹೇಶ್‌ಕುಮಾರ್ ಸಿ.,(41) ಹಾಗೂ ಹರಿಹರದ ಧನವೀರ್ (11) ಅಪಘಾತದಲ್ಲಿ ಮೃತಪಟ್ಟ ದುರ್ದೈವಿಗಳು.ತಿಮ್ಮಾಪುರದ ಬಳಿ ಹಾವೇರಿ ಹಾಗೂ ಧಾರವಾಡ ಜಿಲ್ಲೆಯ ಗಡಿ ಭಾಗದಲ್ಲಿ ಬಿಳಿ ಬಣ್ಣದ ಮಹಿಂದ್ರಾ ಎಕ್ಸ್ ಯುವಿ 700 ಕಾರು ಹಾವೇರಿ ಕಡೆಯಿಂದ ಹುಬ್ಬಳ್ಳಿ ಕಡೆಗೆ ಹೊರಟಿತ್ತು. ಚಾಲಕನ ನಿಯಂತ್ರಣ ತಪ್ಪಿ ಡಿವೈಡರ್‌ಗೆ ಡಿಕ್ಕಿ ಹೊಡೆದು ಹುಬ್ಬಳ್ಳಿಯಿಂದ ಬೆಂಗಳೂರು ಕಡೆಗೆ ಬರುತ್ತಿದ್ದ ಕೆಂಪು ಬಣ್ಣದ ಟಾಟಾ ಆಲ್ಟ್ರೋಜ್ ಕಾರಿಗೆ ಡಿಕ್ಕಿ ಹೊಡೆದ ರಭಸಕ್ಕೆ ಕಾರಿನ ಮುಂಭಾಗ ನಜ್ಜುಗುಜ್ಜಾಗಿದೆ.
ನೆಲಮಂಗಲದಲ್ಲಿ ಇತ್ತೀಚೆಗೆ ಕಂಟೈನರ್‌ವೊಂದು ದುಬಾರಿ ಕಾರಿನ ಮೇಲೆ ಬಿದ್ದು ಒಂದೇ ಕುಟುಂಬದ 6 ಮಂದಿ ಮೃತಪಟ್ಟ ಘಟನೆ ಮಾಸುವ ಮುನ್ನವೇ ಹಾವೇರಿಯಲ್ಲಿ ಈ ಭೀಕರ ಅಪಘಾತ ಸಂಭವಿಸಿದೆ. ಶಿಗ್ಗಾಂವಿ ತಾಲೂಕಿನ ತಿಮ್ಮಾಪುರ ಬಳಿ ರಾಷ್ಟ್ರೀಯ ಹೆದ್ದಾರಿಯಲ್ಲಿ ಚಾಲಕನ ನಿಯಂತ್ರಣ ತಪ್ಪಿ ಡಿವೈಡರ್ ಡಿಕ್ಕಿ ಹೊಡೆದು ಕಾರುಗಳ ನಡುವೆ ಅಪಘಾತ ಸಂಭವಿಸಿದೆ. ಈ ಘಟನೆಯಲ್ಲಿ ಸ್ಥಳದಲ್ಲಿ ಇಬ್ಬರು ಮೃತಪಟ್ಟಿದ್ದು, ಮತ್ತಿಬ್ಬರು ಹುಬ್ಬಳ್ಳಿಯ ಕಿಮ್ಸ್‌ನಲ್ಲಿ ಮೃತಪಟ್ಟಿದ್ದಾರೆ. ಈ ಕುರಿತು ಹೆಚ್ಚಿನ ತನಿಖೆ ನಡೆಯುತ್ತಿದೆ ಎಂದು ಎಸ್ಪಿ ಅಂಶುಕುಮಾರ ಹೇಳಿದರು.