ಹಿರೇಕೆರೂರ: ಅಧಿಕಾರಿಗಳಿಗೆ ಮುಂದಾಲೋಚನೆಯ ಅವಶ್ಯವಿದ್ದು, ಅನ್ನದಾತರು ಪ್ರತಿಭಟನೆ ನಡೆಸುವುದಕ್ಕಿಂತ ಮುಂಚಿತವಾಗಿ ಅದಕ್ಕೆ ಸೂಕ್ತ ಪರಿಹಾರ, ಸಮಸ್ಯೆಗಳನ್ನು ಬಗೆಹರಿಸುವ ಮೂಲಕ ರೈತರ ಬಾಳು ಹಸನಾಗಿಸಲು ಸರ್ಕಾರದೊಂದಿಗೆ ಕೈಜೋಡಿಸಬೇಕು ಎಂದು ಶಾಸಕ ಯು.ಬಿ. ಬಣಕಾರ ಹೇಳಿದರು.ಪಟ್ಟಣದ ತಾಪಂ ಸಭಾಭವನದಲ್ಲಿ ಕೃಷಿ ಇಲಾಖೆಯ ವತಿಯಿಂದ ಸೋಮವಾರ ಏರ್ಪಡಿಸಿದ್ದ ರೈತ ದಿನಾಚರಣೆ ಮತ್ತು ಆತ್ಮ ಯೋಜನೆಯಡಿ ರೈತರಿಗೆ ಸಮಗ್ರ ಕೃಷಿಯ ಬಗ್ಗೆ ತರಬೇತಿ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು. ಕೆಲವು ದ್ವಂದ ನೀತಿ, ವೈಜ್ಞಾನಿಕವಾಗಿ ಬೆಂಬಲ ಬೆಲೆ ಹೀಗೆ ಹಲವು ಜ್ವಲಂತ ಸಮಸ್ಯೆಗಳು ಸಮಸ್ಯೆಗಳಾಗಿ ಉಳಿದಿದ್ದು, ಎಲ್ಲೋ ಒಂದು ಕಡೆ ರೈತರಿಗೆ ನಿಜವಾದ ನ್ಯಾಯ ಸಿಗುತ್ತಿಲ್ಲ, ಇದರಿಂದ ರೈತರ ಸಂಖ್ಯೆ ಕಡಿಮೆಯಾಗುತ್ತಾ ಸಾಗಿದ್ದು, ಇದು ನಿಜಕ್ಕೂ ಕಳವಳಕಾರಿ ಸಂಗತಿಯಾಗಿದೆ. ರಾಜ್ಯ ಸರ್ಕಾರ ರಾಜ್ಯಮಟ್ಟದಲ್ಲಿ ಕೃಷಿ ಸಮಾವೇಶ, ಚರ್ಚೆ, ಚಿಂತನಾ ಸಭೆ ಏರ್ಪಡಿಸುವುದು ಅತಿ ಅವಶ್ಯವಾಗಿದೆ. ಈ ನಿಟ್ಟಿನಲ್ಲಿ ಕೆ.ಎಸ್.ಪುಟ್ಟಣ್ಣಯ್ಯನವರ ಜನ್ಮದಿನವನ್ನು ರೈತರ ದಿನಾಚರಣೆಯನ್ನಾಗಿ ಘೋಷಿಸಲು ನಾನು ಪ್ರಯತ್ನಿಸುತ್ತೇನೆ. ರಾಜ್ಯದಲ್ಲಿ ಮಂಡ್ಯ ಬಿಟ್ಟರೆ ಹಾವೇರಿಯಲ್ಲಿ ಅದರಲ್ಲೂ ಈ ಕ್ಷೇತ್ರದಲ್ಲಿ ರೈತ ಸಂಘಟನೆ ಬಹು ಪ್ರಭಾವಶಾಲಿಯಾಗಿದ್ದು, ರಾಜ್ಯಾಧ್ಯಕ್ಷ ರಾಮಣ್ಣ ಕೆಂಚಳ್ಳೆರ ನೇತೃತ್ವದಲ್ಲಿ ರೈತರ ಅನೇಕ ಸಮಸ್ಯೆ ಈಡೇರಿಸಲು ಪ್ರಾಮಾಣಿಕವಾಗಿ ಹೋರಾಟ ಮಾಡುತ್ತಾ ಬಂದಿದ್ದು, ನಿಜಕ್ಕೂ ಶ್ಲಾಘನೀಯ ಕಾರ್ಯವಾಗಿದೆ. ಸತತ 11 ದಿನಗಳ ಕಾಲ ಹಾವೇರಿಯಲ್ಲಿ ಧರಣಿ ನಡೆಸಿದ್ದರ ಪರಿಣಾಮ ಬೆಳೆ ಪರಿಹಾರ, ಬೆಳೆ ವಿಮೆ ಬಿಡುಗಡೆ ಸೇರಿದಂತೆ ವಿವಿದ ಸಮಸ್ಯೆಗಳಿಗೆ ಪರಿಹಾರ ದೊರಕಿಸಿದ್ದಾರೆ ಎಂದರು. ರೈತ ಸಂಘದ ರಾಜ್ಯಾಧ್ಯಕ್ಷ ರಾಮಣ್ಣ ಕೆಂಚಳ್ಳೇರ ಮಾತನಾಡಿ, ರೈತರಿಂದ ಲಾಭ ಪಡೆದ ಎಲ್ಲರೂ ಇಂದು ಶ್ರೀಮಂತರಾಗುತ್ತಿದ್ದಾರೆ. ಅದೆ ರೈತ ಬಡವಾಗಿ ಉಳಿಯುತ್ತಿದ್ದಾನೆ. ಇದು ಈ ದೇಶದ ದುರ್ದೈವ ಸಂಗತಿಯಾಗಿದೆ. ಸ್ವಾತಂತ್ರ್ಯ ಪೂರ್ವದಲ್ಲಿ ಶೆ.75ರಷ್ಟು ಇದ್ದ ರೈತರ ಸಂಖ್ಯೆ ಇಂದು ಕೇವಲ ಶೇ.42ರಷ್ಟಾಗಿದೆ. ಯುವ ರೈತರು ಕೃಷಿಗೆ ಒಲವು ತೋರುತ್ತಿಲ್ಲ. ಪರಿಸ್ಥಿತಿ ಹೀಗಾದರೆ ಈ ದೇಶದ ಅಹಾರ ಭದ್ರತೆಗೆ ಬಹುದೊಡ್ಡ ಗಂಡಾಂತರ ತಪ್ಪಿದ್ದಲ್ಲ. ಮೃತನಾದ ಮೇಲೆ ರೈತರಿಗೆ 5 ಲಕ್ಷ ರು. ಪರಿಹಾರ ನೀಡುವ ಬದಲು, ಅವನ ಅವಶ್ಯಕತೆಗೆ ತಕ್ಕಂತೆ ಎಲ್ಲ ಸೌಲಭ್ಯ ನೀಡುವಂತಾಗಬೇಕು. ದುಡಿಯುವ ಅನ್ನದಾತನಿಗೆ ಯಾವ ಸರ್ಕಾರಗಳು ಬೆಂಬಲವಾಗಿ ನಿಲ್ಲುತ್ತಿಲ್ಲ. ಸದನದಲ್ಲಿ ರೈತರ ಪರ ಚರ್ಚೆಗಳಾಗುತ್ತಿಲ್ಲ. ಬರಿ ಗದ್ದಲ ಗಲಾಟೆಯಲ್ಲಿ ಮುಕ್ತಾಯವಾಗುತ್ತಿವೆ ಇದು ನಾಚಿಗೇಡಿನ ಸಂಗತಿಯಾಗಿದೆ ಎಂದರು.ತಾಲೂಕು ಕೃಷಿಕ ಸಮಾಜದ ಅಧ್ಯಕ್ಷ ಚಂದ್ರಪ್ಪ ಹುಲ್ಲತ್ತಿ ಮಾತನಾಡಿದರು.ಹನುಮನ ಮಟ್ಟಿ ಕೃಷಿ ವಿಶ್ವವಿದ್ಯಾಲಯದ ಡಾ.ಕೃಷ್ಣಾ ನಾಯ್ಕ್ ಸಮಗ್ರ ಆಧುನಿಕ ಕೃಷಿ ಪದ್ಧತಿ ಕುರಿತು ಉಪನ್ಯಾಸ ನೀಡಿದರು. ಇದೆ ವೇಳೆ ಕೃಷಿಯಲ್ಲಿ ಪ್ರಗತಿ ಸಾಧಿಸಿದ ರಟ್ಟೀಹಳ್ಳಿ ತಾಲೂಕಿನ ಪ್ರವೀಣಕುಮಾರ ಕಳ್ಳಿಮನಿ ಹಾಗೂ ಹಿರೇಕೆರೂರ ತಾಲೂಕಿನ ಕರಿಬಸಪ್ಪ ಸುತ್ತಕೋಟಿ ಹಾಗೂ ರಾಜ್ಯಾಧ್ಯಕ್ಷ ರಾಮಣ್ಣ ಕೆಂಚಳ್ಳೇರ ಅವರನ್ನು ಸನ್ಮಾನಿಸಲಾಯಿತು.ತಾಲೂಕು ಸಹಾಯಕ ಕೃಷಿ ನಿರ್ದೇಶಕ ಹಿತೇಂದ್ರ ಗೌಡಪ್ಪಳವರ, ತಾಲೂಕು ರೈತ ಸಂಘದ ಅಧ್ಯಕ್ಷ ಪ್ರಭುಗೌಡ ಪ್ಯಾಟಿ, ಶಂಕ್ರಗೌಡ ಶಿರಗಂಬಿ, ಸೂರೇಂದ್ರಪ್ಪ ಶಿರಸಂಗಿ, ಗಂಗನಗೌಡ ಮುದಿಗೌಡ್ರ, ಶಾಂತನಗೌಡ ಪಾಟೀಲ ಹಾಗೂ ರೈತರು ಇದ್ದರು.ಕೃಷಿ ಅಧಿಕಾರಿ ಫಕ್ಕೀರಪ್ಪ ಪಟ್ಟಣ, ತಾಂತ್ರಿಕ ವ್ಯವಸ್ಥಾಪಕಿ ಶಿಲ್ಪಾ ಗೌಡರ ನಿರ್ವಹಿಸಿದರು.