ರಾಮಕೃಷ್ಣ ದಾಸರಿ
ರಾಯಚೂರು : ಸಂಚಾರ ನಿಯಮಗಳ ಪಾಲನೆ ಸಂಪೂರ್ಣ ಗೌಣ, ಅನುಷ್ಠಾನದಲ್ಲಿಯೂ ಕಾಣದ ಗಂಭೀರತೆ, ಸವಾರರಲ್ಲಿ ಕಾಡದ ಸದಾ ಜಾಗೃತಿಯ ಪ್ರಜ್ಞೆ ಪರಿಣಾಮ ದಿನೇ ದಿನೆ ಹೆಚ್ಚಾಗುತ್ತಿರುವ ಅಪಘಾತಗಳ ಸಂಖ್ಯೆ, ಸಾವು-ನೋವು, ಕುಟುಂಬಸ್ಥರಲ್ಲಿ ಶಾಶ್ವತ ಯಾತನೆ.
ರಾಯಚೂರು ನಗರ ಸೇರಿದಂತೆ ಜಿಲ್ಲೆಯ ಎಲ್ಲ ತಾಲೂಕು, ಹೋಬಳಿ ಮತ್ತು ಗ್ರಾಮೀಣ ಭಾಗದಲ್ಲಿ ಅಪಘಾತಗಳ ಸಂಖ್ಯೆಯು ಹೆಚ್ಚಾಗುತ್ತಿರುವ ಹಿನ್ನೆಲೆಯಲ್ಲಿ ಇದೀಗ ಸಂಚಾರಿ ನಿಯಮಗಳ ಪಾಲನೆ, ಸುರಕ್ಷಿತ ಸಂಚಾರಕ್ಕೆ ವಹಿಸಬೇಕಾದ ಜಾಗೃತಿ ಮತ್ತು ರಸ್ತೆಗಳ ಗುಣಮಟ್ಟದ ಸಂಗತಿಗಳು, ಜಿಲ್ಲಾಡಳಿತ, ಜಿಲ್ಲಾ ಪೊಲೀಸ್ ಇಲಾಖೆ ಮತ್ತು ಸಾರ್ವಜನಿಕರ ಸಹಕಾರದ ಕುರಿತ ಸಮಾಲೋಚನೆಗಳು ಎಲ್ಲೆಡೆ ಸಾಗಿವೆ.ಮೂರು ವರ್ಷದ ರಸ್ತೆ ಅಪಘಾತದ ಅಂಕಿ-ಸಂಖ್ಯೆ :
ಪ್ರಸಕ್ತ ಸಾಲಿನ ಒಂಬತ್ತು ತಿಂಗಳಲ್ಲಿ ಜಿಲ್ಲೆಯಾದ್ಯಂತ 516 ರಸ್ತೆ ಅಪಘಾತ ಸಂಭವಿಸಿದ್ದು ಇದರಲ್ಲಿ 240 ಜನ ಸಾವನಪ್ಪಿದ್ದಾರೆ. 367 ಗಂಭೀರ, 304 ಜನರಿಗೆ ಸಣ್ಣ-ಪುಟ್ಟ ಗಾಯಗಳು ಸೇರಿ ಒಟ್ಟು 911 ಜನರ ಸಾವು-ನೋವು ಉಂಟಾಗಿದೆ.
ಕಳೆದ 2021 ರಿಂದ 2024 (ಸೆಪ್ಟಂಬರ್‌ವರೆಗೆ) ಮೂರು ವರ್ಷದಲ್ಲಿ ಜಿಲ್ಲೆಯಲ್ಲಿ 2,239 ರಸ್ತೆ ಅಪಘಾತ ಸಂಭವಿಸಿದ್ದು ಇದರಲ್ಲಿ 1,184 ಜನರು ಸಾನಪ್ಪಿದ್ದರೆ, 2,015 ಗಂಭೀರ,1,350 ಜನರಿಗೆ ಸಣ್ಣ-ಪುಟ್ಟ ಗಾಯಗಳು ಸೇರಿ ಒಟ್ಟು 4,549 ಜನರಿಗೆ ಸಾವು-ನೋವು ಉಂಟಾಗಿದೆ.ಫಲ ನೀಡದ ಜಾಗೃತಿ ಕಾರ್ಯ:
ರಸ್ತೆ ಸುರಕ್ಷತೆ ಹಾಗೂ ಸಂಚಾರ ನಿಯಮಗಳ ಕುರಿತು ಚಾಲಕರಿಗೆ, ಪ್ರಯಾಣಿಕರಿಗೆ ಹಾಗೂ ಜನಸಾಮಾನ್ಯರಿಗೆ ನಿರಂತರವಾಗಿ ಜಾಗೃತಿ ಮೂಡಿಸುತ್ತಾ ಬರುತ್ತಿದ್ದರೂ ಸಹ ಅದರ ಫಲ ಸಿಗದಂತಾಗಿದೆ. ಸಂಚಾರ ನಿಯಮಗಳನ್ನು ಉಲ್ಲಂಘಿಸಿದವರ ಮೇಲೆ ಐಎಂಎ ಕಾಯ್ದೆಯಡಿ ಗುಣಾತ್ಮಕ ಪ್ರಕರಣಗಳನ್ನು ದಾಖಲಿಸುತ್ತಿದ್ದರೂ ಸಹ ರಸ್ತೆ ಅಪಘಾತದಲ್ಲಿ ಚಾಲಕರ ಅಜಾಗರತೆ ಎದ್ದು ಕಾಣುತಿದೆ.
ಅತಿ ಹೆಚ್ಚು ರಸ್ತೆ ಅಪಘಾತಗಳು ಸಂಭವಿಸುವಂತಹ ರಾಷ್ಟ್ರೀಯ ಹೆದ್ದಾರಿ, ರಾಜ್ಯ ಹೆದ್ದಾರಿ, ಲೋಕೋಪಯೋಗಿ ಮತ್ತು ಆರ್‌ಟಿಒ ಅವರಿಗೆ ಸೇರಿದ ರಸ್ತೆಗಳಲ್ಲಿ ಅಪಘಾತಗಳ ತಡೆಗೆ ಜಿಲ್ಲಾ ಪೊಲೀಸ್ ಇಲಾಖೆಯಿಂದ ವೈಜ್ಞಾನಿಕ ಕ್ರಮಗಳನ್ನು ಅನುಸರಿಸಿ ಉಪಕರಣಗಳನ್ನು ಅಳವಡಿಸುವ ವ್ಯವಸ್ಥೆಯನ್ನು ಪರಿಣಾಮಕಾರಿಯಾಗಿ ಅನುಷ್ಠಾನಗೊಳಿಸಬೇಕಾಗಿದೆ. ದ್ವಿಚಕ್ರ ವಾಹನ, ಆಟೋ, ಸೈಕಲ್, ಕಾರು, ಬಸ್, ಲಾರಿ ಇತರೆ ವಾಹನಗಳ ಚಾಲಕರು, ಪ್ರಯಾಣಿಕರು ಹಾಗೂ ಪದಾಚಾರಿಗಳು ಸಂಚಾರದ ನಿಯಮ ಪಾಲನೆ ಕಡ್ಡಾಯವಾಗಿ ಮಾಡಬೇಕು.
ವೇಗದ ಮಿತಿಯಲ್ಲಿಯೇ ಸಂಚರಿಸಬೇಕು ಹಾಗೂ ಹೆಲ್ಮೆಟ್ ಕಡ್ಡಾಯವಾಗಿ ಧರಿಸುವುದು ಮತ್ತು ರಸ್ತೆ-ಗುಂಡಿಗಳ ರಿಪೇರಿಯನ್ನು ಮಾಡಿ ಸುಗಮ ಸಂಚಾರಕ್ಕೆ ಅನುವುಮಾಡಿಕೊಟ್ಟಲ್ಲಿ ಮಾತ್ರ ರಸ್ತೆ ಅಪಘಾತಗಳನ್ನು ನಿಯಂತ್ರಿಸಿ ಸಾವು-ನೋವನ್ನು ತಡೆಯಬಹುದಾಗಿದ್ದು, ಈ ನಿಟ್ಟಿನಲ್ಲಿ ಆಡಳಿತ ವರ್ಗ ಕ್ರಮ ಕೈಗೊಳ್ಳಬೇಕೆಂಬುದು ಸಾರ್ವಜನಿಕರ ಒತ್ತಾಯವಾಗಿದೆ.
ಜಿಲ್ಲೆಯಲ್ಲಿ ರಸ್ತೆ ಅಪಘಾತಗಳ ನಿಯಂತ್ರಣಕ್ಕಾಗಿ ನಿರಂತರವಾಗಿ ರಸ್ತೆ ಸುರಕ್ಷತೆ, ಸಂಚಾರ ನಿಯಮಗಳ ಕುರಿತು ಜಾಗೃತಿ ಮೂಡಿಸುತ್ತಾ ಬರಲಾಗುತ್ತಿದೆ. ಅಪಘಾತಗಳ ತಡೆಗೆ ಅಗತ್ಯ ಎಲ್ಲ ರೀತಿ ಕ್ರಮ ಜಾರಿಗೊಳಿಸಲಾಗಿದೆ. ದುರ್ಘಟನೆಗಳು ನಡೆಯದಂತೆ ಎಲ್ಲರೂ ಎಚ್ಚರಿಕೆವಹಿಸಬೇಕಾಗಿದೆ. ಸಾರ್ವಜನಿಕರು ತಪ್ಪದೇ ಸಂಚಾರ ನಿಯಮ ಪಾಲಿಸಬೇಕು. ವಿಶೇಷವಾಗಿ ದ್ವಿಚಕ್ರ ವಾಹನಗಳ ಸವಾರರು ಕಡ್ಡಾಯವಾಗಿ ಹೆಲ್ಮೆಟ್ ಧರಿಸಿ ಸಂಚರಿಸಬೇಕು ಎಂದು ರಾಯಚೂರು ಎಸ್ಪಿ ಎಂ.ಪುಟ್ಟಮಾದಯ್ಯ ತಿಳಿಸಿದರು.