ಅಭಿವೃದ್ಧಿ ಶುಲ್ಕ ಪಾವತಿಸಿದ ಆರೇಳು ತಿಂಗಳಲ್ಲಿ ಖಾತೆ

KannadaprabhaNewsNetwork | Published : Mar 1, 2025 1:01 AM

ಸಾರಾಂಶ

ರಾಮನಗರ ನಗರಾಭಿವೃದ್ಧಿ ಪ್ರಾಧಿಕಾರದ ವ್ಯಾಪ್ತಿಗೆ ಬರುವ ಮೂರು ಬಡಾವಣೆಗಳ ನಿವೇಶನದಾರರು ಮಾರ್ಚ್ 31ರೊಳಗೆ ಸ್ಕ್ವೇರ್ ಫಿಟ್ ಗೆ 200 ರುಪಾಯಿ ಅಭಿವೃದ್ಧಿ ಶುಲ್ಕ ಪಾವತಿಸಿದಲ್ಲಿ ಆರೇಳು ತಿಂಗಳೊಳಗೆ ನಿವೇಶನಗಳಿಗೆ ಖಾತೆ ಮಾಡಿಕೊಡಲಾಗುವುದು ಎಂದು ಶಾಸಕ ಇಕ್ಬಾಲ್ ಹುಸೇನ್ ತಿಳಿಸಿದರು.

ಕನ್ನಡಪ್ರಭ ವಾರ್ತೆ ರಾಮನಗರ

ರಾಮನಗರ ನಗರಾಭಿವೃದ್ಧಿ ಪ್ರಾಧಿಕಾರದ ವ್ಯಾಪ್ತಿಗೆ ಬರುವ ಮೂರು ಬಡಾವಣೆಗಳ ನಿವೇಶನದಾರರು ಮಾರ್ಚ್ 31ರೊಳಗೆ ಸ್ಕ್ವೇರ್ ಫಿಟ್ ಗೆ 200 ರುಪಾಯಿ ಅಭಿವೃದ್ಧಿ ಶುಲ್ಕ ಪಾವತಿಸಿದಲ್ಲಿ ಆರೇಳು ತಿಂಗಳೊಳಗೆ ನಿವೇಶನಗಳಿಗೆ ಖಾತೆ ಮಾಡಿಕೊಡಲಾಗುವುದು ಎಂದು ಶಾಸಕ ಇಕ್ಬಾಲ್ ಹುಸೇನ್ ತಿಳಿಸಿದರು.

ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ರಾಮನಗರದ ಜೀಗೇನಹಳ್ಳಿ, ಹೆಲ್ತ್ ಸಿಟಿ ಮತ್ತು ಚನ್ನಪಟ್ಟಣದ ಕಣ್ವ ಬಡಾವಣೆಗಳ ಅಭಿವೃದ್ಧಿಗಾಗಿ ಸರ್ಕಾರದ ಮೇಲೆ ಒತ್ತಡ ತಂದು ಸ್ಕ್ವೇರ್ ಫಿಟ್ ಗೆ ಸಾಧಾರಣ ಮೊತ್ತ 200 ರುಪಾಯಿ ನಿಗದಿ ಮಾಡಿದ್ದೇವೆ. ನಿವೇಶನದಾರರು ಹಿಂದೇಟು ಹಾಕದೆ ಹಣ ಪಾವತಿಸಿ ಬಡಾವಣೆಗಳ ಅಭಿವೃದ್ಧಿಗೆ ಸಹಕಾರ ನೀಡಬೇಕು ಎಂದರು.

ನಿವೇಶನಗಳ ವಿಚಾರದಲ್ಲಿ ಅನೇಕ ಕುಂದುಕೊರತೆಗಳನ್ನು ಕೇಳಿ ಬಂದಿದ್ದವು. 15 ವರ್ಷಗಳಿಂದ ನೊಂದಿದ್ದ ನಿವೇಶನದಾರರು ನಾನು ಶಾಸಕನಾದ ಮೇಲೆ ದೂರುಗಳನ್ನು ಸಲ್ಲಿಸಿ ಅಹವಾಲು ಹೇಳಿಕೊಂಡಿದ್ದರು. ನಾನು, ಪ್ರಾಧಿಕಾರದ ಅಧ್ಯಕ್ಷರು ಹಾಗೂ ಆಯುಕ್ತರು ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ , ಮಾಜಿ ಸಂಸದ ಡಿ.ಕೆ.ಸುರೇಶ್ ಹಾಗೂ ರಾಕೇಶ್ ಸಿಂಗ್ ಅವರಿಗೆ ಸಮಸ್ಯೆಯನ್ನು ಮನವರಿಕೆ ಮಾಡಿಕೊಟ್ಟೆವು.

ನಾವೆಲ್ಲರು ಸರ್ಕಾರದ ಹಂತದಲ್ಲಿ ಹೋರಾಟ ನಡೆಸಿ 1837 ನಿವೇಶನಗಳನ್ನು ಅಧಿಕೃತವಾಗಿ ಕಾನೂನು ಬದ್ಧಗೊಳಿಸುವ ಮಟ್ಟಕ್ಕೆ ತಂದು ನಿಲ್ಲಿಸಿದ್ದೇವೆ. ಇದೀಗ ಬಡಾವಣೆಗಳಿಗೆ ಮೂಲಸೌಕರ್ಯ ಕಲ್ಪಿಸುವ ನಿಟ್ಟಿನಲ್ಲಿ ಕ್ರಮ ವಹಿಸಲಾಗಿದೆ. ಇಲ್ಲಿವರೆಗೆ ನಿವೇಶನದಾರರು ತೆರಿಗೆ ಪಾವತಿಸಿಲ್ಲ. ಅದನ್ನು ಲೆಕ್ಕ ಹಾಕಿದರೆ ಸಾಕಷ್ಟು ಹಣ ಪ್ರಾಧಿಕಾರಕ್ಕೆ ಬರಬೇಕಿದೆ ಎಂದು ಹೇಳಿದರು.

ನಾವು ಬಡಾವಣೆಗಳ ಅಭಿವೃದ್ಧಿಗಾಗಿ ಅನುದಾನ ಕೇಳಿದಾಗ ಸರ್ಕಾರ ನೀಡಲು ನಿರಾಕರಿಸಿತು. ಅಲ್ಲದೆ, ನಿವೇಶನದಾರರ ಬಳಿಯೇ 500 ರುಪಾಯಿ ಅಭಿವೃದ್ಧಿ ಶುಲ್ಕ ಪಡೆಯುವಂತೆ ಸೂಚಿಸಿತು. ಆದರೆ, ಸರ್ಕಾರದ ದರ ಒಪ್ಪದೆ 200 ರುಪಾಯಿ ಅಭಿವೃದ್ಧಿ ಶುಲ್ಕ ನಿಗದಿ ಮಾಡಿದೇವು. ಈ ದರ ನಿಗದಿ ವಿಚಾರವಾಗಿ ಎರಡು ಬಾರಿ ಕ್ಯಾಬಿನೆಟ್ ಹೋಗಿ ವಾಪಸ್ಸಾಗಿತ್ತು. ಮೂರನೇ ಬಾರಿ ಕ್ಯಾಬಿನೆಟ್ ನಲ್ಲಿ ಒಪ್ಪಿಗೆ ಪಡೆಯುವಂತೆ ಮಾಡಿದೇವು. ಇದಕ್ಕಾಗಿ ಬಹಳಷ್ಟು ಹೋರಾಟ ಮಾಡಿದ್ದೇವೆ. ಕಳೆದು ಹೋಗಿದ್ದ ಬಡಾವಣೆಗಳಿಗೆ ಮರು ಜೀವ ಕೊಡುವ ಕೆಲಸ ಮಾಡಿದ್ದೇವೆ ಎಂದು ಇಕ್ಬಾಲ್ ಹುಸೇನ್ ತಿಳಿಸಿದರು.

ನಿವೇಶನದಾರರ ಸಭೆಯಲ್ಲಿ ನಿವೇಶನ ಕೈ ಬದಲಾವಣೆ ಮಾಡಿರುವ ಮೂರು ನಾಲ್ಕು ಮಂದಿ ಮಾತ್ರ ಅಭಿವೃದ್ಧಿ ಶುಲ್ಕ ನಿಗದಿಗೆ ವಿರೋಧ ಮಾಡಿದ್ದಾರೆ. ಶೇಕಡ 99ರಷ್ಟು ನಿವೇಶನದಾರರು ಒಪ್ಪಿಗೆ ಸೂಚಿಸಿ ಕೃತಜ್ಞತೆ ಸಲ್ಲಿಸಿದ್ದಾರೆ. ಮುಖ್ಯಮಂತ್ರಿ ಆಗಿದ್ದವರಿಂದಲೂ ಮಾಡಲಾಗದ ಕೆಲಸವನ್ನು ನಾವು ಮಾಡಿದ್ದೇವೆ. ನಮ್ಮ ಅವಧಿಯಲ್ಲಿ ಜನರಿಗೆ ನ್ಯಾಯ ಕೊಡಿಸುವ ಕೆಲಸ ಮಾಡಿರುವ ತೃಪ್ತಿಯಿದೆ ಎಂದು ಹೇಳಿದರು.

ಈಗ ಬಡಾವಣೆಗಳಿಗೆ ಮೂಲಸೌಕರ್ಯ ಕಲ್ಪಿಸಲು ಎಸ್ಟಿಮೆಂಟ್ ನಲ್ಲಿ 80 ಕೋಟಿ ಕೊಟ್ಟಿದ್ದು, 40 ಕೋಟಿ ಹಣ ಬರುತ್ತದೆ. ಉಳಿಕೆ ಹಣವನ್ನು ಸರ್ಕಾರದಿಂದ ತರಲು ಪ್ರಯತ್ನಿಸುತ್ತೇವೆ. ಬಾಕಿ ಉಳಿದಿರುವ 173 ನಿವೇಶನಗಳನ್ನು ಹರಾಜು ಮಾಡಿ ಪ್ರಾಧಿಕಾರಕ್ಕೆ ಆದಾಯ ಬರುವಂತೆ ಮಾಡಬೇಕು ಎಂಬುದು ನಮ್ಮ ಅಭಿಲಾಷೆ. ಇದಕ್ಕಾಗಿ ಕ್ಯಾಬಿನೆಟ್ ನಲ್ಲಿ ಒಪ್ಪಿಗೆ ಪಡೆಯಬೇಕಿದೆ ಎಂದು ಇಕ್ಬಾಲ್ ಹುಸೇನ್ ಪ್ರಶ್ನೆಯೊಂದಕ್ಕೆ ಉತ್ತರಿಸಿದರು.

ಪ್ರಾಧಿಕಾರ ಅಧ್ಯಕ್ಷ ಎ.ಬಿ.ಚೇತನ್ ಕುಮಾರ್ , ಆಯುಕ್ತ ಶಿವನಂಕಾರಿಗೌಡ, ಚನ್ನಪಟ್ಟಣ ಯೋಜನಾ ಪ್ರಾಧಿಕಾರದ ಅಧ್ಯಕ್ಷ ಪ್ರಮೋದ್, ಸದಸ್ಯರಾದ ಪರ್ವೀಜ್ ಪಾಷ, ಪ್ರವೀಣ್, ಭೈರೇಗೌಡ, ಸಮದ್ ಇತರರಿದ್ದರು.

ಕೋಟ್ .............

ಪ್ರಾಧಿಕಾರದ ವತಿಯಿಂದ ಮೂರು ಬಡಾವಣೆಗಳನ್ನು ನಿರ್ಮಾಣ ಮಾಡಲಾಗಿತ್ತು. ಆದರೆ, ಅದಕ್ಕೆ ಮೂಲಭೂತ ಸೌಕರ್ಯ ಕಲ್ಪಿಸಲಾಗಿರಲಿಲ್ಲ. ಜತೆಗೆ, ಕ್ರಯಪತ್ರ ಸೇರಿದಂತೆ ಯಾವುದೇ ರೀತಿಯ ದಾಖಲೆಗಳನ್ನು ನಿವೇಶನ ಖರೀಧಿ ಮಾಡಿದವರಿಗೆ ಕೊಟ್ಟಿರಲಿಲ್ಲ. ಈ ಹಿಂದೆ ನಿವೇಶನಗಳನ್ನು ಮಾರಾಟ ಮಾಡುವ ವೇಳೆ ದಾಖಲೆ ನೀಡದೆ 2ರೂ ಬಾಂಡ್ ಪೇಪರ್ ನಲ್ಲಿ ನಿವೇಶನ ಮಾರಾಟ ಮಾಡಿರುವ ಕುರಿತು ಮಾಹಿತಿ ನೀಡಲಾಗಿತ್ತು. ಹಾಗಾಗಿ ಖರೀದಿದಾರರಿಗೆ ಆಗಿರುವ ಅನ್ಯಾಯವನ್ನು ಸರಿಪಡಿಸುವ ಸಲುವಾಗಿ ಸರಕಾರದ ಕ್ಯಾಬಿನೆಟ್ ಸಭೆಯಲ್ಲಿ ಇದನ್ನು ಚರ್ಚಿಸಿ , ಹೊಸ ರೂಪ ನೀಡುವ ಸಂಬಧ ಅನುಮತಿ ಪಡೆಯಲಾಗಿದೆ

Share this article