ಉಡುಪಿ: ಇಲ್ಲಿನ ಒಳಕಾಡು ನಿವಾಸಿ ಶೈಲಾ ವಿಲ್ಹೆಲ್ ಮೀನಾ ಎಂಬವರ ಮನೆಗೆ ನುಗ್ಗಿ ಲಕ್ಷಾಂತರ ರು. ಚಿನ್ನಾಭರಣ ಕಳವು ಮಾಡಿದ್ದ ಆರೋಪಿಯನ್ನು ಕ್ಷಿಪ್ರ ಕಾರ್ಯಾಚರಣೆ ನಡೆಸಿದ ಉಡುಪಿ ನಗರ ಪೊಲೀಸರು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.ಕುಕ್ಕೆಹಳ್ಳಿ ಗ್ರಾಮದ ಕುಕ್ಕಿಕಟ್ಟೆ ನಿವಾಸಿ ಸುಕೇಶ ನಾಯ್ಕ (37) ಬಂಧಿತ ಆರೋಪಿ. ಈತನಿಂದ ಕಳವು ಮಾಡಿದ 548.31 ಮಿ.ಗ್ರಾಂ. ತೂಕದ 65,79,720 ರು. ಮೌಲ್ಯದ ಚಿನ್ನಾಭರಣಗಳನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ.
ಉಡುಪಿ ಡಿವೈಎಸ್ಪಿ ಡಿ.ಟಿ.ಪ್ರಭು ಮಾರ್ಗದರ್ಶನದಲ್ಲಿ ಉಡುಪಿ ನಗರ ಠಾಣೆಯ ಪ್ರಭಾರ ಪೊಲೀಸ್ ನಿರೀಕ್ಷಕ ಮಹೇಶ ಪ್ರಸಾದ್ ಪಿ. ಅವರ ತಂಡವು ಆರೋಪಿಯನ್ನು ಡಿ.2ರಂದು ಉಡುಪಿ ನಗರದ ಕಿನಿಮೂಲ್ಕಿ ಹಿರೇನ್ ಬಾರ್ ಬಳಿ ಬಂಧಿಸಿದೆ.
ಆರೋಪಿ ವಿರುದ್ದ ಈಗಾಗಲೇ ಉಡುಪಿ ಜಿಲ್ಲೆಯ ವಿವಿಧ ಪೊಲೀಸ್ ಠಾಣೆಗಳಲ್ಲಿ ಒಟ್ಟು 11 ಮನೆಕಳ್ಳತನ ಪ್ರಕರಣಗಳು ದಾಖಲಾಗಿದ್ದು ಅದರಲ್ಲಿ ಉಡುಪಿ ನಗರ ಠಾಣೆಯಲ್ಲಿ 5 ಪ್ರಕರಣಗಳು ದಾಖಲಾಗಿವೆ. ಇದರಲ್ಲಿ 4 ಪ್ರಕರಣಗಳಲ್ಲಿ ಆರೋಪಿಗೆ ಶಿಕ್ಷೆಯಾಗಿದೆ. ಅದೇ ರೀತಿ ಹಿರಿಯಡ್ಕ ಠಾಣೆಯಲ್ಲಿ 3 ಪ್ರಕರಣಗಳು ದಾಖಲಾಗಿದ್ದು ಅದರಲ್ಲಿ 1 ಪ್ರಕರಣದಲ್ಲಿ ಶಿಕ್ಷೆಯಾಗಿದೆ. ಬ್ರಹ್ಮಾವರ ಠಾಣೆಯಲ್ಲಿ 2 ಪ್ರಕರಣ ಹಾಗೂ ಮಣಿಪಾಲ ಠಾಣೆಯಲ್ಲಿ 1 ಪ್ರಕರಣಗಳು ನ್ಯಾಯಲಯದ ವಿಚಾರಣೆಯಲ್ಲಿದೆ.