ಕಾರಟಗಿ: ವಿಶ್ವದಲ್ಲಿಯೇ ಭಾರತ ದೊಡ್ಡ ಪ್ರಜಾಪ್ರಭುತ್ತ ದೇಶವಾಗಿದ್ದು, ನಮ್ಮೆಲ್ಲರ ಗ್ರಂಥ ಸಂವಿಧಾನ ಗ್ರಂಥವಾಗಿದೆ. ಎಲ್ಲರೂ ಸಂವಿಧಾನದ ಅಡಿಯಲ್ಲಿ ಜೀವಿಸಬೇಕು ಎಂದು 1ನೇ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶ ಸದಾನಂದ ನಾಗಪ ನಾಯ್ಕ್ ಹೇಳಿದರು.
ದೇಶದ ಪರಂಪರೆ, ಸಂಸ್ಕಾರ ಎಲ್ಲ ದೇಶಗಳಿಗೂ ಮಾದರಿಯಾಗಿದ್ದು, ಸಾಮಾಜಿಕ ನ್ಯಾಯ, ಆರ್ಥಿಕ ಸ್ವಾತಂತ್ರ್ಯ, ರಾಜಕೀಯ ನ್ಯಾಯ ಸಿಗುವಂತಾಗಲು ನಮ್ಮ ಸಂವಿಧಾನ ಒಂದು ಅದ್ಭುತ ಶಕ್ತಿಯಾಗಿದೆ. ಮಕ್ಕಳು ರಾಷ್ಟ್ರ ಗೌರವಿಸುವ ಮತ್ತು ರಾಷ್ಟ್ರೀಯ ಪ್ರೀತಿಸುವ ಮಕ್ಕಳಾಗಿ ಚೆನ್ನಾಗಿ ಓದಿ ಕಲಿಸಿದ ಗುರುಗಳಿಗೆ ಮತ್ತು ನಿಮ್ಮ ತಂದೆ, ತಾಯಿಗಳಿಗೆ ಕೀರ್ತಿ ತರುವ ಮಕ್ಕಳಾಗಬೇಕು ಎಂದರು.
ಗಂಗಾವತಿಯ ಪ್ರಧಾನ ಸಿವಿಲ್ ನ್ಯಾಯಾಧೀಶ ನಾಗೇಶ ಪಾಟೀಲ ಮಾತನಾಡಿ, ದೇಶದಲ್ಲಿ ನೂರಾರು ಜಾತಿ, ಹತ್ತಾರು ಧರ್ಮ, ವೈವಿಧ್ಯಮಯ ಸಂಸ್ಕೃತಿ, ಆಚರಣೆಗಳಿಂದ ಕೂಡಿರುವ ದೇಶಕ್ಕೆ ಸಂವಿಧಾನ ರೂಪಿಸುವುದು ಅತ್ಯಂತ ಸವಾಲಿನ ಕೆಲಸವಾಗಿತ್ತು. ಭಾರತವು ಇಂದು ಜಾಗತಿಕ ಮಟ್ಟದಲ್ಲಿ ಗಮನಾರ್ಹ ಸ್ಥಾನ ಪಡೆದಿದ್ದರೆ ಅದಕ್ಕೆ ಕಾರಣ, ನಮ್ಮ ಸಶಕ್ತ ಸಂವಿಧಾನ. ಅದು ದೇಶದ ಆಡಳಿತ ಮತ್ತು ಜನರ ಚಿಂತನೆ ಚಾಲಕ ಶಕ್ತಿಯಾಗಿದೆ ಎಂದರು.ನಂತರ ಬಿಇಓ ಎಚ್.ಬಿ. ನಟೇಶ ಮಾತನಾಡಿ, ದೇಶಕ್ಕೆ ಸ್ವಾತಂತ್ರ್ಯ ಬಂದ ಬಳಿಕ ಸಂವಿಧಾನದ ಅವಶ್ಯಕತೆ ತಿಳಿದ ಎಲ್ಲ ನಾಯಕರು ದೇಶವನ್ನು ಮುನ್ನೆಡೆಸಿಕೊಂಡು ಹೋಗಲು ಒಂದು ಕಾನೂನು ಬೇಕು ಎಂದು ಅಂಬೇಡ್ಕರ್ ಅವರನ್ನು ಸಂವಿಧಾನ ಕರಡು ಸಮಿತಿ ಅಧ್ಯಕ್ಷರನ್ನಾಗಿ ನೇಮಿಸಿದ್ದರು.ಅದರಂತೆ ಅಂಬೇಡ್ಕರ್ ಹಲವು ದೇಶಗಳ ಸಂವಿಧಾನ ಅಧ್ಯಯನ ಮಾಡಿ ನಮ್ಮ ದೇಶಕ್ಕೆ ಆವಶ್ಯಕತೆ ಇರುವ ಸಂವಿಧಾನ ರಚಿಸಿದರು ಎಂದರು.
ಡಿವೈಎಸ್ಪಿ ಜೆ.ಎಸ್.ನ್ಯಾಮಗೌಡ ಮಕ್ಕಳ ಹಕ್ಕುಗಳ ಕುರಿತು ವಿದ್ಯಾರ್ಥಿಗಳಿಗೆ ತಿಳಿಸಿದರು. ಬಳಿಕ ಸಂವಿಧಾನ ಪೀಠಿಕೆಯನ್ನು ಶಾಲಾ ಮುಖ್ಯ ಶಿಕ್ಷಕ ಚಂದ್ರಶೇಖರ್ ಗಣವಾರಿ ಓದಿದರು.ಸಂವಿಧಾನ ದಿನದ ಕಾರ್ಯಕ್ರಮದ ಅಂಗವಾಗಿ ಸಂವಿಧಾನದ ಮಹತ್ತ ಕುರಿತು ತಾಲೂಕು ಮಟ್ಟದ ಪ್ರಬಂಧ ಸ್ಪರ್ಧೆ ಏರ್ಪಡಿಸಲಾಗಿತ್ತು. ಸ್ಪರ್ಧೆಯಲ್ಲಿ ವಿದ್ಯಾರ್ಥಿನಿ ಜೈನಬ್ ಕೆಜಿಬಿವಿ ಸಿದ್ದಾಪುರ, ರಶ್ಮಿ ಜಿ.ಎಚ್.ಎಸ್. ಚಿಕ್ಕಬೇಣಕಲ್, ನಮಿತಾ ಕಟ್ಟಿ ಆರೋನ್ ಮೀರಜ್ ರ್ ಶಾಲೆ ವಿದ್ಯಾರ್ಥಿಗಳಿಗೆ ನ್ಯಾಯಾಧೀಶರು ಬಹುಮಾನ ವಿತರಿಸಿದರು.