ಕನ್ನಡಪ್ರಭ ವಾರ್ತೆ ಅರಸೀಕೆರೆ
ಜಾತ್ರೆಯಿಂದ ವಾಪಸ್ಸಾಗುತ್ತಿದ್ದ ವೇಳೆ ಮಾತಿನ ಚಕಮಕಿ:
ಲಭಿಸಿದ ಮಾಹಿತಿಯಂತೆ, ಶುಕ್ರವಾರ ಮಧ್ಯಾಹ್ನ ಜೇನುಕಲ್ ಬೆಟ್ಟದ ಜಾತ್ರೆಯಿಂದ ವಾಪಸ್ಸಾಗುತ್ತಿದ್ದ ದಂಪತಿಗೆ “ನಿಧಾನವಾಗಿ ಹೋಗಿ” ಎಂದು ಹೇಳಿದ ವಿಚಾರವಾಗಿ ಮಾತಿನ ಚಕಮಕಿ ನಡೆದಿದೆ ಎನ್ನಲಾಗಿದೆ. ಈ ವೇಳೆ ಪರಿಸ್ಥಿತಿ ವಿಕೋಪಕ್ಕೆ ತಿರುಗಿ, ಯುವಕನ ಮೇಲೆ ನಡುರಸ್ತೆಯಲ್ಲೇ ಹಲ್ಲೆ ನಡೆಸಲಾಗಿದೆ ಎಂಬ ಗಂಭೀರ ಆರೋಪ ಕೇಳಿಬಂದಿದೆ. ಹಲ್ಲೆಗೊಳಗಾದ ಯುವಕನ ಪರವಾಗಿ ಸ್ಥಳೀಯರು ಹಾಗೂ ಹಿಂದೂ ಸಂಘಟನೆಗಳು ತೀವ್ರ ಆಕ್ರೋಶ ವ್ಯಕ್ತಪಡಿಸಿದವು.
ಬಿ. ಎಚ್ ರೋಡ್ ರಸ್ತೆಯಲ್ಲಿ ಇಷ್ಟೆಲ್ಲ ಗೊಂದಲಗಳಾದರೂ ಪೊಲೀಸರು ಯಾವುದೇ ಕ್ರಮ ಕೈಗೊಳ್ಳದಿರುವುದರ ಬಗ್ಗೆ ಅಸಮಾಧಾನಗೊಂಡ ಹಿಂದೂ ಸಂಘಟನೆಗಳ ಮುಖಂಡರು ಹಾಗೂ ಸಾರ್ವಜನಿಕರು ಶುಕ್ರವಾರ ರಾತ್ರಿ ಸುಮಾರು 11.30ರ ವೇಳೆಗೆ ಪೊಲೀಸ್ ಠಾಣೆ ಮುಂಭಾಗ ಜಮಾಯಿಸಿ ಧರಣಿ ನಡೆಸಿದರು.
ಶನಿವಾರ ಬೆಳಿಗ್ಗೆ 10 ಗಂಟೆಯಾದರೂ ಸ್ಪಷ್ಟ ಕ್ರಮ ಕೈಗೊಳ್ಳದಿರುವುದು ಪ್ರತಿಭಟನಾಕಾರರ ಅಸಮಾಧಾನವನ್ನು ಮತ್ತಷ್ಟು ಹೆಚ್ಚಿಸಿತು. ಇದರಿಂದ ಬೇಸತ್ತ ಹಿಂದೂ ಸಮಾಜದವರು ಸ್ವಯಂ ಪ್ರೇರಿತ ನಗರ ಬಂದ್‌ಗೆ ಕರೆ ನೀಡಿ, ನಗರ ಪಿ.ಪಿ. ವೃತ್ತದಲ್ಲಿ ಪ್ರತಿಭಟನೆ ಆರಂಭಿಸಿದರು. ನಂತರ ಪಿಪಿ ವೃತ್ತದಿಂದ ನೂರಾರು ಹಿಂದೂ ಬಾಂಧವರು ಮೆರವಣಿಗೆ ನಡೆಸಿ, ಟ್ರೆಂಡ್ಸ್ ಬಳಿಯಲ್ಲಿ ಮಾನವ ಸರಪಳಿ ನಿರ್ಮಿಸಿ, ಆರೋಪಿಗಳ ವಿರುದ್ಧ ತಕ್ಷಣ ಕಾನೂನು ಕ್ರಮ ಕೈಗೊಳ್ಳಬೇಕೆಂದು ಒತ್ತಾಯಿಸಿದರು. ಈ ವೇಳೆ ನಗರದ ಪ್ರಮುಖ ಬಿ. ಎಚ್ ರಸ್ತೆಯಲ್ಲಿ ಸುಮಾರು ಎರಡು ಗಂಟೆಗಳ ಕಾಲ ವಾಹನ ಸಂಚಾರ ಸಂಪೂರ್ಣ ಅಸ್ತವ್ಯಸ್ತಗೊಂಡು ರಸ್ತೆ ಬಂದ್ ಸ್ಥಿತಿ ನಿರ್ಮಾಣವಾಯಿತು.
‘ಎಫ್‌ಐಆರ್ ದಾಖಲಾಗಿದೆ, ಬಂಧನವಾಗುತ್ತದೆ’ : ಪೊಲೀಸ್ ಇಲಾಖೆ
ಈ ಭರವಸೆಯ ನಂತರ ಪ್ರತಿಭಟನಾಕಾರರು ತಾತ್ಕಾಲಿಕವಾಗಿ ಹಿಂಜರಿದರೂ, ಭಾನುವಾರ ಬೆಳಗ್ಗಿನವರೆಗೆ ಸಮಯ ನೀಡುತ್ತೇವೆ. ಆಗಲೂ ಬಂಧನವಾಗದಿದ್ದರೆ ಸೋಮವಾರ ತಾಲೂಕು ಮಟ್ಟದ ಸ್ವಯಂಪ್ರೇರಿತ ಬಂದ್ ನಡೆಸಿ ಇನ್ನೂ ದೊಡ್ಡ ಹೋರಾಟಕ್ಕೆ ಮುಂದಾಗುತ್ತೇವೆ ಎಂದು ಎಚ್ಚರಿಕೆ ನೀಡಿದರು.
ಈ ವೇಳೆ ಜೆಡಿಎಸ್ ಮುಖಂಡ ಎನ್. ಆರ್. ಸಂತೋಷ್, ನಗರಸಭೆ ಮಾಜಿ ಅಧ್ಯಕ್ಷ ಗಿರೀಶ್, ಸದಸ್ಯ ಹರ್ಷವರ್ಧನ್, ವಿವೇಕ್ ಲಾಯರ್ ಹಿಂದೂ ಜಾಗರಣ ವೇದಿಕೆಯ ಕೃಷ್ಣ, ಶಿವಶಂಕರ್, ಅರುಣಕುಮಾರ್, ವಸಂತ್, ಶಿವರಾಜ್,, ದರ್ಶನ್, ಚಂದ್ರು, ಪುರುಷೋತ್ತಮ್ ಸೇರಿದಂತೆ ಹಲವರು ಉಪಸ್ಥಿತರಿದ್ದರು.
ಘಟನೆಗೆ ಸಂಬಂಧಿಸಿದಂತೆ ನಗರದಲ್ಲಿ ಕೆಲಕಾಲ ಉದ್ವಿಗ್ನ ವಾತಾವರಣ ನಿರ್ಮಾಣವಾಗಿದ್ದು, ಪೊಲೀಸ್ ಇಲಾಖೆ ಎಚ್ಚರಿಕೆ ಕ್ರಮವಾಗಿ ಪ್ರಮುಖ ಪ್ರದೇಶಗಳಲ್ಲಿ ನಿಗಾ ವಹಿಸಿತು. ಸಾರ್ವಜನಿಕ ಶಾಂತಿ ಕಾಪಾಡಲು ಸೂಕ್ತ ಭದ್ರತಾ ಕ್ರಮಗಳನ್ನು ಕೈಗೊಳ್ಳಲಾಗಿದೆ ಎಂದು ತಿಳಿದುಬಂದಿದೆ.
* ಬಾಕ್ಸ್:: ಆರೋಪಿ ಬಂಧನ: ಡಿವೈಎಸ್ಪಿ ಗೋಪಿಕನ್ನಡಪ್ರಭ ಪತ್ರಿಕೆಯೊಂದಿಗೆ ಮಾತನಾಡಿದ , ಪ್ರಕರಣಕ್ಕೆ ಸಂಬಂಧಿಸಿದಂತೆ ಆರೋಪಿಯನ್ನು ಈಗಾಗಲೇ ಬಂಧಿಸಿ ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದೆ. ಕಾನೂನು ಪ್ರಕ್ರಿಯೆಯಂತೆ ಮುಂದಿನ ಕ್ರಮಗಳನ್ನು ಕೈಗೊಳ್ಳಲಾಗುವುದು ಎಂದು ತಿಳಿಸಿದರು. ಘಟನೆಗೆ ಸಂಬಂಧಿಸಿದಂತೆ ಪೊಲೀಸ್ ಇಲಾಖೆ ಗಂಭೀರವಾಗಿ ಪರಿಶೀಲನೆ ನಡೆಸುತ್ತಿದ್ದು, ಪ್ರಕರಣದ ಎಲ್ಲಾ ಆಯಾಮಗಳನ್ನೂ ಗಮನದಲ್ಲಿಟ್ಟುಕೊಂಡು ತನಿಖೆ ಮುಂದುವರಿಸಲಾಗುತ್ತಿದೆ ಎಂದು ಅವರು ಹೇಳಿದರು.