ಸರಿ ಇರುವ ಒಳಚರಂಡಿ ಮರು ದುರಸ್ತಿ ಆರೋಪ: ಗ್ರಾಮಸ್ಥರ ಆಕ್ಷೇಪ

KannadaprabhaNewsNetwork | Published : Jun 29, 2024 12:38 AM

ಸಾರಾಂಶ

ಶನಿವಾರಸಂತೆ ಗ್ರಾಮ ಪಂಚಾಯಿತಿ ಉದ್ಯೋಗ ಖಾತ್ರಿ ಯೋಜನೆ ಅಡಿ ಶನಿವಾರಸಂತೆ ಮುಖ್ಯರಸ್ತೆಯಲ್ಲಿ ಸರಿ ಇದ್ದ ಒಳಚರಂಡಿಯನ್ನು ಪುನಃ ದುರಸ್ತಿ ಕಾಮಗಾರಿಗೆ ಮುಂದಾಗಿದೆ ಎಂಬ ಆರೋಪ ಕೇಳಿಬಂದಿದೆ. ಈ ಕಾಮಗಾರಿಗೆ ಸ್ಥಳೀಯರಾದ ಮೆಡಿಕಲ್ ಮಂಜುನಾಥ್ ಸತೀಶ್ ಮತ್ತು ರಂಗಪ್ಪ ವಿರೋಧ ವ್ಯಕ್ತಪಡಿಸಿದ್ದಾರೆ.

ಕನ್ನಡಪ್ರಭ ವಾರ್ತೆ ಶನಿವಾರಸಂತೆ

ಇಲ್ಲಿನ ಗ್ರಾಮ ಪಂಚಾಯಿತಿ ಉದ್ಯೋಗ ಖಾತ್ರಿ ಯೋಜನೆ ಅಡಿ ಶನಿವಾರಸಂತೆ ಮುಖ್ಯರಸ್ತೆಯಲ್ಲಿ ಸರಿ ಇದ್ದ ಒಳಚರಂಡಿಯನ್ನು ಪುನಃ ದುರಸ್ತಿ ಕಾಮಗಾರಿಗೆ ಮುಂದಾಗಿದೆ ಎಂಬ ಆರೋಪ ಕೇಳಿಬಂದಿದೆ.

ಈ ಕಾಮಗಾರಿಗೆ ಸ್ಥಳೀಯರಾದ ಮೆಡಿಕಲ್ ಮಂಜುನಾಥ್ ಸತೀಶ್ ಮತ್ತು ರಂಗಪ್ಪ ವಿರೋಧ ವ್ಯಕ್ತಪಡಿಸಿದ್ದಾರೆ. ಶನಿವಾರಸಂತೆ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಹಲವು ಸಮಸ್ಯೆಗಳು ಇದ್ದು ಆ ಸಮಸ್ಯೆಗಳ ಬಗ್ಗೆ ಆಡಳಿತ ಮಂಡಳಿ ಗಮನಹರಿಸದೆ ಸರಿಯಿದ್ದ ಒಳ ಚರಂಡಿಯನ್ನು ಮತ್ತೆ ಕೆಲಸ ಕೈಯೆತ್ತಿಕೊಳ್ಳುತ್ತಿರುವುದು ನಿಜಕ್ಕೂ ಬೇಸರ ತಂದಿದೆ. ಮೂರು ಲಕ್ಷ ರು. ವೆಚ್ಚದಲ್ಲಿ ಶನಿವಾರಸಂತೆ ಗ್ರಾಮ ಪಂಚಾಯಿತಿ ಅಧ್ಯಕ್ಷರ ಮನೆಯ ಮುಂಭಾಗ ಇರುವ ರವಿ ಮನೆ ಕಡೆಯಿಂದ ಗ್ರಾಮ ಪಂಚಾಯಿತಿ ಕಡೆಯವರೆಗೆ ಉದ್ಯೋಗ ಖಾತ್ರಿ ಯೋಜನೆಯ ಒಳಚರಂಡಿ ಕಾಮಗಾರಿ ಆರಂಭವಾಗಿದೆ. ಕಾಮಗಾರಿಯನ್ನು ತಂತ್ರಜ್ಞಾನದ ಹಾಗೂ ಜೆಸಿಬಿ ಬಳಸಿ ಮಾಡುತ್ತಿರುವುದು ಉದ್ಯೋಗ ಖಾತ್ರಿ ಯೋಜನೆಗೆ ವಿರುದ್ಧವಾಗಿದ್ದು ಕಾನೂನುಬಾಹಿರವಾಗಿದೆ ಎಂದು ಅವರು ಬೊಟ್ಟು ಮಾಡಿದ್ದಾರೆ.

ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಉದ್ಯೋಗ ಖಾತ್ರಿ ಯೋಜನೆ ಅಡಿಯಲ್ಲಿ ಈ ಕಾಮಗಾರಿ ಕೆಲಸವನ್ನು ಪರಿಶೀಲಸದೆ ಯೋಜನಾ ವರದಿಯಲ್ಲಿ ಸೇರಿಸಿದ್ದಾರೆ ಇದರ ಬಗ್ಗೆ ಮೇಲಾಧಿಕಾರಿ ಕ್ರಮ ವಹಿಸಬೇಕಾಗಿದೆ. ಶನಿವಾರಸಂತೆ ಗ್ರಾಮ ಪಂಚಾಯಿತಿಯ ಈ ರೀತಿಯ ಕಾರ್ಯ ವೈಖರಿಯನ್ನು ತಾಲೂಕು ಪಂಚಾಯಿತಿ ಮತ್ತು ಜಿಲ್ಲಾ ಪಂಚಾಯತ್ ಮೇಲಾಧಿಕಾರಿ ಗಮನಿಸಿ ಅಭಿವೃದ್ಧಿಯ ಕಡೆಗೆ ಕೆಲಸ ಕಾಮಗಾರಿ ಮಾಡಲು ಶನಿವಾರಸಂತೆ ಗ್ರಾಮ ಪಂಚಾಯಿತಿ ಆಡಳಿತ ಮಂಡಳಿಗೆ ತಿಳಿಸಬೇಕಾಗಿದೆ ಎಂದು ಅವರು ಆಗ್ರಹಿಸಿದ್ದಾರೆ.

ಈ ರೀತಿಯ ಕಾಮಗಾರಿಗಳು ಮುಂದಿನ ದಿನಗಳಲ್ಲಿ ಮುಂದುವರಿದರೆ. ಗ್ರಾಮ ಪಂಚಾಯಿತಿ ಅಭಿವೃದ್ಧಿ ಕುಂಠಿತವಾಗುತ್ತದೆ. ಈ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಜನಸಂಖ್ಯೆ ಹೆಚ್ಚಳವಾಗುತ್ತಿದ್ದು ಅನೇಕರು ಈ ಸ್ಥಳದಲ್ಲಿ ವ್ಯಾಪಾರ ವ್ಯವಹಾರ ಚಟುವಟಿಕೆಗಳನ್ನು ನಡೆಸುತ್ತಿದ್ದಾರೆ. ಶನಿವಾರಸಂತೆಗೆ ಪ್ರಮುಖವಾಗಿ ಬಸ್ ನಿಲ್ದಾಣ, ಹೈಟೆಕ್ ಸಂತೆ ಮಾರುಕಟ್ಟೆ, ಸೂಕ್ತ ವಾಹನ ಸಂಚಾರ ವ್ಯವಸ್ಥೆ, ಬೀದಿ ದೀಪ ವ್ಯವಸ್ಥೆ ಇನ್ನು ಹತ್ತು ಹಲವು ಸಮಸ್ಯೆಗಳಿಂದ ಶನಿವಾರಸಂತೆ ಗ್ರಾಮ ಪಂಚಾಯಿತಿ ಕೂಡಿದ್ದು ಇದರ ಬಗ್ಗೆ ತಕ್ಷಣವೇ ಆಡಳಿತ ಮಂಡಳಿ ಗಮನಹರಿಸಬೇಕಾಗಿದೆ ಎಂದು ಅವರು ಒತ್ತಾಯಿಸಿದ್ದಾರೆ.

ಸಮಸ್ಯೆ ಕುರಿತು ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಮತ್ತು ಗ್ರಾಮ ಪಂಚಾಯಿತಿ ಅಧ್ಯಕ್ಷೆ ಪ್ರತಿಕ್ರಿಯೆ ಬಯಸಿದಾಗ ಅವರು ಸಮಂಜಸ ಕಾರಣ ನೀಡದೆ ಹಾರಿಕೆಯ ಉತ್ತರ ನೀಡಿದ್ದಾರೆ.

............

ಈ ಸಮಸ್ಯೆ ಬಗ್ಗೆ ಅಧಿಕಾರಿಯಾಗಿ ನಾನು ಉತ್ತರ ನೀಡುವುದಿಲ್ಲ. ಚುನಾಯಿತ ಆಗಿರುವ ಪ್ರತಿನಿಧಿಗಳು ಉತ್ತರ ನೀಡಬೇಕು.

-ಹರೀಶ್‌, ಪಿಡಿಒ.

-------------- ಸ್ಥಳೀಯರು ಚರಂಡಿ ಮಾಡಿಸಿಕೊಡಿ ಎಂದಿದ್ದರು ಹಾಗಾಗಿ ಕಾಮಗಾರಿ ಮಾಡಿದ್ದೇವೆ.

-ಗೀತಾ ಹರೀಶ್‌, ಗ್ರಾಮ ಪಂಚಾಯಿತಿ ಅಧ್ಯಕ್ಷೆ.

Share this article