ಅಪ್ರಾಪ್ತೆಯ ಮೇಲೆ ಲೈಂಗಿಕ ದೌರ್ಜನ್ಯ ಆರೋಪಿಗೆ ಜೀವಾವಧಿ ಶಿಕ್ಷೆ

KannadaprabhaNewsNetwork | Published : Nov 21, 2024 1:00 AM

ಸಾರಾಂಶ

ಜಿ. ಭತ್ತಲಹಳ್ಳಿಯ ರಾಜು ಅಲಿಯಾಸ್ ದಾಸ್ (37ವರ್ಷ) ಈತ ಮುರುಗಮಲ್ಲ ಗ್ರಾಮದ ಒಬ್ಬರೊಂದಿಗೆ ಸ್ನೇಹ ಬೆಳೆಸಿಕೊಂಡು ಅವರ ಮನೆಗೆ ಹೋಗಿ ಬರುತ್ತಿದ್ದನು.

ಚಿಂತಾಮಣಿ: ಅಪ್ರಾಪ್ತೆಯ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ ಆರೋಪಿಯೊಬ್ಬನಿಗೆ ಚಿಕ್ಕಬಳ್ಳಾಪುರ (ಪೋಕ್ಸೋ) ಜಿಲ್ಲಾ ಸತ್ರ ನ್ಯಾಯಾಲಯದ ನ್ಯಾಯಾಧೀಶರಾದ ಎನ್.ಸವಿತಾ ಕುಮಾರಿ ಜೀವಾವಧಿ ಶಿಕ್ಷೆ ವಿಧಿಸಿದ್ದಾರೆ.

ಚಿಂತಾಮಣಿ ತಾಲ್ಲೂಕಿನ ಕೆಂಚರ‍್ಲಹಳ್ಳಿ ಪೊಲೀಸ್ ಠಾಣೆ ಸರಹದ್ದಿನ ಜಿ. ಭತ್ತಲಹಳ್ಳಿಯ ರಾಜು ಅಲಿಯಾಸ್ ದಾಸ್ (37ವರ್ಷ) ಈತ ಮುರುಗಮಲ್ಲ ಗ್ರಾಮದ ಒಬ್ಬರೊಂದಿಗೆ ಸ್ನೇಹ ಬೆಳೆಸಿಕೊಂಡು ಅವರ ಮನೆಗೆ ಹೋಗಿ ಬರುತ್ತಿದ್ದು, ಅವರ ಅಪ್ರಾಪ್ತ ವಯಸ್ಸಿನ ಮಗಳನ್ನು ಕಳೆದ 25-5-2020 ರಂದು ಸಂಜೆ 7 ಗಂಟೆಯಲ್ಲಿ ಆಟೋನಲ್ಲಿ ಗಂಡ್ರಗಾನಹಳ್ಳಿಗೆ ಕರೆದುಕೊಂಡು ಹೋಗಿ ಅಲ್ಲಿಂದ ದ್ವಿಚಕ್ರ ವಾಹನದಲ್ಲಿ ಅಪರಿಸಿಕೊಂಡು ಹೋಗಿ ಮರಿನಾಯಕನಹಳ್ಳಿ ಗೇಟ್ ಬಳಿ ಇರುವ ಶೆಡ್‌ನಲ್ಲಿ ಅಪ್ರಾಪ್ತೆಯ ಮೇಲೆ ಲೈಂಗಿಕ ದೌರ್ಜನ್ಯ ವೆಸಗಿದ್ದನು. ಈ ಸಂಬಂಧ ಕೆಂಚರ‍್ಲಹಳ್ಳಿ ಪೊಲೀಸ್ ಠಾಣೆಯಲ್ಲಿ ಪೋಕ್ಸೋ ಕಾಯ್ದೆಯಡಿ ಅಪ್ರಾಪ್ತೆಯ ತಾಯಿ ನೀಡಿದ ದೂರಿನ ಮೇರೆಗೆ ಪ್ರಕರಣ ದಾಖಲಿಸಿ ಆಗಿನ ಸಿಪಿಐ ಕೆ.ಎಂ.ಶ್ರೀನಿವಾಸಪ್ಪ ತನಿಖೆ ನಡೆಸಿ ಆರೋಪಿಯ ವಿರುದ್ಧ ದೋಷಾರೊಪಣೆ ಪತ್ರ ನ್ಯಾಯಾಲಯಕ್ಕೆ ಸಲ್ಲಿಸಿದ್ದು ಈ ಸಂಬಂಧ ವಿಚಾರಣೆ ನಡೆಸಿದ ಚಿಕ್ಕಬಳ್ಳಾಪುರದ ಅಪರ ಜಿಲ್ಲಾ ಮತ್ತು ಸತ್ರ ನ್ಯಾಯಾಲಯ ನ್ಯಾಯಾಧೀಶೆ ಎನ್.ಸವಿತಾ ಕುಮಾರಿ ಆರೋಪಿಗೆ ಜೀವಾವಧಿ ಶಿಕ್ಷೆ ವಿಧಿಸಿ ಆದೇಶಿಸಿದ್ದಾರೆ.

ಆರೋಪಿ ರಾಜು ಅಲಿಯಾಸ್ ದಾಸ್ ವಿಚಾರಣೆ ಕಾಲದಲ್ಲಿ ಮಧ್ಯಾಂತರ ಜಾಮೀನು ಪಡೆದು ನ್ಯಾಯಾಲಯಕ್ಕೆ ಹಾಜರಾಗದೆ ತಲೆಮರೆಸಿಕೊಂಡಿದ್ದು, ಈ ವರ್ಷದ ಜೂನ್ ತಿಂಗಳಲ್ಲಿ ಈತನನ್ನು ಆಂಧ್ರಪ್ರದೇಶದಲ್ಲಿ ಪತ್ತೆ ಮಾಡಿಕೊಂಡು ನ್ಯಾಯಾಲಯಕ್ಕೆ ಹಾಜರುಪಡಿಸಿದ್ದು ಅಂದಿನಿಂದ ಆರೋಪಿ ನ್ಯಾಯಾಂಗ ಬಂಧನದಲ್ಲಿದ್ದಾನೆ. ಆರೋಪಿಗೆ ಜೀವಾವಧಿ ಶಿಕ್ಷೆಯ ಜೊತೆಗೆ50೦ ಸಾವಿರ ದಂಡ ಹಾಗೂ ಸಂತ್ರಸ್ತೆಗೆ 4 ಲಕ್ಷ ಪರಿಹಾರ ನೀಡುವಂತೆ ಸರ್ಕಾರಕ್ಕೆ ಸೂಚಿಸಿದ್ದಾರೆ. ಈ ಪ್ರಕರಣದ ವಿಶೇಷ ಅಭಿಯೋಜಕರಾಗಿ ಲಕ್ಷ್ಮಿನರಸಿಂಹಪ್ಪ ಸಂತ್ರಸ್ತೆಯ ಪರ ವಾದ ಮಂಡಿಸಿದ್ದರು.

Share this article