4.50 ಲಕ್ಷ ರು. ಮೌಲ್ಯದ 14 ಕೆ.ಜಿ ಗಾಂಜಾ ವಶ

KannadaprabhaNewsNetwork |  
Published : Sep 08, 2025, 01:00 AM IST
29 | Kannada Prabha

ಸಾರಾಂಶ

ಮೈಸೂರು- ಬೆಂಗಳೂರು ರಸ್ತೆಯ ಮಣಿಪಾಲ್ ಆಸ್ಪತ್ರೆ ಜಂಕ್ಷನ್ ಬಳಿ ಭಾನುವಾರ ಬೆಳಗಿನ ಜಾವ ವಾಹನದಲ್ಲಿ ಅಕ್ರಮವಾಗಿ ಗಾಂಜಾ

ಕನ್ನಡಪ್ರಭ ವಾರ್ತೆ ಮೈಸೂರು

ಹಲವು ದಿನಗಳಿಂದ ತಲೆ ಮರೆಸಿಕೊಂಡಿದ್ದ ಗಾಂಜಾ ಪೆಡ್ಲರ್‌ ನನ್ನು ಮೈಸೂರಿನ ಸಿಸಿಬಿ ಘಟಕದ ಪೊಲೀಸರು ಭಾನುವಾರ ಬಂಧಿಸಿ, ಆತನಿಂದ 4.50 ಲಕ್ಷ ರೂ. ಮೌಲ್ಯದ 14 ಕೆ.ಜಿ 150 ಗ್ರಾಂ ತೂಕದ ಗಾಂಜಾವನ್ನು ವಶಪಡಿಸಿಕೊಂಡಿದ್ದಾರೆ.ಚಾಮರಾಜನಗರ ಜಿಲ್ಲೆ ಹನೂರು ತಾಲೂಕು ಪುಷ್ಪಾಪುರ ಗ್ರಾಮದ ಮಾದಶೆಟ್ಟಿ ಎಂಬವರ ಪುತ್ರ ಶ್ರೀನಿವಾಸ್ ಅ. ಶೀನಪ್ಪ ಅ. ಗಾಂಜಾ ಶೀನಾ (54) ಬಂಧಿತ ಆರೋಪಿ.ಮೈಸೂರು- ಬೆಂಗಳೂರು ರಸ್ತೆಯ ಮಣಿಪಾಲ್ ಆಸ್ಪತ್ರೆ ಜಂಕ್ಷನ್ ಬಳಿ ಭಾನುವಾರ ಬೆಳಗಿನ ಜಾವ ವಾಹನದಲ್ಲಿ ಅಕ್ರಮವಾಗಿ ಗಾಂಜಾ ಸಾಗಿಸುತ್ತಿರುವುದರ ಬಗ್ಗೆ ಸಿಕ್ಕ ಖಚಿತ ಮಾಹಿತಿ ಮೇರೆಗೆ ಸಿಸಿಬಿ ಪೊಲೀಸರು ಈ ಕಾರ್ಯಾಚರಣೆ ನಡೆಸಿ, ಆರೋಪಿಯನ್ನು ಬಂಧಿಸಿದ್ದಾರೆ.ಆರೋಪಿ ಶ್ರೀನಿವಾಸ್ ವಿರುದ್ಧ 12 ಎನ್ ಡಿಪಿಎಸ್ ಪ್ರಕರಣಗಳು ದಾಖಲಾಗಿದ್ದು, ಜಾಮೀನು ಪಡೆದು ಮಾದಕ ವಸ್ತು ಸಾಗಣೆ ಮತ್ತು ಮಾರಾಟ ಕೃತ್ಯದಲ್ಲಿ ಭಾಗಿಯಾಗುತ್ತಿದ್ದ. ಬೆಂಗಳೂರು ಜಿಲ್ಲೆಯಲ್ಲಿ 4, ಮೈಸೂರಿನಲ್ಲಿ 6, ಚಾಮರಾಜನಗರದ ಬೇಗೂರು ಠಾಣೆಯಲ್ಲಿ 1, ಆಂಧ್ರಪ್ರದೇಶದ ವಿಶಾಖಪಟ್ಟಣ ಮುದಗಲ್ಲು ಠಾಣೆಯಲ್ಲಿ 1 ಪ್ರಕರಣಗಳು ದಾಖಲಾಗಿದೆ.8 ಪ್ರಕರಣಗಳಲ್ಲಿ ನ್ಯಾಯಾಲಯದಲ್ಲಿ ವಿಚಾರಣೆ ಬಾಕಿ ಇದ್ದು, ಶ್ರೀನಿವಾಸ್ ವಿರುದ್ಧ ಜಾಮೀನು ರಹಿತ ವಾರೆಂಟ್ ಜಾರಿಯಾಗಿದ್ದು, ಒರಿಸ್ಸಾದಲ್ಲಿ ತಲೆ ಮರೆಸಿಕೊಂಡಿದ್ದ. ಮೈಸೂರಿಗೆ ಗಾಂಜಾದೊಂದಿಗೆ ಬರುವಾಗ ಸಿಕ್ಕಿ ಬಿದ್ದಿದ್ದಾನೆ. ಶ್ರೀನಿವಾಸ್ ಮಕ್ಕಳಾದ ಸುರೇಶ್ ಮತ್ತು ನಂದೀಶ್ ಎಂಬವರ ವಿರುದ್ಧವೂ 4 ಎನ್ ಡಿಪಿಎಸ್ ಪ್ರಕರಣಗಳು ದಾಖಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.ನಗರ ಪೊಲೀಸ್ ಆಯುಕ್ತೆ ಸೀಮಾ ಲಾಟ್ಕರ್, ಡಿಸಿಪಿಗಳಾದ ಆರ್.ಎನ್. ಬಿಂದು ಮಣಿ, ಕೆ.ಎಸ್. ಸುಂದರ್ ರಾಜ್, ಸಿಸಿಬಿ ಘಟಕದ ಎಸಿಪಿ ಮಹಮ್ಮದ್ ಷರೀಫ್ ರಾವುತರ್ ಅವರ ಮಾರ್ಗದರ್ಶನದಲ್ಲಿ ಇನ್ಸ್‌ ಪೆಕ್ಟರ್ ಶಬ್ಬೀರ್ ಹುಸೇನ್, ಎಸ್‌ಐ ಕೆ. ಲೇಪಾಕ್ಷ, ಸಿಬ್ಬಂದಿ ರಾಮಸ್ವಾಮಿ, ಮಧುಕುಮಾರ್, ಪ್ರಕಾಶ್ ರಾಥೋಡ್ ಈ ಪತ್ತೆ ಮಾಡಿದ್ದಾರೆ.----ಕೋಟ್...ನಗರ ಪೊಲೀಸರು ಮಾದಕದ್ರವ್ಯದ ವಿರುದ್ಧ ನಿರಂತರ ಕಾರ್ಯಾಚರಣೆಯಿಂದ ಆರೋಪಿ ಶ್ರೀನಿವಾಸ್ ಮೈಸೂರು ಬಿಟ್ಟು ಪರಾರಿಯಾಗಿದ್ದ. ಈತನ ಪತ್ತೆಗೆ ವಿಶೇಷ ಪೊಲೀಸ್ ತಂಡ ರಚಿಸಲಾಗಿತ್ತು. ಕಳೆದ 45 ದಿನಗಳಿಂದ ಈತನ ಪತ್ತೆಗಾಗಿ ಒಡಿಶಾ, ಆಂಧ್ರಪ್ರದೇಶ, ಕೇರಳ ಮತ್ತು ತಮಿಳುನಾಡಿಗೆ ವಿವಿಧ ಶೋಧ ತಂಡಗಳನ್ನು ಕಳುಹಿಸಲಾಗಿತ್ತು. ಭಾನುವಾರ ಆರೋಪಿಯನ್ನು ಮೈಸೂರಿನ ಬಳಿ ಬಂಧಿಸಿ, 14 ಕೆ.ಜಿ ಮಾದಕ ವಸ್ತುಗಳನ್ನು ವಶಪಡಿಸಿಕೊಳ್ಳಲಾಗಿದೆ. ನಗರದಲ್ಲಿ ಮಾದಕ‌ದ್ರವ್ಯ ಪತ್ತೆ ಕಾರ್ಯಾಚರಣೆಯನ್ನು ಮತ್ತಷ್ಟು ಚುರುಕುಗೊಳಿಸಲಾಗುವುದು ಹಾಗೂ ಆರೋಪಿಗಳ ವಿರುದ್ಧ ನಿರ್ದಾಕ್ಷಿಣ್ಯವಾಗಿ ಕಾನೂನು ರೀತಿ ಕ್ರಮ ಕೈಗೊಳ್ಳಲಾಗುವುದು.- ಸೀಮಾ ಲಾಟ್ಕರ್, ನಗರ ಪೊಲೀಸ್ ಆಯುಕ್ತೆ

PREV

Recommended Stories

ಬೆಂಗಳೂರಿನ ಬಾರ್‌ಗಳಲ್ಲಿ ವೋಟ್‌ ಖರೀದಿ ಲೆಕ್ಕಾಚಾರ!!!
ಸಿಎಂಗೆ ಕಣ್ಣು ಪರೀಕ್ಷೆ ನಡೆಸಿ ಎರಡು ಕನ್ನಡಕ ಕೊಟ್ಟ ಶಾಸಕ ಶ್ರೀನಿವಾಸ್‌