ಆಸ್ಪತ್ರೆಯಿಂದ ಪರಾರಿಯಾಗಿದ್ದ ಆರೋಪಿ ಬಂಧನ

KannadaprabhaNewsNetwork | Published : Jan 17, 2024 1:51 AM

ಸಾರಾಂಶ

ವಿವಿಧ ಪ್ರಕರಣಗಳಲ್ಲಿ ಪೊಲೀಸರಿಗೆ ಬೇಕಾಗಿದ್ದ ಆರೋಪಿಯನ್ನು ಹಿಡಿಯಲು ಹೋದ ವೇಳೆ ಪೊಲೀಸರ ಮೇಲೆ ಮಾರಣಾಂತಿಕ ಹಲ್ಲೆ ಮಾಡಿ ತಪ್ಪಿಸಿಕೊಳ್ಳುವಾಗ ಪೊಲೀಸರ ಗುಂಡೇಟಿಗೆ ಗಾಯಗೊಂಡು ಜಿಲ್ಲಾ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ವೇಳೆ ಪರಾರಿಯಾಗಿದ್ದ ಎಂ.ಕೆ.ಪೂರ್ಣೇಶನನ್ನು ಬಾಳೆಹೊನ್ನೂರು ಪೊಲೀಸರು ಮಂಗಳವಾರ ಬೆಳಿಗ್ಗೆ ಮಾಗಲು ಗ್ರಾಮದ ಬಳಿ ಬಂಧಿಸಿದ್ದಾರೆ.

- ಮಾಗಲು ಗ್ರಾಮದ ಬಳಿ ಬಂಧಿಸಿದ ಪೊಲೀಸರು

ಕನ್ನಡಪ್ರಭ ವಾರ್ತೆ, ಬಾಳೆಹೊನ್ನೂರು

ವಿವಿಧ ಪ್ರಕರಣಗಳಲ್ಲಿ ಪೊಲೀಸರಿಗೆ ಬೇಕಾಗಿದ್ದ ಆರೋಪಿಯನ್ನು ಹಿಡಿಯಲು ಹೋದ ವೇಳೆ ಪೊಲೀಸರ ಮೇಲೆ ಮಾರಣಾಂತಿಕ ಹಲ್ಲೆ ಮಾಡಿ ತಪ್ಪಿಸಿಕೊಳ್ಳುವಾಗ ಪೊಲೀಸರ ಗುಂಡೇಟಿಗೆ ಗಾಯಗೊಂಡು ಜಿಲ್ಲಾ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ವೇಳೆ ಪರಾರಿಯಾಗಿದ್ದ ಎಂ.ಕೆ.ಪೂರ್ಣೇಶನನ್ನು ಬಾಳೆಹೊನ್ನೂರು ಪೊಲೀಸರು ಮಂಗಳವಾರ ಬೆಳಿಗ್ಗೆ ಮಾಗಲು ಗ್ರಾಮದ ಬಳಿ ಬಂಧಿಸಿದ್ದಾರೆ.

ಆರೋಪಿ ಬಾಳೆಹೊನ್ನೂರು ಸಮೀಪದ ಮಾಗಲು ಗ್ರಾಮದ ಎಂ.ಕೆ.ಪೂರ್ಣೇಶನನ್ನು ಬಾಳೆಹೊನ್ನೂರು ಪೊಲೀಸರು ಕಳೆದ ಅಕ್ಟೋಬರ್ 30ರಂದು ಖಚಿತ ಮಾಹಿತಿ ಮೇರೆಗೆ ಬಂಧಿಸಲು ತೆರಳಿದ್ದಾಗ ಆರೋಪಿ ಪೂರ್ಣೇಶ ಪೊಲೀಸರ ಮೇಲೆ ಮಾರಣಾಂತಿಕ ಹಲ್ಲೆ ನಡೆಸಿ ಪರಾರಿಯಾಗಲು ಯತ್ನಿಸುತ್ತಿದ್ದಾಗ ಪಿಎಸ್‌ಐ ವಿ.ಟಿ.ದಿಲೀಪ್‌ಕುಮಾರ್ ಕಾಲಿಗೆ ಗುಂಡು ಹಾರಿಸಿ ಬಂಧಿಸಿದ್ದರು.

ಕಾಲಿಗೆ ತೀವ್ರ ಗಾಯವಾದ ಹಿನ್ನೆಲೆಯಲ್ಲಿ ಪೊಲೀಸರೆ ಆರೋಪಿಯನ್ನು ಚಿಕಿತ್ಸೆಗಾಗಿ ಜಿಲ್ಲಾ ಆಸ್ಪತ್ರೆಗೆ ದಾಖಲಿಸಿದ್ದರು. ಇದೆ ಸಮಯದಲ್ಲೇ ಅಂದರೆ ಜ.13ರ ಶನಿವಾರ ಈತ ಪೊಲೀಸರ ಕಣ್ತಪ್ಪಿಸಿ ಆಸ್ಪತ್ರೆಯಿಂದ ಪರಾರಿಯಾಗಿದ್ದ. ಈ ಕುರಿತು ಚಿಕ್ಕಮಗಳೂರು ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ಸಹ ದಾಖಲಾಗಿತ್ತು.

ಆರೋಪಿ ಆಸ್ಪತ್ರೆಯಿಂದ ನಾಪತ್ತೆಯಾದ ಹಿನ್ನೆಲೆಯಲ್ಲಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ.ವಿಕ್ರಮ್ ಅಮಟೆ ಏಳು ವಿಶೇಷ ಪೊಲೀಸ್ ತಂಡಗಳನ್ನು ರಚಿಸಿ ಆತನ ಬಂಧನಕ್ಕೆ ಕ್ರಮಕೈಗೊಂಡಿದ್ದರು.

ಮಂಗಳವಾರ ಮುಂಜಾನೆ ಆರೋಪಿ ಖಾಂಡ್ಯ ಹೋಬಳಿ ಮಾಗಲು ಗ್ರಾಮದ ಬಳಿ ಇರುವ ಕುರಿತು ಖಚಿತ ಮಾಹಿತಿ ದೊರೆತ ಹಿನ್ನೆಲೆಯಲ್ಲಿ ಬಾಳೆಹೊನ್ನೂರು ಪಿಎಸ್‌ಐ ವಿ.ಟಿ.ದಿಲೀಪ್‌ಕುಮಾರ್, ಜಯಪುರ ಪಿಎಸ್‌ಐ ಗುರು ಎ.ಸಜ್ಜನ್ ಹಾಗೂ ಪೊಲೀಸ್ ಸಿಬ್ಬಂದಿ ಮಾಗಲು ಗ್ರಾಮದ ಸೇತುವೆ ಬಳಿಯಿಂದ ಬಸ್ ನಿಲ್ದಾಣದ ಕಡೆಗೆ ಬರುತ್ತಿದ್ದಾಗ ವಶಕ್ಕೆ ಪಡೆದಿದ್ದಾರೆ.

ಆರೋಪಿಯನ್ನು ವಶಕ್ಕೆ ಪಡೆದ ಬಳಿಕ ಬಾಳೆಹೊನ್ನೂರು ಠಾಣೆಗೆ ಕರೆತಂದು ವಿಚಾರಣೆ ನಡೆಸಿ ಚಿಕ್ಕಮಗಳೂರು ನ್ಯಾಯಾಲಯಕ್ಕೆ ಹಾಜರುಪಡಿಸಿ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದಾರೆ.

೧೬ಬಿಹೆಚ್‌ಆರ್ ೨: ಪೂರ್ಣೇಶ

Share this article