ಕರ್ನಾಟಕ ಪ್ರಾಚೀನ ಮತ್ತು ಸ್ಮಾರಕಗಳ ಪುರಾತತ್ವ ನಿವೇಶನಗಳು ಅಧಿನಿಯಮದಡಿ ಸಂರಕ್ಷಣೆಗೆ ಚಿಂತನೆ
ಎಂ.ಪ್ರಹ್ಲಾದ್ಕನ್ನಡಪ್ರಭ ವಾರ್ತೆ ಕನಕಗಿರಿ
ವಿಜಯನಗರ ಕಾಲದ ಪ್ರಸಿದ್ಧ ತಾಣವಾಗಿರುವ ತಾಲೂಕಿನ ಸೋಮಸಾಗರ ವ್ಯಾಪ್ತಿಯ ಅಚ್ಚಮ್ಮ ಬಾವಿಯನ್ನು ಈಗ ರಾಜ್ಯ ಸಂರಕ್ಷಿತ ಸ್ಮಾರಕವೆಂದು ಕರ್ನಾಟಕ ಪ್ರಾಚೀನ ಮತ್ತು ಸ್ಮಾರಕಗಳ ಪುರಾತತ್ವ ನಿವೇಶನಗಳು ಅಧಿನಿಯಮದಡಿ ಸಂರಕ್ಷಿಸಲು ಚಿಂತನೆ ನಡೆದಿದೆ.ಐತಿಹಾಸಿಕವಾಗಿರುವ ಈ ಬಾವಿಗೆ ಇಳಿಯಲು ಮೆಟ್ಟಿಲುಗಳಿದ್ದು, ಸುಮಾರು ೨೦ ಮೆಟ್ಟಿಲುಗಳು ಇಳಿದ ಮೇಲೆ ಎರಡು ಬದಿಯಲ್ಲಿ ದೇವಸ್ಥಾನಗಳಿವೆ. ಬಲ ಬದಿಯಲ್ಲಿನ ದೇವಸ್ಥಾನದಲ್ಲಿ ಅನಂತ ಪದ್ಮನಾಭ ಹಾಗೂ ಎಡ ಬದಿಯಲ್ಲಿ ಶಿವನ ದೇವಸ್ಥಾನವಿದೆ. ಗೋಡೆಯಲ್ಲಿ ಮಜ್ಜಿಗೆ ಕಡೆಯುತ್ತಿರುವ ಅಚ್ಚಮ್ಮಳ ಉಬ್ಬು ಶಿಲ್ಪವಿದೆ. ಈ ಹಿಂದೆ ಸಂಶೋಧಕರಾದ ಡಾ. ಡಿ.ಕೆ. ಮಾಳೆ ಹಾಗೂ ಶರಣಬಸಪ್ಪ ಕೋಲ್ಕಾರ ಇಲ್ಲಿಗೆ ಭೇಟಿ ನೀಡಿ ಹಲವು ಐತಿಹ್ಯ ಮಾಹಿತಿ ಕಲೆ ಹಾಕಿದ್ದಾರೆ. ಅದಾದ ಬಳಿಕ ಇತ್ತೀಚೆಗೆ ಪುರಾತತ್ವ ಇಲಾಖೆಯ ಅಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಆಗಿನಿಂದ ಇದನ್ನು ಸಂರಕ್ಷಿತ ಸ್ಮಾರಕವನ್ನಾಗಿಸಲು ಅಧಿಕಾರಿಗಳು ಯೋಜಿಸಿದ್ದಾರೆ.ಇದೀಗ ಈ ಸ್ಮಾರಕವನ್ನು ರಕ್ಷಿಸಲು ಕರ್ನಾಟಕ ಪ್ರಾಚೀನ ಮತ್ತು ಸ್ಮಾರಕಗಳ ಪುರಾತತ್ವ ನಿವೇಶನಗಳು, ಅವಶೇಷಗಳು ಅಧಿನಿಯಮ ೧೯೬೧ ಕಲಂ ೪(೧)ರಡಿ ಪ್ರಾಥಮಿಕ ಅಧಿಸೂಚನೆಯನ್ನು ಪ್ರವಾಸೋದ್ಯಮ ಇಲಾಖೆಯ ಅಧೀನ ಕಾರ್ಯದರ್ಶಿ ಮಹಮ್ಮದ್ ಇಬ್ರಾಹಿಂ ಆದೇಶ ಹೊರಡಿಸಿದ್ದಾರೆ. ಈ ಬಗ್ಗೆ ಪ್ರಸ್ತಾವನೆಯನ್ನು ಸಲ್ಲಿಸಿದ್ದು, ಅದರ ಆಧಾರ ಮೇಲೆ ಮೇಲಧಿಕಾರಿಗಳು ರಾಜ್ಯ ಸಂರಕ್ಷಿತ ಸ್ಮಾರಕವೆಂದು ಘೋಷಣೆ ಮಾಡುವುದಕ್ಕೆ ಕಂದಾಯ ಇಲಾಖೆಗೆ ಮಾಹಿತಿ ಕಳುಹಿಸಲಾಗಿರುತ್ತದೆ ಎಂದು ಕಮಲಾಪುರದ ಪುರಾತತ್ವ ಇಲಾಖೆ ಡಿಡಿ ಶೇಜೇಶ್ವರ ತಿಳಿಸಿದ್ದಾರೆ.
ಯಾರು ಈ ಅಚ್ಚಮ್ಮ?: ಕನಕಗಿರಿಯನ್ನಾಳಿದ ಅರಸರಲ್ಲಿಯೇ ಇಮ್ಮಡಿ ಉಡುಚ ನಾಯಕ ಅತ್ಯಂತ ಪರಾಕ್ರಮಿ. ಇತನ ಮೂವರು ಪತ್ನಿಯರಲ್ಲಿ ಈ ಅಚ್ಚಮ್ಮಳು ಒಬ್ಬಳು. ಈಕೆಯೇ ಈ ಬಾವಿಯನ್ನು ಸುತ್ತಲಿನ ಜಮೀನುಗಳಿಗೆ ನೀರಾವರಿ, ಕುಡಿಯುವ ನೀರಿಗಾಗಿ ನಿರ್ಮಿಸಿದ್ದಾಳೆ ಎಂದು ಇತಿಹಾಸಕಾರ ಶರಣಬಸಪ್ಪ ತಿಳಿಸುತ್ತಾರೆ.