ಆಚಾರ್ಯತ್ರಯರು ಮನುಕುಲಕ್ಕೆ ಆದರ್ಶಪ್ರಾಯರು

KannadaprabhaNewsNetwork | Published : Dec 18, 2024 12:48 AM

ಸಾರಾಂಶ

ತರೀಕೆರೆಯಲ್ಲಿ ತರೀಕೆರೆ ಮತ್ತು ಅಜ್ಜಂಪುರ ತಾಲೂಕು ಶ್ರೀವೈಷ್ಣವ ಸಭಾ ಸಂಘ ವತಿಯಿಂದ ಏರ್ಪಡಿಸಲಾಗಿದ್ದ ಜಗದ್ಗುರು ಶ್ರೀ ರಾಮಾನುಜಚಾರ್ಯರ 1008ನೇ ವಿಶ್ವ ಜಯಂತ್ಯುತ್ಸವ ಸುಸಂಪನ್ನ ಸಮಾರಂಭ ಉದ್ಘಾಟನೆಯನ್ನು ವಿಪ್ರಶ್ರೀ ಪ್ರಶಸ್ತಿ ಪುರಸ್ಕೃತ ವೇ.ಬ್ರ.ಶ್ರೀ ಕೆ.ಟಿ.ಲಕ್ಷ್ಮೀನಾರಾಯಣ ಭಟ್ ನೆರವೇರಿಸಿದರು. ಶ್ರೀವೈಷ್ಣವ ಸಭಾ ಸಂಘದ ಅಧ್ಯಕ್ಷ ರಂಗನಾಥ ಶರ್ಮ ಮತ್ತಿತರರು ಇದ್ದಾರೆ.

ಕನ್ನಡಪ್ರಭವಾರ್ತೆ ತರೀಕೆರೆ

ಶ್ರೀ ಆಚಾರ್ಯತ್ರಯರಾದ ಶ್ರೀ ಶಂಕರಾಚಾರ್ಯರು, ಶ್ರೀ ರಾಮಾನುಚಾರ್ಯರು ಮತ್ತು ಶ್ರೀ ಮದ್ವಾಚಾರ್ಯರು ಭಕ್ತಿ ಧರ್ಮ ಮೋಕ್ಷ ಮಾರ್ಗಗಳ ದಾರೀದೀಪವಾಗಿ ಮನುಕುಲಕ್ಕೆ ಆದರ್ಶಪ್ರಾಯರಾಗಿದ್ದಾರೆ ಎಂದು ವಿಪ್ರಶ್ರೀ ಪ್ರಶಸ್ತಿ ಪುರಸ್ಕೃತ ವೇ.ಬ್ರ.ಶ್ರೀ ಕೆ.ಟಿ.ಲಕ್ಷ್ಮೀನಾರಾಯಣ ಭಟ್ ಹೇಳಿದರು.

ತರೀಕೆರೆ ಮತ್ತು ಅಜ್ಜಂಪುರ ತಾಲೂಕು ಶ್ರೀವೈಷ್ಣವ ಸಭಾ ಸಂಘ ವತಿಯಿಂದ ಪಟ್ಟಣದ ಶ್ರೀ ಸತ್ಯಪ್ರದ ಲಕ್ಷ್ಮೀವೆಂಕಟೇಶ್ವರ ದೇವಾಲಯದಲ್ಲಿ ಏರ್ಪಡಿಸಿದ್ದ ಜಗದ್ಗುರು ಶ್ರೀ ರಾಮಾನುಜಚಾರ್ಯರ 1008ನೇ ವಿಶ್ವ ಜಯಂತ್ಯುತ್ಸವ ಸುಸಂಪನ್ನ ಸಮಾರಂಭ ಉದ್ಘಾಟಿಸಿ ಮಾತನಾಡಿದರು. ಭಗವದ್ಭಕ್ತರೆಲ್ಲರಿಗೂ ಮುಕ್ತ ಪಥ ತೋರಿದ ಅಧ್ವೈರ್ಯರು, ಭಕ್ತಿ ಮಾರ್ಗಕ್ಕೆ ಧ್ಯಾನ ಭಜನೆ, ಭಗವನ್ನಾಮ ಸಂಕೀರ್ತನೆಯ ಮೂಲಕ ಭಗವಂತನಲ್ಲಿ ನಾವು ಆತ್ಮ ನಿವೇದನೆ ಅರ್ಪಿಸುವ ಪ್ರಾರ್ಥನೆಯು ಸುಖ ಶಾಂತಿ ನೆಮ್ಮದಿಯನ್ನು ಪಡೆಯಬಹುದು. ಅಂತರಂಗದಲ್ಲಿ ಭಗವಂತನನ್ನು ಧಾರಣೆ ಮಾಡಿ ಬಹಿರಂಗದಲ್ಲಿ ದಾನ, ಧರ್ಮ, ನಿಸ್ವಾರ್ಥವನ್ನು ಅಳವಡಿಸಿಕೊಂಡಲ್ಲಿ ನಾವು ಭಗವಂತನ ಅಂಶವೇ ಅಗುತ್ತೇವೆ ಎಂದು ಹೇಳಿದರು.

ವೇದ ಉಪನಿಷತ್ತು ರಾಮಾಯಣ ಮಹಾಭಾರತ ಭಗವದ್ಗೀತೆಯ ಸಾರವನ್ನು ಪ್ರತಿ ಮನೆಯಲ್ಲೂ ಪ್ರತಿ ದಿನವು ಮನೆ ಮಂದಿ ಎಲ್ಲ ಕುಳಿತು ಕಲವು ಸಮಯವಾದರೂ ಜಪಿಸುವಂತಾದಾಗ ಮಾತ್ರ ಶ್ರೀ ಆಚಾರತ್ರಯರ ಬೋಧನೆ ಸಾರ್ಥಕವಾದೀತು ಎಂದರು.

ಜಿ.ಎಚ್.ಶ್ರೀನಿವಾಸ್ ಜನಹಿತ ಸೇವಾ ಟ್ರಸ್ಟ್ ಅಧ್ಯಕ್ಷೆ ವಾಣಿ ಶ್ರೀನಿವಾಸ್ ಅವರು ಶ್ರೀ ರಾಮಾನುಜಚಾರ್ಯರ ಭಾವಚಿತ್ರಕ್ಕೆ ಪುಷ್ಪಾರ್ಚನೆ ಸಲ್ಲಿಸುವುದರ ಮೂಲಕ ಬೆಳಗಿನ ಕಾರ್ಯಕ್ರಮದ ಉದ್ಘಾಟನೆ ನೆರವೇರಿಸಿ ಮಾತನಾಡಿ, ಮಹಾಪುರುಷರು ಲೋಕಕಲ್ಯಾಣಕ್ಕೆ ತೋರಿದ ಮಾರ್ಗ ಅನುಸರಿಸಿದರೆ ಶಾಂತಿ ನೆಮ್ಮದಿ ದೊರಕುತ್ತದೆ ಎಂದರು.

ಶ್ರೀ ಬಿ.ಎಸ್.ಭಗವಾನ್ ಅವರು ಮಾತನಾಡಿ, ಶ್ರೀ ರಾಮಾನುಜಚಾರ್ಯರು 10ನೇ ಶತನಾನದಲ್ಲಿಯೇ ಸನಾತನ ಧರ್ಮದ ಸರ್ವ ಜಾತಿ ಕುಲದವರು ಭಗವಂತನ ದೃಷ್ಟಿಯಲ್ಲಿ ಸಮಾನರು ಎಂದು ಸಾರಿ ವಿಶಿಷ್ಟಾದ್ವೈತದ ವಿಶೇಷತೆಯನ್ನು ಜಗತ್ತಿಗೇ ಸಾರಿ ವಿಶ್ವಮಾನ್ಯರಾದರು, ಆದರೆ ಇಂದು ಜಾತಿ ಜಾತಿ ನಡುವೆ ತಾರತಮ್ಯ ತೊಲಗಿ ಸನಾನತ ಧರ್ಮೀಯರೆಲ್ಲರೂ ಒಂದಾಗಿ ಬಾಳಿದರೆ ಮಾತ್ರ ಭಾರತ ದೇಶ ವಿಶ್ವದಲ್ಲೇ ಅಗ್ರಮಾನ್ಯ ದೇಶವಾಗಲು ಸಾಧ್ಯ ಎಂದು ಸಲಹೆ ನೀಡಿದರು.ಭದ್ರಾವತಿ ಶ್ರೀ ಶ್ರೀವೈಷ್ಣವ ಅರ್ಚಕ ಮಹಾಸಭಾಧ್ಯಕ್ಷ ರಾಮಾನುಜಚಾರ್ಯರು ಮಾತನಾಡಿ, ಪ್ರಪಂಚದ ಪ್ರತಿಯೊಂದು ಪ್ರಗತಿ ಮುನ್ನೆಡೆಗೆ ವೇದ, ಶಾಸ್ತ್ರ, ಖಗೋಳ, ಜ್ಯೋತಿಷ್ಯ, ವಿಜ್ಞಾನಕ್ಕೆ ಮೂಲ ನಮ್ಮ ಋಷಿ ಪರಂಪರೆಯ ಪೂರ್ವಜರು ಮಹತ್ತರ ಕೊಡುಗೆ ನೀಡಿದ್ದಾರೆ. ಇಂದು ಧರ್ಮ ರಕ್ಷಣೆಗೆ ಎಲ್ಲ ಸನಾತನ ಧರ್ಮದ ಅನುಯಾಯಿಗಳು ಐಕ್ಯಮತದೊಂದಿಗೆ ಧರ್ಮಮಾರ್ಗದಲ್ಲಿ ನೆಡೆದು ಧರ್ಮರಕ್ಷಣೆ ಮಾಡಬೇಕಿದೆ ಎಂದರು.ಬ್ರಾಹ್ಮಣ ಸೇವಾ ಸಮಿತಿ ಕಾರ್ಯದರ್ಶಿ ಡಿ.ಸಿ.ಶ್ರೀನಿವಾಸ ಮೂರ್ತಿ ಮಾತನಾಡಿ, ನಾವುಗಳು ತ್ರಿಮತಸ್ಥರು ಒಂದಾಗಿ ಇಂತಹ ಜನಹಿತ ಬಯಸುವ ಕಾರ್ಯಕ್ರಮಗಳನ್ನು ಆಯೋಜಿಸಬೇಕು ಎಂದರು. ಶ್ರೀವೈಷ್ಣವ ಸಭಾ ಸಂಘದ ಅಧ್ಯಕ್ಷ ರಂಗನಾಥ ಶರ್ಮ ಸಮಾರಂಭದ ಅಧ್ಯಕ್ಷತೆ ವಹಿಸಿ ಮಾತನಾಡಿ, ಮಳೆ ಬೆಳೆಗಳು ಸಮೃದ್ಧವಾಗಿ ದೇಶ ಸುಭಿಕ್ಷವಾಗಿರಲಿ ಎಂದರು.

ಶ್ರೀಸತ್ಯಪ್ರದ ಶ್ರೀಲಕ್ಷ್ಮೀವೆಂಕಟೇಶ್ವರ ದೇವಾಲಯದಲ್ಲಿ ಶ್ರೀ ಲಕ್ಷ್ಮಿವೆಂಕಟೇಶ್ವರ ಸ್ವಾಮಿ ಮತ್ತು ಶ್ರೀ ರಾಮಾನುಜಚಾರ್ಯರಿಗೆ ಪಂಚರಾತ್ರ ಆಗಮ ವೈಕಾನಸ ಕ್ರಮದಂತೆ ತಿರುಮಂಜನ, ತಿರುವಾಯುಮುಡಿ ಪಾಷರಗಳ ಪಠಣದೊಂದಿಗೆ ಷೋಡೋಷೋಪಚಾರ ಪೂಜೆ ನೆರವೇರಿಸಲಾಯಿತು ಮತ್ತು ಪುಷ್ಪಾಲಂಕೃತ ಶೃಂಗಾರಗೊಂಡ ಪಲ್ಲಕ್ಕಿಯಲ್ಲಿ ಶ್ರೀಗಳು, ಹಾಗೂ ಪದ್ಮಾವತಿ ವೆಂಕಟೇಶ್ವರ ಉತ್ಸವ ಏರ್ಪಡಿಸಲಾಗಿತ್ತು. ಕಡೂರು, ಭದ್ರಾವತಿ ಮತ್ತು ಶಿವಮೊಗ್ಗ ಶ್ರೀವೈಷ್ಣವ ಸಭಾದ ಮುಖಂಡರನ್ನು ಗೌರವಿಸಿ ಸನ್ಮಾನಿಸಲಾಯಿತು. ಕೇಂಬ್ರಿಡ್ಜ್ ಶಾಲಾ ಮಕ್ಕಳು ಶ್ರೀ ಯತಿರಾಜ ಸ್ತುತಿಯನ್ನು ಸ್ತುತಿಸಿದರು.

ಕಾರ್ಯಾಧ್ಯಕ್ಷ ಶ್ರೀನಿವಾಸ್, ಎಚ್.ಸಿ.ಗೋಪಾಲಕೃಷ್ಣ, ಡಾ.ಬಿ.ಹೆಚ್.ಕುಮಾರಸ್ವಾಮಿ, ರಮೇಶ್, ಅರ್ಚಕರಾದ ತಿರುಮಲಸ್ವಾಮಿ, ಯತಿರಾಜ, ದೇವಸ್ಥಾನದ ಟ್ರಸ್ಟಿಗಳು, ಭಜನಾ ಮಂಡಳಿ ಮಾತೆಯರು ಭಾಗವಹಿಸಿದ್ದರು.

Share this article