ಅಂಕವೀರರಾಗದೆ ಕೌಶಲ್ಯವಂತರಾಗಿ ಬೆಳವಣಿಗೆ ಸಾಧಿಸಿ: ಪ್ರೊ.ಕೆ.ಶಿವಚಿತ್ತಪ್ಪ

KannadaprabhaNewsNetwork |  
Published : Aug 19, 2026, 01:15 AM IST
೧೮ಕೆಎಂಎನ್‌ಡಿ-೩ಮಾಂಡವ್ಯ ಎಕ್ಸಲೆನ್ಸ್ ಪದವಿ ಪೂರ್ವ ಕಾಲೇಜಿನಲ್ಲಿ ನಡೆದ ನೂತನ ವಿದ್ಯಾರ್ಥಿಗಳ ಸ್ವಾಗತ ಸಮಾರಂಭದಲ್ಲಿ ೨೦೨೫-೨೬ನೇ ಸಾಲಿನಲ್ಲಿ ದ್ವಿತೀಯ ಪಿಯುಸಿಯಲ್ಲಿ ಅತಿ ಹೆಚ್ಚು ಅಂಕ ಪಡೆದ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ನೀಡಿ ಗೌರವಿಸಲಾಯಿತು. | Kannada Prabha

ಸಾರಾಂಶ

ವಿದ್ಯಾರ್ಥಿಗಳು ಸಮಯಕ್ಕೆ ಹೆಚ್ಚಿನ ಮಹತ್ವ ಕೊಡಬೇಕು. ಸಮಯವನ್ನು ವ್ಯರ್ಥ ಮಾಡದೆ ಯಾವುದೇ ಕೆಲಸವನ್ನು ಸರಿಯಾದ ಸಮಯಕ್ಕೆ ಮಾಡಿ ಮುಗಿಸಬೇಕು. ಒಮ್ಮೆ ಕಳೆದುಹೋದ ಸಮಯ ಮತ್ತೆಂದಿಗೂ ಸಿಗುವುದಿಲ್ಲ. ಸಮಯಪ್ರಜ್ಞೆ ಜೀವನದಲ್ಲಿ ಶಿಸ್ತನ್ನು ಬೆಳೆಸುತ್ತದೆ.

ಕನ್ನಡಪ್ರಭ ವಾರ್ತೆ ಮಂಡ್ಯ

ವಿದ್ಯಾರ್ಥಿಗಳು ಕೇವಲ ಪಠ್ಯ ವಿಷಯಗಳನ್ನು ಓದಿ ಅಂಕವೀರರೆನಿಸಿಕೊಂಡರೆ ಪ್ರಯೋಜನವಿಲ್ಲ. ಕೌಶಲ್ಯವಂತರಾಗಿ ಬೆಳವಣಿಗೆ ಸಾಧಿಸಿ ಉನ್ನತ ಹುದ್ದೆಗಳನ್ನ ಅಲಂಕರಿಸಿ ದೇಶಕ್ಕೆ ಕೀರ್ತಿ ತರುವ ಕೆಲಸ ಮಾಡಬೇಕು ಎಂದು ಮಂಡ್ಯ ವಿಶ್ವವಿದ್ಯಾಲಯದ ಕುಲಪತಿ ಪ್ರೊ.ಕೆ.ಶಿವಚಿತ್ತಪ್ಪ ಅವರು ತಿಳಿಸಿದರು.

ನಗರದ ಹೊರವಲಯದ ಜ್ಞಾನಸಾಗರ ಕ್ಯಾಂಪಸ್‌ನಲ್ಲಿರುವ ಎಸ್.ಬಿ.ಇ.ಟಿ.ಸಂಸ್ಥೆಯ ಮಾಂಡವ್ಯ ಎಕ್ಸಲೆನ್ಸ್ ಪದವಿ ಪೂರ್ವ ಕಾಲೇಜಿನಲ್ಲಿ ನಡೆದ ಪ್ರತಿಭಾ ಪುರಸ್ಕಾರ ಹಾಗೂ ನೂತನ ವಿದ್ಯಾರ್ಥಿಗಳ ಸ್ವಾಗತ ಸಮಾರಂಭ ಉದ್ಘಾಟಿಸಿ ಮಾತನಾಡಿದರು.

ವಿದ್ಯಾರ್ಥಿಗಳು ಸಮಯಕ್ಕೆ ಹೆಚ್ಚಿನ ಮಹತ್ವ ಕೊಡಬೇಕು. ಸಮಯವನ್ನು ವ್ಯರ್ಥ ಮಾಡದೆ ಯಾವುದೇ ಕೆಲಸವನ್ನು ಸರಿಯಾದ ಸಮಯಕ್ಕೆ ಮಾಡಿ ಮುಗಿಸಬೇಕು. ಒಮ್ಮೆ ಕಳೆದುಹೋದ ಸಮಯ ಮತ್ತೆಂದಿಗೂ ಸಿಗುವುದಿಲ್ಲ. ಸಮಯಪ್ರಜ್ಞೆ ಜೀವನದಲ್ಲಿ ಶಿಸ್ತನ್ನು ಬೆಳೆಸುತ್ತದೆ ಎಂದು ಸಲಹೆ ನೀಡಿದರು.

ವಿದ್ಯಾರ್ಥಿಗಳು ಬದುಕಿನ ಗುರಿಯನ್ನು ತಲುಪಬೇಕಾದರೆ ಗುರುಗಳ ಮಹತ್ವ ಬಹಳ ಮುಖ್ಯ. ಗುರುವಿನ ಮಾರ್ಗದರ್ಶನದಲ್ಲಿ ನಾವು ನಡೆದಿದ್ದರಿಂದ ಬದುಕಿನಲ್ಲಿ ಸಾಧನೆ ಮಾಡಲು ಸಾಧ್ಯವಾಯಿತು. ಆ ಕಾರಣದಿಂದ ಮಕ್ಕಳು ಗುರುವಿನ ಅರಿವನ್ನು ಅರಿತು ಬದುಕಿನ ಗುರಿಯನ್ನು ತಲುಪುವಂತೆ ತಿಳಿಸಿದರು.

ಶಿಕ್ಷಣ ವಿದ್ಯಾರ್ಥಿ ಜೀವನದ ಸುಭದ್ರ ತಳಹದಿಯಾಗಿದೆ. ಇಂದಿನ ಸ್ಪರ್ಧಾತ್ಮಕ ಯುಗದಲ್ಲಿ ಪೈಪೋಟಿ ಹೆಚ್ಚಿದೆ. ವಿದ್ಯಾರ್ಥಿಗಳು ಐಎಎಸ್, ಐಪಿಎಸ್, ಕೆಎಎಸ್‌ನಂತಹ ಸ್ಪರ್ಧಾತ್ಮಕ ಪರೀಕ್ಷೆಗಳನ್ನು ಎದುರಿಸುವ ಸಾಮರ್ಥ್ಯ ಬೆಳೆಸಿಕೊಳ್ಳಬೇಕು. ಉನ್ನತ ಅಧಿಕಾರಿಗಳಾಗಿ ದೇಶವೇ ಮೆಚ್ಚುವಂತಹ ಕೆಲಸ ಮಾಡಬೇಕೆಂದು ಕಿವಿಮಾತು ಹೇಳಿದರು.

ಇಂದಿನ ಸ್ಪರ್ಧಾತ್ಮಕ ಜಗತ್ತಿನಲ್ಲಿ ವಿದ್ಯಾರ್ಥಿಗಳಿಗೆ ಉತ್ತಮ ಭವಿಷ್ಯ ರೂಪಿಸಿಕೊಳ್ಳಲು ಹಲವಾರು ಅವಕಾಶಗಳಿವೆ. ಆದರೆ, ಅದನ್ನು ಪಡೆದುಕೊಳ್ಳುವತ್ತ ಕಠಿಣ ಪರಿಶ್ರಮ ಮತ್ತು ಸ್ಪರ್ಧಾತ್ಮಕ ಚಿಂತನೆ ಅಗತ್ಯವಿದೆ. ವಿದ್ಯಾರ್ಥಿಗಳು ಯಾವ ಗುರಿ ತಲುಪಬೇಕು ಎನ್ನುವುದನ್ನು ಚಿಕ್ಕಂದಿನಲ್ಲೇ ನಿರ್ಧಾರ ಮಾಡಬೇಕು ಎಂದರು.

ಎಸ್‌ಬಿಇಟಿ. ಕಾರ್ಯದರ್ಶಿ ಡಾ.ಮೀರಾ ಶಿವಲಿಂಗಯ್ಯ ಅವರು ಮಾತನಾಡಿ, ಪ್ರತಿ ವಿದ್ಯಾರ್ಥಿಗಳಲ್ಲೂ ಕಲಿಯಬೇಕು ಎಂಬ ತುಡಿತವಿರುತ್ತದೆ. ಆದ್ದರಿಂದ ನಿಮ್ಮ ಜ್ಞಾನದ ಹಸಿವನ್ನು ಹೆಚ್ಚಿಸಿಕೊಂಡು ಇನ್ನೂ ಉನ್ನತ ಸ್ಥಾನ ಪಡೆಯುವ ಮನಸ್ಥಿತಿಯಲ್ಲಿ ಕಲಿಕೆಯನ್ನು ಮುಂದುವರಿಸಿ ಮತ್ತು ನಿಮ್ಮ ಮೇಲೆ ಪೋಷಕರು ಇಟ್ಟಿರುವ ನಂಬಿಕೆ ಹಾಗೂ ವಿಶ್ವಾಸಕ್ಕೆ ಧಕ್ಕೆಯಾಗದಂತೆ ಜಾಗೃತರಾಗಿರಿ ಎಂದು ಸಲಹೆ ನೀಡಿದರು.

ಅಧ್ಯಕ್ಷತೆ ವಹಿಸಿದ್ದ ಎಸ್‌ಬಿಇಟಿ ಅಧ್ಯಕ್ಷ ಡಾ.ಬಿ.ಶಿವಲಿಂಗಯ್ಯ ಅವರು ವಿದ್ಯಾರ್ಥಿಗಳಿಗೆ ಹಲವಾರು ವಿಷಯಗಳ ಕುರಿತಂತೆ ಸಲಹೆ, ಸೂಚನೆಗಳು ಹಾಗೂ ಮಾರ್ಗದರ್ಶನ ನೀಡಿದರು. ವೇದಿಕೆಯಲ್ಲಿ ಪ್ರಾಂಶುಪಾಲ ಎಚ್.ಎನ್. ಶ್ರೀನಿವಾಸ್, ಶೈಕ್ಷಣಿಕ ಪಾಲುದಾರರಾದ ಚೇತನ್ ಕೃಷ್ಣ, ಎಂ.ಆರ್.ಮಂಜು ಉಪಸ್ಥಿತರಿದ್ದರು.

೨೦೨೫-೨೬ನೇ ಸಾಲಿನಲ್ಲಿ ದ್ವಿತೀಯ ಪಿಯುಸಿಯಲ್ಲಿ ಅತಿ ಹೆಚ್ಚು ಅಂಕ ಪಡೆದು ಕಾಲೇಜಿಗೆ ಕೀರ್ತಿ ತಂದ ವಿದ್ಯಾರ್ಥಿಗಳನ್ನು ಪ್ರತಿಭಾ ಪುರಸ್ಕಾರ ನೀಡಿ ಗೌರವಿಸಲಾಯಿತು. ಕಾರ್ಯಕ್ರಮದ ಬಳಿಕ ವಿದ್ಯಾರ್ಥಿಗಳಿಂದ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆದವು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಸಚಿವ ಬಿ.ನಾಗೇಂದ್ರ ರಾಜೀನಾಮೆಗೆ ಬಿಜೆಪಿ ಆಗ್ರಹ
ಬೀದರಿನಲ್ಲಿ ಗ್ರಾಮ ಪಂಚಾಯಿತಿ ನೌಕರರಿಂದ ಪ್ರತಿಭಟನೆ