ಮಾದಕ ವಸ್ತುಗಳಿಗೆ ಬಲಿಯಾಗದೇ ಉನ್ನತ ಸಾಧನೆ ಮಾಡಿ: ಎಸ್‌ಪಿ ಯಶೋದಾ ವಂಟಗೋಡಿ

KannadaprabhaNewsNetwork |  
Published : Jul 24, 2025, 01:45 AM IST
ಹಾವೇರಿಯ ಜಿ.ಎಚ್. ಕಾಲೇಜಿನ ಸಭಾಂಗಣದಲ್ಲಿ ಆಯೋಜಿಸಿದ್ದ ಮಾದಕ ವಸ್ತುಗಳ ಕುರಿತು ಜಾಗೃತಿ ಕಾರ್ಯಕ್ರಮದಲ್ಲಿ ಎಸ್‌ಪಿ ಯಶೋದಾ ವಂಟಗೋಡಿ ಮಾತನಾಡಿದರು. | Kannada Prabha

ಸಾರಾಂಶ

ವಿದ್ಯಾರ್ಥಿಗಳಲ್ಲಿ ಎಸ್ಸೆಸ್ಸೆಲ್ಸಿಯವರೆಗೆ ಗೊಂದಲ ಇರುತ್ತದೆ. ಪಿಯುಸಿಯಲ್ಲಿ ವಿಷಯಗಳನ್ನು ಆಯ್ಕೆ ಮಾಡಿಕೊಂಡ ಬಳಿಕ ಒಂದು ಹಂತಕ್ಕೆ ಬರುತ್ತಾರೆ. ತಮಗೆ ಯಾವ ವಿಷಯದಲ್ಲಿ ಆಸಕ್ತಿ ಇದೆಯೋ, ಆ ವಿಷಯದಲ್ಲಿ ಪರಿಣತಿ ಹೊಂದಿ ಸಾಧನೆ ಮಾಡಬೇಕು.

ಹಾವೇರಿ: ವಿದ್ಯಾರ್ಥಿಗಳು ಡ್ರಗ್ಸ್‌, ಮದ್ಯ ಸೇವನೆಯಂತಹ ಮಾದಕ ವಸ್ತುಗಳಿಗೆ ಬಲಿಯಾಗದೇ ಜೀವನ ಪರ್ಯಂತ ವ್ಯಸನ ಮುಕ್ತರಾಗಿರಬೇಕು. ಅಂದಾಗ ಮಾತ್ರ ಒಳ್ಳೆಯ ನಾಗರಿಕರಾಗಿ ಉನ್ನತ ಸಾಧನೆ ಮಾಡಲು ಸಾಧ್ಯವಾಗುತ್ತದೆ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಯಶೋದಾ ವಂಟಗೋಡಿ ತಿಳಿಸಿದರು.ನಗರದ ಜಿ.ಎಚ್. ಕಾಲೇಜು ನೂತನ ಸಭಾಂಗಣದಲ್ಲಿ ರಾಷ್ಟ್ರಹಿತ ರಕ್ಷಣಾ ವೇದಿಕೆ ಜಿಲ್ಲಾ ಘಟಕ, ಕೆಎಲ್‌ಇ ಸಂಸ್ಥೆಯ ಜಿ.ಎಚ್. ಕಾಲೇಜು, ಐಕ್ಯುಎಸಿ ವಿಭಾಗದ ಸಹಯೋಗದೊಂದಿಗೆ ಬುಧವಾರ ಆಯೋಜಿಸಿದ್ದ ಡ್ರಗ್ಸ್ ಮುಕ್ತ ಹಾವೇರಿ ಜಿಲ್ಲೆ ಅಭಿಯಾನ ಪ್ರಯುಕ್ತ ಮಾದಕ ವಸ್ತುಗಳ ಕುರಿತು ಜಾಗೃತಿ ಕಾರ್ಯಕ್ರಮದಲ್ಲಿ ಮಾತನಾಡಿದರು.ವಿದ್ಯಾರ್ಥಿಗಳಲ್ಲಿ ಎಸ್ಸೆಸ್ಸೆಲ್ಸಿಯವರೆಗೆ ಗೊಂದಲ ಇರುತ್ತದೆ. ಪಿಯುಸಿಯಲ್ಲಿ ವಿಷಯಗಳನ್ನು ಆಯ್ಕೆ ಮಾಡಿಕೊಂಡ ಬಳಿಕ ಒಂದು ಹಂತಕ್ಕೆ ಬರುತ್ತಾರೆ. ತಮಗೆ ಯಾವ ವಿಷಯದಲ್ಲಿ ಆಸಕ್ತಿ ಇದೆಯೋ, ಆ ವಿಷಯದಲ್ಲಿ ಪರಿಣತಿ ಹೊಂದಿ ಸಾಧನೆ ಮಾಡಬೇಕು. ಕೃಷಿಯನ್ನು ಕಡೆಗಣಿಸದೇ ಕೃಷಿಯಲ್ಲಿಯೂ ಸಾಕಷ್ಟು ಪ್ರಯೋಗ ಮಾಡಿ ಯಶಸ್ವಿ ಜೀವನ ನಡೆಸಬಹುದು. ಸ್ಟೂಡೆಂಟ್ ಲೈಫ್ ಈಸ್ ಗೋಲ್ಡನ್ ಲೈಫ್ ಎಂಬ ಮಾತಿದೆ. ಎಲ್ಲ ಪಾಲಕರು ತಮಗಿಂತ ತಮ್ಮ ಮಕ್ಕಳು ಚೆನ್ನಾಗಿ ಇರಬೇಕು ಅಂತ ಬಯಸುತ್ತಾರೆ. ಮಕ್ಕಳ ಮೇಲೆ ನಂಬಿಕೆ ಇಟ್ಟುಕೊಂಡಿರುತ್ತಾರೆ. ಆ ಪಾಲಕರ ನಂಬಿಕೆಯನ್ನು ಹುಸಿ ಮಾಡಬಾರದು ಎಂದರು.ಬಹಳಷ್ಟು ಯುವಕರೇ ಅಡ್ಡಾದಿಡ್ಡಿಯಾಗಿ ಬೈಕ್ ಚಲಾಯಿಸುತ್ತಾರೆ. ಹೆಲ್ಮೆಟ್ ಇಲ್ಲದೇ ಬೈಕ್ ಓಡಿಸುವುದು ಅಪಾಯ. ಹೆಲ್ಮೆಟ್ ಹಾಕಿ ಓಡಿಸುವುದರ ಜತೆಗೆ ಡ್ರೈವಿಂಗ್ ಲೈಸೆನ್ಸ್ ಮಾಡಿಸಿಕೊಳ್ಳಬೇಕು. ಡ್ರಗ್ಸ್‌ನಲ್ಲಿ ಹಲವಾರು ವಿಧಗಳು ಇವೆ. ಗಾಂಜಾ, ಅಫೀಮು, ಗುಟಕಾ, ಸ್ಮೋಕಿಂಗ್‌ನಂತಹ ದುಶ್ಚಟಗಳ ದಾಸರಾಗದೇ ವ್ಯಸನ ಮುಕ್ತವಾಗಿ ಜೀವನ ನಡೆಸಿದರೆ ಯಶಸ್ಸು ಗಳಿಸಲು ಸಾಧ್ಯವಿದೆ ಎಂದರು. ಸೈಬರ್ ಕ್ರೈಂ ಪೊಲೀಸ್ ಠಾಣೆಯ ಪಿಎಸ್‌ಐ ಶಿವಶಂಕರ ಗಣಾಚಾರಿ ಮಾತನಾಡಿ, ಮದ್ಯಪಾನ, ಧೂಮಪಾನ, ಜಂಕ್‌ಫುಡ್, ಪಾನ್ ಸೇವನೆ, ಚಾಕಲೇಟ್ ತಿನ್ನುವುದು, ಗಾಂಜಾ, ಅಫೀಮು ಸೇವನೆ ಮಾಡುವುದರಿಂದ ಆರೋಗ್ಯ ಹಾಳಾಗುವುದಲ್ಲದೇ ಸಮಾಜದ ಸ್ವಾಸ್ಥ್ಯವೂ ಹಾಳಾಗುತ್ತದೆ. ಇತ್ತೀಚಿನ ದಿನಗಳಲ್ಲಿ ಯುವಕರಷ್ಟೇ ಅಲ್ಲ, ಯುವತಿಯರು ಕೂಡ ಡ್ರಗ್ಸ್ ಚಟಕ್ಕೆ ಬೀಳುತ್ತಿರುವುದು ಅಪಾಯಕಾರಿ ಹಾಗೂ ನೋವಿನ ಸಂಗತಿ ಎಂದರು.ನಶೆ ಮುಕ್ತ ಕರ್ನಾಟಕ ಎನ್ನುವ ಆ್ಯಪ್ ಬಂದಿದ್ದು, ಅದನ್ನು ವಿದ್ಯಾರ್ಥಿಗಳು ಡೌನ್‌ಲೋಡ್ ಮಾಡಿಕೊಳ್ಳಬೇಕು. ರಸ್ತೆಯಲ್ಲಿ ಗಾಂಜಾ ಸೇವನೆ ಮಾರಾಟ, ಡ್ರಗ್ಸ್ ಸೇವನೆ, ಮಾರಾಟದ ಬಗ್ಗೆ ಮಾಹಿತಿ ಇದ್ದರೆ ಫೋಟೋ ತೆಗೆದು ಅಪ್‌ಲೋಡ್ ಮಾಡಿ ಮಾಹಿತಿ ತಿಳಿಸಿದರೆ ತಕ್ಷಣವೇ ಪೊಲೀಸ್ ಇಲಾಖೆ ಕಾರ್ಯಪ್ರವೃತ್ತರಾಗುತ್ತೇವೆ. ಮಾಹಿತಿ ನೀಡಿದವರ ಹೆಸರನ್ನು ಗೌಪ್ಯವಾಗಿ ಇಡುತ್ತೇವೆ. ಈ ಮೂಲಕ ಸಾರ್ವಜನಿಕರು ಹಾಗೂ ವಿದ್ಯಾರ್ಥಿಗಳು ಡ್ರಗ್ಸ್ ನಿಯಂತ್ರಿಸಲು ಸಹಕಾರ ನೀಡಬೇಕು ಎಂದರು. ಕಾರ್ಯಕ್ರಮದಲ್ಲಿ ಕಾಲೇಜಿನ ಪ್ರಾಚಾರ್ಯ ಎಂ.ವಿ. ಹೊಳ್ಳಿಯವರ, ಡಾ. ಉಮಾ ಬಳಿಗಾರ, ಡಾ. ಸಂತೋಷ ಆಲದಕಟ್ಟಿ, ಜಗದೀಶ ಮಲಗೋಡ, ರೂಪಾ ಕೋರೆ, ವಿನಯಕುಮಾರ ತಹಸೀಲ್ದಾರ್ ಇತರರು ಇದ್ದರು.

PREV

Recommended Stories

ಮಹಾಜನ ವರದಿ ಒಪ್ಪಿ, ಇಲ್ಲದಿದ್ರೆ ಯಥಾಸ್ಥಿತಿ ಇರಲಿ
ಸೂರಿಲ್ಲದವರಿಗೆ ಸೂರು ಒದಗಿಸುವ ಸಂಕಲ್ಪ: ವಿಜಯಾನಂದ ಕಾಶಪ್ಪನವರ