
ಕನ್ನಡಪ್ರಭ ವಾರ್ತೆ ತುಮಕೂರು
ನಗರದ ಸಿದ್ಧಗಂಗಾ ತಾಂತ್ರಿಕ ವಿದ್ಯಾಲಯದಲ್ಲಿ ಗುರುವಾರ ನಡೆದ ಮೊದಲ ವರ್ಷದ ಎಂಜಿನಿಯರಿಂಗ್ ವಿದ್ಯಾರ್ಥಿಗಳ ಸ್ವಾಗತ ಸಮಾರಂಭ ಉದ್ಘಾಟಿಸಿ ಮಾತನಾಡಿದರು. ಶಿಕ್ಷಣ ಕೇವಲ ಜ್ಞಾನ ಸಂಪಾದನೆ ಮಾತ್ರವಲ್ಲ ಉತ್ತಮ ವ್ಯಕ್ತಿತ್ವ ರೂಪಿಸುತ್ತದೆ. ಕಾಲೇಜಿನಲ್ಲಿ ದೊರೆಯುವ ಎಲ್ಲಾ ಸೌಲಭ್ಯಗಳನ್ನು ಸದ್ಬಳಕೆ ಮಾಡಿಕೊಂಡು ಉತ್ತಮ ಭವಿಷ್ಯ ರೂಪಿಸಿಕೊಳ್ಳಿ, ಯಾವ ತರಗತಿಗೂ ಗೈರು ಹಾಜರಾಗದೆ ಶ್ರದ್ಧೆಯಿಂದ ಕಲಿಯಿರಿ. ಜೀವನಪೂರ್ತಿ ಕಲಿಕೆ ಉತ್ಸಾಹ ಕಳೆದುಕೊಳ್ಳಬಾರದು. ತರಗತಿಯಲ್ಲಿ ಕಲಿತಿದ್ದನ್ನು ಬದುಕಿನಲ್ಲಿ ಅಳವಡಿಸಿಕೊಳ್ಳಬೇಕು. ತಮ್ಮ ಜ್ಞಾನ ಹಾಗೂ ಕಾರ್ಯ ಸಮಾಜದ ಬೆಳವಣಿಗೆಗೆ ಸಹಕಾರಿಯಾಗಬೇಕು ಎಂದು ಹೇಳಿದರು.
ಮುಖ್ಯ ಅತಿಥಿಯಾಗಿ ಆಗಮಿಸಿದ್ದ ಟಾಟಾ ಕನ್ಸಲ್ಟೆನ್ಸಿ ಸರ್ವಿಸಸ್‌ನ ಟ್ಯಾಲೆಂಟ್ ಅಕ್ವಿಸಿಷನ್ ಮುಖ್ಯಸ್ಥ ಗಿರೀಶ್ ನಂದಿಮಠ ಮಾತನಾಡಿ, ಎಂಜಿನಿಯರಿಂಗ್ ಪ್ರವೇಶದ ಮೂಲಕ ತಂತ್ರಜ್ಞಾನ ಕ್ಷೇತ್ರದ ಪಯಣ ಆರಂಭಿಸಿರುವ ವಿದ್ಯಾರ್ಥಿಗಳು ಕಲಿಕೆ ಜೊತೆಗೆ ಕ್ರಿಯಾಶೀಲತೆ, ತಂತ್ರಜ್ಞಾನ ಕೌಶಲ್ಯ ಬೆಳೆಸಿಕೊಳ್ಳಬೇಕು. ಕೃತಕ ಬುದ್ಧಿಮತ್ತೆ ಉದ್ಯೋಗವನ್ನು ಕಿತ್ತುಕೊಳ್ಳುತ್ತದೆ ಎನ್ನುವುದು ಒಂದು ವರ್ಗ, ಕೃತಕ ಬುದ್ಧಿಮತ್ತೆಯನ್ನು ಬಳಸಿಕೊಂಡು ಉದ್ಯೋಗ ಸೃಷ್ಟಿ ಮಾಡಬಹುದು ಎನ್ನುವುದು ಇನ್ನೊಂದು ವರ್ಗ. ಇದರಲ್ಲಿ ನಿಮ್ಮ ಆಯ್ಕೆ ಯಾವುದೆಂದು ನಿರ್ಧರಿಸಿಕೊಳ್ಳಿ, ಎ.ಐ. ಮೀರಿ ಬೆಳೆಯುವ ಜ್ಞಾನ, ಸಾಮರ್ಥ್ಯ ನಿಮಗೆ ಸಾಧ್ಯವಿಲ್ಲವೆ? ಯಾಕೆ ಸಾಧ್ಯವಿಲ್ಲ ಎಂದು ಪ್ರಶ್ನೆ ಮಾಡಿಕೊಂಡು ಉತ್ತರ ಹುಡುಕಿಕೊಳ್ಳಿ ಎಂದರು.ಎಂಜಿನಿಯರ್‌ಗಳು ಸಮಾಜದ ಶಿಲ್ಪಿಗಳು, ಸಮಾಜದ ಎಲ್ಲಾ ಸಮಸ್ಯೆಗಳಿಗೂ ನೀವೇ ಪರಿಹಾರ ಹುಡುಕಬೇಕು. ಟ್ರಾಫಿಕ್ ಪ್ರಾಬ್ಲಮ್, ಪಲ್ಯೂಷನ್, ನೀರಿನ ಸಮಸ್ಯೆಯಾಗಲಿ ಇನ್ನಾವುದೇ ಸಮಸ್ಯೆಗಳಿಗೆ ಪರಿಹಾರ ಮಾಡುವ ಜ್ಞಾನ, ತಿಳುವಳಿಕೆ ತಂತ್ರಜ್ಞಾನಿಗಳಾದ ಎಂಜಿನಿಯರ್‌ಗಳಲ್ಲಿರುತ್ತದೆ. ನೀವು ಸಮಾಜದ ಸಮಸ್ಯೆಯನ್ನು ತಾಂತ್ರಿಕವಾಗಿ ಬಗೆಹರಿಸುವ ಜವಾಬ್ದಾರರಾಗಬೇಕು. ಪ್ರತಿನಿತ್ಯ ಹೊಸದನ್ನು ಓದುವುದು, ಕಲಿಯುವುದು ನಿಮ್ಮ ನಿರಂತರ ಹವ್ಯಾಸವಾಗಿರಬೇಕು. ಉದ್ಯೋಗ ಪಡೆಯುವುದು ನಿಮ್ಮ ಓದುವಿನ ಆದ್ಯತೆ ಆಗಿರದೆ, ಉದ್ಯೋಗ ಸೃಷ್ಟಿಸುವ ಆದ್ಯತೆ ಆಗಬೇಕು ಎಂದು ಗಿರೀಶ್ ನಂದಿಮಠ ಹೇಳಿದರು.
ಸಮಾರಂಭದ ಅಧ್ಯಕ್ಷತೆವಹಿಸಿದ್ದ ಸಿದ್ಧಗಂಗಾ ಶಿಕ್ಷಣಾ ಸಂಸ್ಥೆ ಕಾರ್ಯದರ್ಶಿ ಟಿ.ಕೆ. ನಂಜುಂಡಪ್ಪ ಮಾತನಾಡಿ, ಭವಿಷ್ಯದ ಕನಸು ಹೊತ್ತು ಸಿದ್ಧಗಂಗಾ ತಾಂತ್ರಿಕ ವಿದ್ಯಾಲಯ ಪ್ರವೇಶ ಮಾಡಿರುವ ನಿಮ್ಮ ಕನಸು ಸಾಕಾರಗೊಳ್ಳಲು ಸಂಸ್ಥೆಯ ಬೋಧಕರು ನಿಮಗೆ ಉತ್ತಮ ಮಾರ್ಗದರ್ಶನ ನೀಡುತ್ತಾರೆ. ಇಲ್ಲಿನ ಸೌಕರ್ಯಗಳನ್ನು ಬಳಸಿಕೊಂಡು ಶ್ರೇಷ್ಠ ಎಂಜಿನಿಯರ್‌ಗಳಾಗಿ ಹೊರಹೊಮ್ಮಬೇಕು. ಡಾ. ಶಿವಕುಮಾರ ಸ್ವಾಮೀಜಿಗಳ ಕಾಯಕ, ದಾಸೋಹದ ಆಶಯದಂತೆ ಸಮಾಜದ ಏಳಿಗೆಗೆ ಶಕ್ತಿಯಾಗಬೇಕು ಎಂದರು.