ಕೃತಕ ಬುದ್ಧಿಮತ್ತೆ, ಡಿಜಿಟಲ್ ಹಾಗೂ ಜೈವಿಕ ತಂತ್ರಜ್ಞಾನದ ಈ ವೇಗದ ಯುಗದಲ್ಲಿ ವಿಶ್ವವಿದ್ಯಾಲಯಗಳು ವಿದ್ಯಾರ್ಥಿಗಳನ್ನು ಕೇವಲ ಇಂದಿನ ಉದ್ಯೋಗಕ್ಕಷ್ಟೇ ಅಲ್ಲದೆ, ನಾಳೆಯ ಸವಾಲುಗಳು ಹಾಗೂ ಅವಕಾಶಗಳನ್ನು ಎದುರಿಸಲು ಸಿದ್ಧಗೊಳಿಸಬೇಕು ಎಂದು ಸಂಸದ ರಾಧಾಕೃಷ್ಣ ದೊಡ್ಡಮನಿ ಹೇಳಿದರು.

ಕನ್ನಡಪ್ರಭ ವಾರ್ತೆ ಕಲಬುರಗಿ

ಕೃತಕ ಬುದ್ಧಿಮತ್ತೆ, ಡಿಜಿಟಲ್ ಹಾಗೂ ಜೈವಿಕ ತಂತ್ರಜ್ಞಾನದ ಈ ವೇಗದ ಯುಗದಲ್ಲಿ ವಿಶ್ವವಿದ್ಯಾಲಯಗಳು ವಿದ್ಯಾರ್ಥಿಗಳನ್ನು ಕೇವಲ ಇಂದಿನ ಉದ್ಯೋಗಕ್ಕಷ್ಟೇ ಅಲ್ಲದೆ, ನಾಳೆಯ ಸವಾಲುಗಳು ಹಾಗೂ ಅವಕಾಶಗಳನ್ನು ಎದುರಿಸಲು ಸಿದ್ಧಗೊಳಿಸಬೇಕು ಎಂದು ಸಂಸದ ರಾಧಾಕೃಷ್ಣ ದೊಡ್ಡಮನಿ ಹೇಳಿದರು.

ಗುರುವಾರ ನಗರದ ಗುಲ್ಬರ್ಗಾ ವಿಶ್ವವಿದ್ಯಾಲಯದ ಡಾ. ಬಿ.‌ಆರ್ ಅಂಬೇಡ್ಕರ್ ಭವನದಲ್ಲಿ ಹಮ್ಮಿಕೊಂಡಿದ್ದ ಗುಲ್ಬರ್ಗಾ ವಿಶ್ವವಿದ್ಯಾಲಯದ 47ನೇ ಸಂಸ್ಥಾಪನಾ ದಿನಾಚರಣೆ ಉದ್ಘಾಟಿಸಿ ಮಾತನಾಡಿದರು.

1970ರಲ್ಲಿ ಧಾರವಾಡದ ಕರ್ನಾಟಕ ವಿಶ್ವವಿದ್ಯಾಲಯದ ಸ್ನಾತಕೋತ್ತರ ಕೇಂದ್ರವಾಗಿ ಆರಂಭಗೊಂಡ ಈ ಸಂಸ್ಥೆಯು, 1980ರಲ್ಲಿ ಪೂರ್ಣ ಪ್ರಮಾಣದ ವಿಶ್ವವಿದ್ಯಾಲಯವಾಗಿ ಬೆಳೆದು ಕಲ್ಯಾಣ ಕರ್ನಾಟಕ ಭಾಗದ ಶೈಕ್ಷಣಿಕ ವಿಕಾಸಕ್ಕೆ ಬಹುದೊಡ್ಡ ಕೊಡುಗೆ ನೀಡಿದೆ. ವಿಶ್ವವಿದ್ಯಾಲಯ 794 ಎಕರೆ ವಿಸ್ತಾರವಾದ ಕ್ಯಾಂಪಸ್ ಹೊಂದಿರುವ ಸಂಸ್ಥೆಯು ಎನ್ಎಸಿಸಿ ನಿಂದ B+ ಗ್ರೇಡ್, ಎನ್ಐಆರ್‌ಎಫ್ ಶ್ರೇಯಾಂಕ 200+, ಐಸಿಎಆರ್‌ಇ ನಿಂದ 4-ಸ್ಟಾರ್ ರೇಟಿಂಗ್ ಹಾಗೂ ಕ್ಯೂಎಸ್ ರ್‍ಯಾಂಕಿಂಗ್‌ನಲ್ಲಿ 601-650 ಶ್ರೇಣಿ ಸಾಧಿಸಿರುವುದನ್ನು ಶ್ಲಾಘಿಸಿದರು.

ಇದೇ ಸಂದರ್ಭದಲ್ಲಿ ಗುಲ್ಬರ್ಗಾ ವಿವಿಯ ಶೈಕ್ಷಣಿಕ ಹಾಗೂ ಆಡಳಿತಾತ್ಮಕ ಕ್ಷೇತ್ರದಲ್ಲಿ ವಿಶಿಷ್ಟ ಸೇವೆ ಸಲ್ಲಿಸಿದ ಬೋಧಕ ಮತ್ತು ಬೋಧಕೇತರ ಸಿಬ್ಬಂದಿ ಹಾಗೂ ನಿವೃತ್ತ ನೌಕರರಿಗೆ ಸನ್ಮಾನಿಸಿ ಗೌರವಿಸಲಾಯಿತು.

ಗುವಿವಿ ಕುಲಪತಿ ಶಶಿಕಾಂತ ಎಸ್. ಉಡಿಕೇರಿ ಅವರು ಮಾತನಾಡಿ, ಶೈಕ್ಷಣಿಕ ವಾತಾವರಣ ಸುಧಾರಿಸಲು ನೂತನ ಕೋರ್ಸ್‌ಗಳು ಹಾಗೂ ಸರ್ಟಿಫಿಕೇಟ್ ಕಾರ್ಯಕ್ರಮಗಳನ್ನು ಪ್ರಾರಂಭಿಸಲಾಗುತ್ತಿದೆ ಎಂದರು.

ಗುವಿವಿ ಸಿಂಡಿಕೇಟ್ ಸದಸ್ಯ ಉದಯಕುಮಾರ ಪಾಟೀಲ, ವಿದ್ಯಾವಿಷಯಕ ಪರಿಷತ್ ಸದಸ್ಯ ಪ್ರೊ. ಹೂವಿನಾಭಾವಿ ಬಾಬಣ್ಣ, ಕುಲಸಚಿವ ಪ್ರೊ. ರಮೇಶ ಲಂಡನಕರ್, (ಮೌಲ್ಯಮಾಪನ) ಕುಲಸಚಿವೆ ಪ್ರೊ. ಅಶ್ವಿನಿ, ವಿತ್ತಾಧಿಕಾರಿ ಜಯಾಂಬಿಕ ಇದ್ದರು.