ಕಲಬುರಗಿ ಜಿಲ್ಲಾ ಕಾಂಗ್ರೆಸ್ ಸಮಿತಿಯ (ಡಿಸಿಸಿ) ನೂತನ ಅಧ್ಯಕ್ಷರಾಗಿ ಇಎನ್‌ಟಿ ಸರ್ಜನ್‌, ಸಚಿವ ಪ್ರಿಯಾಂಕ್‌ ಖರ್ಗೆ ಆಪ್ತ ಡಾ. ಕಿರಣ ದೇಶಮುಖ್ ಅವರನ್ನು ನೇಮಕ ಮಾಡಲಾಗಿದೆ.

ಶೇಷಮೂರ್ತಿ ಅವಧಾನಿ

ಕನ್ನಡಪ್ರಭ ವಾರ್ತೆ ಕಲಬುರಗಿ

ಕಲಬುರಗಿ ಜಿಲ್ಲಾ ಕಾಂಗ್ರೆಸ್ ಸಮಿತಿಯ (ಡಿಸಿಸಿ) ನೂತನ ಅಧ್ಯಕ್ಷರಾಗಿ ಇಎನ್‌ಟಿ ಸರ್ಜನ್‌, ಸಚಿವ ಪ್ರಿಯಾಂಕ್‌ ಖರ್ಗೆ ಆಪ್ತ ಡಾ. ಕಿರಣ ದೇಶಮುಖ್ ಅವರನ್ನು ನೇಮಕ ಮಾಡಲಾಗಿದೆ. ಇದರೊಂದಿಗೆ ಕಲಬುರಗಿ ಜಿಲ್ಲಾ ಕಾಂಗ್ರೆಸ್‌ ಸಂಘಟನೆಯಲ್ಲಿ ಪ್ರಮುಖ, ಜವಾಬ್ದಾರಿಯುತ ಜಿಲ್ಲಾಧ್ಯಕ್ಷ ಸ್ಥಾನದಲ್ಲಿ 9 ವರ್ಷಗಳ ನಂತರ ಹೊಸಮುಖ ಪ್ರತ್ಯಕ್ಷವಾದಂತಾಗಿದೆ. ಜಗದೇವ ಗುತ್ತೇದಾರ್‌ ಜಿಲ್ಲಾಧ್ಯಕ್ಷರಾಗಿ ದಾಖಲೆ: ಕಳೆದ 9 ವರ್ಷಗಳಿಂದ ಓಬಿಸಿ ವರ್ಗದ ಪ್ರಬಲ ನಾಯಕರು, ಅದರಲ್ಲೂ ಈಡಿಗ ಸಮಾಜದ ಪ್ರಮುಖರು, ಪಕ್ಷದ ನಿಷ್ಠಾವಂತ ಕಾಂಗ್ರೆಸ್‌ ಕಾರ್ಯಕರ್ತರಾಗಿದ್ದ ಜಗದೇವ ಗುತ್ತೇದಾರ್‌ ಕಾಳಗಿ ಜಿಲ್ಲಾಧ್ಯಕ್ಷರಾಗಿ ಹೊಣೆ ಹೊತ್ತಿದ್ದರು. ಈಚೆಗೆ ಹೈಕಮಾಂಡ್‌ ಇವರನ್ನು ಎಂಎಲ್ಸಿಯನ್ನಾಗಿ ನೇಮಕ ಮಾಡಿ ಜಿಲ್ಲಾಧ್ಯಕ್ಷಗಿರಿ ಹಾಗೇ ಮುುಂದುವರಿಸಿತ್ತು.

ಹೀಗಾಗಿ ಜಿಲ್ಲಾ ಕಾಂಗ್ರೆಸ್‌ನಲ್ಲಿ ಸಂಘಟನೆಯ ಪ್ರಮುಖ ಸ್ಥಾನವಾಗಿರುವ ಜಿಲ್ಲಾಧ್ಯಕ್ಷ ಹುದ್ದೆಯಲ್ಲಿ ಸುದೀರ್ಘ 9 ವರ್ಷ ಇದ್ದು ಹೊಣೆ ನಿಭಾಯಿಸಿದ ಕೀರ್ತಿ ಜಗದೇವ ಗುತ್ತೇದಾರ್‌ ತಮ್ಮ ಮುಡಿಗೇರಿಸಿಕೊಂಡಿದ್ದಾರೆ. ಜಗದೇವ ಗುತ್ತೇದಾರ್‌ ಪಕ್ಷದಲ್ಲಿ ಬೇರು ಮಟ್ಟದಿಂದ ಕೆಲಸ ಮಾಡುತ್ತ ಜಿಲ್ಲಾಧ್ಯಕ್ಷಗಿರಿವರೆಗೂ ತಲುಪಿದ್ದರು, ಇದಲ್ಲದೆ ಎಐಸಿಸಿ ಅಧ್ಯಕ್ಷ ಡಾ. ಖರ್ಗೆಯವರಿಗೂ ಪರಮಾಪ್ತರಾಗಿದ್ದರು. ಹೀಗಾಗಿ ಜಗದೇವ ಗುತ್ತೇದಾರ್‌ ಅವರಿಗೆ ದೊರಕಿದ್ದ ಜಿಲ್ಲಾಧ್ಯಕ್ಷ ಹುದ್ದೆ ನಿರಂತರ 9 ವರ್ಷಕಾಲ ಹಾಗೇ ಇತ್ತು. ಅದರಂತೆಯೇ ಜಗದೇವ ಗುತ್ತೇದಾರ್‌ ಕೂಡಾ ತಮ್ಮ ಅವಧಿಯಲ್ಲಿ 2 ಅಸೆಂಬ್ಲಿ, 2 ಸಂಸತ್‌ ಚುನಾವಣೆ ಸೇರಿದಂತೆ ಹಲವು ಸಂದರ್ಭಗಳನ್ನು ಸಮರ್ಥವಾಗಿ ನಿಭಾಯಿಸಿದ್ದರಲ್ಲದೆ, ಪಕ್ಷ ಸಂಘಟನೆಗೆ ಸಾಕಷ್ಟು ಶ್ರಮಿಸಿ ಪಕ್ಷದ ಮುಖಂಡರು, ಕಾರ್ಯಕರ್ತರ ಮೆಚ್ಚುಗೆಗೆ ಪಾತ್ರರಾಗಿದ್ದರು.

ಇಎನ್‌ಟಿ ಸರ್ಜನ್‌ ಹೆಗಲೇರಿದ ಹೊಣೆಗಾರಿಕೆ: ಈಗಂತೂ ಎಐಸಿಸಿ ಅಧ್ಯಕ್ಷರಾಗಿರುವ ಡಾ. ಮಲ್ಲಿಕಾರ್ಜುನ ಖರ್ಗೆಯವರು ಕಲಬುರಗಿ ಮೂಲದವರು, ಹೀಗಾಗಿ ಈ ಜಿಲ್ಲಾಧ್ಯಕ್ಷರ ಹೊಣೆಗಾರಿಕೆ ಇನ್ನೂ ಹೆಚ್ಚಿನ ಜವಾಬ್ದಾರಿ, ಹೊಣೆಗಾರಿಕೆಯೊಂದಿಗೆ ನೂತನ ಅಧ್ಯಕ್ಷ ಡಾ. ಕಿರಣ ದೇಶಮುಖ ಹೇಗಲೇರಿದೆ ಎಂಬ ಮಾತುಗಳು ಕೇಳಿ ಬರುತ್ತಿವೆ.

ಹಿಂದಿನ ಅಧ್ಯಕ್ಷ ಜಗದೇವ ಗುತ್ತೇದಾರ್‌ ಇಂಜಿನಿಯರ್‌ ಆಗಿದ್ದರು, ಈಗ ಬಂದಿರುವ ಡಾ. ಕಿರಣ ಇಎನ್‌ಟಿ ಸರ್ಜನ್‌ ಆಗಿರೋದು ವಿಶೇಷ.

ಏತನ್ಮಧ್ಯೆ ಜಿಲ್ಲಾಧ್ಯಕ್ಷ ಸ್ಥಾನದ ಪ್ರಬಲ ಆಕಾಂಕ್ಷಿಯಾಗಿದ್ದ ನೀಲಕಂಠರಾವ ಮೂಲಗೆ, ಶಿವಾನಂದ ಮರ್ತೂರ್‌, ಶರಣಕುಮಾರ್‌ ಮೋದಿ, ಭೀಮಣ್ಣ ಸಾಲಿ ಸೇರಿದಂತೆ ಹಲವರು ಒಳಗೊಳಗೆ ಅಸಮಾಧಾನಿಗಳಾಗಿರೋದು ಸಹಜ, ಇವರೆಲ್ಲರ ಅಸಮಾಧಾನಕ್ಕೆ ಮದ್ದರೆದು, ಎಲ್ಲರನ್ನು ಸೇರಿಸಿಕೊಂಡು ಪಕ್ಷ ಸಂಘಟಿಸುವ ಸವಾಲು ಡಾ. ಕಿರಣ ದೇಶಮುಖ ಮುಂದಿದೆ.

ಕಲಬುರಗಿಯ ಅಸೆಂಬ್ಲಿ ಸ್ಥಾನಗಳಲ್ಲಿ 7ರಲ್ಲಿ ಕಾಂಗ್ರೆಸ್‌ ಶಾಸಕರದ್ದೇ ಅಧಿಕಾರ. ಜಿಲ್ಲೆಯಲ್ಲಿರೋ 7 ಶಾಸಕರಲ್ಲಿ ಮೂವರು ಸಚಿವರು. ಮೂವರು ಸಚಿವರಿದ್ದರೂ ಜಿಲ್ಲೆಯಲ್ಲಿ ಪ್ರಗತಿ ಎಲ್ಲಿ? ಎಂಬ ಪ್ರಶ್ನೆ ತೀವ್ರವಾಗಿ ಚರ್ಚೆಯಲ್ಲಿರುವಾಗಲೇ ಜಿಲ್ಲಾಧ್ಯಕ್ಷರಾಗಿ ಡಾ. ಕಿರಣ ದೇಶಮುಖ ಸಂಘಟನೆಯಲ್ಲಿ ಪ್ರಮುಖ ಪಾತ್ರ ವಹಿಸುವತ್ತ, ಶಕ್ತಿ ಪ್ರದರ್ಶನಕ್ಕೆ ಸಜ್ಜಾಗಬೇಕಿದೆ. ಜಿಲ್ಲೆಯಲ್ಲಿ ಕಾಂಗ್ರೆಸ್‌ ಸಂಘಟನೆಯ ಜೊತೆಗೆ, ಜನರ ಆಶೋತ್ತರಗಳನ್ನು ಆಡಳಿತಾರೂಢ ಕಾಂಗ್ರೆಸ್‌ ಸರ್ಕಾರದ ಸಚಿವರ ಗಮನಕ್ಕೆ ತಂದು ಸಮಯಕ್ಕೆ ಸರಿಯಾಗಿ ಸ್ಪಂದಿಸುವಂತೆ ನೋಡಿಕೊಳ್ಳುವ ಗುರುತರ ಜವಾಬ್ದಾರಿ ನಿಭಾಯಿಸಬೇಕಿದೆ.

ಸರ್ಜನ್‌ ಡಾ. ಕಿರಣ್‌ ದೇಶಮುಖ ಪರಿಚಯ

47 ವರ್ಷದ ಡಾ. ಕಿರಣ್‌ ದೇಶಮುಖ ಅವರು ಆಳಂದ ತಾಲೂಕಿನ ಹಿರೋಳಿಯವರಾಗಿದ್ದು, ಲಿಂಗಾಯಿತರಾಗಿದ್ದಾರೆ. ಎಂಬಿಬಿಎಸ್‌, ಎಂಎಸ್‌ (ಇಎನ್‌ಟಿ) ಮುಗಿಸಿದ್ದಾರೆ. 25 ವರ್ಷದಿಂದ ಕಾಂಗ್ರೆಸ್‌ ಕಾರ್ಯಕರ್ತನಾಗಿ ದುಡಿದ ಅವರು, ಜಿಲ್ಲಾ ಕಾಂಗ್ರೆಸ್‌ ಸಮಿತಿಯ ವಕ್ತಾರರಾಗಿ, ಸಂಘಟನಾ ಕಾರ್ಯದರ್ಶಿಯಾಗಿ, ಕೋವಿಡ್‌ ಟಾಸ್ಕ್‌ ಫೋರ್ಸ್‌ ಜಿಲ್ಲಾಧ್ಯಕ್ಷರಾಗಿ, ಕೆಪಿಸಿಸಿ ಡಾಕ್ಟರ್‌ ಸೆಲ್‌ನ ಉಪಾಧ್ಯಕ್ಷರಾಗಿ, ಲೋಕಸಭಾ ಯೂತ್‌ ಕಾಂಗ್ರೆಸ್‌ ಜನರಲ್‌ ಸೆಕ್ರೆಟರಿ, ಜಿಲ್ಲಾ ಯುವ ಕಾಂಗ್ರೆಸ್‌ನ ಸೆಕ್ರೆಟರಿ, ಜಿಲ್ಲೆ, ರಾಜ್ಯದಲ್ಲಿ ಪಕ್ಷದ ಎನ್‌ಎಸ್‌ಯುಐ ಘಟಕಗಳಲ್ಲಿ ವಿವಿಧ ಜವಾಬ್ದಾರಿ ನಿಭಾಯಿಸಿದ್ದಾರೆ. ಹೈಕಶಿ ಸಂಸ್ಥೆಯ ಆಡಳಿತ ಮಂಡಳಿ ಸದಸ್ಯರು, ಬಸವೇಶ್ವರ ಆಸ್ಪತ್ರೆ ಸಂಚಾಲಕರು, ಶ್ರಾವಸ್ತಿ ಟ್ರಸ್ಟ್‌ ಹಾಗೂ ಕರಿಬಸವೇಶ್ವರ ಟ್ರಸ್ಟ್‌ನ ಅಧ್ಯಕ್ಷರಾಗಿದ್ದಾರೆ.