ಕನ್ನಡಪ್ರಭ ವಾರ್ತೆ ರಾಮನಗರ
ಬಡ-ಮಧ್ಯಮ ವರ್ಗದ ವಿದ್ಯಾರ್ಥಿಗಳು ವೃತ್ತಿಪರ ಕೋರ್ಸ್‌ಗಳ ಪ್ರವೇಶ ಪರೀಕ್ಷೆಗಾಗಿ ತರಬೇತಿ ಪಡೆಯಲು ಖಾಸಗಿ ಕೋಚಿಂಗ್ ಸಂಸ್ಥೆಗಳಲ್ಲಿ ಕೇವಲ ಎರಡು ತಿಂಗಳಿಗೆ ಸಾವಿರದಿಂದ ಲಕ್ಷದವರೆಗೆ ಶುಲ್ಕ ಪಾವತಿಸಬೇಕು. ಇದನ್ನು ಗಮನದಲ್ಲಿಟ್ಟುಕೊಂಡು ವಿದ್ಯಾರ್ಥಿಗಳ ಯಶಸ್ಸಿಗೆ ರಾಮನಗರ ನಗರಸಭೆ 2024-25ನೇ ಸಾಲಿನ ಬಜೆಟ್‌ನಲ್ಲಿ ತರಬೇತಿ ಕಾರ್ಯಕ್ರಮವನ್ನು ಘೋಷಣೆ ಮಾಡಿತು. ಅದರಂತೆ ಉತ್ತಮ ತರಬೇತಿ ನೀಡಿ ಸಮರ್ಥವಾಗಿ ಪರೀಕ್ಷೆ ಎದುರಿಸಲು ನಿಮ್ಮನ್ನು ಅಣಿಗೊಳಿಸಲಾಗಿದೆ ಎಂದರು.ಈ ತರಬೇತಿ ನಗರಸಭೆಯ ಕಡ್ಡಾಯ ಕಾರ್ಯಕ್ರಮವೇನು ಅಲ್ಲ. ಅಕ್ಕ ಅಕಾಡೆಮಿಯ ಡಾ.ಶಿವಕುಮಾರ್ ಅವರನ್ನು ಸಂಪರ್ಕಿಸಿ, ಚರ್ಚಿಸಿ ಅವರು ಸಮ್ಮತಿ ನೀಡಿದ ಬಳಿಕ ಬಜೆಟ್‌ನಲ್ಲಿ ತರಬೇತಿ ಕಾರ್ಯಕ್ರಮವನ್ನು ಘೋಷಣೆ ಮಾಡಿದೇವು. ಆದರೆ, ಅದನ್ನು ಮೀರಿ ಜನಪರವಾಗಿ ಮಾಡಬೇಕಾದ ಕರ್ತವ್ಯ ಎಂದು ಭಾವಿಸಿ ಕಾರ್ಯಕ್ರಮ ರೂಪಿಸಿದ್ದಾಗಿ ಹೇಳಿದರು.ಜನರು ನಗರಸಭೆ ಮೇಲೆ ಭಾರಿ ನಿರೀಕ್ಷೆ ಇಟ್ಟುಕೊಂಡಿದ್ದಾರೆ. ಅವರ ವಿಶ್ವಾಸ ಉಳಿಸಿಕೊಳ್ಳಲು ಈ ಅತ್ಯುತ್ತಮ ಕಾರ್ಯಕ್ರಮ ರೂಪಿಸಿದ್ದೇವೆ. ಉಪಯುಕ್ತವಾದ ತರಬೇತಿ ಕಾರ್ಯಕ್ರಮ ಯಶಸ್ವಿಯಾಗಿ ನಡೆದಿದೆ. ಇದಕ್ಕೆ ನಗರಸಭೆ ಸದಸ್ಯರು ಹಾಗೂ ಅಧಿಕಾರಿಗಳ ಸಹಕಾರ ಮರೆಯುವಂತಿಲ್ಲ ಎಂದು ಕೆ.ಶೇಷಾದ್ರಿ ಗುಣಗಾನ ಮಾಡಿದರು. ಅಕ್ಕ ಅಕಾಡೆಮಿ ನಿರ್ದೇಶಕ ಡಾ.ಶಿವಕುಮಾರ್ ಮಾತನಾಡಿ, ಇಡೀ ರಾಜ್ಯದ ನಗರಸಭೆಗಳಿಗೆ ರಾಮನಗರ ನಗರಸಭೆ ಮಾದರಿಯಾಗಿದೆ. ವಿದ್ಯಾರ್ಥಿಗಳಿಗಾಗಿ ಈ ರೀತಿಯ ತರಬೇತಿ ನೀಡಿರುವುದು ಇದೇ ಮೊದಲು. ಇದರಲ್ಲಿ ನಮ್ಮನ್ನು ಭಾಗಿದಾರರನ್ನಾಗಿ ಮಾಡಿದ್ದು ನಮ್ಮ ಭಾಗ್ಯ ಎಂದು ಹೇಳಿದರು.ವಿದ್ಯಾರ್ಥಿಗಳಿಗೆ ಉತ್ತರ ತರಬೇತಿ ನೀಡುವ ಮೂಲಕ ನ್ಯಾಯ ಒದಗಿಸುವ ಕೆಲಸ ಮಾಡಿದ್ದೇವೆ. ಕರ್ನಾಟಕವು ದಾಸೋಹ ಪರಂಪರೆಗೆ ಹೆಸರು ವಾಸಿ. ಅನ್ನ, ಶಿಕ್ಷಣ ಸೇರಿದಂತೆ ವಿವಿಧ ರೀತಿಯ ದಾಸೋಹದಂತೆ ನಗರಸಭೆಯು ಈ ಉಚಿತ ತರಬೇತಿಯ ಜ್ಞಾನ ವೃದ್ಧಿಯ ದಾಸೋಹ ಹಮ್ಮಿಕೊಂಡಿರುವುದು ಮಾದರಿಯಾಗಿದೆ ಎಂದು ಶ್ಲಾಘಿಸಿದರು. ನಗರಸಭೆ ಆಯುಕ್ತ ಡಾ.ಜಯಣ್ಣ ಮಾತನಾಡಿ, ನಗರಸಭೆ ಯಾವುದೇ ಕೆಲಸ ಮಾಡುವಾಗಲೂ ಸಾರ್ವಜನಿಕ ಅಭಿಪ್ರಾಯ ಸಂಗ್ರಹಿಸುತ್ತೇವೆ. ಆಗ, ವಿದ್ಯಾರ್ಥಿಗಳಿಗೆ ತರಬೇತಿ ನೀಡುವ ಸಲಹೆ ಬಂದಿತು. ಆ ಮೇರೆಗೆ ಇಂತಹದ್ದೊಂದು ತರಬೇತಿ ಕಾರ್ಯಕ್ರಮ ರೂಪುಗೊಂಡಿತು. ವಿದ್ಯಾರ್ಥಿಗಳು ವೃತ್ತಿಪರ ಕೋರ್ಸ್ ಗಳ ಪ್ರವೇಶ ಪರೀಕ್ಷೆಯಲ್ಲಿ ಉತ್ತಮ ಸಾಧನೆ ಮಾಡಿ, ಉತ್ತಮ ಕೋರ್ಸ್ ಗಳಲ್ಲಿ ಸರ್ಕಾರಿ ಸೀಟು ಪಡೆದರೆ ಈ ತರಬೇತಿ ಆಯೋಜನೆ ಸಾರ್ಥಕತೆ ಪಡೆಯಲಿದೆ ಎಂದು ತಿಳಿಸಿದರು.
ನಗರಸಭೆ ಸದಸ್ಯ ಹಾಗೂ ಕಾಲೇಜು ಅಭಿವೃದ್ಧಿ ಉಪಾಧ್ಯಕ್ಷ ಬೈರೇಗೌಡ ಮಾತನಾಡಿ, ನಗರಸಭೆ ಅಧ್ಯಕ್ಷರು ಮತ್ತು ಆಯುಕ್ತರು ವಿದ್ಯಾರ್ಥಿಗಳ ಮೇಲಿನ ಕಾಳಜಿಯಿಂದ ತರಬೇತಿ ಕಾರ್ಯಕ್ರಮ ಪ್ರಾರಂಭಿಸಿದರು. ತರಬೇತಿ ಯಶಸ್ವಿಯಾಗುವಲ್ಲಿ ಎಲ್ಲಾ ಹಂತದಲ್ಲಿ ಅಗತ್ಯ ಸಹಕಾರ ನೀಡಿದ ಕಾಲೇಜಿನ ಪ್ರಾಂಶುಪಾಲರು ಹಾಗೂ ಬೋಧಕರ ನೆರವು ಮರೆಯುವಂತಿಲ್ಲ ಎಂದು ಹೇಳಿದರು.ನಗರಾಭಿವೃದ್ಧಿ ಕೋಶದ ಯೋಜನಾ ನಿರ್ದೇಶಕ ಜಿ.ಡಿ.ಶೇಖರ್, ಕಾಲೇಜಿನ ಪ್ರಾಂಶುಪಾಲ ಕೆ.ಅನ್ಸರ್ ಉಲ್ ಹಕ್ ಮಾತನಾಡಿದರು. ತರಬೇತಿ ಕುರಿತು ವಿದ್ಯಾರ್ಥಿಗಳು ಅಭಿಪ್ರಾಯ ಹಂಚಿಕೊಂಡರು. ಅಣಕು ಸ್ಪರ್ಧಾತ್ಮಕ ಪರೀಕ್ಷೆಯಲ್ಲಿ ಹೆಚ್ಚು ಅಂಕ ಗಳಿಸಿದ ವಿದ್ಯಾರ್ಥಿಗಳಾದ ಸಿಂಚನ ಮತ್ತು ನೂರ್ ಸಿಮ್ರಾನ್ ಅವರಿಗೆ ಗಣ್ಯರು ಬಹುಮಾನ ನೀಡಿದರು. ಅಕಾಡೆಮಿಯ ಸಂಯೋಜಕ ಡಾ.ಬಿ.ಲಕ್ಷ್ಮಣ್ , ತರಬೇತುದಾರ ಡಾ. ಸಂದೀಪ್ , ಕಾಲೇಜಿನ ಉಪನ್ಯಾಸಕರಾದ ಮಹೇಶ್, ಮುತ್ತುರಾಜ್, ಪ್ರದೀಪ್, ವಿಜಯ್ ಇದ್ದರು.