ನರೇಗಾ ಯೋಜನೆಯ ನಿಗದಿತ ಗುರಿ ಸಾಧಿಸಿ: ಈಶ್ವರ ಕಾಂದೂ

KannadaprabhaNewsNetwork |  
Published : Sep 20, 2024, 01:38 AM IST
ಈಶ್ವರ ಕಾಂದೂ ಸಭೆ ನಡೆಸಿದರು  | Kannada Prabha

ಸಾರಾಂಶ

ಮಾನವ ದಿನಗಳ ಸೃಜನೆ ಪ್ರಮಾಣ ಕಡಿಮೆ ಇರುವ ಗ್ರಾಮ ಪಂಚಾಯಿತಿಗಳ ಕಡೆಗೆ ಹೆಚ್ಚಿನ ಗಮನಹರಿಸಬೇಕು. ಕಡಿಮೆ ಮಾನವ ದಿನ ಸೃಜಿಸುವ ಗ್ರಾಮಗಳನ್ನು ಕೇಂದ್ರೀಕರಿಸಿ ಹೆಚ್ಚೆಚ್ಚು ಐಇಸಿ ಕಾರ್ಯಕ್ರಮಗಳನ್ನು ಆಯೋಜಿಸಬೇಕು.

ಕಾರವಾರ:

ಪ್ರಸ್ತುತ ಜಿಲ್ಲೆಯಲ್ಲಿ ಮಳೆಯ ಪ್ರಮಾಣ ಕಡಿಮೆಯಾಗಿದ್ದು, ಎಲ್ಲ ಗ್ರಾಮ ಪಂಚಾಯಿತಿಗಳ ವ್ಯಾಪ್ತಿಯಲ್ಲಿ ನರೇಗಾ ಯೋಜನೆಯ ಪ್ರಗತಿಗೆ ಹೆಚ್ಚು ಒತ್ತು ನೀಡಿ, ನಿಗದಿತ ಗುರಿ ಸಾಧಿಸುವಂತೆ ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಈಶ್ವರ ಕಾಂದೂ ತಿಳಿಸಿದರು.ಬುಧವಾರ ಜಿಪಂ ಸಭಾಂಗಣದಲ್ಲಿ ಮಹಾತ್ಮ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತರಿ ಯೋಜನೆಯಡಿ ಕಾರ್ಯನಿರ್ವಹಿಸುತ್ತಿರುವ ಜಿಲ್ಲೆಯ ಎಲ್ಲ ತಾಲೂಕು ಸಹಾಯಕ ನಿರ್ದೇಶಕರು ಮತ್ತು ತಾಂತ್ರಿಕ ವರ್ಗದವರಿಗೆ ನಡೆದ ಪ್ರಗತಿ ಪರಿಶೀಲನಾ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು.

ಮಾನವ ದಿನಗಳ ಸೃಜನೆ ಪ್ರಮಾಣ ಕಡಿಮೆ ಇರುವ ಗ್ರಾಮ ಪಂಚಾಯಿತಿಗಳ ಕಡೆಗೆ ಹೆಚ್ಚಿನ ಗಮನಹರಿಸಬೇಕು. ಕಡಿಮೆ ಮಾನವ ದಿನ ಸೃಜಿಸುವ ಗ್ರಾಮಗಳನ್ನು ಕೇಂದ್ರೀಕರಿಸಿ ಹೆಚ್ಚೆಚ್ಚು ಐಇಸಿ ಕಾರ್ಯಕ್ರಮಗಳನ್ನು ಆಯೋಜಿಸಬೇಕು. ಆದ್ಯತಾ ಕಾಮಗಾರಿಗಳಾದ ಶಾಲಾ ಕಾಂಪೌಂಡ್, ಶೌಚಾಲಯ, ಆಟದ ಮೈದಾನ, ಕೊಳವೆ ಬಾವಿ ಮರುಪೂರಣ ಘಟಕ ನಿರ್ಮಾಣ ಕಾಮಗಾರಿಗಳನ್ನು ಕೈಗೆತ್ತಿಕೊಂಡು, ಆದಷ್ಟು ಶೀಘ್ರದಲ್ಲಿ ಪೂರ್ಣಗೊಳಿಸಬೇಕು ಎಂದರು.

ಜಿಪಂ ಯೋಜನಾ ನಿರ್ದೇಶಕರು ಕರೀಂ ಅಸಾದಿ, ಎಲ್ಲ ತಾಲೂಕು ಪಂಚಾಯಿತಿಗಳ ಸಹಾಯಕ ನಿರ್ದೇಶಕರು, ಎಡಿಪಿಸಿ ನಾಗರಾಜ್ ನಾಯ್ಕ, ಶಿವಾಜಿ ಬೊಬಲಿ, ಜಿಲ್ಲಾ ಐಇಸಿ ಸಂಯೋಜಕ ಕಿರಣ ಜೋತೆಪ್ಪನವರ, ಎ.ಎಂ. ವಿಘ್ನೇಶ್ ಮತ್ತಿತರರು ಇದ್ದರು.

ಜಲಮೂಲಗಳ ಸಂರಕ್ಷಣೆಗೆ ಜಾಗೃತಿ

ಕಾರವಾರ: ವಿವಿಧ ಇಲಾಖೆಗಳ ಆಶ್ರಯದಲ್ಲಿ ಇತ್ತೀಚೆಗೆ ಅಚವೆ ಗ್ರಾಮ ಪಂಚಾಯಿತಿ ಆವರಣದಲ್ಲಿ ಜಲಮೂಲಗಳ ಸಂರಕ್ಷಣೆ ಮತ್ತು ಜಲಮಾಲಿನ್ಯ ತಡೆಗಟ್ಟುವ ಕುರಿತು ಪರಿಸರ ಜಾಗೃತಿ ಕಾರ್ಯಕ್ರಮ ನಡೆಯಿತು.ಕರ್ನಾಟಕ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿಯ ಪರಿಸರ ಅಧಿಕಾರಿ ಬಿ.ಕೆ. ಸಂತೋಷ ಕಾರ್ಯಕ್ರಮವನ್ನು ಉದ್ಘಾಟಿಸಿ, ಜಲಮೂಲಗಳ ಸಂರಕ್ಷಣೆ ಕುರಿತು ಹಾಗೂ ಜಲಮಾಲಿನ್ಯದಿಂದಾಗುವ ಪರಿಣಾಮಗಳ ಬಗ್ಗೆ ಮಾಹಿತಿಯನ್ನು ನೀಡಿದರು.ಅಚವೆ ಗ್ರಾಮ ಪಂಚಾಯಿತಿ ಅಧ್ಯಕ್ಷ ಬಾಲಚಂದ್ರ ಶೆಟ್ಟಿ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಕರ್ನಾಟಕ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿಯ ಉಪ ಪರಿಸರ ಅಧಿಕಾರಿ ಡಾ. ಗಣಪತಿ ಹೆಗಡೆ, ಅಂಕೋಲಾ ವಲಯ ಅರಣ್ಯಾಧಿಕಾರಿ ಪ್ರಶಾಂತ ಪಟಗಾರ, ಅಚವೆ ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ವಿಠ್ಠಲ ಬಾಂದೇಕರ, ಅಂಕೋಲಾದ ಸಂಗಮ ಸೇವಾ ಸಂಸ್ಥೆ ಬಾಳೆಗುಳಿ ಅಧ್ಯಕ್ಷ ರವೀಂದ್ರ ಎನ್. ಶೆಟ್ಟಿ ಇತರರು ಇದ್ದರು.

PREV

Recommended Stories

ಮಾನಸಿಕ ದೈಹಿಕ ಸದೃಢತೆಗೆ ಕ್ರೀಡೆ ಸಹಕಾರಿ
ಸಭೆಯಲ್ಲಿ ಪುರಸಭೆ ಮಳಿಗೆಗಳ ಹರಾಜಿನ ಗದ್ದಲ