ರಟ್ಟೀಹಳ್ಳಿ: ತಾಲೂಕಿನ ಎಲ್ಲ ಇಲಾಖೆಯವರು ಫೆಬ್ರುವರಿ ಅಂತ್ಯದೊಳಗೆ ಸರ್ಕಾರದ ಎಲ್ಲ ಕಾರ್ಯಕ್ರಮಗಳನ್ನು ಪೂರ್ಣಗೊಳಿಸಿ, ಶೇ. 100ರಷ್ಟು ಆರ್ಥಿಕ ಗುರಿ ತಲುಪಬೇಕು ಎಂದು ಜಿಪಂ ಮುಖ್ಯ ಲೆಕ್ಕಾಧಿಕಾರಿ ಎ. ವಸಂತಕುಮಾರ ಅಧಿಕಾರಿಗಳಿಗೆ ಸೂಚನೆ ನೀಡಿದರು.
ಶಿಕ್ಷಣ ಇಲಾಖೆಯಿಂದ ಪ್ರಾಥಮಿಕ ಶಾಲಾ ಮಕ್ಕಳಿಗೆ ಶೂ-ಸಾಕ್ಸ್ ನೀಡಲು ನಿರ್ದೇಶನ ನೀಡಿದ್ದು, ತಾಲೂಕಿನ ಕೆಲವು ಶಾಲೆಗಳಲ್ಲಿ ಮಕ್ಕಳಿಗೆ ಚಪ್ಪಲಿ ನೀಡಿರುವ ಆರೋಪಗಳು ಕೇಳಿಬಂದಿವೆ. ಅಂತಹ ಶಾಲೆಗಳನ್ನು ಪಟ್ಟಿ ಮಾಡಿ, ಮುಖ್ಯೋಪಾಧ್ಯಾಯರಿಗೆ ಕಾರಣ ಕೇಳಿ ಕ್ರಮ ಕೈಗೋಳ್ಳಲು ಶಿಕ್ಷಣ ಇಲಾಖೆಗೆ ಆದೇಶ ನೀಡಿದರು. ಈ ಹಿಂದೆ ಇದ್ದ ಶಾಲಾ ಅವಧಿಯನ್ನು ಸಂಜೆ 5.30ಕ್ಕೆ ವಿಸ್ತರಣೆ ಮಾಡಿ ಆದೇಶ ನೀಡಿದ್ದರೂ ತಾಲೂಕಿನ ವಿವಿಧ ಶಾಲೆಗಳು ಆದೇಶ ಪಾಲಿಸದೆ 4.30ಕ್ಕೆ ಮೊಟಕುಗೋಳಿಸುತ್ತಿರುವುದು ಗಮನಕ್ಕೆ ಬಂದಿದೆ. ಅಂತಹ ಶಾಲೆಗಳಿಗೆ ಭೇಟಿ ನೀಡಿ ಶಿಕ್ಷಣ ಇಲಾಖೆ ನಿಯಮ ಪಾಲಿಸುವಂತೆ ನೋಡಿಕೊಳ್ಳಬೇಕು ಎಂದರು.
ಪಟ್ಟಣದ ತರಳುಬಾಳು ಬಡಾವಣೆಯ ಅಂಗನವಾಡಿ ಕೇಂದ್ರ 14ರಲ್ಲಿ ಸ್ವಂತ ಕಟ್ಟಡವಿದ್ದು, ಅಲ್ಲಿ ವಿದ್ಯುತ್ ಸಂಪರ್ಕ ಇರದ ಕಾರಣ ಪುಟ್ಟ ಮಕ್ಕಳಿಗೆ ಸಾಕಷ್ಟು ಅನನುಕೂಲವಾಗಿದೆ. ಕಿಟಕಿಯ ಗ್ಲಾಸ್, ಬಾಗಿಲು ಹಾಳಾಗಿದ್ದು, ವಿಷ ಜಂತುಗಳ ಹಾವಳಿ ಹೆಚ್ಚಿದೆ. ಶಿಶು ಅಭಿವೃದ್ಧಿ ಇಲಾಖೆಯ ಅಧಿಕಾರಿಗಳು ಹಾಗೂ ಪಪಂ ಸಹಯೋಗದಲ್ಲಿ ಆದಷ್ಟು ಬೇಗ ಅಂಗನವಾಡಿ ಕೇಂದ್ರಕ್ಕೆ ವಿದ್ಯುತ್ ಸಂಪರ್ಕ ಹಾಗೂ ಮೂಲಭೂತ ಸೌಲಭ್ಯ ಕಲ್ಪಿಸುವಂತೆ ಕ್ರಮ ಕೈಗೊಳ್ಳಲು ಆದೇಶಿಸಿದರು.ಜೆಜೆಎಂ ಕಾಮಗಾರಿಯಿಂದ ಪೈಪ್‍ಲೈನ್‍ಗಾಗಿ ರಸ್ತೆ ಪಕ್ಕದಲ್ಲೇ ಗುಂಡಿಗಳನ್ನು ಅಗೆಯುವ ಕಾರಣ ಗುಣಮಟ್ಟದ ರಸ್ತೆಗಳು ಹಾಳಾಗುತ್ತಿವೆ. ಕಾಮಗಾರಿಯಿಂದ ಸಾರ್ವಜನಿಕರಿಗೆ ಅನನುಕೂಲವಾಗದಂತೆ ಅಧಿಕಾರಿಗಳು ನೋಡಿಕೋಳ್ಳಬೇಕು. ರಸ್ತೆ ಅಭಿವೃದ್ಧಿ ಮತ್ತು ಗುಂಡಿ ಮುಚ್ಚುವ ಕಾರ್ಯವನ್ನು ಆದಷ್ಟು ಬೇಗ ಮುಗಿಸಿ ಎಂದು ಸೂಚಿಸಿದರು.
ಅನ್ನ ಭಾಗ್ಯ ಯೋಜನೆಯ ಅಕ್ಕಿ ಕಾಳಸಂತೆಯಲ್ಲಿ ಮಾರಾಟವಾಗುವ ಬಗ್ಗೆ ದೂರುಗಳು ಬಂದಿವೆ. ಆಹಾರ ಇಲಾಖೆ ಅಧಿಕಾರಿಗಳು ಅಕ್ಕಿ ವಿತರಣೆ ಕೇಂದ್ರಗಳಿಗೆ ಭೇಟಿ ನೀಡಿ ಲೋಪ ಕಂಡು ಬಂದ ಮಾರಾಟ ಕೇಂದ್ರಗಳ ಲೈಸೆನ್ಸ್ ರದ್ದುಪಡಿಸಬೇಕು. ಸಂತೆಯಲ್ಲಿ ಮಾರಾಟವಾಗದಂತೆ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳುವಂತೆ ಸೂಚನೆ ನೀಡಿದರು.ತಾಲೂಕಿನ ಹಳ್ಳೂರ ಗ್ರಾಮದ ಪ್ರಾಥಮಿಕ ಆರೋಗ್ಯ ಕೇಂದ್ರದ ಆಸ್ತಿಯಲ್ಲಿ ಖಾಸಗಿಯವರು ಮನೆ ಕಟ್ಟಿಕೊಂಡಿದ್ದಾರೆ. ಅವರಿಗೆ ಮನೆಯ ಹಕ್ಕುಪತ್ರ ಸಿಗುವ ಹಂತದಲ್ಲಿದೆ. ಆರೋಗ್ಯ ಇಲಾಖೆ ಕಣ್ಣು ಮುಚ್ಚಿ ಕುಳಿತಿದೆ. ನಿಮ್ಮ ಇಲಾಖೆಯ ಆಸ್ತಿ ಕಾಯ್ದುಕೊಳ್ಳುವುದು ನಿಮ್ಮ ಜವಾಬ್ದಾರಿ ಎಂದರು.
ತಾಪಂ ಇಒ ಎನ್. ರವಿಕುಮಾರ, ಸಹಾಯಕ ಲೆಕ್ಕಾಧಿಕಾರಿ ದಿನೇಶ ಹಾಗೂ ಶಿಕ್ಷಣ ಇಲಾಖೆ, ನೀರಾವರಿ, ತೋಟಗಾರಿಕೆ, ಸಮಾಜ ಕಲ್ಯಾಣ, ಅಕ್ಷರ ದಾಸೋಹ, ಶಿಶು ಅಭಿವೃದ್ಧಿ, ಪಶು ಸಂಗೋಪನಾ ಇಲಾಖೆ, ಲೋಕೋಪಯೋಗಿ ಇಲಾಖೆ ಅಧಿಕಾರಿಗಳು ಇದ್ದರು.