ಕನ್ನಡಪ್ರಭ ವಾರ್ತೆ ಮೂಡುಬಿದಿರೆ
ಯಾವುದೇ ಧಾರ್ಮಿಕ ಕ್ಷೇತ್ರದ ಮೂಲ ಸಾನಿಧ್ಯದಲ್ಲಿನ ಶಕ್ತಿ ಅಚಲವಾಗಿರುತ್ತದೆ. ಅದನ್ನು ಭಕ್ತಿ, ಶ್ರದ್ಧೆಯಿಂದ ಮಾತ್ರ ಬದಲಾವಣೆ ಮಾಡಲು ಸಾಧ್ಯ. ನಮ್ಮ ಸಂಕಲ್ಪದಂತೆ ಸಾಧನೆಯಿರುತ್ತದೆ. ಹಾಗಾಗಿ ಸಂಕಲ್ಪ ಶುದ್ಧತೆ, ಬಹಿರಂಗ ಶುದ್ದಿಯ ಜತೆಗೆ ಅಂತರಂಗ ಶುದ್ಧತೆಗೆ ನಾವು ಆದ್ಯತೆ ನೀಡಬೇಕು ಎಂದು ಶ್ರೀ ಕ್ಷೇತ್ರ ಧರ್ಮಸ್ಥಳದ ಧರ್ಮಾಧಿಕಾರಿ ಡಾ.ಡಿ.ವೀರೇಂದ್ರ ಹೆಗ್ಗಡೆ ಹೇಳಿದ್ದಾರೆ.ಶ್ರೀ ಕ್ಷೇತ್ರ ಪುತ್ತಿಗೆ ಮಹತೋಭಾರ ಶ್ರೀ ಸೋಮನಾಥೇಶ್ವರ ದೇವಸ್ಥಾನ ಪುನಃ ಪ್ರತಿಷ್ಠಾಪನೆ, ಅಷ್ಟಬಂಧ ಬ್ರಹ್ಮಕಲಶೋತ್ಸವ ಪ್ರಯುಕ್ತ ಗುರುವಾರ ರಾತ್ರಿ ಧಾರ್ಮಿಕ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ಮಾತನಾಡಿದರು.ದೇವರು ಸರ್ವವ್ಯಾಪಿಯಾಗಿದ್ದರೂ ಅವರನ್ನು ಕಾಣಲು ಸಾಧ್ಯವಿಲ್ಲ. ದೇವಾಲಯಗಳೆಂಬ ಮಾಧ್ಯಮಗಳ ಮೂಲಕ ದೇವರನ್ನು ಕಾಣಬಹುದು. ಭಾರತದಲ್ಲಿ ಆಸ್ತಿಕತೆ, ಧಾರ್ಮಿಕತೆ ನಶಿಸಿದಂತೆ ಕಂಡರೂ ಅದು ಮತ್ತೆ ಇನ್ನಷ್ಟು ಪ್ರಖರವಾಗಿ ಬೆಳಗುತ್ತದೆಎಂದು ಪೇಜಾವರ ಮಠದ ಶ್ರೀ ವಿಶ್ವಪ್ರಸನ್ನ ತೀರ್ಥ ಸ್ವಾಮೀಜಿ ಆಶೀರ್ವಚನದಲ್ಲಿ ಹೇಳಿದರು.
ವಾಸ್ತುತಜ್ಞ ಅವಧಾನಿ ಗುಂಡಿಬೈಲು ಸುಬ್ರಹ್ಮಣ್ಯ ಭಟ್ ಧಾರ್ಮಿಕ ಉಪನ್ಯಾಸ ನೀಡಿ, ದೇವರ ಪೈಕಿ ಸರಳ ಹಾಗೂ ಅಭಿಷೇಕ ಪ್ರಿಯ ರುದ್ರ. ಅವನ ಆರಾಧನೆಯಿಂದ ಸಂತೃಪ್ತಿ ನಮ್ಮದಾಗುತ್ತದೆ ಎಂದರು.ಶಾಸಕ ಉಮಾನಾಥ ಕೋಟ್ಯಾನ್ ಮಾತನಾಡಿ, ದೇವಳವನ್ನು ಸಂಪರ್ಕಿಸುವ ಸಂಪಿಗೆ ರಸ್ತೆ, ಸೇತುವೆ ಅಭಿವೃದ್ಧಿಗೆ 2 ಕೋಟಿ ರು. ಅನುದಾನ ಸರ್ಕಾರದಿಂದ ಸಕಾಲದಲ್ಲಿ ದೊರೆತಿದೆ. ದಾನಿಗಳ ಮೂಲಕ ಸಂಪಿಗೆ ದ್ವಾರವೂ ಪೂರ್ಣಗೊಂಡಿದೆ. ಕುಡುಬಿ ಸಮುದಾಯ ಸಹಿತ 18 ಮಾಗಣೆ 77 ಗ್ರಾಮಗಳ ಕರಸೇವಕರ ಅಭೂತಪೂರ್ವ ಸೇವೆಯಿಂದ ಅಸಾಧ್ಯವೆನಿಸಿದ್ದೆಲ್ಲವೂ ಸಾಧ್ಯವಾಗಿದೆ ಎಂದರು.
ಮಡ್ಮಣ್ಣಾಯ ಟ್ರಸ್ಟ್ ವತಿಯಿಂದ ಭೂದಾನ ಮಾಡಲಾದ ದೇವಳ ಬಳಿ ಇರುವ 60 ಸೆಂಟ್ಸ್ ಜಾಗದ ಪತ್ರವನ್ನು ಉದ್ಯಮಿ ರಾಮದಾಸ್ ಮಡ್ಮಣ್ಣಾಯಕುಂಗೂರು ದೇವಳ ಅನುವಂಶಿಕ ಮೊಕ್ತೇಸರ ಬ್ರಹ್ಮಕಲಶೋತ್ಸವ ಸಮಿತಿ ಅಧ್ಯಕ್ಷ ಕುಲದೀಪ ಎಂ. ಅವರಿಗೆ ಹಸ್ತಾಂತರಿಸಿದರು. ಜೀರ್ಣೋದ್ಧಾರ ಕಾರ್ಯದಲ್ಲಿ ಸಹಕರಿಸಿದ ಪ್ರಮುಖ ದಾನಿಗಳನ್ನು, ಮಹೋತ್ಸವಕ್ಕೆ ಸಹಕರಿಸಿದ ಪ್ರಮುಖರನ್ನು ಗೌರವಿಸಲಾಯಿತು.ಡಿ.ಸುರೇಂದ್ರ ಕುಮಾರ್ ಧರ್ಮಸ್ಥಳ, ಅದಾನಿ ಗ್ರೂಪ್ಸ್ ನ ಕಿಶೋರ್ ಆಳ್ವ, ಪುಲ್ಕೇರಿ ಪಾಂಡುರಂಗ ಎಸ್. ಕಾಮತ್, ಉದ್ಯಮಿಗಳಾದ ಶಶಿಧರ್ ಶೆಟ್ಟಿ ಬರೋಡಾ, ಕೆ.ಶೀಪತಿ ಭಟ್, ಮುಗ್ರೋಡಿ ಸುಧಾಕರ ಶೆಟ್ಟಿ, ಮಾಜಿ ಸಚಿವ ಕೆ.ಅಭಯಚಂದ್ರ ಜೈನ್, ಜಯಶ್ರೀ ಅಮರನಾಥ ಶೆಟ್ಟಿ, ಬ್ರಹ್ಮಕಲಶೋತ್ಸವ ಸಮಿತಿ ಪ್ರಧಾನ ಕಾರ್ಯದರ್ಶಿ ಡಾ.ಎಂ.ಮೋಹನ ಆಳ್ವ, ನ್ಯಾಶನಲ್ ಇನ್ವೆಸ್ಟಿಗೇಶನ್ ಏಜೆನ್ಸಿಯ ಕಾನೂನು ಸಲಹೆಗಾರ ಪ್ರಕಾಶ್ ಶೆಟ್ಟಿ, ದಯಾನಂದ ಶೆಟ್ಟಿ ಕಟ್ಟಣಿಗೆ, ಶಾರದಾ ಶಿಕ್ಷಣ ಸಂಸ್ಥೆ ಅಧ್ಯಕ್ಷ ಎಂ.ಬಿ.ಪುರಾಣಿಕ್, ಕಸಾಪ ದ.ಕ. ಮಾಜಿ ಅಧ್ಯಕ್ಷ ಪ್ರದೀಪ್ ಕುಮಾರ್ ಕಲ್ಕೂರ ಇದ್ದರು.
ಕೃತಜ್ಞತೆಯ ಮಾತುಗಳನ್ನಾಡಿದ ಕುಲದೀಪ ಎಂ., ಎಲ್ಲವೂ ದೇವರ ಇಚ್ಛೆಯಂತೆ ನಡೆದಿದೆ. ಕರ ಸೇವಕರ ಸಹಿತ ಎಲ್ಲರ ಶ್ರಮದಾನ, ದಾನಿಗಳ ನೆರವಿನಿಂದ ಭಗವಂತ ಬೇಕದಾದ್ದನ್ನು ಮಾಡಿಸಿಕೊಂಡಿದ್ಧಾರೆ ಎಂದರು.ಕ.ಸಾ.ಪ. ಮೂಡುಬಿದಿರೆ ತಾಲೂಕು ಅಧ್ಯಕ್ಷ ವೇಣುಗೋಪಾಲ ಶೆಟ್ಟಿ ನಿರೂಪಿಸಿದರು.