ಗಟ್ಟಿ ಗುರಿ ಇದ್ದರೆ ಸಾಧನೆ ಸುಲಭ

KannadaprabhaNewsNetwork |  
Published : Jun 05, 2025, 01:48 AM ISTUpdated : Jun 05, 2025, 01:49 AM IST
2 ರೋಣ 1. ಎಸ್.ಎಸ್.ಎಲ್.ಸಿ ಹಾಗೂ ಪಿಯುಸಿ ನಂತರ ಮುಂದೇನು ನುರಿತ ತಜ್ಞರಿಂದ ಸಲಹೆ ವಿಶೇಷ ಕಾರ್ಯಾಗಾರ ಕಾರ್ಯಕ್ರಮವನ್ನು ಧಾರವಾಡ ಜಿಲ್ಲಾಧಿಕಾರಿ ದಿವ್ಯ ಪ್ರಭು ಉದ್ಘಾಟಿಸಿ ಮಾತನಾಡಿದರು | Kannada Prabha

ಸಾರಾಂಶ

ಸಮಸ್ಯೆ ಎದುರಾದಲ್ಲಿ ಜಿಗುಪ್ಸೆಗೊಳಗಾಗಬಾರದು. ಪರೀಕ್ಷೆಯಲ್ಲಿ ಅನುತ್ತೀರ್ಣರಾದಲ್ಲಿ ಆತ್ಮಹತ್ಯೆ ಮಾಡಿಕೊಳ್ಳಲು ಹೋಗದೇ, ಎದುರಾದ ಸಮಸ್ಯೆಯನ್ನು ಧೈರ್ಯವಾಗಿ ಎದುರಿಸಿ ಮುನ್ನೆಡೆಯಬೇಕು

ರೋಣ: ವಿದ್ಯಾರ್ಥಿಗಳಲ್ಲಿ ಗಟ್ಟಿಯಾದ ಗುರಿ ಇದ್ದರೆ ಮಾತ್ರ ಸಾಧನೆ ಸುಲಭವಾಗುವುದು. ಜತೆಗೆ ಭವಿಷ್ಯದ ಜೀವನ ಸುಂದರಗೊಳ್ಳುವುದು. ಆದ್ದರಿಂದ ವಿದ್ಯಾರ್ಥಿಗಳು ಸತತ ಪರಿಶ್ರಮಿಗಳು, ಸಕಾರಾತ್ಮಕ ಚಿಂತನಾಶೀಲರಾಗಬೇಕು ಎಂದು ಧಾರವಾಡ ಜಿಲ್ಲಾಧಿಕಾರಿ ದಿವ್ಯಪ್ರಭು ಹೇಳಿದರು.

ಪಟ್ಟಣದ ರಾಜೀವಗಾಂಧಿ ಶಿಕ್ಷಣ ಸಂಸ್ಥೆ ಸಭಾಭವನದಲ್ಲಿ ಶ್ರೀ ಆರ್.ಎಸ್. ಪಾಟೀಲ ಪ್ರತಿಷ್ಠಾನ ವತಿಯಿಂದ ಸೋಮವಾರ ನಡೆದ ಎಸ್‌ಎಸ್‌ಎಲ್‌ಸಿ ಹಾಗೂ ಪಿಯುಸಿ ನಂತರ ಮುಂದೇನು? - ನುರಿತ ತಜ್ಞರಿಂದ ಸಲಹೆ ಹಾಗೂ ವಿಶೇಷ ಕಾರ್ಯಾಗಾರ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು. ನಕಾರಾತ್ಮಕತೆ, ಅಸಹಾಯಕತೆ, ಜಿಗುಪ್ಸೆ ಬಿಟ್ಟು, ಸಾಧನೆ ಮಾರ್ಗದತ್ತ ಗಮನಹರಿಸಬೇಕು. ಸದಾ ಸಕಾರಾತ್ಮಕ ಆಲೋಚನೆಗಳನ್ನು ಹೊಂದಬೇಕು. ಮುಂದೇನು ನನ್ನ ಜೀವನ ಎಂಬುದರ ಕುರಿತು ಚಿಂತನೆ ಮಾಡಿಕೊಂಡು, ಭವಿಷ್ಯದ ಜೀವನ ಉಜ್ವಲತೆಗೆ ಯೋಜನೆ ರೂಪಿಸಿಕೊಳ್ಳಬೇಕು. ಜೀವನದಲ್ಲಿ ಛಾಲೆಂಜ್ ಇಟ್ಟಿಕೊಳ್ಳಬೇಕು. ಅಂದಾಗ ಗುರಿ ತಲುಪಲು ಸಾಧ್ಯವಾಗುತ್ತದೆ ಎಂದು ಹೇಳಿದರು.ಆಸೆಗಳು ಇರಬೇಕು, ಅವು ಊಟದಲ್ಲಿನ ಉಪ್ಪಿನಕಾಯಿ ತರಹ ಇರಬೇಕೆ ಹೊರತು, ಅನ್ನದ ತರಹ ಇರಬಾರದು. ಉಪ್ಪಿನಕಾಯಿ ತರಹ ಮನರಂಜನೆ ಇರಬೇಕು. ಊಟದ ತರಹ ಗುರಿ ಹೊಂದಬೇಕು. ಇಂತದ್ದೆ ಸಾಧನೆ ಮಾಡುತ್ತೇನೆ ಎಂಬ ದೃಢವಾದ ಛಲ ಹೊಂದಿರಬೇಕು ಎಂದರು.

ಸಮಸ್ಯೆ ಎದುರಾದಲ್ಲಿ ಜಿಗುಪ್ಸೆಗೊಳಗಾಗಬಾರದು. ಪರೀಕ್ಷೆಯಲ್ಲಿ ಅನುತ್ತೀರ್ಣರಾದಲ್ಲಿ ಆತ್ಮಹತ್ಯೆ ಮಾಡಿಕೊಳ್ಳಲು ಹೋಗದೇ, ಎದುರಾದ ಸಮಸ್ಯೆಯನ್ನು ಧೈರ್ಯವಾಗಿ ಎದುರಿಸಿ ಮುನ್ನೆಡೆಯಬೇಕು. ತಪ್ಪು ದಾರಿಯಲ್ಲಿ ಹೋಗಲು ನೂರಾರು ಚಿಂತನೆ ಮಾಡದೇ ಸರಿದಾರಿಗೆ ಹೋಗಲು ಉತ್ತಮ ಯೋಚನೆ ಮಾಡಬೇಕು. ಈ ದಿಶೆಯಲ್ಲಿ ಪಾಲಕರು ಮಕ್ಕಳಿಗೆ ಸರಿಯಾದ ಮಾರ್ಗದರ್ಶನ ನೀಡಬೇಕು. ಯಾವದೇ ಒಂದು ಹಂತಕ್ಕೆ ತಲುಪಲು ಶಿಕ್ಷಣ ಅತಿ ಮುಖ್ಯವಾಗಿದೆ ಎಂದರು.

ಶಾಸಕ ಜಿ.ಎಸ್. ಪಾಟೀಲ ಮಾತನಾಡಿ, ಗ್ರಾಮೀಣ ಭಾಗದ ಪ್ರತಿಭಾನ್ವಿತ ವಿದ್ಯಾರ್ಥಿಗಳಿಗೆ ಸಹಾಯಕವಾಗಲೆಂದು ಎಸ್‌ಎಸ್‌ಎಲ್‌ಸಿ ಹಾಗೂ ಪಿಯುಸಿ ಆನಂತರ ಮುಂದೇನು ಎಂಬ ಕಾರ್ಯಕ್ರಮವನ್ನು ಎಸ್.ಆರ್. ಪಾಟೀಲ ಪ್ರತಿಷ್ಠಾನದಿಂದ ಏರ್ಪಡಿಸಲಾಗಿದೆ. ಬದುಕನ್ನು ಸುಂದರವಾಗಿ ಕಟ್ಟಿಕೊಳ್ಳಲು ವಿದ್ಯಾರ್ಥಿ ದಿಶೆಯಿಂದಲೇ ಯಾವ ರೀತಿಯಾಗಿ ಶ್ರಮಿಸಬೇಕು, ಸಾಧನೆಯ ಆಯ್ಕೆ ಹೇಗಿರಬೇಕು ಎಂಬ ಕುರಿತು ನುರಿತ ತಜ್ಞರಿಂದ ಸಲಹೆ, ಉಪನ್ಯಾಸ ನೀಡಲಾಗುವುದು ಎಂದರು.

ನರೇಗಲ್ಲ ಅನ್ನದಾನೇಶ್ವರ ಪಿಯು ಕಾಲೇಜು ಪ್ರಾಚಾರ್ಯ ವೈ.ಸಿ. ಪಾಟೀಲ ಮಾತನಾಡಿ, ಸಕಾರಾತ್ಮಕ ಆಲೋಚನೆಗಳಿದ್ದಲ್ಲಿ ಜೀವನದಲ್ಲಿ ಯಶಸ್ಸು ಸಾಧಿಸಬಹುದು. ಮಕ್ಕಳಲ್ಲಿ ಸ್ಪರ್ಧಾತ್ಮಕ ಮನೋಭಾವ ಬೆಳೆಸಿಕೊಳ್ಳಬೇಕು. ಸಮಯವನ್ನು ಅನಗತ್ಯ ಹರಟೆ, ಮೋಜು, ಮಸ್ತಿಗೆ ವ್ಯರ್ಥ ಮಾಡದೇ, ಭವಿಷ್ಯದಲ್ಲಿ ಸುಂದರವಾಗಿ ಜೀವನ ಕಟ್ಟಿಕೊಳ್ಳಲು ವಿದ್ಯಾರ್ಥಿ ಘಟ್ಟದಿಂದಲೇ ಶ್ರಮಿಸಬೇಕು ಎಂದರು.

ಸಾಧನಾ ಆಕಾಡೆಮಿಯ ಬಿ. ಮಂಜುನಾಥ ಹಾಗೂ ಜಿಎಸ್‌ಟಿ ಸಹಾಯಕ ಆಯುಕ್ತ ಅಶೋಕ ಎಂ. ಮಿರ್ಜಿ ಅವರಿಂದ ವಿದ್ಯಾರ್ಥಿಗಳಿಗೆ ಸಲಹೆ ಹಾಗೂ ವಿಶೇಷ ಉಪನ್ಯಾಸ ಜರುಗಿತು. ಶೇ. 90ರಷ್ಟು ಅಂಕ ಗಳಿಸಿದ ಎಸ್‌ಎಸ್‌ಎಲ್‌ಸಿ ಹಾಗೂ ಪಿಯುಸಿ ವಿದ್ಯಾರ್ಥಿಗಳನ್ನು ಸನ್ಮಾನಿಸಲಾಯಿತು.

ಕೆಸಿಸಿ ಬ್ಯಾಂಕ್‌ ಮಾಜಿ ಅಧ್ಯಕ್ಷ ಐ.ಎಸ್. ಪಾಟೀಲ, ಬಿ.ಎಫ್. ಚೇಗರಡ್ಡಿ, ಕೆ.ಬಿ. ಹರ್ಲಾಪುರ, ಡಾ. ಐ.ಬಿ. ಕೊಟ್ಟೂರಶೆಟ್ಟಿ ಉಪಸ್ಥಿತರಿದ್ದರು. ಉಪನ್ಯಾಸ ಎಸ್.ಎಸ್. ಗೋದಿ ಸ್ವಾಗತಿಸಿ, ಕಾರ್ಯಕ್ರಮ ನಿರೂಪಿಸಿದರು. ಡಾ. ಶಶಿಕಲಾ ಬಾಣಿ ವಂದಿಸಿದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಸಹಕಾರದಿಂದ ಸಮೃದ್ಧಿ - ಸಹಕಾರ ಭಾರತಿಯಿಂದ ಸಹಕಾರ ಕ್ಷೇತ್ರದ ಬಲವರ್ಧನೆ
ದ್ವೇಷಭಾಷಣ ಬಿಲ್‌ಗೆ ಸಹಿ ಬೇಡ : ಗೌರ್ನರ್‌ಗೆ ಬಿಜೆಪಿ