ಮಹಿಳೆಯರು ಶೈಕ್ಷಣಿಕ ಅಭಿವೃದ್ಧಿ ಹೊಂದಿದರೆ ಸಾಧನೆ ಸಾಧ್ಯವಿದೆ ಎಂದು ಅಂತಾರಾಷ್ಟ್ರೀಯ ಮಹಿಳಾ ದಿನಾಚರಣೆಯನ್ನು ಉದ್ಘಾಟಿಸಿ ವರ್ಷ ಶ್ರೀಕಂಠಸ್ವಾಮಿ ಅಭಿಪ್ರಾಯಪಟ್ಟರು.ಕನ್ನಡಪ್ರಭ ವಾರ್ತೆ ತಿಪಟೂರು
ಮಹಿಳೆಯರು ಶೈಕ್ಷಣಿಕವಾಗಿ ಅಭಿವೃದ್ಧಿ ಹೊಂದಿದಾಗ ಮಾತ್ರ ಸಾಧನೆ ಸಾಧ್ಯವಿದ್ದು, ಈ ನಿಟ್ಟಿನಲ್ಲಿ ಸವಾಲುಗಳು ಬಂದರೂ ಹಿಂಜರಿಯದೆ ಮೆಟ್ಟಿನಿಂತು ಶಿಕ್ಷಣ ಪಡೆಯಬೇಕು ಹಾಗೂ ಸಾಧಿಸುವ ಛಲ ಮೈಗೂಡಿಸಿಕೊಳ್ಳಬೇಕೆಂದು ಚಾಮರಾಜನಗರದ ಆಕೃತಿ ಪರಿಸರ ಸ್ನೇಹಿ ಉದ್ಯಮದ ವರ್ಷ ಶ್ರೀಕಂಠಸ್ವಾಮಿ ತಿಳಿಸಿದರು.ನಗರದ ಶ್ರೀ ಸತ್ಯಗಣಪತಿ ಆಸ್ಥಾನ ಮಂಟಪದಲ್ಲಿ ಕಲ್ಪತರು ಮಹಿಳಾ ಸಂಸ್ಥೆ ವತಿಯಿಂದ ಆಯೋಜಿಸಿದ್ದ ಅಂತಾರಾಷ್ಟ್ರೀಯ ಮಹಿಳಾ ದಿನಾಚರಣೆಯನ್ನು ಉದ್ಘಾಟಿಸಿ ಮಾತನಾಡಿದ ಅವರು, ಮಹಿಳೆ ಸಂಕುಚಿತ ಮನೋಭಾವದಿಂದ ಹೊರಬಂದು ಆತ್ಮಸ್ಥೈರ್ಯ ಹಾಗೂ ಪ್ರಶ್ನಿಸುವ ಗುಣಗಳನ್ನು ಬೆಳೆಸಿಕೊಂಡಾಗ ಮಾತ್ರ ಆತ್ಮವಿಶ್ವಾಸದಿಂದ ಬದುಕು ನಡೆಸಬಹುದು. ಉತ್ತಮ ಸಮಾಜ ನಿರ್ಮಾಣವಾಗಬೇಕಾದರೆ ಗಂಡು ಮತ್ತು ಹೆಣ್ಣು ಸಮಾನ ರೀತಿಯಲ್ಲಿ ನಡೆದುಕೊಂಡು ಹೋಗಬೇಕು ಎಂದರು.ಉದ್ಯಮದಲ್ಲಿಯೂ ಮಹಿಳೆಯರಿಗೆ ಕೆಲಸ ಕೊಟ್ಟ ತೃಪ್ತಿ ನನಗಿದೆ. ನಮ್ಮ ಉದ್ಯಮದಲ್ಲಿ ಬಾಳೆ ನಾರಿನಿಂದ ಚಾಪೆ, ಮ್ಯಾಟ್, ಪೇಪರ್, ಬುಟ್ಟಿಗಳನ್ನು ತಯಾರಿಸಲಾಗುತ್ತದೆ. ಅಲ್ಲದೆ ಬಾಳೆ ದಿಂಡಿನಿಂದ ಉಪ್ಪಿನಕಾಯಿ, ಚಟ್ನಿ ಪೌಂಡರ್ ಹೀಗೆ ಅನೇಕ ಉಪಯೋಗಕಾರಿ ವಸ್ತುಗಳನ್ನು ತಯಾರಿಸಿ ಮಾರಾಟ ಮಾಡಲಾಗುತ್ತಿದೆ. ಮಹಿಳೆ ಸ್ವಾವಲಂಬಿಗಳಾಗಿ ತಮ್ಮ ಬದುಕನ್ನು ತಾವೇ ರೂಪಿಸಿಕೊಳ್ಳಬೇಕೆಂದರು.
ನಗರಸಭೆ ಸದಸ್ಯೆ ಮೇಘಶ್ರೀ ಸುಜಿತ್ ಭೂಷಣ್ ಮಾತನಾಡಿ, ಹಿಂದಿನಿಂದಲೂ ಹೆಣ್ಣಿಗೆ ಪೂಜ್ಯನೀಯ ಸ್ಥಾನ ಕಲ್ಪಿಸಲಾಗಿದ್ದು, ಪುರಾಣದಲ್ಲಿ ಹೆಣ್ಣನ್ನು ಭೂಮಿಗೆ ಹೋಲಿಸಲಾಗಿದೆ. ಮಹಿಳೆಗೆ ಸಮಾಜದ ಬೆಂಬಲ ಅವಶ್ಯಕವಾಗಿದ್ದು, ಬಸ್ ಚಾಲಕಿಯಿಂದಿಡಿದು ದೇಶ ಕಾಯುವ ಅಧಿಕಾರಿಯಾಗಿಯೂ ಕೆಲಸ ಮಾಡುತ್ತಿದ್ದಾಳೆ. ಇಂದಿಗೂ ಮಹಿಳೆಯರ ಮೇಲೆ ದೌರ್ಜನ್ಯ, ಹೆಣ್ಣು ಭ್ರೂಣ ಹತ್ಯೆ, ಅತ್ಯಾಚಾರ ಪ್ರಕರಣಗಳು ನಡೆಯುತ್ತಿದ್ದು ಇವೆಲ್ಲವನ್ನೂ ಧೈರ್ಯವಾಗಿ ನಿಂತು ಹೋರಾಟ ಮಾಡಿ ಸಮಾಜಕ್ಕೆ ಹೆಣ್ಣಿನ ಪ್ರಾಮುಖ್ಯತೆ ಏನು ಎಂಬ ಅರಿವು ಮೂಡಿಸಬೇಕು. ಸರ್ಕಾರಗಳು ಸಹ ಮಹಿಳೆಯರಿಗಾಗಿ ವಿಶೇಷ ಯೋಜನೆಗಳನ್ನು ಜಾರಿಗೆ ತಂದಿವೆ. ಅಲ್ಲದೆ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ, ಸ್ತ್ರೀಶಕ್ತಿ ಸಂಘಗಳು ಸಹ ಮಹಿಳೆಯರ ಆರ್ಥಿಕಾಭಿವೃದ್ಧಿಗೆ ಹೆಚ್ಚು ಮಹತ್ವ ನೀಡುವ ಮೂಲಕ ಪುರುಷ ಪ್ರಧಾನ ಸಮಾಜದಲ್ಲಿ ತನ್ನ ಸ್ಥಾನಮಾನ ಗುರ್ತಿಸಿಕೊಳ್ಳಲು ಸಹಕಾರಿಯಾಗಿವೆ ಎಂದರು.ಕಲ್ಪತರು ಮಹಿಳಾ ಸಂಸ್ಥೆ ಅಧ್ಯಕ್ಷೆ ಸಾವಿತ್ರಿ ಸ್ವಾಮಿ ಮಾತನಾಡಿ, ಹೆಣ್ಣು ಮಕ್ಕಳು ಎನ್ನುವ ಕೀಳರಿಮೆಯನ್ನು ದೂರವಿಟ್ಟು ಸ್ವಾಭಿಮಾನ ಹಾಗೂ ಆತ್ಮಗೌರವಕ್ಕೆ ಧಕ್ಕೆ ಬಾರದಂತೆ ಸಾಧಿಸುವ ಛಲ ಇರಬೇಕು ಎಂದರು. ಈ ಸಂದರ್ಭದಲ್ಲಿ ಜಾನಪದ ಗೀತೆಗಳ ಸ್ಪರ್ಧೆ ಮತ್ತು ಹಳೆಯ ಕನ್ನಡ ಚಿತ್ರಗೀತೆಗಳ ಸ್ಪರ್ಧೆಗಳನ್ನು ಏರ್ಪಡಿಸಿ ವಿಜೇತರಿಗೆ ಬಹುಮಾನ ವಿತರಣೆ ಮಾಡಲಾಯಿತು. ಕಾರ್ಯಕ್ರಮದಲ್ಲಿ ಸಂಸ್ಥೆಯ ಉಪಾಧ್ಯಕ್ಷೆ ಸುಷ್ಮಾ, ಖಜಾಂಚಿ ಸರೋಜ, ನಾಗರತ್ನ, ಕಾರ್ಯದರ್ಶಿಗಳಾದ ಸುಧಾ, ಉಮಾ ನಾರಾಯಣಗೌಡ, ಪ್ರಭಾ ವಿಶ್ವನಾಥ್, ಸ್ವರ್ಣಗೌರಿ, ರೇಖಾ ಅನೂಪ್, ರೇವತಿ, ಆಶಾ ಸೇರಿದಂತೆ ಸಂಸ್ಥೆಯ ಎಲ್ಲಾ ಪದಾಧಿಕಾರಿಗಳು, ನಿರ್ದೇಶಕರು, ಮಾಜಿ ಅಧ್ಯಕ್ಷರು ಭಾಗವಹಿಸಿದ್ದರು.