ಶ್ರೀರಾಮಸೇವಾ ಪ್ರಾಥಮಿಕ ಸಹಕಾರಿ ಕೃಷಿ - ಗ್ರಾಮೀಣ ಅಭಿವೃದ್ಧಿ ಬ್ಯಾಂಕ್‌ನಲ್ಲಿ ಶ್ರೀರಾಮ ಮೂರ್ತಿ ಅನಾವರಣ,
ಕನ್ನಡಪ್ರಭ ವಾರ್ತೆ, ಕೊಪ್ಪಬ್ಯಾಂಕಿನ ಆಡಳಿತ ಮಂಡಳಿ, ನಿರ್ದೇಶಕರು ಮತ್ತು ಸದಸ್ಯರಲ್ಲಿರುವ ಪರಸ್ಪರ ಒಗ್ಗಟ್ಟಿನ ಮನೋಭಾವ ಕರಿಮನೆ ಭೂ ಬ್ಯಾಂಕ್‌ನ ಏಳಿಗೆಗೆ ಕಾರಣವಾಗಿದೆ. ಪರಸ್ಪರ ಭಾವನಾತ್ಮಕ ಸಂಬಂಧ ಇದ್ದಾಗ ಮಾತ್ರ ಸಂಸ್ಥೆ ಅಭಿವೃದ್ಧಿ ಸಾಧ್ಯ ಎನ್ನುವುದನ್ನು ಬ್ಯಾಂಕ್ ಸಾಬೀತು ಪಡಿಸಿದೆ ಎಂದು ಶೃಂಗೇರಿ ಕ್ಷೇತ್ರದ ಶಾಸಕ ಹಾಗೂ ಕೆ.ಆರ್.ಡಿ.ಇ.ಎಲ್. ಅಧ್ಯಕ್ಷ ಟಿ.ಡಿ.ರಾಜೇಗೌಡ ಹೇಳಿದರು.ತಾಲೂಕಿನ ಲೋಕನಾಥಪುರದ ಕರಿಮನೆ ಶ್ರೀರಾಮಸೇವಾ ಪ್ರಾಥಮಿಕ ಸಹಕಾರಿ ಕೃಷಿ ಮತ್ತು ಗ್ರಾಮೀಣ ಅಭಿವೃದ್ಧಿ ಬ್ಯಾಂಕ್‌ನಲ್ಲಿ ಏರ್ಪಡಿಸಿದ್ದ ಶ್ರೀರಾಮ ಮೂರ್ತಿ ಅನಾವರಣ, ಬ್ಯಾಂಕ್‌ನ ನವೀಕೃತ ಕಟ್ಟಡ, ವಿಸ್ತೃತ ಭೋಜನಾಲಯ ಉದ್ಘಾಟನೆ, ಡಾ.ಬಿ.ಎಸ್.ವಿಶ್ವನಾಥನ್ ಅಮೃತ ಮಹೋತ್ಸವ ಸಭಾಂಗಣ ಉದ್ಘಾಟನಾ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿದರು. ಪ್ರಸ್ತುತ ಬ್ಯಾಂಕ್ ೧.೨೪ ಕೋಟಿ ರು. ಲಾಭ ಗಳಿಸಿದೆ. ಸರಕಾರ ಈಗಾಗಲೇ ಶೂನ್ಯ ಬಡ್ಡಿದರದ ಬೆಳೆ ಸಾಲದ ಮಿತಿಯನ್ನು ೫ ಲಕ್ಷಕ್ಕೆ ಏರಿಸಿದೆ. ಕೃಷಿ ಚಟುವಟಿಕೆಗೆ ಶೇ.೪ರ ಬಡ್ಡಿ ದರದಲ್ಲಿ ೭ ಲಕ್ಷ ರು.ವರೆಗೆ ಸಾಲ ನೀಡ ಲಾಗುತ್ತಿದ್ದು ರೈತರು ಸದುಪಯೋಗ ಪಡೆದುಕೊಳ್ಳಬೇಕು ಎಂದ ಅವರು ಕಾಂಗ್ರೆಸ್ ಸರ್ಕಾರ ತನ್ನ ಅಧಿಕಾರವಧಿಯಲ್ಲಿ ರೈತರು ಮತ್ತು ಜನಸಾಮಾನ್ಯರ ಹಿತ ಕಾಯುವ ಕೆಲಸ ಮಾಡುತ್ತಿದೆ. ಮನಮೋಹನ್ ಸಿಂಗ್ ಅವಧಿಯಲ್ಲಿ ಬಡ್ಡಿ ಮನ್ನಾದ ಸವಲತ್ತುಗಳನ್ನು ನೀಡಲಾಯಿತು. ವೈದ್ಯನಾಥನ್ ವರದಿಯಂತೆ ನಷ್ಟ ಹೊಂದಿದ ಬ್ಯಾಂಕ್‌ಗಳಿಗೆ ಸಹಾಯ ಧನ ನೀಡ ಲಾಗಿತ್ತು. ಇದರಿಂದಾಗಿ ನಷ್ಟದಲ್ಲಿದ್ದ ಅನೇಕ ಬ್ಯಾಂಕ್‌ಗಳು ಲಾಭದತ್ತ ಮುಖ ಮಾಡಲು ಸಾಧ್ಯವಾಗಿದೆ ಎಂದರು.
ಬ್ಯಾಂಕಿನ ವಿಷಯ ಪರಿಣಿತ ನಿರ್ದೇಶಕ ಎಚ್.ಎಂ. ನಟರಾಜ್ ಮಾತನಾಡಿ ೧೯೩೦ರಲ್ಲಿ ಆರಂಭಗೊಂಡ ಕರಿಮನೆ ಭೂ ಬ್ಯಾಂಕ್ ಉತ್ತಮವಾಗಿ ಕಾರ್ಯಾಚರಿಸುತ್ತಿದ್ದು ಹಿಂದೆ ನಷ್ಟಕ್ಕೆ ಸಿಲುಕಿತ್ತು. ಸ್ವಂತ ಬಂಡವಾಳ ಯೋಜನೆ ಬ್ಯಾಂಕಿನ ಏಳಿಗೆಗೆ ಕಾರಣವಾಗಿದೆ. ರೈತರಿಗೆ ಬೇಕಾದ ಗೊಬ್ಬರ ಮತ್ತು ಕೃಷಿ ವಸ್ತುಗಳ ಮಾರಾಟ ಕೈ ಹಿಡಿದಿದ್ದು ನಷ್ಟದಲ್ಲಿದ್ದ ಬ್ಯಾಂಕ್ ಲಾಭದಾಯಕವಾಗಿ ನಡೆಯುವಂತಾಗಿದೆ. ಆಡಳಿತ ಮಂಡಳಿ ಹಾಗೂ ಸದಸ್ಯರ ನಡುವಿನ ಬಾಂಧವ್ಯ, ಪ್ರೋತ್ಸಾಹ, ಸಹಕಾರ ಹೀಗೆ ಇರಲಿ ಎಂದರು.ಶಾಸಕರು ವಿಸ್ತ್ರತ ಭೋಜನಾಲಯ, ನವೀಕೃತ ಕಟ್ಟಡ, ಕಾಸ್ಕಾರ್ಡ್ ಬ್ಯಾಂಕ್ ಅಧ್ಯಕ್ಷ ಕೆ.ಷಡಕ್ಷರಿ ಅವರು ನವೀಕೃತ ಡಾ. ಬಿ.ಎಸ್.ವಿಶ್ವನಾಥನ್ ಅಮೃತ ಮಹೋತ್ಸವ ಸಭಾಂಗಣವನ್ನು ಉದ್ಘಾಟಿಸಿದರು. ಸಹಕಾರ ಇಲಾಖೆ ಪದನಿಮಿತ್ತ ಜಂಟಿ ಕಾರ್ಯದರ್ಶಿ ಎ.ಸಿ.ದಿವಾಕರ್, ‘ಶತಮಾನೋತ್ಸವದತ್ತ ನಮ್ಮ ಬ್ಯಾಂಕ್ ಸಾರ್ಥಕ ನೆನಪು’ ಪುಸ್ತಕ ಬಿಡುಗಡೆ ಮಾಡಿದರು.ಅತೀ ಹೆಚ್ಚು ಇಪ್ಕೋ ರಸಗೊಬ್ಬರ ಖರೀದಿ ಮಾಡಿದವರಿಗೆ ನೆನಪಿನ ಕಾಣಿಕೆ ನೀಡಲಾಯಿತು. ಬ್ಯಾಂಕ್ ಅಧ್ಯಕ್ಷ ಎನ್.ಟಿ. ಗೋಪಾಲಕೃಷ್ಣ, ಕಾಸ್ಕಾರ್ಡ್ ಬ್ಯಾಂಕ್ ಜಿಲ್ಲಾ ನಿರ್ದೇಶಕ ಈ.ಆರ್. ಮಹೇಶ್, ಎಲ್ಲ ನಿದೇಶಕರು, ಸಹಕಾರಿಗಳಾದ ಹಳಸೆ ಶಿವಣ್ಣ, ಡಿ.ಬಿ.ರಾಜೇಂದ್ರ, ಇನೇಶ್, ಎಚ್.ಎಂ.ಸತೀಶ್, ಲಕ್ಷ್ಮೀನಾರಾಯಣ್ ಇತರರಿದ್ದರು.