
ಕನ್ನಡಪ್ರಭ ವಾರ್ತೆ ಮಡಿಕೇರಿ
ಶನಿವಾರಸಂತೆ ಶ್ರೀ ವೆಂಕಟೇಶ್ವರ ಕಲ್ಯಾಣ ಮಂಟಪದಲ್ಲಿ ಅಂಕನಹಳ್ಳಿ ತಪೋವನ ಕ್ಷೇತ್ರ ಮನೆಹಳ್ಳಿ ಮಠದ ಅನಘ ಪೌಂಡೇಶನ್ ಮತ್ತು ಕೊಡಗು ಜಿಲ್ಲಾ ಸಾರ್ವಜನಿಕ ಶಿಕ್ಷಣ ಇಲಾಖೆ ಸಹಭಾಗಿತ್ವದಲ್ಲಿ ಸಿದ್ಧಗಂಗಾ ಶ್ರೀಗಳಾದ ಶಿವಕುಮಾರ ಸ್ವಾಮೀಜಿಯವರ ಸಂಸ್ಮರಣೆ ದಾಸೋಹ ದಿನದ ಅಂಗವಾಗಿ ಹಮ್ಮಿಕೊಂಡಿದ್ದ ಶನಿವಾರಸಂತೆ ಮತ್ತು ಕೊಡ್ಲಿಪೇಟೆ ಹೋಬಳಿಯ ಶಾಲೆಗಳ ಎಸ್‍ಎಸ್‍ಎಲ್‍ಸಿ ವಿದ್ಯಾರ್ಥಿಗಳಿಗೆ ಪರೀಕ್ಷೆ ಎದುರಿಸುವ ಕುರಿತು ನಾನು ಮತ್ತು ಪರೀಕ್ಷೆ ಎಂಬ ಕಾರ್ಯಾಗಾರವನ್ನು ಉದ್ಘಾಟಿಸಿ ಮಾತನಾಡಿದರು.
ವಿದ್ಯಾರ್ಥಿಗಳಿಗೆ ಶಿಕ್ಷಣ ಕಲಿಕೆಯ ಜೊತೆಯಲ್ಲಿ ಕಷ್ಟ ನೋವಿನ ಅರಿವು ಇರಬೇಕು ಕೀಳರಿಮೆಯನ್ನು ಬಿಟ್ಟು ಆತ್ಮ ವಿಶ್ವಾಸದ ಮತ್ತು ಆತ್ಮಸ್ಥೈರ್ಯದ ಮನೋಭಾವನೆಯನ್ನು ಬೆಳೆಸಿಕೊಂಡರೆ ಸಾಧನೆ ಮಾಡಲು ಸಹಕಾರಿಯಾಗುತ್ತದೆ ಎಂದರು.ಇಂದಿನ ವಿದ್ಯಾರ್ಥಿಗಳಿಗೆ ಕಲಿಕೆಗೆ ಪೂರಕವಾದ ಎಲ್ಲಾ ರೀತಿಯ ಅನುಕೂಲಗಳಿವೆ ಎಐ ಯಂತಹ ಆಧುನಿಕ ತಂತ್ರಜ್ಞಾನ ವ್ಯವಸ್ಥೆಗಳಿವೆ. ಆದರೆ ಇವುಗಳನ್ನು ಸರಿಯಾಗಿ ಸದ್ಬಳಕೆ ಮಾಡಿಕೊಳ್ಳುವ ಮೂಲಕ ವಿದ್ಯಾರ್ಥಿಗಳು ಮುಂದೆ ಸಮಾಜದಲ್ಲಿ ಜನರು ತಮ್ಮನ್ನು ಗುರುತಿಸುವಷ್ಟು ಮಟ್ಟಿಗೆ ಬೆಳೆಯಬೇಕು ಎಂದು ಕಿವಿಮಾತು ಹೇಳಿದರು.
ಮನೆಹಳ್ಳಿ ಮಠದ ಮಠಾಧೀಶ ಮತ್ತು ಅನಘ ಪೌಂಡೇಶನ್ ಅಧ್ಯಕ್ಷ ಶ್ರೀ ಮಹಾಂತ ಶಿವಲಿಂಗ ಸ್ವಾಮೀಜಿ ಕಾರ್ಯಗಾರದ ಕುರಿತು ಪ್ರಾಸ್ತಾವಿಕವಾಗಿ ಮಾತನಾಡಿ, ಶಿಕ್ಷಣದಿಂದ ರಾಷ್ಟ್ರ ಅಭಿವೃದ್ದಿ ಹೊಂದುತ್ತದೆ. ಈ ದಿಸೆಯಲ್ಲಿ ಪ್ರತಿಯೊಬ್ಬ ವಿದ್ಯಾರ್ಥಿಗಳು ಪರಿಪೂರ್ಣರಾದ ವಿದ್ಯಾವಂತರಾಗಬೇಕು ಮತ್ತು ವಿದ್ಯಾರ್ಥಿಗಳಿಗೆ ಹತ್ತನೆ ತರಗತಿ ಪರೀಕ್ಷೆ ಶಿಕ್ಷಣ ಪ್ರಥಮ ಮೆಟ್ಟಿಲು ಆಗಿರುತ್ತದೆ ಯಾವುದೆ ಹಿಂಜರಿಕೆ ಇಲ್ಲದೆ ವಿದ್ಯಾರ್ಥಿಗಳು ಪರೀಕ್ಷೆ ಬರೆಯಬೇಕು ಎಂಬ ಉದ್ದೇಶದಿಂದ ಮಠದ ಮೂಲ ಗುರುಗಳ ಹೆಸರಿನಲ್ಲಿ ನಮ್ಮ ಭಾಗದ ಹತ್ತನೆ ತರಗತಿ ವಿದ್ಯಾರ್ಥಿಗಳಿಗೆ ಪರೀಕ್ಷೆ ಎದುರಿಸುವ ಬಗ್ಗೆ ನಮ್ಮ ಮಠದ ವತಿಯಿಂದ ನಾನು ಮತ್ತು ಪರೀಕ್ಷೆ ಎಂಬ ಕಾರ್ಯಾಗಾರ ಹಮ್ಮಿಕೊಂಡಿದ್ದೇವೆ ಎಂದು ಹೇಳಿದರು.ಸೋಮವಾರಪೇಟೆ ತಾಲೂಕು ಕ್ಷೇತ್ರ ಶಿಕ್ಷಣಾಧಿಕಾರಿ ಕೃಷ್ಣಪ್ಪ ಮಾತನಾಡಿ, ವಿದ್ಯಾರ್ಥಿಗಳು ನಿರಂತರ ಅಭ್ಯಾಸಗಳತ್ತ ಗಮನ ಹರಿಸಬೇಕು ಕೀಳೆರಿಮೆ ಬಿಟ್ಟು ಮಾರ್ಗದರ್ಶಕರ ಮಾಹಿತಿ ಸಲಹೆಗಳನ್ನು ಸದ್ಬಳಕೆ ಮಾಡಿಕೊಳ್ಳಬೇಕು. ಇದರಿಂದ ವಿದ್ಯಾರ್ಥಿಗಳು ಪರೀಕ್ಷೆಗಳಲ್ಲಿ ಉತ್ತಮ ಅಂಕಗಳಿಸಲು ಸಾಧ್ಯವಾಗುತ್ತದೆ ಎಂದರು. ಕೊಡಗು ಜಿಲ್ಲೆಯಲ್ಲಿ ಸೋಮವಾರಪೇಟೆ ತಾಲೂಕು ಹತ್ತನೆ ತರಗತಿ ಪರೀಕ್ಷೆ ಉತ್ತಮ ಫಲಿತಾಂಶ ತಂದುಕೊಡುತ್ತಿದೆ. ಮುಂದಿನ ಸಾಲಿನಲ್ಲೂ ಮತ್ತಷ್ಟು ಫಲಿತಾಂಶ ತಂದುಕೊಡಬಹುದೆಂಬ ನಿರೀಕ್ಷೆಯನ್ನು ಶಿಕ್ಷಣ ಇಲಾಖೆ ಇಟ್ಟುಕೊಂಡಿದೆ ಎಂದರು.
ಕಾರ್ಯಾಗಾರದಲ್ಲಿ ವಕೀಲ ಜಗದೀಶ್ ಮಾತನಾಡಿದರು. ಕಾರ್ಯಕ್ರಮದಲ್ಲಿ ಸಂಪನ್ಮೂಲ ವ್ಯಕ್ತಿ ಎ.ಎಚ್.ಸಾಗರ್, ಗ್ಯಾರೆಂಟಿ ಅನುಷ್ಠಾನ ಸಮಿತಿ ತಾಲೂಕು ಅಧ್ಯಕ್ಷ ಜಿ.ಎಂ.ಕಾಂತರಾಜ್, ಪತ್ರಕರ್ತ ಎಸ್.ಮಹೇಶ್, ಶನಿವಾರಸಂತೆ ಕ್ಲಸ್ಟರ್ ಸಿಆರ್‍ಪಿ ಸಿ.ಕೆ.ದಿನೇಶ್, ಕೊಡ್ಲಿಪೇಟೆ ಕ್ಲಸ್ಟರ್ ಸಿಒಆರ್‍ಪಿ ರವೀಶ್, ಉಪನ್ಯಾಸಕ ಕೆ.ಪಿ.ಜಯಕುಮಾರ್, ಪ್ರಮುಖರಾದ ಎಸ್.ಸಿ.ಶರತ್ ಶೇಖರ್, ಡಿ.ಬಿ.ಧರ್ಮಪ್ಪ ಮುಂತಾದವರಿದ್ದರು.