ಗ್ಯಾರಂಟಿ ಮಾತ್ರವೇ ಸಿಎಂ ಸಿದ್ಧರಾಮಯ್ಯ ಸರ್ಕಾರದ ಸಾಧನೆ: ಎಚ್‌.ಡಿ.ಕುಮಾರಸ್ವಾಮಿ

KannadaprabhaNewsNetwork |  
Published : Apr 18, 2024, 02:23 AM IST
17ಎಚ್ಎಸ್ಎನ್16 : ಜೆಡಿಎಸ್ ಅಭ್ಯರ್ಥಿ ಪ್ರಜ್ವಲ್‌ರೇವಣ್ಣ ಪರ ಪ್ರಚಾರ ಸಭೆಯನ್ನು ಮಾಜಿ ಮುಖ್ಯಮಂತ್ರಿ ಎಚ್‌.ಡಿ.ಕುಮಾರಸ್ವಾಮಿ ಉದ್ಘಾಟಿಸಿದರು. | Kannada Prabha

ಸಾರಾಂಶ

ಗ್ಯಾರಂಟಿ ಯೋಜನೆಗಳು ಬಿಟ್ಟರೆ ೧೦೦ ದಿನಗಳ ಸಿದ್ದರಾಮಯ್ಯ, ಡಿ.ಕೆ.ಶಿವಕುಮಾರ್ ಸರ್ಕಾರ ಜನರಿಗೆ ಯಾವುದೇ ಯೋಜನೆಗಳನ್ನು ತಂದಿಲ್ಲ ಎಂದು ಮಾಜಿ ಮುಖ್ಯಮಂತ್ರಿ ಎಚ್‌.ಡಿ. ಕುಮಾರಸ್ವಾಮಿ ಕುಹಕವಾಡಿದರು. ಚನ್ನರಾಯಪಟ್ಟಣದಲ್ಲಿ ಜೆಡಿಎಸ್ ಅಭ್ಯರ್ಥಿ ಪ್ರಜ್ವಲ್‌ ರೇವಣ್ಣ ಪರ ಪ್ರಚಾರ ಸಭೆಯಲ್ಲಿ ಮಾತನಾಡಿದರು.

ಪ್ರಚಾರ ಸಭೆ । ಎನ್‌ಡಿಎ ಅಭ್ಯರ್ಥಿ ಪ್ರಜ್ವಲ್‌ ರೇವಣ್ಣ ಪರ ಮತಯಾಚನೆ । ಮೋದಿ ಬಲಪಡಿಸಲು ಮೈತ್ರಿ

ಕನ್ನಡಪ್ರಭ ವಾರ್ತೆ ಚನ್ನರಾಯಪಟ್ಟಣ

ಗ್ಯಾರಂಟಿ ಯೋಜನೆಗಳು ಬಿಟ್ಟರೆ ೧೦೦ ದಿನಗಳ ಸಿದ್ದರಾಮಯ್ಯ, ಡಿ.ಕೆ.ಶಿವಕುಮಾರ್ ಸರ್ಕಾರ ಜನರಿಗೆ ಯಾವುದೇ ಯೋಜನೆಗಳನ್ನು ತಂದಿಲ್ಲ ಎಂದು ಮಾಜಿ ಮುಖ್ಯಮಂತ್ರಿ ಎಚ್‌.ಡಿ. ಕುಮಾರಸ್ವಾಮಿ ಕುಹಕವಾಡಿದರು.

ಪಟ್ಟಣದ ಮಾಧ್ಯಮಿಕ ಶಾಲಾ ಆವರಣದಲ್ಲಿ ಬುಧವಾರ ಜೆಡಿಎಸ್ ಅಭ್ಯರ್ಥಿ ಪ್ರಜ್ವಲ್‌ ರೇವಣ್ಣ ಪರ ಪ್ರಚಾರ ಸಭೆಯಲ್ಲಿ ಮಾತನಾಡಿ, ‘ಗ್ಯಾರಂಟಿ ಯೋಜನೆಗಳಿಂದ ಜನ ಹಾಳಾಗುತ್ತಿದ್ದಾರೆ. ಗಂಡಸರು ಹೆಂಡಕ್ಕೆ ಹಾಕುವ ಹಣವನ್ನು ಸರ್ಕಾರ ಪುನಃ ಅವರ ಮನೆ ಹೆಣ್ಣುಮಕ್ಕಳಿಗೆ ನೀಡುತ್ತಿದೆ. ಆದರೆ ಇದು ನಮ್ಮೆಲ್ಲಾ ತಾಯಂದಿರಿಗೆ ಗೊತ್ತಾಗುತ್ತಿಲ್ಲ. ಯುವ ನಿಧಿ ಎಲ್ಲಾ ನಿರುದ್ಯೋಗ ವಿದ್ಯಾರ್ಥಿಗಳಿಗೆ ಯೋಜನೆ ಮಾಡಲಾಗಿದೆ ಎಂದು ಹೇಳಿ ೧ ವರ್ಷದ ಒಳಗಿನ ಪದವೀಧರ ವಿದ್ಯಾರ್ಥಿಗಳಿಗೆ ಎಂದು ಉಲ್ಟಾ ಹೊಡೆದ ಸರ್ಕಾರ ಇದಾಗಿದೆ. ರಾಜ್ಯದಲ್ಲಿ ಸುಮಾರು ೨.೫ ಲಕ್ಷ ಸರ್ಕಾರಿ ಹುದ್ದೆಗಳು ಖಾಲಿ ಇವೆ, ಇದನ್ನು ಭರ್ತಿ ಮಾಡಬೇಕು. ಸ್ವತಂತ್ರವಾಗಿ ಸರ್ಕಾರ ಮಾಡಲು ಸಾಧ್ಯವಾಗದು. ಆದ್ದರಿಂದ ಈ ಬಾರಿ ಮೋದಿಯವರನ್ನು ಬಲಪಡಿಸಲು ನಮ್ಮ ಪಕ್ಷ ಮೈತ್ರಿ ಮಾಡಿಕೊಂಡಿದೆ’ ಎಂದು ಹೇಳಿದರು.

‘ನಾನು ರಾಜಕೀಯಕ್ಕೆ ಅಚಾನಕ್ಕಾಗಿ ಬಂದವನು, ದೇವೇಗೌಡರು ೪ ವರ್ಷ ಮಾತ್ರ ಅಧಿಕಾರದಲ್ಲಿ ಇದ್ದವರು. ದೇವೇಗೌಡರ ಉದ್ದೇಶ ಹಾಗೂ ಕನಸುಗಳನ್ನು ಈಡೇರಿಸುವುದು ನಮ್ಮ ಕರ್ತವ್ಯವಾಗಿದೆ. ಪ್ರಜ್ವಲ್ ರೇವಣ್ಣ ಈ ಬಾರಿ ಚುನಾವಣೆಯಲ್ಲಿ ಸ್ಪರ್ಧಿಸಿದ್ದು ಹುಡುಗ ಏನಾದರೂ ತಪ್ಪು ಮಾಡಿದ್ದರೆ ಕ್ಷಮಿಸಿ ಈ ಬಾರಿ ಮತ ನೀಡಬೇಕು. ತ್ರಿವಳಿ ತಲಾಕ್ ನಿಷೇಧ ಮಾಡಿ ಮುಸ್ಲಿಂ ಮಹಿಳೆಯರಿಗೆ ನ್ಯಾಯ ಕೊಡಿಸಿದ್ದು ಮೋದಿಯವರು. ಚುನಾವಣೆ ಮುಗಿದ ನಂತರ ಹೆಚ್ಚುವರಿಯಾಗಿ ಎರಡು ಲಕ್ಷ ಮೆಟ್ರಿಕ್ ಟನ್ ಕೊಬ್ಬರಿಯನ್ನು ಪುನಹ ಖರೀದಿ ಪ್ರಾರಂಭಿಸಿ ಕ್ವಿಂಟಾಲಿಗೆ ೧೫ ಸಾವಿರ ರು. ಬೆಂಬಲ ಬೆಲೆ ನಿಗದಿ ಮಾಡಿಸುತ್ತೇವೆ’ ಎಂದು ಭರವಸೆ ನೀಡಿದರು.

ಶಾಸಕ ಸಿ.ಎನ್.ಬಾಲಕೃಷ್ಣ ಮಾತನಾಡಿ, ತಾಲೂಕಿನಲ್ಲಿ ಪ್ರಾಮಾಣಿಕವಾಗಿ ಕೆಲಸ ಮಾಡಿದ್ದು ರೈತರ ಪರ ಪಕ್ಷ ಏನಾದರೂ ಇದ್ದರೆ ಅದು ಜೆಡಿಎಸ್ ಪಕ್ಷ, ತಾಲೂಕಿನಲ್ಲಿ ೨೦೦ ಹಳ್ಳಿಗಳಲ್ಲಿ ಸುತ್ತಿ ಮತಯಾಚನೆ ಮಾಡಿದ್ದೇವೆ. ದೇಶದಲ್ಲಿ ೪೦೦ ಸೀಟ್‌ಗಳನ್ನು ಪಡೆದು ನರೇಂದ್ರ ಮೋದಿಯವರು ಮೂರನೇ ಬಾರಿಗೆ ಪ್ರಧಾನಿಯಾಗುವುದು ನಿಶ್ಚಿತ. ಎಲ್ಲಾ ವರ್ಗದ ಜನರಿಗೆ ಕುಮಾರಸ್ವಾಮಿ ಮುಖ್ಯಮಂತ್ರಿಯಾದ ಸಂದರ್ಭದಲ್ಲಿ ಸಹಾಯ ಮಾಡಿದ್ದಾರೆ, ಮೋದಿಯವರ ಜತೆ ಮಾತನಾಡಿ ನಾಫೆಡ್ ಕೊಬ್ಬರಿ ಖರೀದಿ ಕೇಂದ್ರ ಪ್ರಾರಂಭಿಸಿ ರೈತರಿಗೆ ಬೆಂಬಲ ಬೆಲೆ ನೀಡುವಲ್ಲಿ ಸಫಲರಾಗಿದ್ದಾರೆ ಎಂದು ತಿಳಿಸಿದರು.

ಮಾಜಿ ಮಂತ್ರಿ ಎಚ್.ಡಿ.ರೇವಣ್ಣ ಮಾತನಾಡಿ, ‘ಈ ಬಾರಿ ಜೆಡಿಎಸ್ ಪಕ್ಷವನ್ನು ಬೆಂಬಲಸಿ ಬಿಜೆಪಿ ಜೊತೆ ಮಂತ್ರಿ ಮಾಡಿಕೊಂಡಿರುವುದು ಮೋದಿಯವರನ್ನು ಬಲಪಡಿಸಲು, ಕಾಂಗ್ರೆಸ್ ಸರ್ಕಾರ ಅಧಿಕಾರದ ಅವಧಿಯಲ್ಲಿ ಬಡಜನರಿಗೆ ಅನುಕೂಲ ಆಗುವುದಕ್ಕಿಂತ ಅನಾನುಕೂಲವೇ ಹೆಚ್ಚಾಗಿದೆ ಎಂದು ಟೀಕಿಸಿದರು.

ಪಟ್ಟಣದ ಧನಲಕ್ಷ್ಮಿ ಚಿತ್ರಮಂದಿರದಿಂದ ಬೃಹತ್ ರೋಡ್ ಶೋ ಆರಂಭಗೊಂಡು ಬಿ.ಎಂ.ರಸ್ತೆ ಮಾರ್ಗವಾಗಿ ನವೋದಯ ವೃತ್ತದಿಂದ ಮಾಧ್ಯಮಿಕ ಶಾಲಾ ಆವರಣಕ್ಕೆ ಕಾರ್ಯಕರ್ತರು ಜಮಾವಣೆಗೊಂಡರು.

ಸಭೆಯಲ್ಲಿ ಮಾಜಿ ಜಿಲ್ಲಾ ಪಂಚಾಯಿತಿ ಸದಸ್ಯೆ ಕುಸುಮಾರಾಣಿ, ಮಾಜಿ ಜಿಲ್ಲಾ ಪಂಚಾಯಿತಿ ಉಪಾಧ್ಯಕ್ಷ ಅಣತಿ ಚಂದ್ರಶೇಖರ್, ತಾಲೂಕು ಜೆಡಿಎಸ್ ಅಧ್ಯಕ್ಷ ಪರಮ ದೇವರಾಜೇಗೌಡ, ನಗರ ಯೋಜನಾ ಪ್ರಾಧಿಕಾರದ ಮಾಜಿ ಅಧ್ಯಕ್ಷ ಎ.ಸಿ.ಆನಂದ್‌ಕುಮಾರ್, ರಾಜಪ್ಪ, ಚಿದಾನಂದ್, ರವಿ, ಕಬ್ಬಾಳು ರಮೇಶ್, ಬೆಳಗೀಹಳ್ಳಿಪುಟ್ಟಸ್ವಾಮಿ, ಚಿಕ್ಕಬಿಳ್ತಿ ಪ್ರವೀಣ್ ಇದ್ದರು.

ಚನ್ನರಾಯಪಟ್ಟಣದಲ್ಲಿ ಜೆಡಿಎಸ್ ಅಭ್ಯರ್ಥಿ ಪ್ರಜ್ವಲ್‌ ರೇವಣ್ಣ ಪರ ಪ್ರಚಾರ ಸಭೆಯನ್ನು ಮಾಜಿ ಮುಖ್ಯಮಂತ್ರಿ ಎಚ್‌.ಡಿ.ಕುಮಾರಸ್ವಾಮಿ ಉದ್ಘಾಟಿಸಿದರು.

PREV

Recommended Stories

ತುಮಕೂರಲ್ಲಿ 20 ನವಿಲುಗಳ ಸಾವು
ರಾಜ್ಯದಲ್ಲಿ 4 ಹಾಲಿನ ಮಾದರಿ ಗುಣಮಟ್ಟ ಕಡಿಮೆ