ಕಠಿಣ ಪರಿಶ್ರಮದಿಂದ ಸಾಧನೆ: ಮಾದೇವ ನಾಯ್ಕ

KannadaprabhaNewsNetwork | Published : Feb 6, 2024 1:33 AM

ಸಾರಾಂಶ

ವಿದ್ಯಾರ್ಥಿಗಳು ಶಿಕ್ಷಣದ ಜತೆಗೆ ಮಾನವೀಯ ಮೌಲ್ಯ ಅಳವಡಿಸಿಕೊಂಡು ಸಮಾಜದ ಸತ್ಪ್ರಜೆಗಳಾಗಬೇಕು. ಯಾವುದೇ ಸಂದರ್ಭದಲ್ಲಿಯೂ ಶಿಕ್ಷಣದಿಂದ ವಂಚಿತರಾಗಬಾರದು.

ಭಟ್ಕಳ:

ವಿದ್ಯಾರ್ಥಿಗಳು ಕಠಿಣ ಪರಿಶ್ರಮದ ಮೂಲಕ ಸಾಧನೆ ಮಾಡಬಹುದಾಗಿದೆ ಎಂದು ಬೆಳಕೆ ಗ್ರಾಮೀಣ ವ್ಯವಸಾಯ ಸೇವಾ ಸಹಕಾರಿ ಸಂಘದ ಅಧ್ಯಕ್ಷ ಮಾದೇವ ನಾಯ್ಕ ಹೇಳಿದರು.

ಅವರು ಬೆಳಕೆ ಸರ್ಕಾರಿ ಪ್ರೌಢಶಾಲೆಯ ಪ್ರತಿಭಾ ಪುರಸ್ಕಾರ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ವಿದ್ಯಾರ್ಥಿಗಳು ಶಿಕ್ಷಣದ ಜತೆಗೆ ಮಾನವೀಯ ಮೌಲ್ಯ ಅಳವಡಿಸಿಕೊಂಡು ಸಮಾಜದ ಸತ್ಪ್ರಜೆಗಳಾಗಬೇಕು. ಯಾವುದೇ ಸಂದರ್ಭದಲ್ಲಿಯೂ ಶಿಕ್ಷಣದಿಂದ ವಂಚಿತರಾಗಬಾರದು ಎಂದರು.ಅಧ್ಯಕ್ಷತೆ ವಹಿಸಿದ್ದ ಬೆಳಕೆ ಗ್ರಾಪಂ ಅಧ್ಯಕ್ಷ ಜಗದೀಶ ನಾಯ್ಕ, ವಿದ್ಯಾರ್ಥಿಗಳು ಸ್ಪಷ್ಟ ಗುರಿ ಇಟ್ಟುಕೊಂಡು ಸದಾ ಪ್ರಯತ್ನಶೀಲರಾಗಿ ಉತ್ತಮ ಶಿಕ್ಷಣ ಪಡೆದು ಶಿಕ್ಷಕರಿಗೆ, ತಂದೆ-ತಾಯಿಗೆ ಗೌರವ ತರಬೇಕು. ಬೆಳಕೆ ಪ್ರೌಢಶಾಲೆ ಶೈಕ್ಷಣಿಕ ಹಾಗೂ ಕ್ರೀಡಾ ವಿಭಾಗದಲ್ಲಿ ರಾಜ್ಯ ಮಟ್ಟದಲ್ಲಿ ಗುರುತಿಸಿಕೊಂಡಿದೆ. ಇದಕ್ಕೆ ಶಿಕ್ಷಕರ ಅವಿರತ ಪ್ರಯತ್ನವೇ ಕಾರಣ ಎಂದು ಹೇಳಿದರು.ಶಾಲಾಭಿವೃದ್ಧಿ ಸಮಿತಿ ಅಧ್ಯಕ್ಷ ಹೊನ್ನಪ್ಪ ನಾಯ್ಕ, ವಿದ್ಯಾರ್ಥಿಗಳ ಕೈ ಬರಹದ ಜ್ಞಾನಸುಧಾ ಹಸ್ತಪ್ರತಿ ಬಿಡುಗಡೆಗೊಳಿಸಿದರು. ಸದಸ್ಯರಾದ ತೇಜ್ ಕುಮಾರ ಜೈನ್, ತಾರಾ ನಾಯ್ಕ, ವೇಂಕಟ್ರಮಣ ನಾಯ್ಕ, ಈಶ್ವರ ನಾಯ್ಕ ಬೆಣಂದೂರ ಉಪಸ್ಥಿತರಿದ್ದರು. ಈ ವೇಳೆ ಶಾಲೆಯ ದಾನಿಗಳಾದ ನಿವೃತ್ತ ಸಿಂಡಿಕೇಟ್ ಬ್ಯಾಂಕ್ ವ್ಯವಸ್ಥಾಪಕರಾದ ಸದಾಶಿವ ಆಚಾರ್ಯ ಕುಂದಾಪುರ ಎಸ್‌ಎಸ್‌ಎಲ್‌ಸಿ, 8,9ನೇ ತರಗತಿ ಹಾಗೂ ರಾಜ್ಯಮಟ್ಟದ ಕ್ರೀಡೆಯಲ್ಲಿ ಭಾಗವಹಿಸಿದ ಪ್ರತಿಭಾನ್ವಿತ ವಿದ್ಯಾರ್ಥಿಗಳಿಗೆ ನಗದು ಪುರಸ್ಕಾರ ನೀಡಿ ವಿದ್ಯಾರ್ಥಿಗಳಿಗೆ ಶುಭ ಹಾರೈಸಿದರು.ಶಾಲೆಯ ಆದರ್ಶ ವಿದ್ಯಾರ್ಥಿ ಪ್ರಶಸ್ತಿಯನ್ನು ಪ್ರೀಯಾ ಲೋಕೇಶ ನಾಯ್ಕ, ಬಹುಮುಖ ಪ್ರತಿಭೆಯ ಪ್ರಶಸ್ತಿಯನ್ನು ಹರ್ಷಿತಾ ಪದ್ಮಯ್ಯ ನಾಯ್ಕ, ಸರ್ವಾಂಗೀಣ ಪ್ರಶಸ್ತಿಯನ್ನು ಮಧುರಾ ವೆಂಕಟ್ರಮಣ ನಾಯ್ಕ ಪಡೆದುಕೊಂಡರು. ಮುಖ್ಯಾಧ್ಯಾಪಕಿ ಶಾಲಿನಿ ನಾಯಕ ಸ್ವಾಗತಿಸಿದರು. ಪ್ರಕಾಶ ಶಿರಾಲಿ ವಂದಿಸಿದರು. ಮಹೇಶ್ವರ ನಾಯ್ಕ ವರದಿ ವಾಚಿಸಿದರು. ಕೇಶವ ಗೌಡ ನಿರೂಪಿಸಿದರು.

Share this article