ಕನ್ನಡಪ್ರಭ ವಾರ್ತೆ ತುಮಕೂರುವಿಶ್ವ ಮಹಿಳಾ ದಿನಾಚರಣೆಯ ಅಂಗವಾಗಿ ಪ್ರತಿವರ್ಷ ಇಲ್ಲಿನ ವರದಕ್ಷಿಣೆ ವಿರೋಧಿ ವೇದಿಕೆಯಿಂದ ನೀಡಲಾಗುವ ವಿವಿಧ ಮಹಿಳಾ ಸಾಧಕಿ ಪ್ರಶಸ್ತಿಗೆ ಚಿಕ್ಕನಾಯಕನಹಳ್ಳಿಯ ಹೋರಾಟಗಾರ್ತಿ ಎನ್.ಇಂದಿರಮ್ಮ, ಕೊರಟಗೆರೆಯ ಶ್ರೀದೇವಿ ಹಾಗೂ ತುಮಕೂರಿನ ಹೇಮಲತ ಅವರನ್ನು ಆಯ್ಕೆ ಮಾಡಲಾಗಿದೆ. ಮಹಿಳಾ ಚೇತನ ಪ್ರಶಸ್ತಿ: ಗೃಹ ಸಚಿವರಾದ ಡಾ.ಜಿ.ಪರಮೇಶ್ವರ್ ಅವರು ತಮ್ಮ ಮಾತೃಶ್ರೀ ಗಂಗಮಾಳಮ್ಮ ಗಂಗಾಧರಯ್ಯ ಸ್ಮರಣಾರ್ಥ ಸ್ಥಾಪಿಸಿರುವ ಮಹಿಳಾ ಚೇತನ ಪ್ರಶಸ್ತಿಗೆ ಕೊರಟಗೆರೆ ತಾಲೂಕು ಹೊಸಹಳ್ಳಿಯ ಶ್ರೀದೇವಿ ಆಯ್ಕೆಯಾಗಿದ್ದಾರೆ. ಮಹಿಳಾ ಸಾಧಕಿ ಪ್ರಶಸ್ತಿ: ಮಾಜಿ ಸಚಿವರಾದ ದಿ.ಸಿ.ಚೆನ್ನಿಗಪ್ಪ ಅವರ ಮಾತೃಶ್ರೀ ಚನ್ನಮ್ಮ ಚನ್ನರಾಯಪ್ಪ ಸ್ಮರಣಾರ್ಥ ಸ್ಥಾಪಿಸಿರುವ ಮಹಿಳಾ ಸಾಧಕಿ ಪ್ರಶಸ್ತಿಗೆ ಚಿಕ್ಕನಾಯಕನಹಳ್ಳಿಯ ಎನ್.ಇಂದಿರಮ್ಮ ಆಯ್ಕೆಯಾಗಿದ್ದಾರೆ. ಶ್ರಮಜ್ಯೋತಿ ಪ್ರಶಸ್ತಿ: ಹಿರಿಯ ಸ್ವಾತಂತ್ರ್ಯ ಹೋರಾಟಗಾರರು, ಕಾರ್ಮಿಕ ಮುಖಂಡರಾದ ಟಿ.ಆರ್.ರೇವಣ್ಣ ತಮ್ಮ ಪತ್ನಿ ಸರೋಜ ಸ್ಮರಣಾರ್ಥ ಸ್ಥಾಪಿಸಿರುವ ಶ್ರಮಜ್ಯೋತಿ ಪ್ರಶಸ್ತಿಗೆ ತುಮಕೂರಿನ ಸ್ವಾತಂತ್ರ್ಯ ಹೋರಾಟಗಾರರಾದ ಟಿ.ವಿ.ಚಿಕ್ಕವೀರಯ್ಯ ಅವರ ಪುತ್ರಿ ಟಿ.ಸಿ.ಹೇಮಲತ ಅವರನ್ನು ಆಯ್ಕೆ ಮಾಡಲಾಗಿದೆ. ಅವರ ಸಾಮಾಜಿಕ ಚಟುವಟಿಕೆಗಳನ್ನು ಗುರುತಿಸಿ ಶ್ರಮಜ್ಯೋತಿ ಪ್ರಶಸ್ತಿ ನೀಡಲಾಗುತ್ತಿದೆ. ಮಾ.14 ರ ಶನಿವಾರ ಕನ್ನಡ ಭವನದಲ್ಲಿ ವರದಕ್ಷಿಣೆ ವಿರೋಧಿ ವೇದಿಕೆ, ಸಾಂತ್ವನ ಕೇಂದ್ರ, ಕರ್ನಾಟಕ ರಾಜ್ಯ ಸರ್ಕಾರಿ ನಿವೃತ್ತ ನೌಕರರ ಸಂಘ ಜಿಲ್ಲಾ ಶಾಖೆ ಇವರ ಸಂಯುಕ್ತಾಶ್ರಯದಲ್ಲಿ ಬೆಳಗ್ಗೆ 11 ಗಂಟೆಗೆ ಆಯೋಜಿಸಿರುವ ವಿಶ್ವ ಮಹಿಳಾ ದಿನಾಚರಣೆ ಕಾರ್ಯಕ್ರಮದಲ್ಲಿ ಪ್ರಶಸ್ತಿ ಪ್ರದಾನ ಮಾಡಲಾಗುವುದು ಎಂದು ವೇದಿಕೆಯ ಅಧ್ಯಕ್ಷೆ ಎಂ.ಸಿ.ಲಲಿತ, ಉಪಾಧ್ಯಕ್ಷೆ ಬಾ.ಹ.ರಮಾಕುಮಾರಿ, ಪ್ರಧಾನ ಕಾರ್ಯದರ್ಶಿ ಸಾ.ಚಿ.ರಾಜಕುಮಾರ ಅವರು ತಿಳಿಸಿದ್ದಾರೆ.