ಕನ್ನಡಪ್ರಭ ವಾರ್ತೆ ತಿಪಟೂರು
ಕರ್ನಾಟಕ ರಾಜ್ಯ ಸರ್ಕಾರಿ ನಿವೃತ್ತ ನೌಕರರ ಸಂಘದ ವತಿಯಿಂದ ಆಯೋಜಿಸಿದ್ದ ಮಹಿಳಾ ದಿನಾಚರಣೆ ಹಾಗೂ ಶ್ರೀ ರೇಣುಕಾಚಾರ್ಯ ಜಯಂತಿಯಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿ ಮಾತನಾಡಿದ ಇವರು ಮಹಿಳೆ ಸಾಧನೆಗೆ ಸಹಕಾರ ನೀಡುತ್ತಿರುವ ಪುರುಷರೊಂದಿಗೆ ಸ್ತ್ರೀಯಾಗಲಿ ಅಥವಾ ಸ್ತ್ರೀಯೊಂದಿಗೆ ಪುರುಷರಾಗಲಿ ನಾ ಮೇಲು ತಾ ಮೇಲು ಎಂದು ವಾಕ್ಸಮರಕ್ಕಿಳಿಯದೇ ಸ್ತ್ರೀ ಪುರುಷರೀರ್ವರೂ ಸಮಾನರು ಎಂಬ ಮನೋಭಾವದಿಂದ ಸಹಬಾಳ್ವೆ ನಡೆಸಿದರೆ ಸಂಸಾರದಲ್ಲಾಗಲಿ, ಸಮಾಜದಲ್ಲಾಗಲಿ ಯಾವುದೇ ಬಿರುಕುಗಳು ಮೂಡುವುದಿಲ್ಲ. ಇಂತಹ ಸಮಾನ ಭಾವ ಒಡಮೂಡಲು ಸಾಧನೆಯತ್ತ ಸಾಗುತ್ತಿರುವ ಸ್ತ್ರೀ ಸಂಸ್ಕೃತಿ ಸಂಸ್ಕಾರಗಳೊಂದಿಗೆ ತನ್ನ ತನವನ್ನು ಮರೆಯದೆ ಮೆರೆಯಬೇಕಾಗಿದೆ. ಆಗ ಮಾತ್ರ ಈ ಪ್ರಸ್ತುತ ಸಮಾಜದಲ್ಲಿ ನಡೆಯುತ್ತಿರುವ ಅವಘಡಗಳನ್ನು ನಿಯಂತ್ರಿಸಿ, ಸುಭದ್ರ ಸಮಾಜವನ್ನು ಸ್ಥಾಪನೆ ಮಾಡಲು ಸಾಧ್ಯ. ಮಹಿಳೆ ಅಂದು ಇಂದು ಮುಂದು ಎಂದೆಂದೂ ಒಂದೇ, ಆದರೆ ಆಕೆಯು ಕೈಗೊಳ್ಳುತ್ತಿರುವ ಕಾರ್ಯಗಳ ವೈಖರಿ ಮಾತ್ರ ಕಾಲಕ್ಕೆ ತಕ್ಕಂತೆ ಬದಲಾಗುತ್ತಾ ಸಾಗುತ್ತಿದೆ. ಮಹಿಳೆಯರ ಹುಟ್ಟು ಗುಣವೇ ಶಕ್ತಿ, ಧೈರ್ಯ. ಕಾಲದ ಮಜಲುಗಳಲ್ಲಿ ಬಚ್ಚಿಟ್ಟಿದ್ದ ಆ ಗುಣಗಳನ್ನು ಬಿಚ್ಚಿಟ್ಟು ಮುನ್ನುಗುವ ಮನಸ್ಸು ಮಾಡಿ ಸಾಧನೆಯ ಶಿಖರದತ್ತ ಸಾಗುತ್ತಿದ್ದಾಳೆ ಎಂದು ಹೇಳಿದರು.ಈ ಸಂದರ್ಭದಲ್ಲಿ ಶ್ರೀ ರೇಣುಕಾಚಾರ್ಯ ಜಯಂತಿ ಕುರಿತು ಜಯದೇವ ವಿದ್ಯಾರ್ಥಿ ನಿಲಯದ ಬಸವರಾಜ ಶಾಸ್ತ್ರಿಯವರು ಮಾತನಾಡಿ ಆದಿಗುರು ಶ್ರೀ ರೇಣುಕಾಚಾರ್ಯರ ಜೀವನ, ಆದರ್ಶ ಹಾಗೂ ಸಂದೇಶಗಳನ್ನು ಸ್ಮರಿಸಿ, ಆಧ್ಯಾತ್ಮವು ಮಾನವನ ಜೀವನವನ್ನು ಸಂಸ್ಕಾರಭರಿತಗೊಳಿಸುತ್ತದೆ ಹಾಗಾಗಿ ನಮ್ಮ ಬದುಕಿನಲ್ಲಿ ಆಧ್ಯಾತ್ಮಿಕ ನಂಬಿಕೆಯೂ ಮುಖ್ಯವಾಗಿದೆ ಎಂದು ಅಭಿಪ್ರಾಯಿಸಿದರು.
ಇದೇ ಸಂದರ್ಭದಲ್ಲಿ ಆಧ್ಯಾತ್ಮ ಸಾಧಕರಾದ ಪಾರಿಜಾತ ಪಾಂಡುರಂಗಯ್ಯ, ದಾಸೋಹಿಗಳಾದ ರುಕ್ಮಿಣಿಯವರನ್ನು ಸನ್ಮಾನಿಸಲಾಯಿತು. ಸಂಘದ ಲೆಕ್ಕಪತ್ರ ಮಂಡನೆಯನ್ನು ಸಿ ಕುಮಾರ್ ಹಾಗೂ ಸಂಘದ ವರದಿಯನ್ನು ವಿ.ಎನ್. ಮಹಾದೇವಯ್ಯನವರು ಮಂಡಿಸಿದರು.ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿ ಮಾತನಾಡಿದ ನಿ.ನೌ. ಸಂಘದ ಅಧ್ಯಕ್ಷರಾದ ಕೆ. ಎಂ. ರಾಜಣ್ಣನವರು ಸಂಘದ ಆಗು ಹೋಗುಗಳ ಪ್ರಾಸ್ತಾವಿಕ ಹಾಗೂ ಮುಂಬರುವ ಯೋಜನೆಗಳ ಬಗ್ಗೆ ತಿಳಿಸಿದರು.ಕಾರ್ಯಕ್ರಮವನ್ನು ಪದ್ಮಾಕ್ಷಮ್ಮನವರು ನಿರೂಪಿಸಿದರು. ಶಾಂತಲಾರಾಣಿ ಪ್ರಾರ್ಥಿಸಿದರು. ಪಿ ಆರ್ ಗುರುಸ್ವಾಮಿಯವರು ಸ್ವಾಗತಿಸಿದರು. ಸರ್ವಮಂಗಳಮ್ಮನವರು ವಂದಿಸಿದರು. ಇದೇ ಸಂಧರ್ಭದಲ್ಲಿ ತತ್ವಪದ ಹಾಡಿದ ಭಾರತಿ ಪ್ರಕಾಶ್ ವಿದ್ಯಾ ವಾಹಿನಿ ವೃಂದ ಹಾಗೂ ಚಂದ್ರಿಕಾ ಗುರುರಾಜ್ ರವರ ಚಿಂತನೆ ಮತ್ತು ಕಾತ್ಯಾಯಿನಿಯವರು ನಡೆಸಿಕೊಟ್ಟ ಪದಾಧಿಕಾರಿಗಳ ಜನ್ಮದಿನಾಚರಣೆಯ ಸಂಭ್ರಮ ಎಲ್ಲರ ಗಮನ ಸೆಳೆಯಿತು.