
ಶ್ರೀ ಗುರುಸಿದ್ದರಾಮೇಶ್ವರ ವಿದ್ಯಾಸಂಸ್ಥೆ ಶಾಲಾ ವಾರ್ಷಿಕೋತ್ಸವ
ಮೊಬೈಲ್ ಚಟಗಳಿಂದ ಮಕ್ಕಳನ್ನು ದೂರಮಾಡಿ ವಿದ್ಯಾಭ್ಯಾಸದ ಕಡೆ ಹೆಚ್ಚು ಒಲವು ತೋರುವಂತೆ ಪಾಲಕರು ಮಾಡಬೇಕು ಎಂದು ಪುಷ್ಪಗಿರಿ ಮಹಾಸಂಸ್ಥಾನ ಪೀಠಾಧ್ಯಾಕ್ಷ ಶ್ರೀ ಸೋಮಶೇಖರ ಶಿವಾಚಾರ್ಯ ಮಹಾಸ್ವಾಮೀಜಿ ಹೇಳಿದರು.
ನಗರದ ಶ್ರೀ ಗುರುಸಿದ್ದರಾಮೇಶ್ವರ ವಿದ್ಯಾಸಂಸ್ಥೆ ಶಾಲಾ ವಾರ್ಷಿಕೋತ್ಸವ ಮತ್ತು ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ದಿವ್ಯಸಾನಿಧ್ಯ ವಹಿಸಿ ಮಾತನಾಡಿದರು. ಭವಿಷ್ಯದ ಪ್ರಜೆಗಳಾದ ಇಂದಿನ ಮಕ್ಕಳು ನಿರಂತರ ಕಲಿಕೆಗೆ ಹೆಚ್ಚು ಒತ್ತು ನೀಡಬೇಕು.ಮಕ್ಕಳಿಗೆ ಮನೆಯೇ ಮೊದಲ ಪಾಠಶಾಲೆ. ಪೋಷಕರು ಮೊದಲ ಗುರುವಿನಂತೆ. ಹೀಗಾಗಿ ಶಾಲೆ ಶಿಕ್ಷಣದ ಜತೆಗೆ ಪಾಲಕರು ಮಕ್ಕಳಿಗೆ ಗುರು-ಹಿರಿಯರನ್ನು ಗೌರವಿಸುವ ಸಂಸ್ಕಾರ ಕಲಿಸಬೇಕು. ವಿದ್ಯಾರ್ಜನೆಗೆ ಅನುಕೂಲವಾಗುವ ಸೌಕರ್ಯ ಒದಗಿಸಿಕೊಡಬೇಕು ಎಂದು ತಿಳಿಸಿದರು.
ಜಿಲ್ಲಾ ಗ್ಯಾರಂಟಿ ಪ್ರಾಧಿಕಾರ ಅಧ್ಯಕ್ಷ ಎಂ.ಸಿ.ಶಿವಾನಂದಸ್ವಾಮಿ ಮಾತನಾಡಿ, ಶಾಲಾ ಮಕ್ಕಳು ಭವಿಷ್ಯದಲ್ಲಿ ಹೊರ ರಾಜ್ಯ ಅಥವಾ ಹೊರದೇಶಗಳಲ್ಲಿ ಉದ್ಯೋಗಕ್ಕೆ ತೆರಳಿದರೆ ಆಂಗ್ಲಭಾಷೆ ಅಗತ್ಯವಿದೆ. ಆದರೆ ಮಾತೃಭಾಷೆಗೆ ಎಂದಿಂದಿಗೂ ಉಳಿಸಿ ಕೊಳ್ಳಬೇಕು. ಕೈಲಾದ ಮಟ್ಟಿನಲ್ಲಿ ಕನ್ನಡ ಬೆಳೆ ಸುವುದನ್ನು ರೂಢಿಸಿಕೊಳ್ಳಬೇಕು ಎಂದು ತಿಳಿಸಿದರು.
ಇದೇ ವೇಳೆ ಶ್ರೀ ಗುರುಸಿದ್ದೇಶ್ವರ ವಿದ್ಯಾಸಂಸ್ಥೆ ನಿಕಟಪೂರ್ವ ಅಧ್ಯಕ್ಷ ಬಿ.ಆರ್.ಜಗದೀಶ್ ಗೆ ಸಮಾಜಸೇವಾ ಕ್ಷೇತ್ರದಲ್ಲಿ ಪ್ರಶಸ್ತಿ ನೀಡಿದ ಹಿನ್ನೆಲೆ ಶಾಲಾಡಳಿತದಿಂದ ಅಭಿನಂದಿಸಲಾಯಿತು.