ವ್ಯಾಪಾರದ ಗಡಿ ದಾಟಿ ಮೀರಿ ಬಣಜಿಗ ಸಮಾಜದ ಸಾಧನೆ

KannadaprabhaNewsNetwork |  
Published : Jun 28, 2026, 03:30 AM IST
ಪೋಟೊ27ಕೆಎಸಟಿ1: ಕುಷ್ಟಗಿ ಪಟ್ಟಣದ ಎನ್‌ಸಿಹೆಚ್‌ ಕಲ್ಯಾಣ ಮಂಟಪದಲ್ಲಿ ನಡೆದ ಕುಷ್ಟಗಿ ತಾಲೂಕು ಬಣಜಿಗ ಸಮಾಜ ಹಾಗೂ ಬಣಜಿಗ ಕ್ಷೇಮಾಭಿವೃದ್ಧಿ ಸಂಘದ ಸಹಯೋಗದಲ್ಲಿ ನಡೆದ ಪ್ರತಿಭಾ ಪುರಸ್ಕಾರ ಹಾಗೂ ಸಾಧಕರ ಸನ್ಮಾನ ಸಮಾರಂಭವನ್ನು ಗಣ್ಯರು ಉದ್ಘಾಟಿಸಿದರು. | Kannada Prabha

ಸಾರಾಂಶ

ಸಮಾಜದಲ್ಲಿರುವ ಹಿಂದುಳಿದವರನ್ನು ಅಭಿವೃದ್ಧಿಯ ಮುಖ್ಯವಾಹಿನಿಗೆ ತರಲು ಸಂಘಟನೆಗಳು ಹೆಚ್ಚಿನ ಜವಾಬ್ದಾರಿಯಿಂದ ಕಾರ್ಯ ನಿರ್ವಹಿಸಬೇಕು

ಕುಷ್ಟಗಿ: ಬಣಜಿಗ ಸಮಾಜದ ಮೂಲ ವೃತ್ತಿ ವ್ಯಾಪಾರವಾದರೂ ಇಂದು ವ್ಯಾಪಾರದ ಗಡಿ ಮೀರಿ ಶಿಕ್ಷಣ, ಆಡಳಿತ, ರಾಜಕೀಯ, ಉದ್ಯಮ, ಕೃಷಿ, ವೈದ್ಯಕೀಯ, ಕಾನೂನು ಸೇರಿದಂತೆ ಎಲ್ಲ ಕ್ಷೇತ್ರಗಳಲ್ಲಿ ತನ್ನ ಸಾಮರ್ಥ್ಯ ಸಾಬೀತುಪಡಿಸಿದೆ ಎಂದು ಬೈಲಹೊಂಗಲ ಶಾಸಕ ಮಹಾಂತೇಶ ಕೌಜಲಗಿ ಹೇಳಿದರು.

ಪಟ್ಟಣದ ಕೊಪ್ಪಳ ರಸ್ತೆಯ ಎನ್‌ಸಿಎಚ್ ಕಲ್ಯಾಣ ಮಂಟಪದಲ್ಲಿ ತಾಲೂಕು ಬಣಜಿಗ ಸಮಾಜ ಹಾಗೂ ತಾಲೂಕು ಬಣಜಿಗ ಕ್ಷೇಮಾಭಿವೃದ್ಧಿ ಸಂಘದ ಸಹಯೋಗದಲ್ಲಿ ಆಯೋಜಿಸಿದ್ದ ಪ್ರತಿಭಾ ಪುರಸ್ಕಾರ ಹಾಗೂ ಸಾಧಕರ ಸನ್ಮಾನ ಸಮಾರಂಭದಲ್ಲಿ ಮಾತನಾಡಿದರು.

ಸಾಧಕರನ್ನು ಗೌರವಿಸುವುದು ಭಾರತೀಯ ಸಂಸ್ಕೃತಿಯ ಪ್ರತೀಕ, ಬಣಜಿಗ ಸಮಾಜ ಎಲ್ಲ ಕ್ಷೇತ್ರಗಳಲ್ಲಿ ಮುನ್ನಡೆಯುತ್ತಿದ್ದು, ಸಮಾಜದಲ್ಲಿರುವ ಹಿಂದುಳಿದವರನ್ನು ಅಭಿವೃದ್ಧಿಯ ಮುಖ್ಯವಾಹಿನಿಗೆ ತರಲು ಸಂಘಟನೆಗಳು ಹೆಚ್ಚಿನ ಜವಾಬ್ದಾರಿಯಿಂದ ಕಾರ್ಯ ನಿರ್ವಹಿಸಬೇಕು ಎಂದರು.

ಬಣಜಿಗ ಸಮಾಜ ಸ್ಥಾಪಿಸಿರುವ ಕೆಎಲ್‌ಇ ಶಿಕ್ಷಣ ಸಂಸ್ಥೆಗಳು ಸಾವಿರಾರು ವಿದ್ಯಾರ್ಥಿಗಳಿಗೆ ಗುಣಮಟ್ಟದ ಶಿಕ್ಷಣ ನೀಡಿ, ಅನೇಕರಿಗೆ ಉದ್ಯೋಗದ ಅವಕಾಶ ಕಲ್ಪಿಸಿರುವುದು ಸಮಾಜಕ್ಕೆ ಹೆಮ್ಮೆಯ ವಿಷಯ ಎಂದು ಹೇಳಿದರು.

ಶಾಸಕ ದೊಡ್ಡನಗೌಡ ಪಾಟೀಲ ಮಾತನಾಡಿ, ಬಣಜಿಗ ಸಮಾಜವು ಶಿಕ್ಷಣ, ವ್ಯಾಪಾರ, ಸಾಮಾಜಿಕ ಸೇವೆ ಹಾಗೂ ಅಭಿವೃದ್ಧಿ ಕಾರ್ಯಗಳ ಮೂಲಕ ರಾಜ್ಯಕ್ಕೆ ಮಹತ್ತರ ಕೊಡುಗೆ ನೀಡಿದೆ.ಸಮಾಜದ ಅಭಿವೃದ್ಧಿಗೆ ಅಗತ್ಯವಿರುವ ಎಲ್ಲ ರೀತಿಯ ಸಹಕಾರ ನೀಡಲು ನಾನು ಬದ್ಧನಿದ್ದೇನೆ ಎಂದು ತಿಳಿಸಿದರು.

ಮಾಜಿ ಸಚಿವ ಅಮರೇಗೌಡ ಪಾಟೀಲ ಬಯ್ಯಾಪುರ ಮಾತನಾಡಿ, ಸಮಾಜದ ಬೆಳವಣಿಗೆಗೆ ಪ್ರತಿಯೊಬ್ಬರೂ ಜವಾಬ್ದಾರಿಯಿಂದ ಕಾರ್ಯ ನಿರ್ವಹಿಸಬೇಕು. ಮಾನವೀಯ ಮೌಲ್ಯಗಳ ಆಧಾರದ ಮೇಲೆ ಸಮಾಜ ನಿರ್ಮಾಣವಾಗಬೇಕು. ವೀರಶೈವ ಸಮಾಜ ಇನ್ನಷ್ಟು ಸಂಘಟಿತವಾಗಬೇಕು. ಶಿಕ್ಷಣಕ್ಕೆ ಆದ್ಯತೆ ನೀಡುವ ಮೂಲಕ ಸಮಾಜ ಬಲಿಷ್ಠಗೊಳಿಸಬೇಕು ಎಂದರು.

ಬಣಜಿಗ ಸಮಾಜವು ಮಠಗಳಿಗೆ ಮಹತ್ತರ ಕೊಡುಗೆ ನೀಡುವ ಮೂಲಕ ಜ್ಞಾನ ಪ್ರಸಾರಕ್ಕೆ ನೆರವಾಗಿದೆ. ಆರ್ಥಿಕವಾಗಿ ಹಿಂದುಳಿದವರನ್ನು ಮೇಲಕ್ಕೆತ್ತುವುದು ಸಮಾಜದ ಜವಾಬ್ದಾರಿ. ಪ್ರತಿಭಾ ಪುರಸ್ಕಾರ ಹಾಗೂ ಸಾಧಕರ ಸನ್ಮಾನ ಕಾರ್ಯಕ್ರಮಗಳು ನಿರಂತರವಾಗಿ ನಡೆಯಬೇಕು ಎಂದು ಹೇಳಿದರು.

ಯುವಜನರು ಸಾಮಾಜಿಕ ಜಾಲತಾಣಗಳ ದುಷ್ಪರಿಣಾಮ ಹಾಗೂ ದುಶ್ಚಟಗಳಿಗೆ ಬಲಿಯಾಗುತ್ತಿರುವುದು ಆತಂಕಕಾರಿ. ಅವರನ್ನು ಉತ್ತಮ ಮೌಲ್ಯ ಹಾಗೂ ಶಿಕ್ಷಣದತ್ತ ಕೊಂಡೊಯ್ಯಲು ಪೋಷಕರು ಮತ್ತು ಸಮಾಜದ ಹಿರಿಯರು ಜಾಗೃತರಾಗಬೇಕು ಎಂದು ಸಲಹೆ ನೀಡಿದರು.

ಮಾಜಿ ಶಾಸಕ ಅಪ್ಪು ಪಟ್ಟಣಶೆಟ್ಟಿ ಮಾತನಾಡಿ, ಸಮಾಜ ಸಂಘಟಿತವಾದಾಗ ಮಾತ್ರ ಅಭಿವೃದ್ಧಿ ಸಾಧ್ಯ. ಶಿಕ್ಷಣ ಸಂಸ್ಥೆ ಕಟ್ಟಿದ ಶಿಸ್ತಿನ ಸಮಾಜ ಬಣಜಿಗ ಸಮಾಜವಾಗಿದೆ. ಆದಾಯಕ್ಕಿಂತ ಹೆಚ್ಚು ಖರ್ಚು ಮಾಡುವ ಪ್ರವೃತ್ತಿ ಬಿಡಬೇಕು ಎಂದು ಸಲಹೆ ನೀಡಿದರು.

ಕೆಲವರು ಸಮಾಜದ ಬಗ್ಗೆ ನಕಾರಾತ್ಮಕವಾಗಿ ಮಾತನಾಡಿದರೂ ಅದಕ್ಕೆ ತಲೆಕೆಡಿಸಿಕೊಳ್ಳುವ ಅಗತ್ಯವಿಲ್ಲ. ವ್ಯಾಪಾರಿಗಳು ಮತ್ತು ರೈತರಿಗೆ ಸಮಾಜದಲ್ಲಿ ಸಮಾನ ಗೌರವ ಸಿಗಬೇಕು. ಸಮಾನ ಅವಕಾಶ ಮತ್ತು ಪರಸ್ಪರ ಗೌರವದ ಆಧಾರದ ಮೇಲೆ ಸಮ ಸಮಾಜ ನಿರ್ಮಾಣಕ್ಕೆ ಎಲ್ಲರೂ ಕೈಜೋಡಿಸಬೇಕು ಎಂದು ಕರೆ ನೀಡಿದರು.

ಮಾಜಿ ಸಂಸದ ರಮೇಶ್ ಕತ್ತಿ ಮಾತನಾಡಿ, ದಾನ, ಧರ್ಮ ಮತ್ತು ಶಿಕ್ಷಣಕ್ಕೆ ಹೆಸರಾದ ಬಣಜಿಗ ಸಮಾಜ ಮಠ, ಮಂದಿರ ಹಾಗೂ ಶಿಕ್ಷಣ ಸಂಸ್ಥೆಗಳ ಮೂಲಕ ಸಮಾಜಕ್ಕೆ ಅಪಾರ ಕೊಡುಗೆ ನೀಡಿದೆ ಎಂದರು.

ಒಂದು ಕಾಲದಲ್ಲಿ ವೀರಶೈವ-ಲಿಂಗಾಯತ ಸಮಾಜ ರಾಜಕೀಯವಾಗಿ ಪ್ರಬಲವಾಗಿತ್ತು. ಆದರೆ ಉಪಪಂಗಡಗಳ ನಡುವಿನ ಭಿನ್ನಾಭಿಪ್ರಾಯಗಳಿಂದ ಒಗ್ಗಟ್ಟು ಕುಂದಿದೆ. ಹಿಂದೆ ವೀರಶೈವ-ಲಿಂಗಾಯತ ಸಮುದಾಯದಿಂದ 94 ಶಾಸಕರಿದ್ದರೆ, ಈಗ ಉಪಪಂಗಡಗಳ ವಿಭಜನೆಯಿಂದ ಆ ಸಂಖ್ಯೆ 56ಕ್ಕೆ ಇಳಿದಿದೆ. ಎಲ್ಲರೂ ಒಗ್ಗಟ್ಟಿನಿಂದ ಸಾಗಿದರೆ ಸಮಾಜ ಇನ್ನಷ್ಟು ಪ್ರಗತಿ ಸಾಧಿಸಲಿದೆ ಎಂದು ಹೇಳಿದರು.

ಶಿಕ್ಷಕಿ ಲೀಲಾವತಿ ಶೆಟ್ಟರ್ ಉಪನ್ಯಾಸ ನೀಡಿ, ಬಣಜಿಗ ಸಮಾಜ ರಾಜ್ಯಕ್ಕೆ ಏಳು ಮುಖ್ಯಮಂತ್ರಿಗಳನ್ನು ನೀಡಿದ ಹೆಮ್ಮೆಯ ಸಮಾಜವಾಗಿದೆ. ಶಿಕ್ಷಣ, ಆಡಳಿತ, ರಾಜಕೀಯ ಹಾಗೂ ಸಾಮಾಜಿಕ ಕ್ಷೇತ್ರಗಳಲ್ಲಿ ಮಹತ್ತರ ಕೊಡುಗೆ ನೀಡಿದೆ. ಬಸವಣ್ಣನ ಕಾಯಕ, ದಾಸೋಹ, ಸಮಾನತೆ ಮತ್ತು ಮಾನವೀಯ ಮೌಲ್ಯಗಳು ಬಣಜಿಗ ಸಮಾಜದ ಬದುಕಿನಲ್ಲಿ ಬೆರೆತು ಹೋಗಿದ್ದು, ಇದೇ ಮೌಲ್ಯಗಳು ಸಮಾಜ ಅಭಿವೃದ್ಧಿಯ ಹಾದಿಯಲ್ಲಿ ಮುನ್ನಡೆಸಿವೆ ಎಂದು ಹೇಳಿದರು.

ಕರಿಬಸವ ಶಿವಾಚಾರ್ಯ ಮಹಾಸ್ವಾಮಿಗಳು ಸಾನ್ನಿಧ್ಯ ವಹಿಸಿ ಆಶೀರ್ವಚನ ನೀಡಿದರು. ತಾಲೂಕಾಧ್ಯಕ್ಷ ಶಶಿಧರ ಕವಲಿ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು.

ಈ ಸಂದರ್ಭದಲ್ಲಿ ಬಣಜಿಗ ಸಮಾಜದ ರಾಜ್ಯ ಉಪಾಧ್ಯಕ್ಷ ಅಂದಪ್ಪ ಜವಳಿ, ಜಿಲ್ಲಾಧ್ಯಕ್ಷ ವೀರೇಶ ಬಂಗಾರಶೆಟ್ಟರ್, ರಾಜ್ಯ ಸಮಿತಿ ನಿರ್ದೇಶಕ ಬಸವರಾಜ ಪಡಿ, ಮಾಜಿ ಜಿಪಂ ಸದಸ್ಯ ಕೆ ಮಹೇಶ್, ಸೋಮಶೇಖರ್ ವೈಜಾಪುರ,ಈರಣ್ಣ ಕಲಕಬಂಡಿ, ವೀರೇಶ ಬೊಳ್ಳೊಳ್ಳಿ, ಜಯದೇವಿ ಉಪ್ಪಿನ್, ಅಕ್ಕಮಹಾದೇವಿ ಪಟ್ಟಣಶೆಟ್ಟಿ, ವಿಶ್ವನಾಥ ಮಳಗಿ, ರವೀಂದ್ರನಾಥ ಪಾಟೀಲ, ಬಸಟ್ಟೆಪ್ಪ ಕುಂಬಳಾವತಿ, ಉಮಾಪತಿ ಅಕ್ಕಿ, ಸಿದ್ದಲಿಂಗಪ್ಪ ಕಲಕಬಂಡಿ, ಫಕೀರಪ್ಪ ಹೊಸವಕ್ಕಲ್‌, ಬಸವರಾಜ ಕುದುರಿಮೋತಿ, ವೀರಣ್ಣ ಗಜೇಂದ್ರಗಡ, ಸಂಗಪ್ಪ ಕಡಿವಾಲ್, ಈರಣ್ಣ ಸೊಬರದ, ಶಿವಪ್ಪ ಕುಡತೀನಿ, ಸಿದ್ದಮಲ್ಲಪ್ಪ ಜಿಗಜಿನ್ನಿ, ವಿಶ್ವನಾಥ ಕನ್ನೂರು, ಪ್ರಶಾಂತ್ ಗಡಾದ, ಅಶೋಕ್ ಬೊಳ್ಳೊಳ್ಳಿ, ಸಂಗಪ್ಪ ಚೆಟ್ಟೇರ್ ಬಸಟ್ಟೆಪ್ಪ ಶಿಳ್ಳಿನ್‌ ಸೇರಿದಂತೆ ಸಮಾಜದ ಮುಖಂಡರು, ಪದಾಧಿಕಾರಿಗಳು, ವಿವಿಧ ಕ್ಷೇತ್ರಗಳ ಸಾಧಕರು, ಪ್ರತಿಭಾವಂತ ವಿದ್ಯಾರ್ಥಿಗಳು ಮತ್ತು ಸಮಾಜ ಬಾಂಧವರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಮೌನಾನುಷ್ಠಾನದಿಂದ ಆತ್ಮಬಲ ವೃದ್ಧಿ: ಬಸವಲಿಂಗ ಶ್ರೀಗಳು
ಕನ್ನಡ ಶಾಲೆ ಮುಚ್ಚಿದರೆ ಸಂಸ್ಕೃತಿ ನಾಶವಾದಂತೆ: ವಾಸರೆ