ಚರಂಡಿ ಸಮಸ್ಯೆಗೆ ರಸ್ತೆ ತಡೆ ಪ್ರತಿಭಟನೆ

KannadaprabhaNewsNetwork |  
Published : Jun 28, 2026, 03:15 AM IST
ಪೋಟೊ27.15: ಕೊಪ್ಪಳ ನಗರದ ವಾರ್ಡ್ ಸಂಖ್ಯೆ 18ರ ತೆಗ್ಗಿನಕೇರಿ ಪ್ರದೇಶದಲ್ಲಿ ಚರಂಡಿ ಸ್ವಚ್ಛತೆ ಮಾಡದಿರುವುದನ್ನು ಖಂಡಿಸಿ ಸ್ಥಳೀಯ ನಿವಾಸಿಗಳು ಶನಿವಾರ ರಸ್ತೆ ತಡೆ ನಡೆಸಿ ನಗರಸಭೆ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು. | Kannada Prabha

ಸಾರಾಂಶ

ರಸ್ತೆಯ ಎರಡೂ ಬದಿಯ ಕೆಲ ಮನೆಗಳು ಚರಂಡಿ ಒತ್ತುವರಿ ಮಾಡಿಕೊಂಡಿರುವುದರಿಂದ ಸ್ವಚ್ಛತಾ ಕಾರ್ಯಕ್ಕೂ ಅಡಚಣೆ

ಕೊಪ್ಪಳ: ನಗರದ ವಾರ್ಡ್ ಸಂಖ್ಯೆ 18 ರ ತೆಗ್ಗಿನಕೇರಿ ಪ್ರದೇಶದಲ್ಲಿ ಚರಂಡಿ ಸ್ವಚ್ಛತೆ ಮಾಡದಿರುವುದನ್ನು ಖಂಡಿಸಿ ಸ್ಥಳೀಯ ನಿವಾಸಿಗಳು ಶನಿವಾರ ರಸ್ತೆ ತಡೆ ನಡೆಸಿ ನಗರಸಭೆ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.

ವಾರ್ಡ್‌ನ ಚರಂಡಿಗಳು ಕಸದಿಂದ ತುಂಬಿಕೊಂಡಿದ್ದು, ನೀರು ಸರಾಗವಾಗಿ ಹರಿಯದೆ ಮೋರಿಗಳ ಮೂಲಕ ಮನೆಗಳ ಮುಂದೆ ವಾಪಸ್ ಬರುತ್ತಿದೆ. ಇದರಿಂದ ದುರ್ವಾಸನೆ ಹರಡುತ್ತಿದ್ದು, ಸಾಂಕ್ರಾಮಿಕ ರೋಗಗಳು ಹರಡುವ ಭೀತಿ ಎದುರಾಗಿದೆ ಎಂದು ಪ್ರತಿಭಟನಾಕಾರರು ಆರೋಪಿಸಿದರು.

ಈ ಸಮಸ್ಯೆ ಕುರಿತು ಜನವರಿಯಲ್ಲಿಯೇ ವಾರ್ಡ್ ನಿವಾಸಿಗಳು ನಗರಸಭೆಗೆ ಮನವಿ ಸಲ್ಲಿಸಿದ್ದರೂ, ಐದು ತಿಂಗಳು ಕಳೆದರೂ ಯಾವುದೇ ಕ್ರಮ ಕೈಗೊಳ್ಳದ ಹಿನ್ನೆಲೆಯಲ್ಲಿ ಯುವಕರು ಹಾಗೂ ಮಹಿಳೆಯರು ರಸ್ತೆ ತಡೆ ನಡೆಸಿ ತಮ್ಮ ಆಕ್ರೋಶ ಹೊರಹಾಕಿದರು.

ಜವಾಹರ ರಸ್ತೆಯ ದುರಗಮ್ಮ ಗುಡಿ ಸಮೀಪದಿಂದ ನಗರ ಪೊಲೀಸ್ ಠಾಣೆ ಹತ್ತಿರ ಹಸನ್ ರಸ್ತೆಗೆ ಸಂಪರ್ಕ ಕಲ್ಪಿಸುವ ಲಿಂಕ್ ರಸ್ತೆಯಲ್ಲಿ ಬೈಕ್‌, ಬಿದಿರು ಹಾಗೂ ನೀರಿನ ಬಂಡಿಗಳನ್ನು ಅಡ್ಡಗಟ್ಟಿ ವಾಹನ ಸಂಚಾರವನ್ನು ತಾತ್ಕಾಲಿಕವಾಗಿ ಸ್ಥಗಿತಗೊಳಿಸಿದರು.

ರಸ್ತೆಯ ಎರಡೂ ಬದಿಯ ಕೆಲ ಮನೆಗಳು ಚರಂಡಿ ಒತ್ತುವರಿ ಮಾಡಿಕೊಂಡಿರುವುದರಿಂದ ಸ್ವಚ್ಛತಾ ಕಾರ್ಯಕ್ಕೂ ಅಡಚಣೆ ಉಂಟಾಗುತ್ತಿದೆ ಎಂದು ಸ್ಥಳೀಯರು ತಿಳಿಸಿದರು.

ನಗರಸಭೆ ಪೌರಾಯುಕ್ತರಿಗೆ ಹಲವು ಬಾರಿ ಕರೆ ಮಾಡಿದರೂ ಸ್ವೀಕರಿಸುತ್ತಿಲ್ಲ.ಫೋಟೋ ಹಾಗೂ ವಿಡಿಯೊ ಕಳುಹಿಸಿದರೂ ಯಾವುದೇ ಸ್ಪಂದನೆ ದೊರೆತಿಲ್ಲ. ಈ ಕುರಿತು ನಗರಸಭೆಯ ಮಾಜಿ ಸದಸ್ಯರ ಗಮನಕ್ಕೂ ತಂದಿದ್ದರೂ ಸಮಸ್ಯೆಗೆ ಪರಿಹಾರ ಸಿಕ್ಕಿಲ್ಲ ಎಂದು ವಾರ್ಡ್ ಮುಖಂಡ ನಿಜಾಮುದ್ದೀನ್ ಮಾಳೆಕೊಪ್ಪ ಆರೋಪಿಸಿದರು.

ಸ್ಥಳಕ್ಕೆ ಅಧಿಕಾರಿಗಳು ಭೇಟಿ ನೀಡಿ ಸಮಸ್ಯೆಗೆ ಶಾಶ್ವತ ಪರಿಹಾರ ಕಲ್ಪಿಸುವಂತೆ ಪ್ರತಿಭಟನಾಕಾರರು ಆಗ್ರಹಿಸಿದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಹಾವೇರಿ ಜಿಲ್ಲಾ ನ್ಯಾಯಾಲಯಕ್ಕೆ ಬಾಂಬ್ ಬೆದರಿಕೆ: ಕಲಾಪ ಸ್ಥಗಿತ, ತಪಾಸಣೆ ನಡೆಸಿದ ಪೊಲೀಸರು
ತಾಯಿಯ ತ್ಯಾಗಕ್ಕೆ ಸಂದ ಗೌರವ: ಅಗ್ನಿವೀರನಾದ ಮಂತ್ರೋಡಿ ಯುವಕ