ಕನ್ನಡಪ್ರಭ ವಾರ್ತೆ ಬೇಲೂರು
ಗುರುವಿನ ಸಹಾಯವಿಲ್ಲದೆ ಗುರಿ ತಲುಪುವುದು ಅಸಾಧ್ಯ. ಯಾವುದೇ ಸಾಧನೆ ಮಾಡಲು ಗುರುವಿನ ಕೃಪೆ ಇರಬೇಕು ಎಂದು ಮಾಜಿ ಶಾಸಕ ವೈ.ಎಸ್.ವಿ ದತ್ತ ಹೇಳಿದರು.ಬ್ರಾಹ್ಮಣ ಮಹಾಸಭಾ ವತಿಯಿಂದ ಗುರುಪೂರ್ಣಿಮೆ ಅಂಗವಾಗಿ ವೇದಬ್ರಹ್ಮ ಶ್ರೀ ಮಂಜುನಾಥ್ ಅವರನ್ನು ಶೃಂಗೇರಿ ಶಾರದಾ ಮಠ ಹಾಗೂ ಬ್ರಾಹ್ಮಣ ಮಹಾಸಭಾ ವತಿಯಿಂದ ಅಭಿನಂದಿಸಲಾಯಿತು. ಕಡೂರಿನ ಮಾಜಿ ಶಾಸಕ ವೈ.ಎಸ್.ವಿ ದತ್ತ ಮಾತನಾಡಿ, ಭಾರತೀಯ ಸಂಸ್ಕೃತಿಯಲ್ಲಿ ಗುರು ಪೂರ್ಣಿಮೆಗೆ ವಿಶೇಷ ಸ್ಥಾನಮಾನವಿದ್ದು, ಪ್ರತಿಯೊಂದು ಸೋಲು- ಗೆಲುವಿನ ಹಿಂದೆ ಗುರುವಿನ ಅವಶ್ಯಕತೆ ಇದ್ದು, ಗುರುವಿನ ಕೃಪೆ ಇದ್ದರೆ ಏನನ್ನಾದರೂ ಸಾಧಿಸಬಹುದು. ನಮ್ಮ ಪರಂಪರೆಯಲ್ಲಿ ಮಠ- ಮಾನ್ಯಗಳಿಗೆ ಭಕ್ತರೇ ಆಧಾರ ಸ್ಥಂಭ, ಧರ್ಮ ಪರಂಪರೆ ಉಳಿಸಿಕೊಂಡು ಬರುವುದರಲ್ಲಿ ಮಠ- ಮಾನ್ಯಗಳ ಸೇವೆ ಅಮೋಘ. ತನ್ನ ಹೆತ್ತ ತಂದೆ- ತಾಯಿ ಋಣವನ್ನು ಹೇಗೆ ತೀರಿಸಲು ಸಾಧ್ಯವಿಲ್ಲವೋ, ಹಾಗೆಯೇ ಗುರುವಿನ ಋಣವನ್ನು ತೀರಿಸಲು ಸಾಧ್ಯವಿಲ್ಲ. ಇತ್ತೀಚಿನ ದಿನಗಳಲ್ಲಿ ವಿಜ್ಞಾನಿಗಳು ಸಹ ಗುರುವಿನ ಸಲಹೆ- ಸಹಕಾರವನ್ನು ಪಡೆಯುವ ಮೂಲಕ ಬಹುದೊಡ್ಡ ಸಾಧನೆ ಮಾಡಿದ್ದಾರೆ ಎಂದರು.
ಬ್ರಾಹ್ಮಣ ಮಹಾಸಭಾದ ತಾಲೂಕು ಅಧ್ಯಕ್ಷ ವಿಜಯಕೇಶವ ಮಾತನಾಡಿ, ಗುರುವಿನ ಅಣತಿಯಂತೆ ನಮ್ಮ ಗುರಿ ಮುಟ್ಟಲು ಭಕ್ತಿ, ಶ್ರದ್ಧೆ ಇರಬೇಕು. ಅಂತವರಿಗೆ ಮಾತ್ರ ಗುರುಕೃಪೆ ಲಭಿಸುತ್ತದೆ. ಆದ್ದರಿಂದ ಪ್ರತಿಯೊಬ್ಬರೂ ಗುರುವಿನ ಮಾರ್ಗದರ್ಶನದಲ್ಲೇ ಮುನ್ನಡೆಯಬೇಕು ಎಂದರು.ಅಭಿನಂದನೆ ಸ್ವೀಕರಿಸಿ ಮಾತನಾಡಿದ ವೇದಬ್ರಹ್ಮ ಕೆ. ಆರ್. ಮಂಜುನಾಥ್, ಪೂರ್ಣಿಮೆಗಳು ನಮ್ಮ ಪಂಚಾಂಗದಲ್ಲಿ ಹಲವು ಬರುತ್ತವೆ. ಆದರೆ ವ್ಯಾಸ ಪೂರ್ಣೆಮೆಯಂದು ಆ ಭಗವಂತನೇ ವೇದವ್ಯಾಸರ ರೂಪದಲ್ಲಿ ಇಳಿದುಬಂದು ನಮಗೆ ಜ್ಞಾನ ನೀಡಿದ್ದಾನೆ. ಗುರುವಿನ ಮೂಲಕ ಜ್ಞಾನ ಸಂಪಾದನೆ ಮಾಡಬೇಕು. ಗುರು ಇಲ್ಲದೆ ಗುರಿ ಮುಟ್ಟಲು ಖಂಡಿತ ಸಾಧ್ಯವಿಲ್ಲ. ಹಾಗಾಗಿ ಗುರುಸ್ಮರಣೆ ನಿರಂತರವಾಗಿರಬೇಕು. ನಾವು ಈ ದಿನ ವೇದವ್ಯಾಸರನ್ನು ಸ್ಮರಿಸಬೇಕು ಎಂದು ತಿಳಿಸಿದರು.
ಈ ವೇಳೆ ಚೈತನ್ಯ ಗೆಳೆಯರಿಂದ ವೇದಾಗೋಷ ನೆರವೇರಿದವು. ಶಾಲಾ ಮಕ್ಕಳಿಗೆ ಪುಸ್ತಕ ವಿತರಣೆ ಮಾಡಲಾಯಿತು.ಶಂಕರ ಮಠದ ಕಾರ್ಯದರ್ಶಿ ಸುಬ್ರಹ್ಮಣ್ಯ, ಮಹಿಳಾ ಒಕ್ಕೂಟದ ಶ್ರೀವಿದ್ಯಾ ,ಗಾಯಿತ್ರಿ ರಜನಿಹೊಳ್ಳ, ಶಾರದಮ್ಮ, ರಂಗೋತ್ತಮ, ಅಂಕಿತ್ ಇತರರು ಹಾಜರಿದ್ದರು.