ಉಡುಪಿ ಅಜ್ಜರಕಾಡು ಡಾ.ಜಿ. ಶಂಕರ್ ಸರ್ಕಾರಿ ಮಹಿಳಾ ಪ್ರಥಮ ದರ್ಜೆ ಕಾಲೇಜು ಮತ್ತು ಸ್ನಾತಕೋತ್ತರ ಅಧ್ಯಯನ ಕೇಂದ್ರದ ಪಿ.ಜಿ.ಎ.ವಿ ಹಾಲ್‌ನಲ್ಲಿ, ಜಿಲ್ಲಾ ಭಾರತೀಯ ರೆಡ್‌ಕ್ರಾಸ್ ಸಂಸ್ಥೆ, ಕಾಲೇಜಿನ ರಾಷ್ಟ್ರೀಯ ಸೇವಾ ಯೋಜನಾ ಘಟಕಗಳ ಸಂಯುಕ್ತ ಆಶ್ರಯದಲ್ಲಿ ವಿವೇಕಾನಂದ ಜಯಂತಿ ನಡೆಯಿತು.
ಕನ್ನಡಪ್ರಭ ವಾರ್ತೆ ಉಡುಪಿ
ಸ್ವಾಮಿ ವಿವೇಕಾನಂದರ ತತ್ವ ಮತ್ತು ಆದರ್ಶಗಳು ಇಂದಿಗೂ ಪ್ರಸ್ತುತವಾಗಿದ್ದು, ಯುವಜನರು ಅವುಗಳನ್ನು ಅರ್ಥೈಸಿಕೊಂಡು ಜೀವನದಲ್ಲಿ ಅಳವಡಿಸಿಕೊಂಡಾಗ ದೇಶದ ಅಭಿವೃದ್ಧಿ ಸಾಧ್ಯ ಎಂದು ಉಡುಪಿ ಜಿಲ್ಲಾ ಪೋಲಿಸ್ ವರಿಷ್ಠಾಧಿಕಾರಿ ಡಾ. ಅರುಣ್ ಕೆ. ಹೇಳಿದರು. ಅವರು ಶುಕ್ರವಾರ ನಗರದ ಅಜ್ಜರಕಾಡು ಡಾ.ಜಿ. ಶಂಕರ್ ಸರ್ಕಾರಿ ಮಹಿಳಾ ಪ್ರಥಮ ದರ್ಜೆ ಕಾಲೇಜು ಮತ್ತು ಸ್ನಾತಕೋತ್ತರ ಅಧ್ಯಯನ ಕೇಂದ್ರದ ಪಿ.ಜಿ.ಎ.ವಿ ಹಾಲ್‌ನಲ್ಲಿ, ಜಿಲ್ಲಾ ಭಾರತೀಯ ರೆಡ್‌ಕ್ರಾಸ್ ಸಂಸ್ಥೆ, ಕಾಲೇಜಿನ ರಾಷ್ಟ್ರೀಯ ಸೇವಾ ಯೋಜನಾ ಘಟಕಗಳ ಸಂಯುಕ್ತ ಆಶ್ರಯದಲ್ಲಿ ವಿವೇಕಾನಂದ ಜಯಂತಿ ಪ್ರಯುಕ್ತ ನಡೆದ ರಾಷ್ಟ್ರೀಯ ಯುವ ದಿನಾಚರಣೆಯನ್ನು ಉದ್ಘಾಟಿಸಿ ಮಾತನಾಡಿದರು. ಸ್ವಾಮಿ ವಿವೇಕಾನಂದರು ಮುಖ್ಯವಾಗಿ ಯುವ ಜನತೆಗೆ ಮಾದರಿಯಾಗಿದ್ದು, ಅವರ ಸಂದೇಶದಂತೆ ಪ್ರತಿಯೊಬ್ಬರೂ ಜೀವನದಲ್ಲಿ ಗುರಿಯನ್ನಿಟ್ಟುಕೊಂಡು, ಸಿಕ್ಕ ಅವಕಾಶಗಳನ್ನು ಬಳಸಿಕೊಂಡು ಗುರಿಯನ್ನು ಸಾಧಿಸುವ ಕಡೆ ಗಮನಹರಿಸಬೇಕು ಎಂದ ಅವರು, ಪ್ರತಿಯೊಂದು ಕೆಲಸಕ್ಕೂ ಅದರದ್ದೇ ಆದ ಜವಾಬ್ದಾರಿ ಇದ್ದು, ಯಾವುದೇ ಕೆಲಸವನ್ನು ಕೈಗೊಂಡರು ಅದನ್ನು ಪ್ರಾಮಾಣಿಕತೆಯಿಂದ ಮಾಡಬೇಕು ಎಂದರು. ಚಿಂತಕ ಡಾ. ಪ್ರಸಾದ್ ರಾವ್ ಉಪನ್ಯಾಸ ನೀಡಿ, ಭಾರತೀಯ ಸಂವಿಧಾನದ ಮೌಲ್ಯಗಳನ್ನು ವಿವೇಕಾನಂದರ ಚಿಂತನೆಯಲ್ಲಿ ಕಾಣಬಹುದು. ವ್ಯಕ್ತಿಯೇ ದೈವತ್ವಕ್ಕೇರುವುದನ್ನು ಅವರು ಪ್ರತಿಪಾದಿಸಿದ್ದಾರೆ. ವಿವೇಕಾನಂದ, ಗಾಂಧೀಜಿ ಮತ್ತು ಅಂಬೇಡ್ಕರವರು ಭಾರತೀಯ ಆಧುನಿಕ ಚಿಂತನೆಯ ಪ್ರತೀಕ. ದೇಶದಲ್ಲಿ ಧರ್ಮಗಳು ದೇಹ ಹಾಗೂ ಆತ್ಮದಂತೆ ಸಮ್ಮಿಲನಗೊಂಡಿದೆ. ಅವುಗಳು ಒಗ್ಗಟ್ಟಾಗಿ ಬದುಕಬೇಕೆಂಬುವುದು ಸ್ವಾಮೀ ವಿವೇಕಾನಂದರ ಆಶಯವಾಗಿತ್ತು ಎಂದರು.
ಕಾಲೇಜಿನ ಪ್ರಾಂಶುಪಾಲ ಪ್ರೊ. ಭಾಸ್ಕರ ಶೆಟ್ಟಿ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿ, ಸ್ವಾಮಿ ವಿವೇಕಾನಂದರ ವಿವೇಕ ವಿವೇಚನ ಉಪನ್ಯಾಸಗಳು ಪ್ರಸ್ತುತ ಕಾಲಘಟ್ಟದಲ್ಲಿಯೂ ಮೌಢ್ಯಗಳ ನಿರ್ಮೂಲನೆ ಸಹಕಾರಿಯಾಗಿದೆ ಎಂದರು.
ಮುಖ್ಯ ಅತಿಥಿಗಳಾಗಿ ಭಾರತೀಯ ರೆಡ್‌ಕ್ರಾಸ್ ಜಿಲ್ಲಾ ಘಟಕದ ಸಭಾಪತಿ ಬಸ್ರೂರು ರಾಜೀವ್ ಶೆಟ್ಟಿ ಮತ್ತು ಗೌರವ ಕಾರ್ಯದರ್ಶಿ ಡಾ. ಗಣನಾಥ ಎಕ್ಕಾರು ಆಗಮಿಸಿದ್ದರು. ವಿವೇಕಾನಂದ ಪ್ರೌಢಶಾಲೆಯ ಮುಖ್ಯ ಶಿಕ್ಷಕಿ ಉಷಾ ಕಿರಣ್, ಡೀನ್ ಪ್ರೊ. ಶ್ರೀಧರ ಪ್ರಸಾದ್ ರೆಡ್‌ಕ್ರಾಸ್ ಖಜಾಂಚಿ ರಮಾದೇವಿ, ವಿದ್ಯಾರ್ಥಿಗಳು, ಬೋಧಕ, ಬೋಧಕೇತರ ಸಿಬ್ಬಂದಿ ಹಾಗೂ ಮತ್ತಿತರರು ಉಪಸ್ಥಿತರಿದ್ದರು. ಕನ್ನಡ ವಿಭಾಗದ ಮುಖ್ಯಸ್ಥೆ ಪ್ರೊ. ನಿಕೇತನ ಸ್ವಾಗತಿಸಿದರು. ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯ ಸಹಾಯಕ ನಿರ್ದೇಶಕ ಡಾ. ರೋಶನ್ ಕುಮಾರ್ ಶೆಟ್ಟಿ ನಿರೂಪಿಸಿದರು. ಎನ್.ಎಸ್.ಎಸ್ ಅಧಿಕಾರಿ ವಿದ್ಯಾ ಡಿ. ವಂದಿಸಿದರು.
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.