ಬೆಂಗಳೂರು : ಸಂಪುಟ ವಿಸ್ತರಣೆಗೆ ಸೋಮವಾರ ದಿನಾಂಕ ನಿಗದಿಯಾಗಿದ್ದರೂ ಈವರೆಗೂ ನೂತನ ಸಚಿವರ ಪಟ್ಟಿ ಅಂತಿಮಗೊಂಡಿಲ್ಲ. ಭಾನುವಾರ ತಡರಾತ್ರಿ ಅಥವಾ ಸೋಮವಾರ ಬೆಳಗ್ಗೆ ಅಂತಿಮ ಪಟ್ಟಿ ರಾಜ್ಯ ನಾಯಕರ ಕೈ ಸೇರುವ ನಿರೀಕ್ಷೆಯಿದೆ.

ಬಳಿಕ ಮುಖ್ಯಮಂತ್ರಿಗಳ ಕಚೇರಿಯು ರಾಜ್ಯಪಾಲರಿಗೆ ಪಟ್ಟಿ ರವಾನಿಸಲಿದ್ದು, ಸೋಮವಾರ ಸಂಜೆ ನೂತನ ಸಚಿವರ ಪದಗ್ರಹಣ ನಡೆಯುವ ಸಾಧ್ಯತೆಯಿದೆ.

ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್‌ ಸೇರಿ ಬಹುತೇಕ ನಾಯಕರು ಸೋಮವಾರ ಸಂಪುಟ ವಿಸ್ತರಣೆ ಗ್ಯಾರಂಟಿ ಎಂದಿದ್ದಾರೆ. ಆದರೆ, ರಾಜ್ಯದ ಘಟಾನುಘಟಿ ನಾಯಕರಿಗೂ ಈವರೆಗೆ ಸಂಪುಟಕ್ಕೆ ಯಾರೆಲ್ಲಾ ಸೇರ್ಪಡೆಯಾಗಲಿದ್ದಾರೆ ಎಂಬ ಬಗ್ಗೆ ಖಚಿತ ಮಾಹಿತಿ ಇಲ್ಲ. ಸಂಭಾವ್ಯರ ಬಗ್ಗೆಯೂ ಸುಳಿವಿಲ್ಲ. ಹೀಗಾಗಿ ಸಚಿವಾಕಾಂಕ್ಷಿಗಳು ತಮ್ಮ ನಾಯಕರು, ಸಹ ಆಕಾಂಕ್ಷಿಗಳು ಸೇರಿ ಬೇರೆ ಬೇರೆಯವರಿಗೆ ಕರೆ ಮಾಡಿ ಪಟ್ಟಿಯಲ್ಲಿ ತಮ್ಮ ಹೆಸರು ಇದೆಯೇ ಅಥವಾ ಇಲ್ಲವೇ ಎಂಬುದರ ಬಗ್ಗೆ ಖಚಿತಪಡಿಸಿಕೊಳ್ಳುವ ಪ್ರಯತ್ನ ಮಾಡುತ್ತಿದ್ದರು ಎನ್ನಲಾಗಿದೆ.


ಇಂದು ಅಂತಿಮ ಹಂತದ ಚರ್ಚೆ?:

ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್‌, ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ, ಕೆಪಿಸಿಸಿ ಅಧ್ಯಕ್ಷ ಬಿ.ಕೆ.ಹರಿಪ್ರಸಾದ್‌ ಅವರು ಲೋಕಸಭೆ ಪ್ರತಿಪಕ್ಷ ನಾಯಕ ರಾಹುಲ್‌ಗಾಂಧಿ, ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರೊಂದಿಗೆ ಪಟ್ಟಿ ಬಗ್ಗೆ ಚರ್ಚೆ ನಡೆಸಿದ್ದರು. ಈ ವೇಳೆ ಸಂಪುಟಕ್ಕೆ ಸೇರುವವರ ಪೈಕಿ ತಮ್ಮ ಆಯ್ಕೆಗಳನ್ನು ನೀಡಿ ಬಂದಿದ್ದರು.

ಈ ಮೂರೂ ಪಟ್ಟಿಯನ್ನು ಕ್ರೋಢೀಕರಿಸಿ ಹೈಕಮಾಂಡ್‌ ಅಂತಿಮ ಪಟ್ಟಿ ಸಿದ್ಧಪಡಿಸುತ್ತಿದ್ದು, ಎರಡು, ಮೂರು ಸದಸ್ಯರ ವಿಚಾರದಲ್ಲಿ ಗೊಂದಲಗಳು ಉಳಿದಿವೆ. ಈ ಬಗ್ಗೆ ಭಾನುವಾರ ದೂರವಾಣಿ ಮೂಲಕ ಚರ್ಚೆ ನಡೆಸಿ ಪಟ್ಟಿ ಅಂತಿಮಗೊಳಿಸಲಿದ್ದಾರೆ ಎಂದು ಹೇಳಲಾಗಿದೆ.

ಈ ಮಧ್ಯೆ ಭಾನುವಾರ ಖುದ್ದು ಎಐಸಿಸಿ ಪ್ರಧಾನ ಕಾರ್ಯದರ್ಶಿ ಕೆ.ಸಿ.ವೇಣುಗೋಪಾಲ್‌ ಅವರು ಬೆಂಗಳೂರಿಗೆ ಬಂದು ಪಟ್ಟಿ ನೀಡಲಿದ್ದಾರೆ ಎನ್ನಲಾಗಿತ್ತು. ಪ್ರಸ್ತುತ ವೇಣುಗೋಪಾಲ್‌ ಅವರು ಕೇರಳದಲ್ಲಿದ್ದು, ಸೋಮವಾರ ನಡೆಯಲಿರುವ ಸಂಸತ್‌ ಅಧಿವೇಶನದಲ್ಲಿ ಭಾಗವಹಿಸಬೇಕಾಗಿದೆ.

ಹೀಗಾಗಿ ಬೆಂಗಳೂರಿಗೆ ಬಂದು ಪಟ್ಟಿ ನೀಡಿ ದೆಹಲಿಗೆ ಹೋಗಲಿದ್ದಾರೆಯೇ ಅಥವಾ ನೇರವಾಗಿ ಪಟ್ಟಿ ಕಳುಹಿಸಲಿದ್ದಾರೆಯೇ ಎಂಬ ಬಗ್ಗೆ ಸ್ಪಷ್ಟತೆ ದೊರೆತಿಲ್ಲ. ಒಟ್ಟಾರೆ ಸೋಮವಾರ ಸಂಜೆ ಸಂಪುಟ ವಿಸ್ತರಣೆ ಗ್ಯಾರಂಟಿ ಎಂದು ಹೇಳಲಾಗಿದ್ದು, ಭಾನುವಾರ ಸಂಜೆ ಈ ಬಗ್ಗೆ ಖಚಿತತೆ ಸಿಗಲಿದೆ ಎಂದು ಕಾಂಗ್ರೆಸ್ ಮೂಲಗಳು ತಿಳಿಸಿವೆ.

ಇಂದು ಇನ್ನೊಂದುಸುತ್ತಿನ ಮಾತುಕತೆ

ಬಾಕಿ ಉಳಿದಿರುವ 20 ಸಚಿವ ಸ್ಥಾನಗಳ ಪೈಕಿ ಎಷ್ಟು ಹುದ್ದೆಗಳ ಭರ್ತಿ ಮಾಡಲಾಗುವುದು ಎಂಬುದು ಇನ್ನೂ ಖಚಿತವಾಗಿಲ್ಲ. ಆದರೆ 2-3 ಹೆಸರಿನ ಬಗ್ಗೆ ಇನ್ನೂ ದೆಹಲಿ ಮಟ್ಟದಲ್ಲಿ ಗೊಂದಲ ಮುಂದುವರೆದಿದೆ. ಹೀಗಾಗಿ ಈ ಹೆಸರಿನ ಕುರಿತು ಭಾನುವಾರ ಇನ್ನೊಂದು ಸುತ್ತಿನಲ್ಲಿ ರಾಜ್ಯ ನಾಯಕರ ಜೊತೆಗೆ ಹೈಕಮಾಂಡ್‌ ನಾಯಕರು ದೂರವಾಣಿಯಲ್ಲಿ ಚರ್ಚೆ ನಡೆಸಲಿದ್ದಾರೆ. ಆ ಬಳಿಕ ಸಚಿವರ ಅಂತಿಮ ಪಟ್ಟಿ ಸಿದ್ಧಗೊಳ್ಳಲಿದೆ ಎಂದು ಮೂಲಗಳು ತಿಳಿಸಿವೆ.

ಸುದೀರ್ಘ ಕಸರತ್ತು

ಖಾಲಿ ಉಳಿದಿರುವ ಸಚಿವರ ಸ್ಥಾನ ಹೆಸರು ಅಂತಿಮಕ್ಕೆ 3 ದಿನ ದೆಹಲಿಯಲ್ಲೇ ಬೀಡುಬಿಟ್ಟಿದ್ದ ಡಿಕೆ, ಸಿದ್ದು, ಹರಿಪ್ರಸಾದ್‌

ದಿಲ್ಲಿಯಲ್ಲಿ ತಮ್ಮ ತಮ್ಮ ಆಯ್ಕೆಯ ಪಟ್ಟಿ ನೀಡಿ ಬಂದಿದ್ದ ಮೂವರು. ಇದರ ಜೊತೆಗೆ ದಿಲ್ಲಿ ನಾಯಕರ ಪಟ್ಟಿ ಬಗ್ಗೆಯೂ ಚರ್ಚೆ

ಈ ಹೆಸರಿನ ಬಗ್ಗೆ ಎಐಸಿಸಿ ಅಧ್ಯಕ್ಷ ಖರ್ಗೆ, ರಾಹುಲ್‌, ರಾಜ್ಯ ಉಸ್ತುವಾರಿ ಸುರ್ಜೇವಾಲಾ, ವೇಣುಗೋಪಾಲ್‌ ಪರಿಶೀಲನೆ

ಜಿಲ್ಲಾವಾರು, ಸಮುದಾಯುವಾರು ಸಚಿವರ ಆಯ್ಕೆಗಾಗಿ ಮುಂದುವರೆದ ಕಸರತ್ತು. ಹೀಗಾಗಿ 2-3 ಹೆಸರಿನ ಬಗ್ಗೆ ಗೊಂದಲ